News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನ್ಯಾಯದೇವತೆ ಮೇಲೂ ಲೈಂಗಿಕ ದೌರ್ಜನ್ಯವೆ?

ದೆಹಲಿಯ ನಿರ್ಭಯಾ ಎಂಬ ಅಮಾಯಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಅಂತಹ ಹಲವಾರು ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದರೆ ನಿರ್ಭಯಾ ಪ್ರಕರಣಕ್ಕೆ ಸಿಕ್ಕಿದಷ್ಟು ಪ್ರಚಾರ ಉಳಿದ ಪ್ರಕರಣಗಳಿಗೆ ದೊರಕಿಲ್ಲ. ಇತ್ತೀಚೆಗೆ ಬೆಂಗಳೂರಿನ ವಿಬ್‌ಗಯಾರ್ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಕಂದಮ್ಮನ ಮೇಲೆ ಅಲ್ಲಿನ ಸಿಬ್ಬಂದಿ ವರ್ಗ ನಡೆಸಿದ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣ ಬೆಂಗಳೂರು ನಗರದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಆ ಖಾಸಗಿ ಶಾಲೆಗೆ ನೀಡಿದ ಅನುಮತಿಯನ್ನೇ ರದ್ದುಗೊಳಿಸಬೇಕೆಂಬಷ್ಟರಮಟ್ಟಿಗೆ ಪ್ರತಿಭಟನೆ ಕಾವೇರಿತ್ತು. ರಾಜ್ಯ ಸರ್ಕಾರ ಕೂಡ ಆ ಶಾಲೆಯ ಅನುಮತಿ ರದ್ದತಿ ಕೋರಿ ಸಿಬಿಎಸ್‌ಸಿ ಕಚೇರಿಗೆ ಪತ್ರ ಬರೆದಿತ್ತು. ಅನಂತರ ಶಾಲೆಯ ಪೋಷಕರೇ ಶಾಲೆಯನ್ನು ಮುಚ್ಚಬಾರದೆಂದು ಪರಿಪರಿಯಾಗಿ ಕೋರಿ ಸದ್ಯಕ್ಕೆ ಶಾಲೆ ನಡೆಯುತ್ತಿದೆ.

NERANOTA

ಇದಾದ ಬಳಿಕವಾದರೂ ಇಂತಹ ಘಟನೆಗೆ ಪೂರ್ಣವಿರಾಮ ಬಿದ್ದಿಲ್ಲ ಎನ್ನುವುದು ಇನ್ನಷ್ಟು ವಿಷಾದನೀಯ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಗುಬ್ಲಾಳದ ಖಾಸಗಿ ಶಾಲೆಯೊಂದರಲ್ಲಿ ಅಧ್ಯಾಪಕರೊಬ್ಬರು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಬೆಳಕಿಗೆ ಬಂದು ಆತನನ್ನು ಬಂಧಿಸಲಾಗಿದೆ. ಖಾಸಗಿ ಕಂಪೆನಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಅದೇ ಕಂಪೆನಿಯಲ್ಲಿ ಕೆಲಸ ಮಾಡುವ ಮೇಘಾಲಯ ಮೂಲದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಬೆಂಗಳೂರಿನ ಎಚ್‌ಎಸ್‌ಆರ್ ಲೇ ಔಟ್‌ನಲ್ಲಿ ನಡೆದಿದೆ. ಆತ ಆ ಯುವತಿಯನ್ನು ಊಟಕ್ಕೆಂದು ಹೊಟೇಲ್‌ಗೆ ಕರೆದುಕೊಂಡು ಹೋಗಿ, ನಂತರ ಲಿಫ್ಟ್‌ನಲ್ಲಿ ಬರುವಾಗ ಆಕೆಯನ್ನು ಬಲಾತ್ಕರಿಸಿ ದೌರ್ಜನ್ಯ ನಡೆಸಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗಾತ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ. ಉತ್ತರಕನ್ನಡದ ಮುಂಡಗೋಡ ತಾಲ್ಲೂಕಿನ ಮಜ್ಜಿಗೇರಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಕಾಡಿನಲ್ಲಿ ಕಟ್ಟಿಹಾಕಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂವರಲ್ಲಿ ಇಬ್ಬರು ಸ್ಥಳೀಯ ಪ್ರಭಾವೀ ರಾಜಕಾರಣಿಗಳ ಸುಪುತ್ರರಂತೆ!

ಇಂತಹ ಇನ್ನೂ ಅದೆಷ್ಟೋ ಅತ್ಯಾಚಾರ ಹಾಗೂ ದೌರ್ಜನ್ಯದ ಘಟನೆಗಳು ನಡೆಯುತ್ತಲೇ ಇವೆ. ಗೋವಾದ ಪ್ರತಿಷ್ಠಿತ ಪಂಚತಾರಾ ಹೊಟೇಲೊಂದರಲ್ಲಿ ತೆಹೆಲ್ಕಾ ಪತ್ರಿಕೆಯ ಸಂಪಾದಕ ತರುಣ್ ತೇಜ್‌ಪಾಲ್ ತನ್ನ ಸಹೋದ್ಯೋಗಿ ಮೇಲೆ ನಡೆಸಿದ ಲೈಂಗಿಕ ಕಿರುಕುಳದ ಘಟನೆ ಬಹುಶಃ ಈಗ ಸಾರ್ವಜನಿಕರಿಗೆ ಮರೆತೇ ಹೋಗಿರಬಹುದು. ತರುಣ್ ತೇಜ್‌ಪಾಲ್‌ಗೆ ಕೊನೆಗೂ ಜಾಮೀನು ದೊರಕಿದೆ. ಆ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಹೇಗೆ ಸಿಗುತ್ತದೆ ಎಂಬುದಷ್ಟೇ ಈಗ ಪ್ರಜ್ಞಾವಂತರ ಪಾಲಿಗೆ ಉಳಿದಿರುವ ಕುತೂಹಲ.

ಇವೆಲ್ಲ ಪ್ರಕರಣಗಳಿಗಿಂತಲೂ ಅತೀ ಗಂಭೀರವಾದ ಪ್ರಕರಣ ಈಗ ಬೆಳಕಿಗೆ ಬಂದಿದೆ. ಅದರ ಮೇಲೆ ಒಂದಿಷ್ಟು ಬೆಳಕು ಚೆಲ್ಲುವುದೇ ಈ ಲೇಖನದ ಉದ್ದೇಶ. ರಾಜಕಾರಣಿಗಳು, ಪತ್ರಕರ್ತರು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು… ಇವರೆಲ್ಲರೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ನಡೆಸಿ ತಮ್ಮ ಕ್ಷೇತ್ರಕ್ಕೆ ಕಳಂಕ ತಂದಿರುವುದು ಈಗ ರಹಸ್ಯವಾಗಿಲ್ಲ. ಆದರೆ ಭಾರತೀಯರೆಲ್ಲರೂ ಅಪಾರವಾದ ನಂಬಿಕೆ, ಗೌರವ ಇಟ್ಟುಕೊಂಡಿರುವ ನ್ಯಾಯಾಂಗ ಕ್ಷೇತ್ರದಲ್ಲೂ ಲೈಂಗಿಕ ದೌರ್ಜನ್ಯದ ಘಟನೆಗಳು ನಡೆಯುತ್ತವೆಂದರೆ ಅದನ್ನು ನಂಬುವುದಾದರೂ ಹೇಗೆ?

ಆದರೆ ನೀವು ನಂಬಲೇಬೇಕಾಗಿದೆ. ಮಧ್ಯಪ್ರದೇಶ ಹೈಕೋರ್ಟಿನ ಗ್ವಾಲಿಯರ್ ಪೀಠದ ನ್ಯಾಯಮೂರ್ತಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಗ್ವಾಲಿಯರ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರಿಗೆ 9 ಪುಟಗಳ ದೀರ್ಘ ಪತ್ರ ಬರೆದಿದ್ದಾರೆ. ಆ ಪತ್ರದ ಸಾರಾಂಶ ಇದು: `ಗ್ವಾಲಿಯರ್ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದ ನ್ಯಾಯಾಧೀಶ ಗಂಗೇಲೆ ತಮ್ಮ ಬಂಗಲೆಗೆ ಏಕಾಂಗಿಯಾಗಿ ಬಂದು ಭೇಟಿಯಾಗಿ ಎಂದರು. ಆದರೆ ಯಾವುದೋ ನೆಪ ಹೇಳಿ ತಪ್ಪಿಸಿಕೊಂಡೆ. ಇದಾದ ತರುವಾಯ ತಮ್ಮ ಮನೆಯಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಐಟಂ ಸಾಂಗ್ ಒಂದಕ್ಕೆ ನೃತ್ಯ ಮಾಡುವಂತೆ ಅವರು ಹೇಳಿದ್ದರು. ಮಗಳ ಜನ್ಮ ದಿನದ ನೆಪ ಹೇಳಿ ತಪ್ಪಿಸಿಕೊಂಡೆ. ಸೆಕ್ಸಿ ಫಿಗರ್ ನೃತ್ಯ ಮಾಡುವುದನ್ನು ನೋಡಲು ಕಾತುರನಾಗಿದ್ದೇನೆ ಎಂಬ ಸಂದೇಶ ಕಳುಹಿಸಿದ್ದರು. ತಮ್ಮ ಅನುಕೂಲಕ್ಕೆ ತಕ್ಕಂತೆ ನಾನು ಸ್ಪಂದಿಸದೇ ಇದ್ದಾಗ ಕೆರಳಿದ ಜಡ್ಜ್ ನನಗೆ ಕಿರುಕುಳ ನೀಡಲು ತೊಡಗಿದರು. ಅವರ ಮಾತುಗಳನ್ನು ಕೇಳದೇ ಇದ್ದುದಕ್ಕೆ ಕೆಲಸದಲ್ಲಿ ತಪ್ಪು ಹುಡುಕತೊಡಗಿದರು. ಅದಕ್ಕೆ ಸೊಪ್ಪು ಹಾಕದೇ ಇದ್ದಾಗ ಕ್ಷುಲ್ಲಕ ಕಾರಣ ನೀಡಿ, ಮಧ್ಯಪ್ರದೇಶ ಹೈಕೋರ್ಟ್‌ನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಳೆದ ಜು. 8 ರಂದು ದೂರದ ಸಿಧಿ ಪ್ರದೇಶಕ್ಕೆ ನನ್ನನ್ನು ವರ್ಗಾವಣೆ ಮಾಡಿದ್ದಾರೆ. ನನ್ನ ಮಗಳು 12ನೇ ತರಗತಿಯಲ್ಲಿ ಓದುತ್ತಿರುವುದರಿಂದ, ಈಗ ಶಾಲೆ ಪ್ರಾರಂಭವಾದ ಬಳಿಕ ಹೀಗೆ ವರ್ಗಾವಣೆ ಮಾಡಿದರೆ ಆಕೆಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ದಯವಿಟ್ಟು ವರ್ಗಾವಣೆ ರದ್ದು ಮಾಡಿ ಎಂದು ಕೋರಿಕೊಂಡೆ. ಆದರೆ ಅದಕ್ಕೆ ಸೊಪ್ಪು ಹಾಕದ ಅವರು, ನನ್ನ `ಆಸೆ’ಗಳನ್ನು ನೀನು ಈಡೇರಿಸಲಿಲ್ಲ. ಅದಕ್ಕೇ ನಿನಗೆ ವರ್ಗ ಮಾಡಿರುವೆ ಎಂದು ಆ ನ್ಯಾಯಮೂರ್ತಿಗಳು ಹೇಳಿದ್ದಾರೆ…’ ಹೀಗೆ ದೀರ್ಘ ಪತ್ರ ಬರೆದಿರುವ ಆ ನ್ಯಾಯಾಧೀಶೆ ಕೊನೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕೇಳಿರುವ ಪ್ರಶ್ನೆ: `ಒಬ್ಬ ತಾಯಿ, ಸಹೋದರಿ ಮತ್ತು ಒಬ್ಬ ಪತ್ನಿ, ಅದರಲ್ಲೂ ಕಾನೂನು ರಕ್ಷಣೆಯಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಯನ್ನು ಈ ರೀತಿ ನಡೆಸಿಕೊಳ್ಳುವುದಾದರೆ ನಾವು ಯಾವ ಸಂವಿಧಾನಾತ್ಮಕ ಉದ್ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದೇವೆ?’

ಗ್ವಾಲಿಯರ್‌ನ ಜಿಲ್ಲಾ ಮಹಿಳಾ ನ್ಯಾಯಾಧೀಶೆ ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಮನೋಹರ್‌ಲಾಲ್ ಶರ್ಮಾ ಎಂಬ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಯನ್ನೂ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಬೇಕು ಮತ್ತು ನ್ಯಾಯಾಂಗ ತನಿಖೆ ನಡೆಸಬೇಕು. ಪ್ರಕರಣದ ತನಿಖೆ ಪೂರ್ಣವಾಗುವವರೆಗೆ ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಮೂರ್ತಿ ಗಂಗೇಲೆ ಅವರನ್ನು ಅಮಾನತಿನಲ್ಲಿಡಬೇಕು ಎಂದವರು ಆ ಪಿಐಎಲ್‌ನಲ್ಲಿ ಮನವಿ ಮಾಡಿದ್ದಾರೆ.

ಇತ್ತ ಮಹಿಳಾ ನ್ಯಾಯಾಧೀಶೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ಗಂಗೇಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಹೋರಾಟಗಾರ್ತಿ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾಜೈಸಿಂಗ್ ಅವರು ಸಂಸದರನ್ನು ಆಗ್ರಹಿಸಿದ್ದಾರೆ.

ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ಗಂಗೇಲೆ ಅವರು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕ್ರುದ್ಧರಾಗಿ `ನನ್ನ ಮೇಲೆ ಯಾವುದೇ ಸಮಿತಿ ಎಂತಹ ತನಿಖೆ ಬೇಕಾದರೂ ನಡೆಸಲಿ. ಆರೋಪ ಸಾಬೀತಾದರೆ ನಾನು ಗಲ್ಲಿಗೇರುವುದಕ್ಕೂ ಸಿದ್ಧ’ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಈ ನಡುವೆ ಈ ನ್ಯಾಯಮೂರ್ತಿಗಳ ಕಿರುಕುಳ ತಾಳಲಾರದೆ ಬೇಸತ್ತ ಮಹಿಳಾ ನ್ಯಾಯಾಧೀಶೆ ಕಳೆದ ಜು. 15 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದೂ ಆಗಿದೆ. ಈ ರಾಜೀನಾಮೆಗೆ ಆಕೆ ನೀಡಿರುವ ಕಾರಣ: `ನನ್ನ ಘನತೆ, ಸ್ತ್ರೀತ್ವ ಮತ್ತು ಆತ್ಮ ಸಮ್ಮಾನವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ನ್ಯಾಯಾಂಗ ಸೇವೆಗೆ ರಾಜೀನಾಮೆ ನೀಡಿರುವೆ.’

`ಇದೊಂದು ದುರದೃಷ್ಟಕರ ಸಂಗತಿ. ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ತಿಳಿಸಿದ್ದು, ಅವರ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳುವೆ’ ಎಂದು ಸುಪ್ರೀಂಕೋರ್ಟ್ ಸಿಜೆಐ ಆರ್.ಎಂ. ಲೋಧಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗ ಕ್ಷೇತ್ರದಲ್ಲೂ ಇಂತಹ ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆಯುತ್ತವೆಯೆಂದರೆ ಅದಕ್ಕಿಂತ ನೋವಿನ ಸಂಗತಿ ಇನ್ನಾವುದು? ಒಬ್ಬ ಹೈಕೋರ್ಟ್ ನ್ಯಾಯಮೂರ್ತಿಯೇ ತನ್ನ ಕೆಳಗಿನ ನ್ಯಾಯಾಧೀಶೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗುತ್ತಾರೆಂದರೆ ಜನರು ಇನ್ನು ನ್ಯಾಯಕ್ಕಾಗಿ ಯಾರನ್ನು ಮೊರೆ ಹೋಗುವುದು?

ಆರೋಪ ಎದುರಿಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ಅವರೇನೋ ಆರೋಪ ಸಾಬೀತಾದರೆ ಗಲ್ಲಿಗೇರಲೂ ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ. ಅದು ಮಾಧ್ಯಮಗಳಲ್ಲೂ ಪ್ರಕಟವಾಗಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ನಡೆದಿರುವ ಘಟನೆ ಇದಾದ್ದರಿಂದ, ನ್ಯಾಯಾಂಗ ಕ್ಷೇತ್ರಕ್ಕೆ ಇದೊಂದು ಕಪ್ಪು ಚುಕ್ಕಿ ಆಗುವ ಸಂಭವ ಇರುವುದರಿಂದ ಪ್ರಕರಣದ ತನಿಖೆ ಹೇಗೆ ಸಾಗುತ್ತದೆ ಎನ್ನುವುದು ಕುತೂಹಲಕಾರಿ. ಅದರಲ್ಲೂ ನ್ಯಾಯಾಧೀಶೆ ವಿರುದ್ಧ ನಡೆದಿದೆಯೆನ್ನಲಾದ ಲೈಂಗಿಕ ದೌರ್ಜನ್ಯದ ತನಿಖೆಗೆ ಬಳಸುವ ಮಾನದಂಡ ಯಾವುದು? ಅದಕ್ಕೆ ಸಾಕ್ಷ್ಯಾಧಾರಗಳು ದೊರೆಯುವುದಾದರೂ ಹೇಗೆ? ತನ್ನ ಮನೆಯ ಸಮಾರಂಭದಲ್ಲಿ ಐಟಂ ಸಾಂಗ್ ಒಂದಕ್ಕೆ ನೃತ್ಯ ಮಾಡಬೇಕೆಂದು ನ್ಯಾಯಮೂರ್ತಿಗಳು ಬಲವಂತ ಮಾಡಿದ್ದಕ್ಕೆ ಯಾವ ಸಾಕ್ಷ್ಯಾಧಾರ ಒದಗಿಸಲು ಸಾಧ್ಯ? ಏಕಾಂಗಿಯಾಗಿ ನನ್ನ ಮನೆಗೆ ಬಾ ಎಂದು ನ್ಯಾಯಮೂರ್ತಿ ಆ ಮಹಿಳಾ ನ್ಯಾಯಾಧೀಶೆಗೆ ಹೇಳಿದ್ದಕ್ಕೆ ಪುರಾವೆ ಎಲ್ಲಿ ದೊರಕೀತು? ಇಂತಹ ಹಲವು ಪ್ರಶ್ನೆಗಳು ತನಿಖೆ ಕೈಗೊಂಡಾಗ ಎದುರಾಗುತ್ತವೆ. ಒಬ್ಬ ಶಾಲಾ ಅಧ್ಯಾಪಕ, ಒಂದು ಖಾಸಗಿ ಕಂಪೆನಿಯ ಸಿಇಓ ಅಥವಾ ಇನ್ನಾರೋ ಒಬ್ಬ ರಿಕ್ಷಾ ಚಾಲಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಾಗ ಅಂಥವರನ್ನು ಕೂಡಲೇ ಸಾಕ್ಷ್ಯಾಧಾರವಿಲ್ಲದೆ ಬಂಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶಗಳಿವೆ. ಅಂಥವರನ್ನು ಇಂತಹ ಪ್ರಕರಣಗಳಲ್ಲಿ ಬಂಧಿಸಿಯೂ ಆಗಿದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯ ಸ್ಥಾನದಲ್ಲಿ ನಿಂತಿರುವವರು ಅಂಥಿಂಥವರಲ್ಲ, ಹೈಕೋರ್ಟ್ ನ್ಯಾಯಮೂರ್ತಿಗಳು! ಅವರನ್ನು ಬಂಧಿಸುವ ಧೈರ್ಯ ಯಾರಿಗಿದೆ? ಲೈಂಗಿಕ ಕಿರುಕುಳ ನೀಡಿದ ಆರೋಪಿ ಅಧ್ಯಾಪಕನಂತೆ, ಖಾಸಗಿ ಕಂಪೆನಿಯ ಸಿಇಓನಂತೆ ಇವರನ್ನು ಬಂಧಿಸಲು ಸಾಧ್ಯವೆ? ಸುಪ್ರೀಕೋರ್ಟ್‌ನಲ್ಲಿ ಪಿಐಎಲ್ ಹಾಕಿರುವ ಮನೋಹರಲಾಲ್ ಶರ್ಮಾ ಅವರೇನೋ ಮಧ್ಯಪ್ರದೇಶ ಹೈಕೋರ್ಟ್‌ನ ಆರೋಪಿ ನ್ಯಾಯಮೂರ್ತಿಗಳನ್ನು ಪ್ರಕರಣದ ತನಿಖೆ ಪೂರ್ಣವಾಗುವವರೆಗೆ ಅಮಾನತಿನಲ್ಲಿಡಬೇಕು ಎಂದು ಮನವಿ ಮಾಡಿದ್ದಾರೆ. ಅವರ ಈ ಮನವಿ ಸದ್ಯಕ್ಕಂತೂ ಪುರಸ್ಕೃತವಾಗಿಲ್ಲ. ಮಹಿಳಾ ಹೋರಾಟಗಾರ್ತಿ ಇಂದಿರಾ ಜೈಸಿಂಗ್ ಕೂಡ ಆಪಾದಿತ ನ್ಯಾಯಮೂರ್ತಿಯವರನ್ನು ನ್ಯಾಯಾಂಗ ಕಲಾಪದಿಂದ ಹೊರಗಿಡಬೇಕೆಂದು ಆಗ್ರಹಿಸಿದ್ದರೂ ಅದೂ ಕೂಡ ನೆರವೇರಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಲಾಗುತ್ತಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಶಾಲಾ ಅಧ್ಯಾಪಕನಿಗೆ ಅನ್ವಯವಾಗುವ ಕಾನೂನೇ ಅಂತಹದೇ ಕೃತ್ಯವೆಸಗಿರುವ ನ್ಯಾಯಮೂರ್ತಿಗೂ ಅನ್ವಯವಾಗಬೇಕು ಎನ್ನುವುದೇ `ಕಾನೂನು ಎಲ್ಲರಿಗೂ ಒಂದೇ’ ಎಂಬುದರ ಅರ್ಥ. ಆದರೆ…?

ತಮಾಷೆಯೆಂದರೆ ಈಗ ರಾಜೀನಾಮೆ ನೀಡಿರುವ ನ್ಯಾಯಾಧೀಶೆ ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಿಗ್ರಹ ಜಿಲ್ಲಾ ಸಮಿತಿಯ ಮುಖ್ಯಸ್ಥರೂ ಆಗಿದ್ದರು. ಲೈಂಗಿಕ ಕಿರುಕುಳ ಆರೋಪದ ಹಲವು ದೂರುಗಳನ್ನು ಪರಿಶೀಲಿಸಿ, ಕಿರುಕುಳಕ್ಕೊಳಗಾದವರಿಗೆ ನ್ಯಾಯದಾನ ಮಾಡಿದ್ದರು. ಅವರೇ ಈಗ ಲೈಂಗಿಕ ಕಿರುಕುಳಕ್ಕೆ ಒಳಗಾಗಬೇಕಾದ ಪ್ರಮೇಯ ಒದಗಿರುವುದು ದುರದೃಷ್ಟಕರ. ಅದಕ್ಕೇ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೊರೆ ಹೋಗಿದ್ದಾರೆ.

ಈ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಬಹುದು ಅಥವಾ ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಸಿಗದೆಯೂ ಇರಬಹುದು. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಒಂದು ವೇಳೆ ಸಿಗದಿದ್ದರೆ ನ್ಯಾಯಾಂಗದ ಮೇಲೆ ಜನರಿಟ್ಟಿರುವ ಅಪಾರ ನಂಬಿಕೆ ಹಾಗೂ ಗೌರವಕ್ಕೆ ಕುತ್ತು ಬರುವುದು ನಿಶ್ಚಿತ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲನ್ನು ಹತ್ತುವ ಪ್ರಕ್ರಿಯೆಗೂ ಹಿನ್ನಡೆಯಾಗಬಹುದು. ನ್ಯಾಯಾಧೀಶೆಗೇ ನ್ಯಾಯ ಸಿಗದಿದ್ದಾಗ ಇನ್ನು ಸಾಮಾನ್ಯ ಮಹಿಳೆಯರಾದ ನಮಗೆಲ್ಲಿ ನ್ಯಾಯ ಎಂಬ ಹತಾಶೆ ಅಂಥವರನ್ನು ಕಾಡಬಹುದು. ಹಾಗಾಗಬಾರದು. ಹಾಗಾಗದಿರಲಿ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top