ಬಂಟ್ವಾಳ: ’ಕೂಸಮ್ಮಜ್ಜಿನ ಇಲ್ಲ್’ನಲ್ಲಿನ ಹಸಿರು ಮದುವೆ, ’ಕೆರೆಕರೆ’ಯಲ್ಲಿನ ಮಾಯಾನಗರಿ ನಾಟಕ, ’ಮಾಂಟೆ’ ಗುಹೆಯಲ್ಲಿನ ಹಸಿರು ನಡಿಗೆಯಾಟ, ’ಕುಕ್ಕುದಡಿ’ಯ ಪ್ರಕೃತಿ ವಂದನೆ, ’ದೈವ ಕಟ್ಟೆ’ಯ ಪ್ರಕೃತಿ ಪೂಜೆ, ’ನೀರಗುಂಡಿ’ಯ ನೀರಾಟ, ’ಉಜ್ಜಾಲ್ದಡಿ’ಯ ಉಯ್ಯಾಲೆಯಾಟ, ’ಚೆ.ಅಟ್ಟದ ಇಲ್ಲ್’ ನಲ್ಲಿಯ ಆಟ-ಒಡನಾಟಗಳು, ’ನೇರಳೆಕಟ್ಟೆ’ಯ ಕೂಡಾಟಗಳು, ’ನಿಲೆಜಾಲ್’ನ ಹಸಿರು ತಿನಿಸು-ಆಹಾರಗಳು ಸೇರಿದ ಹಸಿರು ನೆನಪುಗಳನ್ನು ಉಳಿಸಿಕೊಂಡು ಮೂರನೇ ವರ್ಷದ ಪಚ್ಚೆಪರ್ಬವು ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಉಜಿರಂಡಿಪಲ್ಕೆಯಲ್ಲಿ ಸಮಾಪನಗೊಂಡಿತು.
ಈ ಮೂಲಕ ಎಪ್ರಿಲ್ ೧೧ರಿಂದ ಆರಂಭಗೊಂಡಿದ್ದ ’ಪಚ್ಚೆಪರ್ಬ’ ರಾಜ್ಯ ಮಟ್ಟದ ಮಕ್ಕಳ-ಯುವಜನರ ಬೇಸಿಗೆ ರಜಾ ಶಿಬಿರವು ಜನಮನದಲ್ಲಿ ಹಸಿರಾಯಿತು.
’ನೇರಳೆಕಟ್ಟೆ’ ಮರದಡಿಯಲ್ಲಿ ಮರಗಳ ಎಲೆಗಳ ವಾದ್ಯಗೋಷ್ಟಿ ಮತ್ತು ’ಕೂಸಮ್ಮಜ್ಜಿನ ಇಲ್ಲ್’ನ ಬಣ್ಣ ಬರೆವಾಟಗಳ ಮೂಲಕ ಆರಂಭಗೊಂಡ 3ನೇ ವರ್ಷದ ’ಪಚ್ಚೆಪರ್ಬ’ವು ದಿನಂಪ್ರತಿ ನೂರಾರು ಮಕ್ಕಳು ಮತ್ತು ನೂರಾರು ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಮುಂದುವರಿಯಿತು.
ಆರಂಭದ ದಿನದಲ್ಲಿ ’ಪರಿಸರ ಸ್ನೇಹಿ’ ಜಿಲ್ಲಾ ಪ್ರಶಸ್ತಿ ವಿಜೇತ ಕೆದ್ದಳಿಕೆ ಸ.ಹಿ.ಪ್ರಾ.ಶಾಲಾ ಮಕ್ಕಳ ಪ್ರಕೃತಿ ಹಾಡು ಮತ್ತು ’ಭೂಮಿ’ ನಾಟಕ ಹಾಗೂ ಬಂಟ್ವಾಳ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲಾ ಮಕ್ಕಳ ’ಮಾಯಾನಗರಿ’ ನಾಟಕ ವಿಶೇಷ ಆಕರ್ಷಣೆಯಾಗಿತ್ತು. ಸಂಜೆ ’ಮನುಷ್ಯ ಜಾತಿ ತಾನೊಂದೇ ವಲಂ’ ಧ್ವನಿ ಬೆಳಕಿನ ಕಾರ್ಯಕ್ರಮದ ವೀಡಿಯೋ ಪ್ರದರ್ಶನ ನಡೆಯಿತು.
ಎರಡನೆಯ ದಿನ ’ಸಿಂಪನಿ’ ಮಕ್ಕಳ ಪತ್ರಿಕಾ ಬಳಗದಿಂದ ಹಾಡು-ಆಟ-ಕಥೆ ಚಟುವಟಿಕೆಗಳು ನಡೆದವು.
ಪ್ರಕೃತಿ ವಂದನೆ:
ಪ್ರಕೃತಿಯಿಂದ ನಾನು ತುಂಬಾ ಕಲಿತಿದ್ದೇನೆ, ಬೆಳೆದಿದ್ದೇನೆ. ಹಾಗಾಗಿ ಪರಿಸರಪರವಾದ ಇಂತಹ ಯಾವುದೇ ಕೆಲಸ, ಹೋರಾಟಗಳಿಗೆ ನನ್ನ ಒಂದಾಗುವಿಕೆ ಇದ್ದೇ ಇರುತ್ತದೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ನುಡಿದರು. ಅವರು ಪಚ್ಚೆಪರ್ಬದ ಎರಡನೆಯ ದಿನ ಮಧ್ಯಾಹ್ನ ನಡೆದ ’ಪ್ರಕೃತಿ ವಂದನೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ನೀರು, ಮಣ್ಣು, ಮರ, ತಿಪ್ಪೆಗುಡ್ಡೆ, ಭತ್ತದ ಹುಲ್ಲು ರಾಶಿಗಳಿಗೆ ವಂದಿಸಿ ಹಸಿರು ನುಡಿಗಳನ್ನಾಡಿದರು.
150ಕ್ಕೂ ಹೆಚ್ಚು ವಿವಿಧ ಭತ್ತದ ತಳಿಗಳನ್ನು ಬೆಳೆಸುತ್ತಿರುವ ಕಿಲ್ಲೂರು ದೇವರಾವ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಪನ್ಯಾಸಕ ಡಾ. ಶ್ರೀಶ ಕುಮಾರ್, ರಂಗಕರ್ಮಿ ಐ.ಕೆ.ಬೊಳುವಾರು, ನಾಲೂರು ಗುತ್ತುಮನೆಯ ಯಜಮಾನ ರತ್ನಾಕರ ಕೊಂಡೆ, ಜಾನಪದ ಕಲಾವಿದೆ ಶಾರದಾ ಜಿ. ಬಂಗೇರ, ಹಸಿರು ಅಂಗಳದೊಡೆಯ ಗಂಗಯ್ಯ ಬಂಗೇರ, ತರಬೇತುದಾರ ಪ್ರೇಮಾನಂದ ಕಲ್ಮಾಡಿ, ಪತ್ರಕರ್ತ ಗೋಪಾಲ ಅಂಚನ್ ಅತಿಥಿಗಳಾಗಿ ಜೊತೆಗಿದ್ದರು.
ಸಂಜೆ ಪ್ರಕೃತಿ ಪೂಜೆಯ ಭಾಗವಾದ ದೈವಾರಾಧನಾ ಅಗೇಲು ಮತ್ತು ವನಭೋಜನ ನಡೆದಿತ್ತು.
ಹಸಿರಿನ ಮಧ್ಯೆ ಹಸೆಮನೆಯೇರಿತು ಬೆಂಗಳೂರಿನ ಜೋಡಿ:
ಆ ಮದುವೆ ಚಪ್ಪರದ ಸುತ್ತ ಹಸಿರು ಮರಗಳು, ಚಪ್ಪರವೂ ಹಸಿರು ಗರಿ, ಎಲೆಗಳಿಂದ ಸಿಂಗರಿಸಲಾಗಿತ್ತು. ಮದುಮಕ್ಕಳು ಕೂರಬೇಕಾದ ಆಸನವೂ ಹಳೆ ಮರದ ಬೊಡ್ಡೆಯೊಂದಕ್ಕೆ ಮರದೆಲೆಗಳಿಂದ ಸಿಂಗರಿಸಲಾಗಿದ್ದ ಸಿಂಹಾಸನ. ಪುನರ್ಪುಳಿ ಮರದಡಿಯಲ್ಲಿನ ತೆಂಗಿನ ಮಡಲ್ ಚಪ್ಪರದಡಿಯಲ್ಲಿ ಮದುಮಗ-ಮದುಮಗಳು ಕೈಯ್ಯಲ್ಲಿ ಹೂಹಾರ ಹಿಡಿದು ನಿಂತಿದ್ದರೆ ಬಾನಿಂದ ಪ್ರಕೃತಿ ಮಳೆಯ ಹನಿಗಳ ಮೂಲಕ ಅಕ್ಷತೆ ಎಸೆಯುತ್ತಿತ್ತು. ವಾದ್ಯಗಳಂತೆ ಸಣ್ಣಗೆ ಗುಡುಗು, ನೆರೆದವರನ್ನು ಮಂತ್ರಮುಗ್ಧಗೊಳಿಸಿದ ತಣ್ಣಗೆ ಬೀಸುಗಾಳಿ, ತನು ಮನ, ನೆಲ ತಣಿಸಿದ ಧಾರಾಕಾರ ಮಳೆ. ಇವೆಲ್ಲದರ ಮಧ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ರಾಧಾ(23) ಮತ್ತು ಶ್ರೀನಿವಾಸ(32) ಅವರುಗಳು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಅದ್ಭುತ ಮದುವೆ.
ಸುತ್ತ ಸೇರಿದ್ದ ಜನಸ್ತೋಮ ಮಳೆಯಲ್ಲಿ ತಮಟೆ ಬಾರಿಸಿ ಕುಣಿದರೆ, ಸೇರಿದ್ದ ಹಿರಿಯರು, ನೆಂಟರು, ಮಕ್ಕಳು ಇದೆಂತಹ ಅಚ್ಚರಿಯ ಮದುವೆ ಎಂದು ಹಾಡುಗಳಿಗೆ ದನಿ ಸೇರಿಸಿದರು. ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿ ಅವರ ನೇತೃತ್ವದ ಈ ಮದುವೆ ತುಳುನಾಡಿನ ನೆಲದ ಸಂಸ್ಕೃತಿಯಂತೆ ನಡೆದುದು ಇನ್ನೊಂದು ಅಚ್ಚರಿ.
ಹಸಿರು ಪರಿಸರದ ಮಧ್ಯೆ ಮತ್ತು ಮಳೆಯ ಆಶೀರ್ವಾದಗಳ ಜೊತೆ ಸರಳ ವಿವಾಹ ನಡೆದು ರಾಧಾ-ಶ್ರೀನಿವಾಸ್ ದಾಂಪತ್ಯ ಹೆಮ್ಮೆಯ ನಡೆ ಬೀರುತ್ತಾ ಯುವ ಜನಾಂಗಕ್ಕೆ ಮಾದರಿಯಾದರು. ’ಪಚ್ಚೆಪರ್ಬ’ದ ಕೊನೆಯ ದಿನ ಬೆಳಗಿನಿಂದ ಮಧ್ಯಾಹ್ನವರೆಗೆ ಈ ಅಭೂತಪೂರ್ವ ಮದುವೆಗೆ ಎರಡೂ ಕಡೆಯ ಕುಟುಂಬ-ಸ್ನೇಹಿಗಳು, ಆತ್ಮೀಯರು ಒಟ್ಟಾಗಿದ್ದರು. ಶಿಬಿರಾರ್ಥಿ ಮಕ್ಕಳು, ಯುವಜನರು ಕೂಡಾ ಸಾಕ್ಷಿಯಾದರು.
ಸಮಾರೋಪ:
ಹೊಸಪೇಟೆಯ ಸಖಿ ಯುವ ಸಂವಾದ ಕೇಂದ್ರದ ಯುವಜನರು, ತುಮಕೂರು ಸಿಗ್ನಾ ಯುವಜನರು, ಬೆಂಗಳೂರು ದೀವಟಿಗೆ ಸಂಸ್ಥೆ ಯುವಜನರು, ದೊಡ್ಡಬಳ್ಳಾಪುರದ ಯುವಸಂಚಲನ, ದಕ್ಷಿಣ ಕನ್ನಡದ ಅರಿವು ಯುವಜನರು, ಉಡುಪಿಯ ನೇಟಿವ್ ಯುವಜನರು, ಕಾರ್ಕಳದ ಜನಚೇತನ ಯುವಜನರು, ಕೊಪ್ಪಳದ ಅಂಗಳ ಸಂಸ್ಥೆಯ ಯುವಜನರು ಮತ್ತು ಮಣಿನಾಲ್ಕೂರು ರಂಗಸಾಂಗತ್ಯ ಸಂಸ್ಥೆಯ ಯುವಜನರು ಶಿಬಿರದ ಅನುಭವ ಸಾಕ್ಷಿಗಳಾಗಿದ್ದು ತಮ್ಮ ಅದ್ಬುತವಾದ ಅನುಭವಗಳನ್ನು ಹಂಚಿಕೊಂಡರು. ಶಿಬಿರಾರ್ಥಿ ಮಕ್ಕಳು, ಅರಿವು ಮನೆಯ ಸದಸ್ಯರು ಸಮಾರೋಪದಲ್ಲಿ ಜೊತೆಗಿದ್ದರು.
ಕಲಾವಿದ ದಿನೇಶ ಹೊಳ್ಳ ಮತ್ತು ಸಪ್ನಾ ನೊರೋನ್ಹಾ ಅತಿಥಿಗಳಾಗಿ ಭಾಗವಹಿಸಿದ್ದರು. ಮೂರು ದಿನಗಳ ಪಚ್ಚೆಪರ್ಬದಲ್ಲಿ ಶಿವಾನಂದ ಉಳಿ, ಉಪನ್ಯಾಸಕ ವಿಘ್ನೇಶ ಹೊಳ್ಳ ತೆಕ್ಕಾರು, ಕೆ. ರಮೇಶ ನಾಯಕ್, ಪಿ. ಡೀಕಯ್ಯ, ನಸ್ರೀನ್ ಹೊಸಪೇಟೆ, ಡಾ.ಪ್ರವೀಣ್ ಸೆರಾ, ರವಿ ಈಚಲಮರ, ಸುಧಾಕರ ಪೂಜಾರಿ ಕಾರ್ಕಳ, ನೇಸರ ಸುಂದರ ರಾವ್, ಮಹಾಬಲೇಶ್ವರ ಹೆಬ್ಬಾರ್, ಮಂಜು ಅರ್ಕಾವತಿ, ಸತೀಶ್ ಕಕ್ಕೆಪದವು, ಸುಜಯಾ ಮಣಿನಾಲ್ಕೂರು, ಉದಯ ಕುಮಾರ್ ಜ್ಯೋತಿಗುಡ್ಡೆ, ಕೃಷ್ಣಪ್ಪ ಬಂಬಿಲ, ಮಂಜುಳಾ ರವಿ ಬೆಂಗಳೂರು ಸೇರಿದಂತೆ 60ಕ್ಕೂ ಹೆಚ್ಚಿನ ಪರಿಸರ ಸ್ನೇಹಿ ಸಂಪನ್ಮೂಲ ವ್ಯಕ್ತಿಗಳು ಜೊತೆಗಿದ್ದು ಪಚ್ಚೆಪರ್ಬವನ್ನು ಹಸಿರು ನೆನಪುಗಳತ್ತ ನಡೆಸಿದರು.
3ನೇ ವರ್ಷದ ಪಚ್ಚೆಪರ್ಬವನ್ನು ಅರಿವು ಪಚ್ಚೆ ಬಳಗ ಬಂಟ್ವಾಳ ಮತ್ತು ರಂಗ ಸಾಂಗತ್ಯ ಸಂಸ್ಥೆಗಳು ಆಯೋಜನೆ ಮಾಡಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.