ಬೆಳ್ತಂಗಡಿ : ಕುವೆಟ್ಟು ಗ್ರಾಮದ ಬರಾಯಪಲ್ಕೆ ನೀರಿನ ಟ್ಯಾಂಕ್ನಿಂದ ಪರಿಶಿಷ್ಟ ಜಾತಿ-ಪಂಗಡದ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಇದುವರೆಗೂ ಬೇಡಿಕೆ ಈಡೇರದಿರುವುದರಿಂದ ದೂರವಾಣಿ ಇಲಾಖೆಯ ನಿವೃತ್ತ ಸಬ್ ಡಿವಿಜನಲ್ ಎಂಜಿನಿಯರ್ ಕೆ.ವಿ.ವಾಸುದೇವ ಪೈ ಅವರು ಮಾ. 10 ರಿಂದ ಕುವೆಟ್ಟು ಗ್ರಾ.ಪಂ. ಆವರಣದಲ್ಲಿ ಮತ್ತೆ ಮಾಡಲು ನಿರ್ಧರಿಸಿದ್ದಾರೆ.
ಬರಾಯಪಲ್ಕೆ ಪ.ಜಾತಿ-ಪಂಗಡದ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ವಾಸುದೇವ ಪೈ ಅವರು ಕುವೆಟ್ಟು ಗ್ರಾ.ಪಂ. ಎದುರು ಕಳೆದ ವರ್ಷ ಸತ್ಯಾಗ್ರಹ ನಡೆಸಿದ್ದರು. ಬಳಿಕ ಜೂ. 22 ರಂದು ಬೆಳ್ತಂಗಡಿ ತಾ.ಪಂ. ಎದುರು ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆ ಸಂದರ್ಭ ಆಗಿನ ಕಾರ್ಯನಿರ್ವಹಣಾಧಿಕಾರಿ ಅವರು 2015-16ನೇ ಸಾಲಿನಲ್ಲಿ ಸದ್ರಿ ರಸ್ತೆಯನ್ನು 1 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು.
ಬಾಕಿ ಉಳಿದ ರಸ್ತೆ ಕಾಮಗಾರಿ ಬಗ್ಗೆ ೨೭.೬೦ಲಕ್ಷ ರೂ ಅಂದಾಜು ಪಟ್ಟಿಯನ್ನು ತಯಾರಿಸಿ ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಮಂಜೂರಾತಿಗಾಗಿ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಲ್ಲಿಸಿದ್ದರು. ಸುಮಾರು 7 ತಿಂಗಳುಗಳೂ ಕಳೆದರೂ ಸರಕಾರದ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ವಾಸುದೇವ ಪೈ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತುರ್ತಾಗಿ ಅನುದಾನ ಬಿಡುಗಡೆಗೆ ಒತ್ತಾಯಿಸಿದ್ದರು. ಈ ಮಧ್ಯೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತೊಮ್ಮೆ ಅನುದಾನ ಬಿಡುಗಡೆ ಕೋರಿಕೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದಿರುವುದು ತಿಳಿದು ಬಂತು.
ಇದೀಗ ಕೆಲವೇ ತಿಂಗಳುಗಳಲ್ಲಿ ಮಳೆಗಾಲ ಆರಂಭವಾಗುವುದರಿಂದ ಈ ರಸ್ತೆಯನ್ನು ಶೀಘ್ರವಾಗಿ ಅಭಿವೃದ್ಧಿ ಪಡಿಸಲು ತಾ.ಪಂ. ನೀಡಿದ ಭರವಸೆಯಂತೆ 1 ಲಕ್ಷ ರೂ. ಕಾಮಗಾರಿ ಕೈಗೊಳ್ಳುವವರೆಗೆ ಮಾ. 10 ರಂದು ಕುವೆಟ್ಟು ಗ್ರಾ.ಪಂ. ಆವರಣದಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಮತ್ತು ಸರಣಿ ಸತ್ಯಾಗ್ರಹವನ್ನು ಬರಾಯಪಲ್ಕೆ ನಿವಾಸಿಗಳು ಕೈಗೊಳ್ಳಲಿದ್ದಾರೆ ಎಂದು ವಾಸುದೇವ ಪೈ ತಿಳಿಸಿದ್ದಾರೆ.
27.60 ಲಕ್ಷ ರೂ. ಅನುದಾನ ಬಿಡುಗಡೆಯ ವಿಚಾರವಾಗಿ ಮಾ. 14 ರಿಂದ ಇದೀ ರೀತಿಯ ಸತ್ಯಾಗ್ರಹವನ್ನು ತಾ.ಪಂ. ಎದುರು ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.