ಬೆಳ್ತಂಗಡಿ: ನಮ್ಮಲ್ಲಿ ಆತ್ಮವಿಶ್ವಾಸ ತುಂಬಿಸಲು ಶ್ರದಾ ಕೇಂದ್ರಗಳು ಇವೆ. ಭವ್ಯತೆಯ ದೃಷ್ಟಿ ಇದ್ದರೆ ದಿವ್ಯತೆಯ ಸೃಷ್ಟಿ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಪಡಂಗಡಿ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ನವೀಕರಣಗೊಂಡ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶಾಭಿಷೇಕೋತ್ಸವದ ಎರಡನೇ ದಿನವಾದ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಭಾರತ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿರುವ ದೇಶ. ಇದಕ್ಕೆ ಸೂತ್ರ ಧರ್ಮ. ಬದುಕು ಸುಂದರವಾಗಿರಲು ಧರ್ಮ ಅಗತ್ಯ. ಜಾಗತೀಕರಣದ ಪ್ರಭಾವದಿಂದ ತಾತ್ಕಾಲಿಕ ಸುಖದ ಕಡೆಗೆ ಆಕರ್ಷಿತರಾಗುತ್ತಿದ್ದೇವೆ. ಆದರೆ ಅದು ನೈಜ ಸುಖವಲ್ಲ ಎಂಬುದು ಅರಿವಿರಬೇಕು. ತಾತ್ಕಾಲಿಕ ಸುಖದಿಂದ ಶಾಶ್ವತ ದುಃಖ ಉಂಟಾದರೆ, ಶ್ರೇಯಸ್ಸಿನಿಂದಿಂದ ಸಿಗುವ ಸುಖ ಶಾಶ್ವತವಾಗಿರುತ್ತದೆ ಮತ್ತು ಅದು ಬದುಕನ್ನು ಸುಂದರವಾಗಿಸುತ್ತದೆ. ಇದಕ್ಕೆಲ್ಲ ಪ್ರೇರಣೆ ನೀಡಲು ಇರುವುದೇ ಶ್ರದ್ದಾ ಕೇಂದ್ರಗಳು ಎಂದರು.
ಜಾಗತೀಕರಣದ ಹಿಂದೆ ಹೋಗದೆ ಭಾರತೀಕರಣದತ್ತ ಯೋಚಿಸಬೇಕು ಎಂದ ಅವರು ಮಲ್ಲಿಪಾಡಿಯ ಜನತೆ ದೇಗುಲವನ್ನು ನಿರ್ಮಿಸುವುದರ ಮೂಲಕ ರಾಷ್ಟ್ರ ನಿರ್ಮಾಣದ ಸಂಕಲ್ಪ ಮಾಡಿರುವುದನ್ನು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರು ವಹಿಸಿದ್ದರು.
ವೇದಿಕೆಯಲ್ಲಿ ಅತಿಥಿಗಳಾಗಿ ಜಿ.ಪಂ. ಮಾಜಿಉಪಾಧ್ಯಕ್ಷೆ ರಾಜಶ್ರೀ ಹೆಗ್ಡೆ, ಉಚ್ಛ ನ್ಯಾಯಾಲಯ ನ್ಯಾಯವಾದಿ ಹರೀಶ್ ಪೂಂಜ, ಪಡಂಗಡಿಜುಮ್ಮಾಮಸೀದಿ ಧರ್ಮಗುರು ಬಶೀರ್ ದಾರಿಮಿ, ಜನಜಾಗೃತಿ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗಿಶ್ ಕುಮಾರ್ ನಡಕ್ಕರ, ದೇಗುಲ ಆಡಳಿತೆ ಮೊಕ್ತೇಸರ ಅಮರನಾಥ ಹೆಗ್ಡೆ ವೇದಿಕೆಯಲ್ಲಿದ್ದರು.
ದಾನಿಗಳಾದ ಹಷೇಂದ್ರ ಕುಮಾರ್, ಬಾಲಕೃಷ್ಣ ಶೆಟ್ಟಿ ಕಾರ್ಯಾಣ, ರಾಧಾಕೃಷ್ಣ ರೈ ಬದ್ಯಾರು, ನಮಿತಾ ಬದ್ಯಾರು, ಬಾಲಿಕಾ ಬದ್ಯಾರು, ಹರೀಶ್ ಪೂಂಜ, ರಾಜೇಶ್ ಬ್ಯಾಪ್ಟಿಸ್ಟ್, ಧರ್ಣಪ್ಪ ಪೂಜಾರಿ, ಸತೀಶ್ ಪೂಜಾರಿ ಇವರನ್ನು ಸಮ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಆರ್ಥಿಕ ಸಮಿತಿ ಅಧ್ಯಕ್ಷ ಸಂತೋಷ್ ಕುಮರ್ ಜೈನ್ ಸ್ವಾಗತಿಸಿ ಪ್ರಸ್ತಾವಿಸಿದರು. ಬ್ರಹ್ಮಕಲಶೋತ್ಸವ ಸಮಿತಿಉಪಾಧ್ಯಕ್ಷ ಅನಿಲ್ ನಾಯ್ಗ ವಂದಿಸಿದರು. ಪುಂಜಾಲಕಟ್ಟೆ ಸ.ಪ್ರಾ.ಪ್ರೌ.ಶಾಲಾ ಸಹಶಿಕ್ಷಕ ಧರಣೇಂದ್ರ ಕೆ. ಜೈನ್ ಹಾಗೂ ಓಡಿಲ್ನಾಳ ಸ.ಉ.ಪ್ರಾ.ಶಾಲಾ ಸಹಶಿಕ್ಷಕಿ ಸುಜಾತಾ ಕಾರ್ಯಕ್ರಮ ನಿರ್ವಹಿಸಿದರು.
ದೇಗುಲದಲ್ಲಿ ಬೆಳಿಗ್ಗೆ ಮಹಾಗಣಪತಿ ಹವನ, ಅಂಕುರ ಪೂಜೆ, ಕ್ಷಾಳನಾದಿ ಸಪ್ತಶುದ್ಧಿ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮಗಳು, ಹೋಮ ಕಲಶಾಭಿಷೇಕಗಳು ನಡೆದವು. ಸಂಜೆ ಶ್ರೀ ದುರ್ಗಾಪೂಜೆ, ಅಂಕುರ ಪೂಜೆ, ಅಘೋರ ಹೋಮ, ಅನುಜ್ಞಾಕಲಶ ಪೂರಣೆ ಹಾಗೂ ಗುರುವಾಯನಕೆರೆ ಶ್ರೀ ವರದ ಪಾಂಡುರಂಗ ಭಜನಾ ಮಂಡಳಿಯವರಿಂದ ಭಜನಾ ಸತ್ಸಂಗ ನೆರವೇರಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.