ಬೆಳ್ತಂಗಡಿ : ತಾಲೂಕಿನ 14ನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಳಾಲು ಸಜ್ಜುಗೊಳ್ಳುತ್ತಿದೆ. ಬೆಳಾಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಏಪ್ರಿಲ್ 18ರಂದು ಶನಿವಾರ ಜರಗಲಿರುವ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯರಾದ ಪ್ರೊ.ಎಸ್. ಪ್ರಭಾಕರ್ರವರು ವಹಿಸಲಿದ್ದಾರೆ. ಬೆಳಗ್ಗೆ 9-30ರಿಂದ ಧ್ವಜಾರೋಹಣದಿಂದ ಆರಂಭಗೊಳ್ಳುವ ಸಮ್ಮೇಳನದ ಉದ್ಘಾಟನೆಯನ್ನು ಮಂಗಳೂರು ಆಕಾಶವಾಣಿಯ ನಿರ್ದೇಶಕರಾದ ಡಾ. ವಸಂತ ಕುಮಾರ್ ಪೆರ್ಲ ನೆರವೇರಿಸಲಿದ್ದಾರೆ. ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರರವರು ಸ್ಮರಣ ಸಂಚಿಕೆ ಚಾರುಮುಡಿಯನ್ನು ಬಿಡುಗಡೆ ಮಾಡಲಿದ್ದಾರೆ.
ಅನಂತರ ಶತಮಾನದ ನೆನಪು ಉಪನ್ಯಾಸದಲ್ಲಿ ರಾಮಚಂದ್ರ ಭಟ್ ಮುಂಡಾಜೆ ಮತ್ತು ದೇರಾಜೆ ಸೀತಾರಾಮಯ್ಯನವರ ಸ್ಮರಣೆ, ಪರಿಸರ -ಕೃಷಿ, ಸಾಹಿತ್ಯ – ಸಂಸ್ಕೃತಿ ಮತ್ತು ಭಾಷೆ-ಶಿಕ್ಷಣ ಎಂಬ ವಿಷಯದಲ್ಲಿ ಚಿಂತನ ಮಂಥನ ಗೋಷ್ಠಿ, ಅಪರಾಹ್ನ ಕವಿಗೋಷ್ಠಿ, ತಾಲೂಕಿನ 8 ಮಂದಿ ಸಾಧಕರಿಗೆ ಸನ್ಮಾನ ಮತ್ತು ಇಬ್ಬರಿಗೆ ವಿಶೇಷ ಪುರಸ್ಕಾರ ನಡೆಯಲಿದೆ. ಸಮಾರೋಪ ಭಾಷಣವನ್ನು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್ಟರು ಮಾಡಲಿದ್ದಾರೆ.
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ಗೋಷ್ಠಿಯ ನಂತರ ಆಯೋಜಿಸಲಾಗಿರುವುದು ಈ ಸಮ್ಮೇಳನದ ವೈಶಿಷ್ಟ್ಯ. ಅದರಲ್ಲಿ ಬೆಳಾಲು ಮತ್ತು ಉಜಿರೆಯ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಂದ ಗಾಯನ-ನೃತ್ಯ-ಕುಂಚ, ಅಭಿನಯ ಕಾರ್ಯಕ್ರಮವಿದೆ. ಮಧ್ಯಾಹ್ನ ರವಿಚಂದ್ರ ಕನ್ನಡಿಕಟ್ಟೆ ತಂಡದವರಿಂದ ಯಕ್ಷಗಾನ ವೈವಿಧ್ಯ, ಸಮಾರೋಪದ ನಂತರ ಗಮಕ ವಾಚನ ವೈವಿಧ್ಯ ಮತ್ತು ಉಡುಪಿಯ ನೃತ್ಯ ನಿಕೇತನ ತಂಡದವರಿಂದ ನೃತ್ಯ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಮ್ಮೇಳನದ ಸಮಗ್ರ ಯಶಸ್ಸಿಗಾಗಿ ಬೆಳಾಲು ರಾಜಾರಾಮ ಶರ್ಮರವರ ಅಧ್ಯಕ್ಷತೆಯ ಸ್ವಾಗತ ಸಮಿತಿ ಮತ್ತು ವಿವಿಧ ಉಪಸಮಿತಿಗಳು ರಚನೆಯಾಗಿದ್ದು ಬೆಳಾಲಿನ ಜನತೆ ತಯಾರಿ ನಡೆಸುತ್ತಿದ್ದಾರೆ. ಬೆಳಾಲು ಗ್ರಾಮದ ಪ್ರತಿ ಮನೆಯಿಂದ ಸಮ್ಮೇಳನದ ಪ್ರತಿನಿಧಿಯಾಗಿ ಭಾಗವಹಿಸುವಂತೆ ಪ್ರಚಾರ ನಡೆಸಲಾಗುತ್ತಿದೆ. ಅಲ್ಲದೆ ಸಮ್ಮೇಳನದಲ್ಲಿ ಕಲಾ ಪ್ರದರ್ಶನಗಳು, ಪುಸ್ತಕ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರು, ಪರಿಷತ್ತಿನ ಸದಸ್ಯರು, ಸರ್ವರೂ ಇದನ್ನೇ ಆಮಂತ್ರಣವೆಂದು ಸ್ವೀಕರಿಸಿ ಸಮ್ಮೇಳನದಲ್ಲಿ ಭಾಗವಹಿಸಬೇಕಾಗಿ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ. ಯಶೋವರ್ಮರವರು ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.