ಬೆಳ್ತಂಗಡಿ : ಎಲ್ಲಾ ಜೀವಿಗಳಲ್ಲಿ ದೈವತ್ವವನ್ನು ಕಾಣುವುದೇ ಭಾರತೀಯ ಸಂಸ್ಕೃತಿ ಎಂದು ಅಳದಂಗಡಿ ಶ್ರೀ ಕ್ಲಿನಿಕ್ ವೈದ್ಯ ಡಾ| ಎಂ.ಎನ್. ತುಳಪುಳೆ ಹೇಳಿದರು. ಅವರು ಬಳಂಜ ಗ್ರಾಮದ ಹಿಂದುಪುರದ ದಿ| ಉದಯವರ್ಮ ಪಡಿವಾಳ್ ಕ್ರೀಡಾಂಗಣದಲ್ಲಿ ವೀರಕೇಸರಿ ಸಂಘಟನೆಯ ವತಿಯಿಂದ ಜೀವ ರಕ್ಷಕ್ ಅಂಬ್ಯುಲೆನ್ಸ್ ಲೋಕಾರ್ಪಣೆ ಸಹಾಯಾರ್ಥ ಆದಿತ್ಯವಾರ ರಾತ್ರಿ ನಡೆದ ಹಿಂದೂ ಕ್ರೀಡೋತ್ಸವ ಸಂದರ್ಭ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಳೆವಯಲ್ಲಿಯೇ ಸೇವಾ ಮನೋಭಾವ ಹೊಂದಿರುವುದು ಉತ್ತಮ ಲಕ್ಷಣ. ವೀರಕೇಸರಿ ಸಂಘಟನೆಯವರು ಅಂಬ್ಯಲೆನ್ಸ್ನ್ನು ಸಮಾಜಕ್ಕೆ ನೀಡಿರುವುದು ದೇವರ ಸೇವೆಗೆ ಸಮಾನ. ಇದುವೇ ದೇಶ ಸೇವೆ ಎಂದು ಅಭಿಪ್ರಾಯಪಟ್ಟರು.
ದಿಕ್ಸೂಚಿ ಭಾಷಣ ಮಾಡಿದ ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾ ವಿಧ ಪ್ರಮುಖ್ ತುಳುವ ಬೊಳ್ಳಿ ದಯಾನಂದ ಕತ್ತಲಸಾರ್ ಅವರು ದೇಶದಲ್ಲಿ ಆಗಿ ಹೋದ ಮಹಾಪುರುಷರು ತಮ್ಮ ವೈಯಕ್ತಿಕ ಬದುಕನ್ನು ಬದಿಗೆ ಸರಿಸಿ ದೇಶ ಕಟ್ಟಿದ್ದಾರೆ. ಮನೆಯಲ್ಲಿ ತಾಯಂದಿರುವ ಮಕ್ಕಳಿಗೆ ನೀಡುವ ಸಂಸ್ಕಾರವೇ ಅವರ ಜೀವನಕ್ಕೆ ದೊಡ್ಡ ಹೆಜ್ಜೆಯಾಗಿದೆ. ಮನೆಗಳಲ್ಲಿ ವಿವೇಕಾನಂದ, ಅಬ್ದುಲ್ ಕಲಾಂ ಹುಟ್ಟಿಬರಬೇಕೆ ವಿನಾ ವೀರಪ್ಪನ್, ಅಫ್ಜಲ್ ಗುರು ಅಲ್ಲ ಎಂದರು.
ಜಲಜಾ ವಿ. ಸಾಲ್ಯಾನ್ ಅವರು ಜೀವರಕ್ಷಕ್ ಅಂಬ್ಯುಲೆನ್ಸ್ ಕಾರ್ಯಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಉದ್ಯಮಿ ಹರೀಶ್ ಪೂಂಜ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿಗಳಾದ ರವಿ ಮಜಲು, ಯೋಗೀಶ್ ಕುಮಾರ್ ಕಡ್ತಿಲ, ತುಳಸೀದಾಸ್, ಸದಾನಂದ ಪೂಜಾರಿ ಉಂಗಿಲಬೈಲು, ಬಳೆಂಜ ಗ್ರಾ.ಪಂ. ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಐಕುರಿ, ಸದಸ್ಯರಾದ ಹೇಮಂತ್, ಶೋಭಾ, ಮಂಜಶ್ರೀ ಜೇಸಿಸ್ ಅಧ್ಯಕ್ಷ ವಸಂತ ಶೆಟ್ಟಿ, ಯುವವಾಹಿನಿ ಮಂಗಳೂರು ಅಧ್ಯಕ್ಷ ಹರೀಶ್ ಬೈಲಬರಿ, ಬಜರಂಗದಳ ನಾರಾವಿ ಸಂಚಾಲಕ ಗುರುಪ್ರಸಾದ್ ಶೆಟ್ಟಿ, ಚಂದನ್ ಪಡಿವಾಳ್ ಬಳಂಜಗುತ್ತು ಉಪಸ್ಥಿತರಿದ್ದರು.
ಕ್ರೀಡಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ಸ್ವಾಗತಿಸಿ ಪ್ರಸ್ತಾವಿಸಿದರು. ಬಳೆಂಜ ಗ್ರಾ.ಪಂ. ಸದಸ್ಯ ಅನಿಲ್ ನಾಯ್ಗ ವಂದಿಸಿದರು. ದೇವದಾಸ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಸಮಾಜದಲ್ಲಿ ಹಿಂದು ಯುವಕರು ಉತ್ತಮ ಕಾರ್ಯವನ್ನು ಮಾಡುತ್ತಿದ್ದರೆ ಅವರ ಬೆನ್ನು ತಟ್ಟುವ ಕಾರ್ಯ ಮಾಡಬೇಕೆ ಹೊರತು ಟೀಕೆ ಮಾಡುತ್ತಾ ಮನೆಯಲ್ಲಿ ಕುಳಿತು ಮಾತನಾಡುವುದು ಸಂಸ್ಕಾರ ಅಲ್ಲ – ಕತ್ತಲ್ಸಾರ್
ಜೀವರಕ್ಷಕ್ ಅಂಬ್ಯುಲೆನ್ಸ್ ಕಾರ್ಯನಿರ್ವಹಸಿಲು ಅನುಕೂಲವಾಗುವಂತೆ ಅಳದಂಗಡಿ ಶ್ರೀ ಕ್ಲಿನಿಕ್ನಲ್ಲಿ ಸ್ಥಳಾವಕಾಶ ನೀಡಲು ಅನುಮತಿ ನೀಡಿದ ಡಾ| ತುಳಪುಳೆ ಅವರನ್ನು ವೀರಕೇಸರಿ ಸಂಘಟನೆ ವತಿಯಿಂದ ಸಮ್ಮಾನಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.