ಬೆಳ್ತಂಗಡಿ : ಎಸ್ಎಸ್ಎಲ್ಸಿ 2016ರ ದ.ಕ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಜಿಲ್ಲಾ ಮಟ್ಟದಲ್ಲಿ ತಯಾರಿಸಲಾದ ಪ್ರಶ್ನಾ ಪತ್ರಿಕೆಯಿಂದ ಮಕ್ಕಳಲ್ಲಿ ಗೊಂದಲ ಉಂಟಾಗಿದೆ.
ತಾಲೂಕು ಮಟ್ಟದ ಪೂರ್ವ ಸಿದ್ದತಾ ಪರೀಕ್ಷೆ ಈಗಾಗಲೇ ನಡೆದಿದ್ದು ಇದೀಗ ಜಿಲ್ಲಾ ಮಟ್ಟದ ಪೂರ್ವ ಸಿದ್ದತಾ ಪರೀಕ್ಷೆ ನಡೆಯುತ್ತಿದೆ. ದ.ಕ ಜಿಲ್ಲಾ ಮಟ್ಟದಲ್ಲಿ ತಯಾರಿಸಲಾದ ಪ್ರಶ್ನೆ ಪತ್ರಿಕೆಯಲ್ಲಿ ಎ ಹಾಗೂ ಬಿ ಸೀರಿಸ್ ಎರಡು ವಿಧವಿದೆ. ಎ ಸೀರಿಸ್ನಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾದ ಪ್ರಶ್ನೆಗಳನ್ನು ಬಿ ಸೀರಿಸ್ ಬೇರೆ ವಿಧದಲ್ಲಿ ಪ್ರಶ್ನೆಗಳನ್ನು ನೀಡಲಾಗಿದೆ.
16 ಪುಟಗಳುಳ್ಳ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅದರಲ್ಲಿ ಪ್ರಶ್ನೆಗಳನ್ನು ನೀಡಿದ್ದು ಅದರಲ್ಲಿಯೇ ಉತ್ತರವನ್ನು ಬರೆಯಬೇಕು. ಆದರೆ ಉತ್ತರಗಳನ್ನು ಬರೆಯಲು ಸಾಕಷ್ಟು ಸ್ಥಳದ ಅವಕಾಶವಿಲ್ಲ. ಗ್ರಾಫ್ ಸೀಟ್ ನೀಡಿಲ್ಲ. ಮಕ್ಕಳಲ್ಲಿ ಗೊಂದಲಕ್ಕೆ ಕಾರಣವಾದದ್ದು ಒಂದೇ ತರಗತಿಯ, ಅಕ್ಕಪಕ್ಕ ಕುಳಿತ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳು ಬೇರೆ ಬೇರೆಯಾಗಿರುವುದು. ಇದರ ಬಗ್ಗೆ ತಾಲೂಕಿನಲ್ಲಿ ಯಾವುದೇ ಅಧ್ಯಾಪಕರಿಗೂ ಮಾಹಿತಿ ಇಲ್ಲದಿರುವುದು ಅವರಿಗೂ ಗೊಂದಲ ಉಂಟಾಗಿದೆ.
ಒಂದು ತರಗತಿಯಲ್ಲಿ 50 ವಿದ್ಯಾರ್ಥಿಗಳಿದ್ದರೆ ೨೫ ವಿದ್ಯಾರ್ಥಿಗಳಿಗೆ ಎ ಸೀರಿಸ್ ಉಳಿದ 25 ಮಕ್ಕಳಿಗೆ ಬಿ ಸೀರಿಸ್ ಪ್ರಶ್ನಾ ಪತ್ರಿಕೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚುವ ಸಾಧ್ಯತೆ ಇದೆ ಎಂದು ಕೆಲವರ ಅಭಿಪ್ರಾಯ. ಆದರೆ ಯಾವುದೇ ಪೂರ್ವ ಸೂಚನೆ ನೀಡದೆ ಇಂತಹ ಕಲಿಕಾ ಗುಣಮಟ್ಟದ ಪ್ರಯೋಗವನ್ನು ಮಾಡಿ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವುದು ಸರಿಯಲ್ಲ ಎಂದು ಕೆಲವರ ಅಭಿಪ್ರಾಯವಾಗಿದೆ.
ಗಣಿತ, ವಿಜ್ಞಾನ, ಸಮಾಜವಿಜ್ಞಾನ ವಿಷಯದ ಪಠ್ಯಕ್ಕೆ ಎ ಮತ್ತು ಬಿ ಸೀರಿಸ್ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತಿದೆ. ಆದರೆ ಭಾಷಾ ವಿಷಯಗಳಿಗೆ ಎಲ್ಲರಿಗೂ ಒಂದೇ ಪ್ರಶ್ನೆ ಪತ್ರಿಕೆಗಾಗಿದೆ. ಚುರುಕಿನ ವಿದ್ಯಾರ್ಥಿಗಳಿಗೆ ಸುಲಭದ ಪ್ರಶ್ನೆ ಪತ್ರಿಕೆ ದೊರಕಿದರೆ, ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗೆ ಇನ್ನೊಂದು ಪ್ರಶ್ನೆ ಪತ್ರಿಕೆ ಸಿಕ್ಕಿದರೆ ವಿದ್ಯಾರ್ಥಿಗಳು ಮಾನಸಿಕವಾಗಿ ಜರ್ಜರಿತವಾಗಬಹುದೆಂದು ಪೋಷಕರ ಅಳಲು.
ಇಂತಹ ಪ್ರಯೋಗವನ್ನು ಮಾಡುವಾಗ ಅದ್ಯಾಪಕರ ಹಾಗೂ ವಿದ್ಯಾರ್ಥಿಗಳ ಗಮನಕ್ಕೆ ತಂದಿದ್ದರೆ ಇಂತಹ ಗೊಂದಲ ಉಂಟಾಗುವುದಿಲ್ಲ. ಯಾವುದೇ ಪೂರ್ವ ಸೂಚನೆ ನೀಡದೆ ಪ್ರಾಯೋಗಿಕವಾಗಿ ತಂದ ಪ್ರಶ್ನೆ ಪತ್ರಿಕೆಯಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದು ಮಕ್ಕಳಲ್ಲಿ ಮನೋಸ್ಥೈರ್ಯವನ್ನು ತುಂಬಿಸುವ ಕೆಲಸ ಆಗಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.