ಬೆಳ್ತಂಗಡಿ : ರಾಜ್ಯ ಸರಕಾರದ ವಂಚನೆ, ಮೋಸ, ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕಾಗಿದೆ. ಕಳೆದ ಜಿ.ಪಂ., ತಾ.ಪಂ. ಚುನಾವಣೆಗಳು ಸೆಮಿಫೈನಲ್ ಮಾತ್ರ ಇನ್ನು ಮುಂದಿನ ಫೈನಲ್ಗೆ ನಾವೆಲ್ಲಾ ಸಿದ್ದರಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಹೇಳಿದರು.
ಅವರು ಗುರುವಾರ ಬೆಳ್ತಂಗಡಿಯಲ್ಲಿನ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನ(ಸಮಾಜ ಮಂದಿರ)ದಲ್ಲಿ ನಡೆದ ಬಿಜೆಪಿ ಅಭಿನಂದನಾ ಸಭೆಯಲ್ಲಿ ಕಾರ್ಯಕರ್ತರಿಗೆ, ಮತದಾರರಿಗೆ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ವಿಜಯಿಯಾದ ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಜನರು ಬಿಜೆಪಿಯನ್ನು ಆಯ್ಕೆ ಮಾಡಿರುವುದು ಬದಲಾವಣೆಯ ಸಂಕೇತ ಬೆಳ್ತಂಗಡಿಯ ಜನತೆ ದಬ್ಬಾಳಿಕೆಗೆ, ಒಡೆದು, ತುಳಿದು ಆಳುವ ರೀತಿಗೆ, ದ್ವೇಷದ ರಾಜಕಾರಣದಿಂದ ನೋಂದು ಬಿಜೆಪಿಯನ್ನು ಆಶೀರ್ವದಿಸಿದ್ದಾರೆ. ಗೆದ್ದ ಜನಪ್ರತಿನಿಧಿಗಳು ಜನತೆಯ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡು, ಹೆಚ್ಚು ಸಮಯವನ್ನು ಕೊಟ್ಟು ಆಯಾ ಕ್ಷೇತ್ರದ ಅಭಿವೃದ್ದಿಯನ್ನು ನಡೆಸಬೇಕು. ಪ್ರಧಾನಿಯವರ ಜನಪರ ನಿರ್ಣಯಗಳನ್ನು ಮನೆ, ಮನ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು ಎಂದ ಕಾರ್ನಿಕ್ ರಾಷ್ಟ್ರೀಯತೆಯ ಉಳಿವು ಮತ್ತು ಏಕತೆಗಾಗಿ ನಿರಂತರ ಪರಿಮಿಸುತ್ತಿರುವ ಬಿಜೆಪಿಯ ಪಯಣದಲ್ಲಿ ಗೆಲುವು ಒಂದು ಮುಖ್ಯಹೆಜ್ಚೆಯಾಗಿರುವುದನ್ನು ವಿವರಿಸಿದರು.
ರಾಜ್ಯದ ಸಿದ್ಧರಾಮಯ್ಯ ಸರಕಾರ ಸರಕಾರದ ಯೋಜನೆಗಳಲ್ಲಿ ತಾರತಮ್ಯ ಮಾಡಿಕೊಂಡು ಸಮಾಜವನ್ನು ಒಡೆದು ತಮಗಾಗಿ ಒಂದು ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಸಮಸ್ಯೆಯಾದ ೯೪ ಸಿ. ಕುಮ್ಕಿ ಹಕ್ಕು , ಆಶ್ರಯ, ಬಸವ ಯೋಜನೆಗಳ ಬಗ್ಗೆ ಸ್ಪಂದಿಸುತ್ತಲೇ ಇಲ್ಲ. ಹೀಗಾಗಿ ಮೋದಿಯವರ ಕನಸಾದ ಕಾಂಗ್ರೇಸ್ ಮುಕ್ತತತೆಗೆ ಸಿದ್ದರಾಮಯ್ಯ ತಾವಾಗಿಯೇ ಕೊಡುಗೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಸುಮಾರು 57,000 ಎಕರೆ ವಕ್ಪ್ ಜಮೀನು ಪರಭಾರೆಯಾಗಿದೆ ಮತ್ತು ಅತಿಕ್ರಮಣವಾಗಿದೆ. ಇದರಲ್ಲಿ ಕಾಂಗ್ರೇಸ್ನ ಘಟಾನುಘಟಿ ನಾಯಕರೇ ಶಾಮೀಲಾಗಿದ್ದಾರೆ. ಈ ಬಗ್ಗೆ ಉಚ್ಛ ನ್ಯಾಯಾಲಯ, ವಿಧಾನಸಭಾ ಅಧ್ಯಕ್ಷರು ಆದೇಶ ಮಾಡಿದ್ದರು ಅನ್ವರ್ಮಾಣಿಪ್ಪಾಡಿ ಅವರು ಸಿದ್ದ ಪಡಿಸಿದ ವರದಿಯನ್ನು ಮಂಡಿಸಲು ಸರಕಾರ ಮೀನಮೇಷ ಎಣಿಸುತ್ತಿದೆ ಎಂದರು.ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ವಹಿಸಿದ್ದರು.
ವೇದಿಕೆಯಲ್ಲಿ ಹಿರಿಯ ಕಾರ್ಯಕರ್ತ ವಕೀಲ ನೇಮಿರಾಜ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಕಾರ್ಯದರ್ಶಿ ಶಾರದಾ ಆರ್. ರೈ., ಯುವ ಮೊರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ, ತಾಲೂಕಾಧ್ಯಕ್ಷ ಸುಧೀರ್ ಆರ್. ಸುವರ್ಣ, ಎಸ್.ಸಿ. ಮೋರ್ಚಾ ಅಧ್ಯಕ್ಷ ರಾಘವ ಕೆ., ಎಸ್.ಟಿ. ಮೋರ್ಚಾ ಅಧ್ಯಕ್ಷ ಲಿಂಗಪ್ಪ ನಾಯ್ಕ, ಮಹಿಳಾ ಮೊರ್ಚಾ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ರೈತ ಮೊರ್ಚಾ ಅಧ್ಯಕ್ಷ ಭಾಸ್ಕರ ಸಾಲ್ಯಾನ್, ಹಿಂ. ವರ್ಗ ಮೋರ್ಚಾ ಅಧ್ಯಕ್ಷ ಸದಾನಂದ ಪೂಜಾರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಜಯಂತ್ ಕೋಟ್ಯಾನ್ ಹಾಗೂ ಜಿ.ಪಂ., ತಾ.ಪಂ., ನೂತನ ಜನಪ್ರತಿನಿಧಿಗಳು, ಸ್ಪರ್ಧಿಸಿದ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಮಂಡಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸೀತಾರಾಮ ಬಿ.ಎಸ್. ವಂದಿಸಿದರು. ನಂದಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಕಾಂಗ್ರೇಸ್ ಮುಖಂಡರಾದ ಈಶ್ವರ ಬೈರ, ಮೋಹನದಾಸ, ಅಗರಿ ರಾಮಣ್ಣ ಶೆಟ್ಟಿ, ಲೋಕಯ್ಯ ಪೂಜಾರಿ, ರಾಜೇಶ್ ಮೂಡುಕೋಡಿ ಸಹಿತ ವೇಣೂರು, ಲಾಯಿಲ, ಮುಂಡಾಜೆ ಪ್ರದೇಶದ ಸುಮಾರು 45 ಕ್ಕೂ ಹೆಚ್ಚು ಮಂದಿ ಈ ಸಂದರ್ಭ ಬಿಜೆಪಿಗೆ ಸೇರ್ಪಡೆಗೊಂಡರು. ಜಿಲ್ಲಾಧ್ಯಕ್ಷರು ಅವರಿಗೆ ಬಿಜೆಪಿ ಧ್ವಜ ಕೊಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಜನಸಾಮಾನ್ಯರ ತೆರಿಗೆಯಿಂದ ನಡೆಯುತ್ತಿರುವ ಜೆಎನ್ಯು ದಂತಹ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರವಿರೋಧಿ ಚಿಂತನೆಗಳು ನಡೆಯುತ್ತಿರುವುದು ದುರಂತ. ರಾಷ್ಟ್ರೀಯ ಚಿಂತನೆಯುಳ್ಳ ನರೇಂದ್ರ ಮೋದಿಯವರು ಪ್ರಧಾನಿಯಾಗಿರುವುದು ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ- ಕಾರ್ನಿಕ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.