ಬೆಳ್ತಂಗಡಿ: ಹಿಂದೂ ಸಮಾಜವನ್ನು ತಿದ್ದುವಂತಹ ಕೆಲಸವನ್ನು ನಮ್ಮ ಮಹಾಪುರುಷರು ಸಾಕಷ್ಟು ಮಾಡಿದ್ದಾರೆ. ಅದನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದುವರಿಸಿಕೊಂಡು ಹೋಗುತ್ತಿದೆ. ದೇಶವನ್ನು ಜಗದ್ವಂದ್ಯ ಮಾಡುವ ಕಲ್ಪನೆ ನಮ್ಮದು ಎಂದು ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಆದಿತ್ಯವಾರ ಸಂಜೆ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದ ಬಳಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳ್ತಂಗಡಿ ಶಾಖೆಯ ವಾರ್ಷಿಕೋತ್ಸವದಲ್ಲಿ ಬೌದ್ಧಿಕ್ ನೀಡಿದರು.
ನಮ್ಮೊಳಗಿನ ವೈರುಧ್ಯ, ಅನೈಕ್ಯಮತ್ಯದಿಂದ ಪರಕೀಯರ ಆಕ್ರಮಣ ಸುಲಭ ಸಾಧ್ಯವಾಯಿತು. ಜಗತ್ತಿನಲ್ಲಿ ಹಿಂದೂ ಶಬ್ದಕ್ಕೆ ಆದಷ್ಟು ಅವಮಾನ ಬೇರೆಯಾವುದರ ಮೇಲೆಯೂ ಆಗಿರಲಿಕ್ಕಿಲ್ಲ. ಜೀವನ ಮೌಲ್ಯಗಳನ್ನು, ರೀತಿ, ನೀತಿಗಳನ್ನು ಇಡೀ ಜಗತ್ತಿಗೆ ಪಸರಿಸಿದ್ದೇ ಭಾರತ. ಜಗತ್ತಿನ ಬೇರೆ ದೇಶಗಳಲ್ಲಿ ಹಿಂದೂ ಸಂಸ್ಕೃತಿಯ ಕುರುಹುಗಳು ಇಂದೂ ಇದೆ. ಯೋಗ, ಆಯುರ್ವೇದಕ್ಕಾಗಿ ಜಗತ್ತು ನಮ್ಮ ಕಡೆಗೇ ನೋಡುತ್ತಾ ಇದೆ. ಅನೇಕ ದೇಶಗಳಿಗೆ ಗಂಗಾಜಲ ಪವಿತ್ರ ಜಲವೆಂದು ಸ್ವೀಕರಿಸುತ್ತಿದ್ದಾರೆ ಎಂದವರು ವಿವರಿಸಿದರು.
ಹಿಂದುತ್ವದ ಭಾವನೆಯನ್ನು ಕತ್ತರಿಸಲು ಬ್ರಿಟಿಷರು ಹರಸಾಹಸ ಮಾಡಿದರು. ಆದರೆ ಸ್ವಾತಂತ್ರ್ಯ ದೊರಕಿದ ಮೇಲೂ ನಮ್ಮ ರಾಜಕೀಯ ನಾಯಕರು ಅದನ್ನೇ ಮಾಡಹೊರಟು. ನಾವೆಲ್ಲರೂ ಭಾರತೀಯರು ಎಂದಾಗಬೇಕಿತ್ತು. ಆದರೆ ದೇಶದಲ್ಲಿ ಬಹುಸಂಖ್ಯಾತ, ಅಲ್ಪಸಂಖ್ಯಾತ ಎಂದು ವಿಭಾಗ ಮಾಡಲಾಗಿದೆ. ಜಾತಿಗಳ ಮಧ್ಯೆ ಅಂತರ, ಕಂದಕವನ್ನು ತಂದು ಹಾಕಲಾಗಿದೆ ಎಂದು ವಿಷಾದಿಸಿದ ಅವರು ಶಿಸ್ತು, ಪರಾಕ್ರಮ, ದೇಶಭಕ್ತಿಯೊಂದಿಗೆ ಹಿಂದು ಸಮಾಜ ಶಕ್ತಿಯುತವಾದರೆ ಮಾತ್ರ ಯಾರೂ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ವಿಶ್ವನಾಥ್ ಆರ್.ನಾಯಕ್ ಅವರು ಜ್ಞಾನ ಆತ್ಮಶಕ್ತಿಯನ್ನು ವೃದ್ಧಿಸುತ್ತದೆ, ಉದ್ದೀಪನಗೊಳಿಸುತ್ತದೆ. ಧನಾತ್ಮಕ ಚಿಂತನೆಯಿಂದ ಶ್ರೇಯಸ್ಸು ಶತಃಸಿದ್ಧ ಎಂದರು.
ತಾಲೂಕು ಸಂಘಚಾಲಕ್ ಕೃಷ್ಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪಟ್ಟಣದ ಎಸ್ಸಿಡಿಸಿಸಿ ಬ್ಯಾಂಕ್ ಬಳಿಯಿಂದ ಗಣವೇಷಧಾರಿ ಸ್ವಯಂಸೇವಕರಿಂದ ಮುಖ್ಯರಸ್ತೆಯಲ್ಲಿ ಪಥಸಂಚಲನ ನಡೆಯಿತು. ಬಳಿಕ ಸ್ವಯಂಸೇವಕರಿಂದ ನೀಯುದ್ದ, ದಂಡಯುದ್ಧ, ದಂಡ ವ್ಯಾಯಾಮ, ಯೋಗ ವ್ಯಾಯಾಮ, ಆಟ, ಸೂರ್ಯನಮಸ್ಕಾರ ಪ್ರದರ್ಶನ ನಡೆಸಿದರು.
ಶರತ್ ಸ್ವಾಗತಿಸಿದರು. ಸ್ವಸ್ತಿಕ್ ಪ್ರಾರ್ಥನೆ ಹೇಳಿಕೊಟ್ಟರು. ಸುಕೇಶ್ ಮುಖ್ಯ ಶಿಕ್ಷಕರಾಗಿದ್ದರು .ಹಿತೇಶ್ ವೈಯಕ್ತಿಕ ಗೀತೆ ಹಾಡಿದರು. ಪ್ರಕಾಶ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.