ಬೆಳ್ತಂಗಡಿ : ಕಳೆದ 23 ವರ್ಷಗಳ ಕಾಲ ಪೂರ್ಣಕಾಲಿಕ ಮುಖ್ಯಸ್ಥರಿಲ್ಲದ ತಾಲೂಕಿನ ವಿದ್ಯಾಸಂಸ್ಥೆಯೊಂದಕ್ಕೆ ಕೊನೆಗೂ ಮುಖ್ಯಸ್ಥರ ನೇಮಕವನ್ನು ಸರಕಾರ ಮಾಡಿ ಕೃತಾರ್ಥವಾಗಿದೆ. ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಯಾಗಿ 23 ವರ್ಷಗಳಾಗಿದೆ. ಅಂದಿನಿಂದ ಇಂದಿನವರೆಗೆ ಇಲ್ಲಿ ಖಾಯಂ ಪ್ರಾಚಾರ್ಯರ (ಪ್ರಿನ್ಸಿಪಾಲ್)ನೇಮಕವಾಗಿರಲೇ ಇಲ್ಲ.
ಬಡ ವಿದ್ಯಾರ್ಥಿಗಳಿಗಾಗಿ1993-94ನೇ ಶೈಕ್ಷಣಿಕ ವರ್ಷದಲ್ಲಿ ಮೈಸೂರು ವಿಭಾಗಕ್ಕೆ ಏಕೈಕ ವಸತಿ ಶಾಲೆಯಾಗಿ ಸ್ಥಾಪನೆಯಾದದ್ದು ಬೆಳ್ತಂಗಡಿಯ ಮುಂಡಾಜೆಯಲ್ಲಿರುವ ನವೋದಯ ಮಾದರಿ ವಸತಿ ಶಾಲೆ. ಆಗ ಸಮಾಜ ಕಲ್ಯಾಣ ಇಲಾಖೆಯು ಸ್ಥಾಪಿಸಿದ ಈ ಶಾಲೆಯನ್ನು ಈಗ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯು ನಡೆಸುತ್ತಿದೆ. ಶಾಲೆಯ ಹಳೆಯ ಹೆಸರನ್ನು ಈಗ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಂದು ಬದಲಾಯಿಸಲಾಗಿದೆ. ಕಳೆದ 6 ವರ್ಷಗಳಿಂದ ಸತತ ಶೇ. 100 ಫಲಿತಾಂಶವೂ ಬರುತ್ತಿದೆ.
ರಾಜ್ಯಾದ್ಯಂತ ಈಗ ಇರುವ 544 ವಸತಿ ಶಾಲೆಗಳಿಗೆ ಪ್ರಾಚಾರ್ಯರ ನೇಮಕವಾದಾಗಲೂ ಈ ಶಾಲೆಗೆ ಮಾತ್ರ ಪ್ರಾಚಾರ್ಯರ ನೇಮಕ ಮಾಡಿರಲಿಲ್ಲ. ಪ್ರಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಅರೆಕಾಲಿಕ ಪ್ರಾಚಾರ್ಯರನ್ನಾಗಿ, ಅನಂತರ ಗುತ್ತಿಗೆ ಆಧಾರದ ಶಿಕ್ಷಕರಿಗೆ ಪ್ರಾಚಾರ್ಯರ ಪ್ರಭಾರವನ್ನು ನೀಡಿ, ಅನಂತರ ಹೊರಗುತ್ತಿಗೆ ಪ್ರಾಚಾರ್ಯರರನ್ನು ನೇಮಕ ಮಾಡಿ ಅವರಿಗೆ ಪೂರ್ಣಾಧಿಕಾರ ನೀಡದೆ ಶಾಲೆ ನಡೆಸಲಾಗುತ್ತಿತ್ತು. ಶಾಲೆಯ ಹಣಕಾಸು ಅಧಿಕಾರವನ್ನು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಯವರು ನಿರ್ವಹಿಸುತ್ತಿದ್ದರು.
2007 ರಿಂದ ಈ ಶಾಲೆಯ ಹೊರಗುತ್ತಿಗೆ ಪ್ರಾಚಾರ್ಯರಾಗಿದ್ದ ಮುರಳೀಧರ್ ಜಿ.ಎನ್. ಅವರನ್ನು ನ್ಯಾಯಾಲಯದ ತೀರ್ಪಿನಂತೆ ಪೂರ್ಣಾಧಿಕಾರದ ಖಾಯಂ ಪ್ರಾಚಾರ್ಯರನ್ನು ನೇಮಿಸುವಾಗಲೂ ದೂರದ ಹಳಿಯಾಳಕ್ಕೆ ನೇಮಕ ಮಾಡಿ ಆದೇಶ ಮಾಡಲಾಗಿತ್ತು. ಇದೀಗ ರಾಜ್ಯ ಸರಕಾರ ಮುರಳೀಧರ್ ಅವರನ್ನು ಅದೇ ಶಾಲೆಗೆ ಖಾಯಂ ಪ್ರಾಚಾರ್ಯರನ್ನಾಗಿ ಈಗ ನೇಮಿಸಲಾಗಿದೆ. ಇದರಿಂದಾಗಿ ಮೈಸೂರು ವಿಭಾಗದ ಅತ್ಯಂತ ಹಿರಿಯ ವಸತಿ ಶಾಲೆಗೆ ಖಾಯಂ ಪ್ರಾಚಾರ್ಯರ ನೇಮಕ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.