News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಂಸತ್ ಭವನ ರವಾನಿಸಿದ ಸಂದೇಶಗಳು

ದೆಹಲಿಯಲ್ಲಿರುವ ಪ್ರಜಾಪ್ರಭುತ್ವದ ದೇಗುಲ ಪಾರ್ಲಿಮೆಂಟ್ ಭವನವನ್ನು ವೀಕ್ಷಿಸಿದಾಗ ಎಂಥವರಿಗೂ ಅದರ ಭವ್ಯತೆ, ಮಹಾನತೆ ನೋಡಿ ಆನಂದವಾಗದೇ ಇರದು. ಹೊರನೋಟಕ್ಕೆ ಭವ್ಯ ಹಾಗೂ ಸುಂದರ ಕಟ್ಟಡವಾಗಿ ಕಾಣುವ ಅದು ಒಳಗೂ ಕೂಡ ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿದೆ. ಆ ಸೌಂದರ್ಯವನ್ನು ನೋಡುವ ಒಳಗಣ್ಣು ಇರಬೇಕಷ್ಟೆ. ಎಲ್ಲರಿಗೂ ಸಂಸತ್ ಭವನದ ಒಳಗಿನ ಸೌಂದರ್ಯ ಮೇಲ್ನೋಟಕ್ಕೆ ಕಾಣಲಾರದು. ಆದರೆ ಸೂಕ್ಷ್ಮ ಮನಸ್ಸು ಹಾಗೂ ಒಳನೋಟವಿರುವವರಿಗೆ ಪಾರ್ಲಿಮೆಂಟ್ ಭವನದ ಒಳಗಿನ ಸೌಂದರ್ಯ ಕೈಬೀಸಿ ಕರೆಯದೇ ಇರದು.

ದೆಹಲಿಯ ಸಂಸತ್ ಭವನದ ಒಳಗಿನ ಸೌಂದರ್ಯವನ್ನು ಕಣ್ಣಾರೆ ಕಂಡು ಸಂತಸ ಪಟ್ಟವರಲ್ಲಿ ರಾಜ್ಯಸಭಾ ಸದಸ್ಯ ನ್ಯಾಯಮೂರ್ತಿ ಮ. ರಾಮಾ ಜೋಯಿಸ್ ಪ್ರಮುಖರು. ಸಂಸತ್ ಭವನದ ಒಳನೋಟದ ಸೌಂದರ್ಯವನ್ನು ತಾನೊಬ್ಬನೇ ಸವಿದರೆ ಸಾಲದು, ಅದನ್ನು ಉಳಿದವರೂ ಸವಿಯಬೇಕು. ಸವಿದು ಕೃತಾರ್ಥರಾಗಬೇಕು ಎಂಬ ಹಂಬಲದಿಂದ ಅವರು ಸಂಸತ್ ಭವನದೊಳಗಿನ ಸೌಂದರ್ಯವನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ. `ಭಾರತದ ಸಂಸದ್ ಭವನದಲ್ಲಿ ಅಂಕಿತವಾಗಿರುವ ಸಂದೇಶಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಆ ಪುಸ್ತಕ ಪ್ರಕಟವಾಗಿದೆ. ಇಂಗ್ಲಿಷ್‌ನಲ್ಲೂ Message From Parliament House Bharat ಎಂಬ ಹೆಸರಿನಲ್ಲಿ ಪ್ರಕಟವಾಗಿ ದೇಶದ ಗಣ್ಯಾತಿಗಣ್ಯರಿಗೆಲ್ಲ ಅದು ರವಾನೆಯಾಗಿದೆ. ರಾಮಾ ಜೋಯಿಸ್ ರಾಜ್ಯಸಭಾ ಸದಸ್ಯರಾಗಿ ಮಾಡಿದ ಉಳಿದ ಕೆಲಸಗಳಿಗಿಂತಲೂ ಈ ಪುಸ್ತಕ ಪ್ರಕಟಣೆ ಮಹತ್ವದ್ದಾಗಿ ನಿಲ್ಲುತ್ತದೆ. ಅಸಲಿಗೆ ಆ ಪುಸ್ತಕದಲ್ಲಿ ಇರುವುದಾದರೂ ಏನು?

nera-arti

2008 ರ ಜೂನ್ 16 ರಂದು ರಾಜ್ಯಸಭೆಗೆ ಚುನಾಯಿತರಾದ ರಾಮಾ ಜೋಯಿಸ್ ಪ್ರಮಾಣ ವಚನ ಸ್ವೀಕರಿಸಿದ್ದು ಆ. 12 ರಂದು. ಅದೇ ವರ್ಷ ಅ. 17 ರಂದು ಸಂಸತ್ ಭವನದಲ್ಲಿ ಅವರಿಗೆ ನಿಗದಿಯಾದ ಸ್ಥಾನದಲ್ಲಿ ಕುಳಿತುಕೊಳ್ಳಲೆಂದು ದ್ವಾರದ ಬಳಿ ಹೋದಾಗ ಅವರು ಮೊದಲು ಗುರುತಿಸಿದ್ದು ಒಳಗೆ ಕುಳಿತಿದ್ದ ಇತರ ಸದಸ್ಯರನ್ನಲ್ಲ, ಆದರೆ ಆ ದ್ವಾರದ ಮೇಲ್ಭಾಗದಲ್ಲಿ ಸಿಮೆಂಟ್‌ನಲ್ಲಿ ದೇವನಾಗರಿ ಲಿಪಿಯಲ್ಲಿ ಬಂಗಾರದ ಬಣ್ಣದಲ್ಲಿ ಕೆತ್ತಲಾಗಿದ್ದ ಭಗವದ್ಗೀತೆಯ `ಸ್ವೇಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ’ ಎಂಬ ಭಗವದ್ಗೀತೆಯ 18ನೇ ಅಧ್ಯಾಯದ 45ನೇ ಶ್ಲೋಕವನ್ನು . `

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪಾಲಿಗೆ ಬಂದ ಕರ್ತವ್ಯ ಅಥವಾ ಜವಾಬ್ದಾರಿಯನ್ನು ಸರಿಯಾಗಿ ಪ್ರಾಮಾಣಿಕವಾಗಿ ನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಖಂಡಿತವಾಗಿ ದೊರೆಯುತ್ತದೆ ‘ ಎಂಬುದೇ ಈ ಶ್ಲೋಕದ ಅರ್ಥ. ಕುತೂಹಲಗೊಂಡ ರಾಮಾ ಜೋಯಿಸ್ ಸಂಸತ್ ಭವನದ ಉಳಿದ ದ್ವಾರಗಳ ಮೇಲ್ಭಾಗವನ್ನೂ ವೀಕ್ಷಿಸಿದಾಗ ಅವರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಅಲ್ಲೆಲ್ಲ ಇನ್ನೂ ಕೆಲವು ಪ್ರಮುಖ ಸಂಸ್ಕೃತ ಶ್ಲೋಕಗಳು ಅಂಕಿತವಾಗಿರುವುದನ್ನು ಅವರು ಗಮನಿಸಿದರು. ಭಗವದ್ಗೀತೆ, ರಾಮಾಯಣ, ಮಹಾಭಾರತ, ಪಂಚತಂತ್ರ, ತೈತ್ತಿರೀಯ ಉಪನಿಷತ್ ಶಿಕ್ಷಾವಲ್ಲಿ, ಋಗ್ವೇದ, ಮನುಸ್ಮೃತಿ, ಮುಂಡಕೋಪನಿಷತ್, ಕೌಟಿಲ್ಯನ ಅರ್ಥಶಾಸ್ತ್ರ, ಶುಕ್ರನೀತಿಯಲ್ಲಿ ಹೇಳಿದ ರಾಜಧರ್ಮ ಮುಂತಾದವುಗಳಿಂದ ಆಯ್ದ ಶ್ಲೋಕಗಳು ಸದಸ್ಯರನ್ನು ಸ್ವಾಗತಿಸುತ್ತಿದ್ದವು. `ಧರ್ಮಚಕ್ರಪ್ರವರ್ತನಾಯ’ (ಧರ್ಮಚಕ್ರ ಸುತ್ತುವ, ನ್ಯಾಯ ಪಥದ ಕಲ್ಪನೆ) ಎಂಬ ಶ್ಲೋಕ ಲೋಕಸಭಾಧ್ಯಕ್ಷರ ಪೀಠದ ಹಿಂದೆ ಗೋಡೆಯ ಮೇಲೆ ಅಂಕಿತವಾಗಿದೆ. ಇಲ್ಲಿ ಧರ್ಮವೆಂದರೆ ರಿಲಿಜನ್ ಎಂಬರ್ಥದಲ್ಲಿ ಬಳಕೆಯಾಗಿಲ್ಲ. ಮಾನವರ ಹಿತವನ್ನು, ಪ್ರಗತಿಯನ್ನು ಯಾವುದು ಸದೃಢಗೊಳಿಸುತ್ತದೋ ಅದೇ ಧರ್ಮ ಎಂಬುದು ಇಲ್ಲಿನ ಅರ್ಥ. ರಾಜ್ಯಸಭೆಯ ಪ್ರವೇಶ ದ್ವಾರದ ಮೇಲೆ ಅಂಕಿತವಾಗಿರುವ ಶ್ಲೋಕ : ಅಹಿಂಸಾ ಪರಮೋಧರ್ಮಃ ( ಅಹಿಂಸೆಯೇ ಶ್ರೇಷ್ಠ ಧರ್ಮ). ಇದು ಮಹಾಭಾರತದ ವನಪರ್ವದ ಒಂದು ಶ್ಲೋಕ. ಸಂಸತ್ ಭವನದ ಕೇಂದ್ರ ಸಭಾಂಗಣದ ದ್ವಾರದ ಮೇಲೆ ಅಂಕಿತವಾಗಿರುವ ಶ್ಲೋಕ : ಅಯಂ ನಿಜಃ ಪರೋವೇತಿ ಗಣನಾ ಲಘುಚೇತಸಾಂ ಉದಾರಚರಿತಾನಾಂ ತು ವಸುಧೈವ ಕುಟುಂಬಕಂ (ಪಂಚತಂತ್ರ). ಉದಾರ ಮನೋಭಾವ ಉಳ್ಳವರಿಗೆ, ಉದಾರ ಹೃದಯಿಗಳಿಗೆ ಇಡೀ ವಿಶ್ವವೇ ಒಂದು ಕುಟುಂಬ ಎಂಬುದು ಈ ಶ್ಲೋಕದ ಅರ್ಥ. ರಾಜ್ಯಸಭೆಯ ಪ್ರವೇಶ ದ್ವಾರದಲ್ಲಿ ಅಂಕಿತವಾಗಿರುವ ಇನ್ನೊಂದು ಶ್ಲೋಕ: ಸತ್ಯಂ ವದ ಧರ್ಮಂ ಚರ (ತೈತ್ತಿರೀಯ ಉಪನಿಷತ್). ಯಾವಾಗಲೂ ಸತ್ಯವನ್ನೇ ಹೇಳಿ, ಧರ್ಮವನ್ನೇ ಆಚರಿಸಿ ಎಂಬ ಹಿಂದು ಧರ್ಮ ಮತ್ತು ಸಂಸ್ಕೃತಿಯ ಸದಾಶಯ ಬಿಂಬಿಸುವ ಶ್ಲೋಕ ಇದು. ಸಂಸತ್ ಭವನದ ಮೊದಲನೇ ಅಂತಸ್ತಿನ ಎರಡು ಸಮಿತಿ ಕೊಠಡಿಗಳ ಗೋಡೆಯ ಮೇಲೆ ಪ್ರಮುಖವಾಗಿ ಕೆತ್ತಲಾದ ಮತ್ತೊಂದು ಶ್ಲೋಕ – ಋಗ್ವೇದ ಮಂಡಲ- ೧೦ರ `ಸಂಘಚ್ಛದ್ವಂ ಸಂವದದ್ವಂ ಸಂವೋಮನಾಂ ಸಿ ಜಾನತಾಮ್… ‘ ಎಂಬುದು. ನಮ್ಮ ಹೃದಯದ ಭಾವನೆಗಳಲ್ಲಿ, ನಿರ್ಣಯಗಳಲ್ಲಿ ಸಮನ್ವಯತೆ ಇರಲಿ. ಪರಸ್ಪರ ಸಹಕಾರಿಗಳಾಗಿ ಬಾಳೋಣ. ನಮ್ಮ ಇಚ್ಛೆ ಹಾಗೂ ಪ್ರಾರ್ಥನೆಗಳು ಒಂದೇ ಆಗಿರಲಿ ಮತ್ತು ಸಮಾನ ಹಿತಕ್ಕಾಗಿರಲಿ. ನಾವೆಲ್ಲರೂ ಮನಸ್ಸಿನಲ್ಲಿ ಮಾತಿನಲ್ಲಿ ಒಂದಾಗಿರೋಣ ಎಂಬ ಸದಾಶಯ ಸಂಕೇತಿಸುವ ಶ್ಲೋಕ ಅದು.

ಹೀಗೆ ಸಂಸತ್ ಭವನದ ದ್ವಾರ ದ್ವಾರಗಳ ಮೇಲೆ, ಗೋಡೆ ಗೋಡೆಗಳ ಮೇಲೆ ಸದಸ್ಯರಿಗೆ ಅದ್ಭುತ ಜ್ಞಾನದ ಝರಿಯನ್ನೇ ಹರಿಸುವ ಹಲವು ಶ್ಲೋಕಗಳನ್ನು ಕೆತ್ತಲಾಗಿದೆ. ಸಂಸ್ಕೃತ ಶ್ಲೋಕಗಳಷ್ಟೇ ಅಲ್ಲ, ಅರಬ್ಬಿ ಭಾಷೆಯ `ಇನಲ್ಲಾಹೋಲಾ ಯುಗಯ್ ಯುರೋ ಮಾಬಿಕೌ ಮಿನ್ ಹತ್ತಾ ಯುಗಯ್‌ಯುರೋವಾ ಬಿನ್‌ಕ್ತಸೇ ಹುಮ್’ ಎಂಬ ವಾಕ್ಯವನ್ನು ಲೋಕಸಭೆಯ ಅರ್ಧ ಚಂದ್ರಾಕಾರದ ಮೊಗಸಾಲೆಯಲ್ಲಿ ಕೆತ್ತಲಾಗಿದೆ. ` ಪ್ರತಿ ಜನಾಂಗದವರೂ ತಮ್ಮ ಅಭಿವೃದ್ದಿಯನ್ನು ಸ್ವಪ್ರಯತ್ನದಿಂದ ಮಾಡಿಕೊಳ್ಳಬೇಕೇ ವಿನಾ ಪರಮಾತ್ಮ ಯಾವುದೇ ಜನಾಂಗದ ಅಭಿವೃದ್ಧಿಯನ್ನು ತಾನಾಗಿಯೇ ಮಾಡುವುದಿಲ್ಲ’ ಎಂಬುದು ಇದರ ಅರ್ಥ. ನಮ್ಮ ಭಗವದ್ಗೀತೆಯ 6ನೇ ಅಧ್ಯಾಯದ 5ನೇ ಶ್ಲೋಕದಲ್ಲಿರುವ `ಉದ್ಧರೇದಾತ್ಮನಾತ್ಮಾನಂ…’ ಎಂಬ ಚಿರಂತನ ಸತ್ಯವನ್ನೇ ಅರಬ್ಬಿ ಭಾಷೆಯ ಈ ಸೂಕ್ತಿ ಘೋಷಿಸುತ್ತದೆ.

ಒಬ್ಬ ಜನಪ್ರತಿನಿಧಿಗೆ ಅಗತ್ಯವಾಗಿರುವ ತಿಳಿವಳಿಕೆ ನೀಡುವ ಶ್ಲೋಕಗಳೆಲ್ಲ ಪಾರ್ಲಿಮೆಂಟ್ ಭವನದಲ್ಲಿವೆ. ಇವೆಲ್ಲವನ್ನೂ ಸಂಗ್ರಹಿಸಿ ಸಂಸತ್ ಭವನದ ವಿವಿಧ ಭಾಗಗಳಲ್ಲಿ ಬರೆಸಿದ ಪುಣ್ಯಾತ್ಮನಾದರೂ ಯಾರು? ಈ ಬಗ್ಗೆ ರಾಮಾ ಜೋಯಿಸ್ ತಲೆಕೆಡಿಸಿಕೊಂಡು ಸಂಶೋಧನೆ ಮಾಡಿದಾಗ ಅವರಿಗೆ ಮತ್ತಷ್ಟು ಕುತೂಹಲಕರ ಮಾಹಿತಿಗಳು ದೊರೆತವು. ಭಾರತ ಗಣರಾಜ್ಯವಾದ ನಂತರ, ಲೋಕಸಭೆಯ ಮೊದಲನೇ ಅಧ್ಯಕ್ಷರಾಗಿದ್ದ ಗಣೇಶ ವಾಸುದೇವ ಮಾವಳಂಕರ್ (ಜಿ.ವಿ.ಮಾವಳಂಕರ್) ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಇನ್‌ಸ್ಕ್ರಿಪ್‌ಷನ್ ಸಮಿತಿ ಈ ಕೆಲಸ ನಿರ್ವಹಿಸಿತೆಂದು ಅಧಿಕೃತವಾಗಿ ತಿಳಿದು ಬಂತು. ನಮ್ಮ ರಾಷ್ಟ್ರದ ಮೂಲಭೂತ ಸಿದ್ಧಾಂತಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿರುವ ಅತ್ಯಂತ ಸ್ಫೂರ್ತಿದಾಯಕವಾದ, ಭಾರತ ಮತ್ತು ಜಗತ್ತಿಗೇ ಚಿರಂತನವಾಗಿ ಮಾರ್ಗದರ್ಶಕವಾಗಿರುವ ಶ್ಲೋಕಗಳನ್ನು ಸಂಗ್ರಹಿಸಿ ಸಂಸತ್ ಭವನದೊಳಗೆ ಒಳರೇಖಿಸಿದ ಮಾವಳಂಕರ್ ಮತ್ತವರ ತಂಡಕ್ಕೆ ಇಡೀ ರಾಷ್ಟ್ರ ಖಂಡಿತ ಋಣಿಯಾಗಿರಬೇಕು.

ಭಗವದ್ಗೀತೆ, ಉಪನಿಷತ್, ಹಿಂದು ಧರ್ಮ ಎಂದರೆ ಎಗರಿ ಬೀಳುವ ಬುದ್ಧಿಜೀವಿಗಳು, ಕಮ್ಯುನಿಸ್ಟರು, ವಿಚಾರವಾದಿಗಳು ಪಾರ್ಲಿಮೆಂಟ್ ಭವನದಲ್ಲಿರುವ ಈ ಶ್ಲೋಕಗಳನ್ನು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ರಾಮಾ ಜೋಯಿಸ್ ಅವರ ಪುಸ್ತಕದಿಂದಲಾದರೂ ಈ ಮಂದಿಗೆ ಈ ಮಾಹಿತಿ ಈಗ ಖಂಡಿತ ತಲುಪಿರಬಹುದು! ಪಾರ್ಲಿಮೆಂಟ್ ಭವನವನ್ನೇ ಅಪವಿತ್ರಗೊಳಿಸಲಾಗಿದೆ ಎಂದು ಈ ಮಂದಿ ಬೊಬ್ಬೆ ಹೊಡೆದರೂ ಆಶ್ಚರ್ಯವಿಲ್ಲ. ಆದರೆ ಅವರ ಬೊಬ್ಬೆಯನ್ನು ಕೇಳಿಸಿಕೊಳ್ಳುವವರಾದರೂ ಯಾರು?

ಇನ್ನೂ ಸ್ವಾರಸ್ಯಕರ ಸಂಗತಿಯೊಂದಿದೆ. ರಾಮಾ ಜೋಯಿಸ್ ಮೊದಲು ಈ ಎಲ್ಲ ಶ್ಲೋಕಗಳನ್ನು ಸಂಗ್ರಹಿಸಿ ‘Message From Parliament House Bharat’  ಎಂಬ ಶೀರೋನಾಮೆಯಡಿಯಲ್ಲಿ ಪುಸ್ತಕ ಪ್ರಕಟಿಸಿ ಅದನ್ನು ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಸ್ಪೀಕರ್, ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲ ಸದಸ್ಯರು, ಎಲ್ಲ ರಾಜ್ಯಪಾಲರು ಹಾಗೂ ಪ್ರಮುಖ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಕಳುಹಿಸಿಕೊಟ್ಟರು. ಅನೇಕರು ತಕ್ಷಣ ಈ ಪುಸ್ತಕವನ್ನು ಸ್ವಾಗತಿಸಿ ಪ್ರತಿಕ್ರಿಯಿಸಿದರು. ಇದೊಂದು ಉತ್ತಮ ಕಾರ್ಯ, ಉಪಯುಕ್ತ ಹಾಗೂ ಪ್ರೇರಣಾದಾಯಕ, ಜನಪ್ರತಿನಿಧಿಗಳ ತಿಳಿವಳಿಕೆ ವೃದ್ಧಿಸಲು ಸೂಕ್ತ, ಅದ್ಭುತವಾದ ಕಾರ್ಯ… ಇತ್ಯಾದಿ ಸ್ವಾಗತಾರ್ಹ ಪ್ರತಿಕ್ರಿಯೆಗಳು ಹಲವರಿಂದ ವ್ಯಕ್ತವಾದವು. ಹಿಂದೆ ಕೇಂದ್ರ ಸಚಿವರಾಗಿದ್ದ, ಅನಂತರ ಉತ್ತರಾಖಂಡದ ರಾಜ್ಯಪಾಲರಾದ ಮಾರ್ಗರೆಟ್ ಆಳ್ವ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ` I spent 30 years in Parliament but this is for the first time that I have read and deciphered the messages engraved in the Paliament house building. They are truly inspiring and meaningful’   (30ವರ್ಷ ಕಾಲ ಪಾರ್ಲಿಮೆಂಟ್‌ನಲ್ಲಿ ಕಳೆದಿದ್ದರೂ ಮೊದಲನೇ ಬಾರಿಗೆ ಈ ಸಂದೇಶಗಳನ್ನು ನಿಮ್ಮ ಪುಸ್ತಕದಲ್ಲಿ ನೋಡುತ್ತಿರುವೆ. ಅವು ನಿಜಕ್ಕೂ ಪ್ರೇರಣಾದಾಯಕ ಹಾಗೂ ಅರ್ಥಪೂರ್ಣ).

ಮಾರ್ಗರೆಟ್ ಆಳ್ವ ಬೇರೆಯವರಂತೆ ಸುಳ್ಳು ಹೇಳಿಲ್ಲ ಎಂಬುದು ಗಮನಾರ್ಹ. 30 ವರ್ಷ ಕಾಲ ಪಾರ್ಲಿಮೆಂಟ್ ಭವನದಲ್ಲಿ ಅಡ್ಡಾಡಿದರೂ ಅವರು ಒಮ್ಮೆ ಕೂಡ ದ್ವಾರಗಳ, ಗೋಡೆಯ ಮೇಲೆ ಕೆತ್ತಲಾದ ಈ ಸಂದೇಶಗಳನ್ನು ನೋಡಿಯೇ ಇರಲಿಲ್ಲವಂತೆ. ಅಷ್ಟೊಂದು ಕಾರ್ಯಭಾರ ಅವರ ಹೆಗಲ ಮೇಲಿತ್ತೆಂದು ಕಾಣುತ್ತದೆ! ಮಾರ್ಗರೆಟ್ ಆಳ್ವ ಅವರಂತೆಯೇ, ಪಾರ್ಲಿಮೆಂಟ್ ಭವನದೊಳಗೆ ಕೆತ್ತಲಾದ ಈ ಸಂದೇಶ ವಾಕ್ಯಗಳನ್ನು ಒಮ್ಮೆ ಕೂಡ ತಪ್ಪಿ ನೋಡದ ಇನ್ನೂ ಅದೆಷ್ಟೋ ಸದಸ್ಯರಿರಬಹುದು. ಪಾರ್ಲಿಮೆಂಟ್ ಸದಸ್ಯರಾದ ಬಳಿಕ ಹೆಚ್ಚಿನವರ ಗಮನವೆಲ್ಲ ತಮಗೆ ಸಿಗುವ ವೇತನ, ಭತ್ಯೆ ಎಷ್ಟು, ಇತರ ಭತ್ಯೆಗಳೆಷ್ಟು , ಆ ವೇತನ – ಭತ್ಯೆಗಳು ಯಾವಾಗ ಹೆಚ್ಚಳವಾಗಬಹುದು, ಪಾರ್ಲಿಮೆಂಟ್ ಸದಸ್ಯರಾಗಿ ಸ್ವಂತಕ್ಕೆ ಹೇಗೆ ಸಾಕಷ್ಟು ಹಣ ಮಾಡಿಕೊಳ್ಳಬಹುದು… ಇತ್ಯಾದಿ ಸಂಗತಿಗಳ ಮೇಲೇ ಇರುತ್ತದೆ. ಹೀಗಿರುವಾಗ ಪಾಪ, ಪಾರ್ಲಿಮೆಂಟ್ ಭವನದೊಳಗೆ ಕೆತ್ತಲಾಗಿರುವ ಮುತ್ತಿನಂತಹ ವಾಕ್ಯಗಳನ್ನು ಗಮನಿಸಲು ಅವರಿಗೆಲ್ಲ ಪುರಸೊತ್ತಾದರೂ ಎಲ್ಲಿ?

ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯನ್ಯಾಯಾಧೀಶರಾದ ರಮೇಶ ಚಂದ್ರ ಲಹೋಟಿಯವರಂತೂ ರಾಮಾ ಜೋಯಿಸ್ ಅವರ ಈ ಕೃತಿಯ ಪ್ರತಿಗಳನ್ನು ಜಗತ್ತಿನ ಉಳಿದ ದೇಶಗಳ ಪಾರ್ಲಿಮೆಂಟ್‌ಗೂ ಕಳುಹಿಸಬೇಕೆಂದು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಇನ್ನೊಬ್ಬ ನ್ಯಾಯಾಧೀಶ ವಿ.ಕೆ. ಅಹುಜ ಅವರು, ` ಇಲ್ಲಿರುವ ಸಂದೇಶ ವಾಕ್ಯಗಳು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಖಂಡಿತ ನೆರವಾಗಲಿವೆ. ನನ್ನ ಮುಂದಿನ ತೀರ್ಪುಗಳಲ್ಲಿ ಈ ಸಂದೇಶಗಳನ್ನು ಮರೆಯದೇ ತಿಳಿಸುವೆ’ ಎಂದಿದ್ದಾರೆ. ಹೀಗೆ ವಿವಿಧ ಪಕ್ಷಗಳ ಗಣ್ಯರಲ್ಲದೆ ನ್ಯಾಯಾಧೀಶರು, ಪತ್ರಕರ್ತರು ಈ ಕೃತಿಯನ್ನು ಶ್ಲಾಘಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದು ಸಂಸದರಾಗಿರುವ ಈಗಿನವರು ಸಂಸತ್ ಭವನ ಪ್ರವೇಶಿಸಿದಾಗ ಮೊದಲು ಅವರು ಮಾಡಬೇಕಾದ ಕೆಲಸವೆಂದರೆ – ಆ ಭವನದ ಒಳಗೆ ಗೋಡೆಯ, ದ್ವಾರಗಳ ಮೇಲೆ ಸ್ವರ್ಣಾಕ್ಷರಗಳಲ್ಲಿ ಕೆತ್ತಲಾಗಿರುವ ಈ ಸಂದೇಶ ವಾಕ್ಯಗಳನ್ನು ತಪ್ಪದೇ ನೋಡುವುದು. ಹಾಗೆ ಮಾಡುವುದರಿಂದ ಅವರಿಗಂತೂ ಖಂಡಿತ ನಷ್ಟವಿಲ್ಲ. ಆ ವಾಕ್ಯಗಳನ್ನು ಮನನ ಮಾಡಿದರಂತೂ ಅತ್ಯುತ್ತಮವಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಲಾಭವೇ ಆಗಬಹುದು. (ರಾಮಾ ಜೋಯಿಸ್ ಅವರ ಇಂಗ್ಲಿಷ್ ಹಾಗೂ ಕನ್ನಡ ಕೃತಿಗಳಿಗಾಗಿ ಸಂಪರ್ಕಿಸಬೇಕಾದ ಚರವಾಣಿ : 94483 79770)

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top