ಟೆನಿಸ್ ಲೋಕ ಕಂಡ ಮೋಹಕ ಆಟಗಾರ್ತಿ ಮರಿಯಾ ಶರಪೋವಾ ಅವರನ್ನು ಈಗ ಎಲ್ಲರೂ ದೂಷಿಸುವವರೇ. ರಷ್ಯಾದ ಈ ಟೆನಿಸ್ ಆಟಗಾರ್ತಿ ಐದು ಬಾರಿ ಗ್ರಾಂಡ್ ಸ್ಲಾಮ್ ವಿಜೇತೆಯಾದಾಗ ಹೊಗಳಿ ಅಟ್ಟಕ್ಕೇರಿಸಿದವರು, ಈಗ ಆಕೆಯನ್ನು ಒಂದೇ ಬಾರಿಗೆ ಪಾತಾಳಕ್ಕೆ ನೂಕಿದ್ದಾರೆ. ಶರಪೋವಾ ಮೊನ್ನೆ ಲಾಸ್ಏಂಜಲ್ಸ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಆ ಒಂದು ‘ಸತ್ಯ’ ಅವಳ ಮೇಲಿದ್ದ ಎಲ್ಲ ಭ್ರಮೆಯನ್ನೂ ಕಳಚಿಬಿಟ್ಟಿದೆ. ವಂಶವಾಹಿನಿಯಾಗಿ ತನ್ನನ್ನು ಆವರಿಸಿದ್ದ ಹೃದಯಸಂಬಂಧಿ ಮಧುಮೇಹ ಕಾಯಿಲೆ ನಿಮಿತ್ತ ಮೆಲ್ಡೋನಿಯಂ ಎಂಬ ನಿಷೇಧಿತ ಮಾತ್ರೆಯನ್ನು ಕಳೆದ ಹತ್ತು ವರ್ಷಗಳಿಂದ ತಾನು ಸೇವಿಸುತ್ತಿದ್ದೆ. ಇದರಿಂದ ತಾನು ಅಪಾರವಾಗಿ ಪ್ರೀತಿಸುತ್ತಿದ್ದ ಟೆನಿಸ್ ಹಾಗು ಈ ಆಟದಿಂದ ಗಳಿಸಿಕೊಂಡಿದ್ದ ಕೋಟ್ಯಂತರ ಅಭಿಮಾನಿಗಳಿಗೆ ನೋವುಂಟುಮಾಡಿರುವುದಕ್ಕೆ ಕ್ಷಮೆ ಯಾಚಿಸುವೆ ಎಂದು ಶರಪೋವಾ ಆ ಪತ್ರಿಕಾಗೋಷ್ಠಿಯಲ್ಲಿ ನುಡಿದಿದ್ದೇ ಎಲ್ಲರೂ ಅವಳನ್ನು ಪಾತಾಳಕ್ಕೆ ನೂಕಲು ಮುಖ್ಯ ಕಾರಣ.
ಅಂತಾರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಸಂಸ್ಥೆ (ವಾಡಾ) ಆಟಗಾರರು ತೆಗೆದುಕೊಳ್ಳಲೇ ಬಾರದ ಉದ್ದೀಪನಾ ಮದ್ದುಗಳ ಪಟ್ಟಿಯನ್ನು ಆಗಾಗ ಇ-ಮೇಲ್ ಮೂಲಕ ತಿಳಿಸುತ್ತಲೇ ಇರುತ್ತದೆ. ಶರಪೋವಾಗೂ ಇಂತಹ ಇ-ಮೇಲ್ ಬಂದಿತ್ತು. ಕಳೆದ ಡಿ. 22 ರಂದು ವಾಡಾದಿಂದ ಬಂದಿದ್ದ ಆ ಇ-ಮೇಲ್ ಅನ್ನು ಮಾತ್ರ ಶರಪೋವಾ ತೆರೆದು ನೋಡಿರಲಿಲ್ಲ. ಅದರಲ್ಲಿ ವಾಸ್ತವವಾಗಿ ಮುಂದಿನವರ್ಷ ಅಥ್ಲೀಟ್ಗಳಿಗಾಗಿ ನಿಷೇಧಿಸಲ್ಪಟ್ಟಿರುವ ಔಷಧಗಳ ಪಟ್ಟಿಯೊಂದನ್ನು ನೀಡಲಾಗಿತ್ತು. ಈ ಹಿಂದೆಯೂ ಅಂತಹ ಇ-ಮೇಲ್ಗಳು ಶರಪೋವಾಗೆ ಸಾಕಷ್ಟು ಬಂದಿರಲೇಬೇಕು. ಆಗ ಆಕೆ ಅದನ್ನು ತೆರೆದು ನೋಡಿರದೇ ಇರಲಿಕ್ಕೆ ಸಾಧ್ಯವಿಲ್ಲ. ಆಕೆ ಮಾತ್ರ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಅಷ್ಟೆ. ಮೊನ್ನೆ ಮಾತ್ರ ಪತ್ರಿಕಾಗೋಷ್ಠಿಯಲ್ಲಿ, ತನ್ನಿಂದ ಅಚಾತುರ್ಯವಾಗಿದೆ. ಟೆನಿಸ್ ಆಟಕ್ಕೆ ವಂಚನೆ ಎಸಗಿರುವೆ ಎಂದು ಅಂತರಂಗದ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.
ಮಾಜಿ ವಿಂಬಲ್ಡನ್ ಚಾಂಪಿಯನ್ ಒಪ್ಪಿಕೊಂಡ ಈ ಸತ್ಯ ಸಂಗತಿಯ ಪರ-ವಿರುದ್ಧ ಈಗ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಇಂತಹದೊಂದು ಸತ್ಯವನ್ನು ಇಷ್ಟು ತಡವಾಗಿ, ಪ್ರಮುಖ ಪ್ರಶಸ್ತಿಗಳನ್ನು ಪಡೆದ ಬಳಿಕ ಒಪ್ಪಿಕೊಳ್ಳುವ ಅಗತ್ಯವೇನಿತ್ತು? ಪ್ರಶಸ್ತಿಗಳನ್ನು ಪಡೆದ ಮೇಲೆ ತಾನು ತಪ್ಪು ಮಾಡಿದೆ ಎಂದುಬಿಟ್ಟರೆ ಆಕೆಯ ಘನತೆ ಉಳಿಯುತ್ತದೆಯೇ? ಎಲ್ಲ ಬಣ್ಣ ಮಸಿ ನುಂಗಿತು ಎಂಬಂತಾಗುವುದಿಲ್ಲವೆ? ಶರಪೋವಾಳ ನೈಜ ಬಣ್ಣ ಕೊನೆಗೂ ಬಯಲಾಯಿತು. ಇದೊಂದು ಹೇಯಕೃತ್ಯ, ನಾಚಿಕೆಗೇಡು… ಹೀಗೆ ಟೀಕೆಗಳ ಪ್ರವಾಹವೇ ಹರಿದಿದ. ಶರಪೋವಾ ಕೊನೆಗಾದರೂ ಸತ್ಯ ಒಪ್ಪಿಕೊಂಡಿದ್ದಕ್ಕೆ ಆಕೆಯನ್ನು ಪ್ರಶಂಸಿಸಿದವರೂ ಇದ್ದಾರೆ. ‘ತಾನು ಮಾಡಿದ ತಪ್ಪನ್ನು ಶರಪೋವಾ ವಿನಮ್ರತೆಯಿಂದ ಒಪ್ಪಿಕೊಂಡಿದ್ದಾಳೆ. ಹಾಗಾಗಿ ಅವರ ಮೇಲೆ ವಾಗ್ಬಾಣ ಪ್ರಯೋಗಿಸುವುದನ್ನು ನಿಲ್ಲಿಸಬೇಕು’ ಎಂದು ಅಮೆರಿಕದ ಮಾಜಿ ಟೆನಿಸ್ ಆಟಗಾರ್ತಿ ಮಾರ್ಟಿನಾ ನವ್ರಾಟಿಲೋವಾ ಹೇಳಿದ್ದರೆ, ‘ಪ್ರತಿಯೊಬ್ಬ ಕ್ರೀಡಾಳುವೂ ತಮ್ಮ ಫಿಸಿಯೋಥೆರಪಿಸ್ಟ್ ನೀಡುವ ಸಲಹೆಯಂತೆ ನಡೆದುಕೊಳ್ಳುತ್ತಾರೆ ಹೀಗಾಗಿ ಶರಪೋವಾ ಅವರನ್ನು ದೂಷಿಸುವುದು ಸಲ್ಲದು. ಈ ಬಾರಿಯ ಒಲಂಪಿಕ್ಸ್ ಕೂಟದಲ್ಲಿ ಆಕೆ ಪಾಲ್ಗೊಳ್ಳಬೇಕೆಂಬುದು ನನ್ನ ಅಭಿಮತ’ ಎಂದು ರಷ್ಯಾದ ಟೆನಿಸ್ ಸಂಸ್ಥೆಯ ಅಧ್ಯಕ್ಷ ಶಮೀಲ್ ಟಾರ್ಪಿಶೆವ್ ಹೇಳಿದ್ದಾರೆ. ಟೆನಿಸ್ನ ವಿಶ್ವದ ನಂ. 1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ‘ತಾನು ತಪ್ಪುಮಾಡಿರುವುದರ ಹೊಣೆಗಾರಿಕೆಯನ್ನು ಅತ್ಯಂತ ಧೈರ್ಯದಿಂದ ಜಗತ್ತಿಗೆ ಸಾರಿದ ಶರಪೋವಾ ನಿಜಕ್ಕೂ ಧೈರ್ಯವಂತೆ. ಆಕೆ ಇತರ ಕ್ರೀಡಾಪಟುಗಳಿಗೆ ಮಾದರಿ’ ಎಂದು ಪ್ರತಿಕ್ರಿಯಿಸಿದ್ದಾರೆ. ವಿಶ್ವ ಟೆನಿಸ್ ಅಭಿಮಾನಿಗಳ ಪಾಲಿಗೆ ಶರಪೋವಾ ಖಳನಾಯಕಿಯಾಗಿದ್ದು ವಿಪರ್ಯಾಸ ಎಂದು ಕೆಲವು ಪ್ರಮುಖ ಪತ್ರಿಕೆಗಳು ಸಂಪಾದಕೀಯವನ್ನೂ ಬರೆದಿವೆ. ತಪ್ಪೊಪ್ಪಿಗೆ ಮೂಲಕ ಶರಪೋವಾ ಪ್ರಾಮಾಣಿಕತೆ ಮೆರೆದಿದ್ದಾಳೆಂದು ಕೆಲವರು ಹೇಳಿದರೆ, ಇನ್ನು ಕೆಲವರು ಆಕೆ ಎಲ್ಲರನ್ನೂ ವಂಚಿಸಿಬಿಟ್ಟಳೆಂದು ಜರೆದಿದ್ದಾರೆ. ಹೀಗೆ ಆಕೆಯ ತಪ್ಪೊಪ್ಪಿಗೆ ನಾನಾ ಮಜಲುಗಳಲ್ಲಿ ವಿಶ್ಲೇಷಣೆಗೊಳಗಾಗುತ್ತಲೇ ಇದೆ.
ಟೆನಿಸ್ ಲೋಕದಲ್ಲಿ ನಿಷೇಧಿತ ಮದ್ದುಸೇವನೆ ಪ್ರಕರಣ ಇದೇನೂ ಮೊದಲನೆಯದಲ್ಲ, ಕೊನೆಯದೂ ಇರಲಿಕ್ಕಿಲ್ಲ. ಹತ್ತು ವರ್ಷಗಳ ಹಿಂದೆ ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಪೇಟ್ರಾ ಕೋರ್ಡಾ ಸಹ ನಿಷೇಧಿತ ಮದ್ದು ಸೇವಿಸಿದ್ದನ್ನು ಒಪ್ಪಿಕೊಂಡಿದ್ದರು. ಅನಂತರ ಆತ ಟೆನಿಸ್ಗೆ ವಿದಾಯ ಹೇಳಿದ್ದರು. ಇನ್ನೊಬ್ಬ ಟೆನಿಸ್ ದಿಗ್ಗಜ ಆಂಡ್ರೆ ಅಗಾಸ್ಸಿ ಸಹ ಕ್ರಿಸ್ಟಲ್ಮೆಥ್ (ಮೆಥಾಮ್ಪಿಟಾಮಿನ್) ಸೇವಿಸಿದ್ದು ಬಹಿರಂಗಗೊಂಡಿತ್ತು. ರಿಚರ್ಡ್ ಗ್ಯಾಸ್ಕೆಟ್ ಹಾಗೂ ಮಾರ್ಟಿನಾ ಹಿಂಗಿಸ್ ಕೊಕೇನ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಇವೆಲ್ಲ ಪ್ರಕರಣಗಳು ಅನಂತರ ವಿಚಾರಣೆಗೂ ಒಳಪಟ್ಟಿತ್ತು. ಆದರೆ ಈ ಪ್ರಕರಣಗಳು ಶರಪೋವಾ ಪ್ರಕರಣದಷ್ಟು ಗಂಭೀರತೆ ಪಡೆದಿರಲಿಲ್ಲ. 5 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳ ವಿಜೇತೆ, ವಿಶ್ವದ ಮಾಜಿ ನಂ. 1 ಆಟಗಾರ್ತಿ, ಯುವಜನತೆಯ ಅಚ್ಚುಮೆಚ್ಚಿನ ಪೋಸ್ಟರ್ ಗರ್ಲ್ ಎಂದೆಲ್ಲಾ ಖ್ಯಾತಿಗಳಿಸಿರುವ ಶರಪೋವಾ ಹೀಗೆ ಏಕಾಏಕಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದನ್ನು ಟೆನಿಸ್ ಲೋಕ ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳುವುದು ಸಾಧ್ಯವಿಲ್ಲ. ಶರಪೋವಾ ತಪ್ಪೋಪ್ಪಿಗೆ ಪ್ರಕರಣ ಟೆನಿಸ್ ರಂಗದ ಖ್ಯಾತನಾಮರ ಕಡೆಗೂ ಗುಮಾನಿಯ ತೂಗುಗತ್ತಿ ಝಳಪಿಸುವಂತೆ ಮಾಡಿರುವುದಂತೂ ನಿಜ.
ಶರಪೋವಾ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಗಮನಿಸಬೇಕಾದ ಒಂದು ವಿಚಾರವೂ ಇದೆ. ಇದೇ ವರ್ಷ ಜ.1 ರಿಂದ ನಿಷೇಧಿತ ಪಟ್ಟಿಗೆ ಸೇರಿಸಲಾಗಿರುವ ಮೆಲ್ಡೋನಿಯಂ ಎಂಬ ಔಷಧವನ್ನು ಶರಪೋವಾ ಕಳೆದ 10 ವರ್ಷಗಳಿಂದ ಸೇವಿಸುತ್ತಿದ್ದಾರೆ. ಅದೂ, ಅವರ ಕುಟುಂಬದ ವೈದ್ಯರ ಸೂಚನೆಯ ಮೇರೆಗೆ. ಅವರಷ್ಟೇ ಅಲ್ಲ, ಅವರ ಇಡೀ ಕುಟುಂಬವೇ ಈ ಔಷಧವನ್ನು ಸೇವಿಸುತ್ತಿದೆ. ಆ ಇಡೀ ಕುಟುಂಬ ಮಧುಮೇಹ ಹಾಗೂ ಹೃದಯಸಂಬಂಧಿ ಕಾಯಿಲೆಯ ಇತಿಹಾಸವನ್ನೇ ಹೊಂದಿದೆ. ಕೌಟುಂಬಿಕ ದೃಷ್ಟಿಯಿಂದ ನೋಡುವುದಾದರೆ ಇಂತಹ ಔಷಧಿಗಳ ಬಗ್ಗೆ ವಾಡಾ ವಿಚಾರಮಾಡಿ ನಿರ್ಧಾರ ಕೈಗೊಳ್ಳಬೇಕೇ ಅಥವಾ ಈ ಬಗ್ಗೆ ಚರ್ಚೆಗೆ ಮತ್ತಷ್ಟು ಕಾಲಾವಕಾಶ ಕೊಡಬೇಕೇ ಎಂಬುದು ಈಗ ಚರ್ಚೆಯಾಗಬೇಕಿದೆ. ಸದ್ಯಕ್ಕಂತೂ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆಯ (ಐಟಿಎಫ್) ಉದ್ದೀಪನಾ ನಿಗ್ರಹದಳ ಮಾ.12 ರಿಂದ ಆಕೆಯ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ. ಆಕೆ ಸೇವಿಸುತ್ತಿದ್ದ ಮೆಲ್ಡೋನಿಯಂ ಮಾತ್ರೆ ಅಥ್ಲೀಟ್ಗಳ ಪ್ರದರ್ಶನಾ ಸಾಮರ್ಥ್ಯ ದ್ವಿಗುಣಗೊಳಿಸುತ್ತದೆ ಎಂಬ ಕಾರಣಕ್ಕೆ ವಾಡಾ ಅದನ್ನು ನಿಷೇಧಿಸಿತ್ತು.
ಭಾರತದ ಮಟ್ಟಿಗೂ ಇಂತಹ ಡೊಪಿಂಗ್ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ಕ್ರೀಡಾಪಟುಗಳು ಸಾಕಷ್ಟಿದ್ದಾರೆ. 2011 ರಲ್ಲಿ ಫುಟ್ಬಾಲ್ ಪಟು ಮಹೀರ್ ಕಲ್ಪೇಶ್ ಷಾ ಅನಬಾಲಿಕ್ ಸ್ಟಿರಾಯಿಡ್ ಸೇವಿಸಿ ಎರಡು ವರ್ಷ ನಿಷೇಧಕ್ಕೆ ಗುರಿಯಾಗಿದ್ದರೆ, 2000 ನೇ ಸಾಲಿನ ವಿಶ್ವ ಜೂನಿಯರ್ ಚಾಂಪಿಯನ್ ಷಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮಹಿಳಾ ಡಿಸ್ಕಸ್ ಎಸೆತಗಾರ್ತಿ ಸೀಮಾ ಪುನಿಯಾ ಅಂಟಿಲ್ ಎಂಬ ನಿಷೇಧಿತ ಮದ್ದು ಸೇವನೆಯಿಂದ ಆ ಪದಕ ಕಳೆದುಕೊಂಡಿದ್ದರು. ಅಥ್ಲೀಟ್ ಮನ್ದೀಪ್ ಕೌರ್, ಓಟಗಾರ್ತಿಯರಾದ ಜುವಾನಾ ಮರ್ಮು, ಸಿನಿಜೋಸ್, ಡಿಸ್ಕಸ್ ಎಸೆತಗಾರ ಅನಿಲ್ ಕುಮಾರ್, ಕನ್ನಡತಿ ಅಶ್ವಿನಿ ಅಕ್ಕುಂಜೆ ಕೂಡಾ ಡೋಪಿಂಗ್ ಆರೋಪಕ್ಕೆ ಗುರಿಯಾಗಿದ್ದರು. ಅಂತಾರಾಷ್ಟ್ರೀಯ ಕ್ರೀಡೆಯಲ್ಲಿರುವವರ ಪ್ರದರ್ಶನದಲ್ಲಿ ಯಾವುದೇ ಲೋಪವಿರಕೂಡದು ಎಂದು ಸದಾ ಕಣ್ಗಾವಲಿಡುವ ವಾಡಾ, ನಿಷೇಧಿತ ಮದ್ದಿನ ಪಟ್ಟಿಯನ್ನು ಆಗಾಗ ಪರಿಷ್ಕರಿಸುತ್ತಾ ಅಥ್ಲೀಟ್ಗಳಿಗೆ ನೀಡುತ್ತಾ ಬಂದಿದೆ. ಆದರೆ ಶರಪೋವಾ ವಾಡಾದ ಇಂತಹ ಎಚ್ಚರಿಕೆಯ ಸಂದೇಶವನ್ನು ಹಗುರವಾಗಿ ತೆಗೆದುಕೊಂಡಿದ್ದುದು ಆಕೆಯ ಮುಗ್ಧತೆಗಿಂತ ಜಾಣ್ಮೆಯ ನಡೆಯ ಬಗ್ಗೆಯೇ ಗುಮಾನಿ ಏಳುವಂತೆ ಮಾಡಿದೆ. ಕೋಟ್ಯಂತರ ಹಣ ತಂದುಕೊಡುತ್ತಿದ್ದ ಜಾಹೀರಾತು ಕಂಪೆನಿಗಳು ಆಕೆಯನ್ನು ಕೈಬಿಟ್ಟಿವೆ. (ಟೆನಿಸ್ ಆಟ ಹಾಗೂ ಜಾಹೀರಾತುಗಳಿಂದ ಆಕೆ ಗಳಿಸುತ್ತಿದ್ದ ಒಟ್ಟಾರೆ ವಾರ್ಷಿಕ ಗಳಿಕೆಯೇ 1347 ಕೋಟಿ!). ಅದಕ್ಕಿಂತಲೂ ಆಕೆ ವಿಶ್ವ ಟೆನಿಸ್ ಅಭಿಮಾನಿಗಳ ಪಾಲಿಗೆ ಈಗ ಖಳನಾಯಕಿಯಾಗಿರುವುದು ಶರಪೋವಾ ಬದುಕಿನ ದೊಡ್ಡ ದುರಂತ.
ಆಕೆಯ ವೈಭವೋಪೇತ ವೃತ್ತಿ ಬದುಕು ಪಡೆದುಕೊಂಡ ವಿಚಿತ್ರ ತಿರುವು ಯುವ ಕ್ರೀಡಾಪಟುಗಳಿಗೆ ಬಹುದೊಡ್ಡ ಪಾಠವೊಂದನ್ನು ರವಾನಿಸಿದೆ. ಆಕೆಯ ಸಾಧನೆ ಎಲ್ಲವೂ ಈಗ ಹೊಳೆಯಲ್ಲಿ ಹುಣಿಸೇಹಣ್ಣು ಕಿವಿಚಿದಂತಾಗಿದೆ ಇನ್ನು ಆಕೆ ಮತ್ತೆ ಟೆನಿಸ್ ರಂಗದಲ್ಲಿ ಮಿಂಚಿದರೂ ಮೊದಲಿನ ಮೆಚ್ಚುಗೆ ಖಂಡಿತ ದೊರಕದು.
ಶರಪೋವಾ ಪ್ರಕರಣ ಇನ್ನೊಂದಿಷ್ಟು ಸಂದೇಶಗಳನ್ನೂ ರವಾನಿಸಿದೆ. ಕ್ರೀಡೆ, ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಸಂಗೀತ ಸೇರಿದಂತೆ ಹಲವು ರಂಗಗಳಲ್ಲಿ ಖ್ಯಾತನಾಮರು ಪ್ರಶಸ್ತಿ ಪಡೆಯುತ್ತಲೇ ಇರುತ್ತಾರೆ. ಹಲವು ಬಾರಿ ಪ್ರತಿಷ್ಠಿತ ಪ್ರಶಸ್ತಿ ಗಿಟ್ಟಿಸುವುದಕ್ಕಾಗಿ ನಾನಾ ಬಗೆಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಯಾರದೋ ಓಲೈಕೆ, ಏನೇನೋ ಆಮಿಶ, ಪ್ರಶಸ್ತಿ ನೀಡುವವರ ‘ಇಷ್ಟಾರ್ಥ’ ಪೂರೈಸಲು ನಾನಾಬಗೆಯ ಕೆಳಮಟ್ಟದ ತಂತ್ರಗಾರಿಕೆ ಇತ್ಯಾದಿ ಅಪಸವ್ಯಗಳನ್ನು ನಡೆಸಿರುವುದು ರಹಸ್ಯವೇನೂ ಅಲ್ಲ. ಒಂದು ರೀತಿಯಲ್ಲಿ ಪ್ರಶಸ್ತಿ ಗಿಟ್ಟಿಸಲು ನಡೆಸುವ ಇಂತಹ ಹುನ್ನಾರಗಳು ನಿಷೇಧಿತ ಉದ್ದೀಪನ ಮದ್ದು ಸೇವನೆಗೆ ಸಮಾನವಲ್ಲದೆ ಮತ್ತೇನು? ಶರಪೋವಾಳಂತಹ ಪ್ರತಿಷ್ಠಿತ ಖ್ಯಾತ ಆಟಗಾರ್ತಿ ತಾನು ಪ್ರಶಸ್ತಿ ಪಡೆದಿದ್ದರ ಹಿಂದಿನ ಸತ್ಯ ಬಿಚ್ಚಿಡುವ ಧೈರ್ಯ ತೋರಿದ್ದಾಳೆ. ಆದರೆ ಉನ್ನತ ಪ್ರಶಸ್ತಿ ಗಿಟ್ಟಿಸಿರುವ ಅದೆಷ್ಟು ಮಂದಿ ಖ್ಯಾತನಾಮ ಸಾಹಿತಿಗಳು, ಕಲಾಕಾರರು, ಸಂಗೀತಗಾರರು, ಪತ್ರಕರ್ತರು, ಮತ್ತಿತರರು ತಾವು ಪ್ರಶಸ್ತಿ ಪಡೆದಿದ್ದರ ಹಿಂದಿನ ಸತ್ಯವನ್ನು ಶರಪೋವಾಳಂತೆ ತೆರೆದಿಡುವ ಎದೆಗಾರಿಕೆ ತೋರಿಸಿಯಾರು! ನಾನಾ ಬಗೆಯ ಕಸರತ್ತುಗಳ ಮೂಲಕ ಪ್ರಶಸ್ತಿ ಗಿಟ್ಟಿಸಿರುವ ಜ್ಞಾನಪೀಠಿಗಳು, ನಾಡೋಜಗಳು, ಪದ್ಮಪುರಸ್ಕೃತರು ಕನಿಷ್ಠಪಕ್ಷ ತಮ್ಮ ಆತ್ಮಸಾಕ್ಷಿಯ ಬಳಿಯಾದರೂ (ಅದಿದ್ದರೆ!) ಸತ್ಯವನ್ನು ನಿವೇದಿಸಿಕೊಳ್ಳುವ ಧೈರ್ಯ ತೋರಿಯಾರೆ?
ಶರಪೋವಾ ಮಾಡಿದ್ದು ಅತೀ ದೊಡ್ಡ ಪ್ರಮಾದ, ನಿಜ. ಆದರೆ ಆ ಪ್ರಮಾದವನ್ನು ಕೊನೆಗೂ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಮೆರೆದಿದ್ದಾಳೆ. ಸತ್ಯವನ್ನು ಒಪ್ಪಿಕೊಳ್ಳುವ ಆಕೆಯ ಈ ಪ್ರಾಮಾಣಿಕ ಕಾಳಜಿ ಸೆಲೆಬ್ರಿಟಿಗಳೆನಿಸಿಕೊಂಡವರಿಗೆ ಮೇಲ್ಪಂಕ್ತಿಯಾಗಬಾರದೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.