ನವದೆಹಲಿ: ಭಾರತದಲ್ಲಿ ಕಳೆದ 10 ವರ್ಷಗಳಲ್ಲೇ ಮೊದಲ ಬಾರಿಗೆ ಬಾಲ ಕಾರ್ಮಿಕರ ಸಂಖ್ಯೆ ಶೇ.60ರಷ್ಟು ಇಳಿಕೆಯಾಗಿದೆ. 2000ರಲ್ಲಿ 12.6 ಮಿಲಿಯನ್ರಷ್ಟು ಇದ್ದ ಬಾಲ ಕಾರ್ಮಿಕರ ಸಂಖ್ಯೆ, 2011ರಿಂದ ಈಚೆಗೆ 4.5ಕ್ಕೆ ಇಳಿಕೆಯಾಗಿದೆ ಎಂದು ಕಾರ್ಮಿಕ ಸಚಿವ ಬಂದಾರು ದತ್ತಾತ್ರೇಯ ಹೇಳಿದ್ದಾರೆ.
ಬಾಲ ಕಾರ್ಮಿಕರ ನಿಷೇಧ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಯೋಜನೆ ಹೊಂದಿದ್ದು, ಇದನ್ನು ಅಂಗೀಕರಿಸಲು ಸಂಸತ್ತಿನ ಎರಡೂ ಸದನಗಳು ಬೆಂಬಲಿಸುವಂತೆ ಅವರು ಕೋರಿದ್ದಾರೆ.
ಭಾರತದ 2011 ಜನಗಣತಿ ಪ್ರಕಾರ ಕಳೆದ 10 ವರ್ಷಗಳಲ್ಲಿ ಬಾಲ ಕಾರ್ಮಿಕ ಸಂಖ್ಯೆ ಶೇ.64ರಷ್ಟು ಇಳಿಕೆಯಾಗಿದೆ. ಜಾಗತಿಕವಾಗಿ 168 ಮಿಲಿಯನ್ ಬಾಲ ಕಾರ್ಮಿಕರಿದ್ದು, ಭಾರತದಲ್ಲಿ 5-17 ವರ್ಷದೊಳಿನ ಒಟ್ಟು 5.7 ಮಿಲಿಯನ್ ಬಾಲ ಕಾರ್ಮಿಕರಿದ್ದಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಫೆ.2015ರ ವರದಿ ಪ್ರಕಟಿಸಿದೆ.
ಪ್ರಸ್ತುತ ಇರುವ ಕಾನೂನಿನಲ್ಲಿ 14 ವರ್ಷದೊಳಗಿನ ಮಕ್ಕಳು ಗಣಿಗಾರಿಕೆ, ರತ್ನ ಕತ್ತರಿಸುವುದು, ಸಿಮೆಂಟ್ ಉತ್ಪಾದನೆ ಸೇರಿದಂತೆ 18 ವಿವಿಧ ಅಪಾಯಕಾರಿ ವೃತ್ತಿಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ. ಆದರೆ ಹೊಸ ಕಾನೂನು ಜಾರಿಯಾದಲ್ಲಿ 14 ವರ್ಷದೊಳಗಿನ ಬಾಲ ಕಾರ್ಮಿಕರು ಎಲ್ಲಾ ಕ್ಷೇತ್ರಗಳಿಂದ ದೂರ ಉಳಿಯಲಿದ್ದಾರೆ. ಜೊತೆಗೆ 15ರಿಂದ 18 ವರ್ಷದೊಳಗಿನ ಬಾಲ ಕಾರ್ಮಿಕರಿಗೆ ಪ್ರತ್ಯೇಕ ಕಾನೂನು ಜಾರಿಯಾಗಲಿದೆ ಎಂದು ದತ್ತಾತ್ರೇಯ ಅವರು ತಿಳಿಸಿದ್ದಾರೆ.
ಈ ತಿದ್ದುಪಡಿ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿದಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ ಈ ಹಿಂದಿನ 20,000 ರೂ. ದಂಡವನ್ನು 50,000 ರೂ.ಗೆ ಏರಿಕೆಯೊಂದಿಗೆ ಕಾನೂನು ಜಾರಿಯಾಗಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.