ಬಂಟ್ವಾಳ: ಶೀಘ್ರವೇ ತಾಲೂಕಿನ ಕೇಂದ್ರ ಸ್ಥಾನವಾಗಿರುವ ಬಿ.ಸಿರೋಡ್ನ ತಾಲೂಕು ಕಚೇರಿಯ ಪಕ್ಕದಲ್ಲೇ ಸುಮಾರು 10ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು ಸ್ಥಳಾಂತರಗೊಳಿಸಲಾಗಿದ್ದು, ಒಂದೇ ಕಡೆ ಸೂಕ್ತ ವ್ಯವಸ್ಥೆ ಆಗದಿದ್ದುದರಿಂದ ಕಚೇರಿಯ ವಿವಿಧ ವಿಭಾಗಗಳಿಗೆ ಬೇರೆ ಬೇರೆ ಕಟ್ಟಡಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕಂದಾಯ ಇಲಾಖೆ ತಹಶೀಲ್ದಾರರ ಕಚೇರಿಯನ್ನು ತಾತ್ಕಾಲಿಕ ಕಟ್ಟಡದಲ್ಲಿ ವ್ಯವಸ್ಥೆಗೊಳಿಸಲಾಗಿದ್ದರೆ ಚುನಾವಣಾ ಹಾಗೂ ಆಹಾರ ಶಾಖೆಯನ್ನು ಹಳೆ ತಾ.ಪಂ.ಕಟ್ಟಡದ ಜಲಾನಯನ ಕಚೆರಿಗೆ ಸ್ಥಳಾಂತರಗೊಂಡಿದೆ. ಖಜಾನಾಧಿಕಾರಿಯವರ ಕಚೇರಿಯನ್ನು ತಾಲೂಕು ಪಂಚಾಯತ್ ಕಟ್ಟಡದ ಮೊದಲ ಮಹಡಿಗೆ ಸ್ಥಳಾಂತರಿಸಲು ಸಿದ್ದತೆ ನಡೆಸಲಾಗಿದೆ. ಪಡಸಾಲೆಯನ್ನು ಸಾರ್ವಜನಿಕ ರಂಗಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ಹೀಗೆ ಒಂದೇ ಸೂರಿನಲ್ಲಿದ್ದ ತಾಲೂಕು ಕಚೇರಿ ಒಂದೇ ಸೂರು ಮಿನಿವಿಧಾನಸೌಧ ನಿರ್ಮಾಣದ ಹಿನ್ನೆಲೆಯಲ್ಲಿ ಛಿದ್ರವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚನೆಯಂತೆ ಬಿ.ಸಿ.ರೋಡ್ ಸಬ್ರಿಜಿಸ್ಟ್ರಾರ್ ಕಚೇರಿ ಪಕ್ಕದಲ್ಲೇ 11 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಿಸಲಾಗಿದೆ. ಆರಂಭದಲ್ಲಿ ಹೆದ್ದಾರಿ ಪಕ್ಕದ ಖಾಸಗಿ ಕಟ್ಟಡಕ್ಕೆ ತಾಲೂಕು ಕಚೇರಿ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಅದು ಮಹಡಿ ಕಟ್ಟಡವಾದ್ದರಿಂದ ಸಾರ್ವಜನಿಕರ ಭೇಟಿಗೆ ಕಷ್ಟ ಸಾಧ್ಯವಾಗಬಹುದು ಎಂಬ ಕಾರಣಕ್ಕೆ ಅದನ್ನು ಕೈಬಿಡಲಾಯಿತು. ಬಳಿಕ ಈಗಾಗಲೇ ಮುಚ್ಚಿರುವ ಚಿತ್ರಮಂದಿರದ ಕಟ್ಟಡಕ್ಕೆ ಸ್ಥಳಾಂತರಿಸಬಹುದು ಎಂಬ ಸಲಹೆ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಈ ಬಗ್ಗೆಯೂ ಪರಿಶೀಲನೆ ನಡೆಸಿದರು. ಆದರೆ ಸದ್ರಿ ಕಟ್ಟಡದ ವ್ಯಾಜ್ಯ ನ್ಯಾಯಾಲಯದಲ್ಲಿರುವುದರಿಂದ ಅದನ್ನೂ ಕೈಬಿಡಲಾಯಿತು. ಇತ್ತ ತಾತ್ಕಾಲಿಕ ಕಚೇರಿ ಕಟ್ಟಡದ ಶೋಧಕಾರ್ಯ ನಡೆಸುವ ಭರದಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಇನ್ನೂ ವಿಳಂಬವಾಗುವ ಭಯದಲ್ಲಿ ಜಿಲ್ಲಾಧಿಕಾರಿಯವರೇ ಲೋಕೋಪಯೋಗಿ ಇಂಜಿನಿಯರ್ಗಳಿಗೆ ಪ್ರತ್ಯೇಕ ತಾತ್ಕಾಲಿಕ ಕಟ್ಟಡ ನಿರ್ಮಿಸಲು ಸೂಚಿಸಿ ಅದಕ್ಕೆ 11 ಲಕ್ಷ ಅನುದಾನವನ್ನೂ ಒದಗಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.