ಬೆಳ್ತಂಗಡಿ : ಇಂದಿನ ಶಿಕ್ಷಣದಲ್ಲಿ ನಮ್ಮ ಪುರಾಣ, ಸಂಸ್ಕೃತಿಗೆ ಆದ್ಯತೆಯಿಲ್ಲವಾಗಿದೆ. ಮೊಬೈಲ್ಗಳಲ್ಲಿ ಸಿಗುವುದನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಮೊಬೈಲ್ ಎಂಬುದು ಚಿನ್ನದ ಕತ್ತಿ. ಅದು ಬದುಕನ್ನು ಹಾಳು ಮಾಡುತ್ತದೆ. ಆಧುನಿಕ ತಂತ್ರಜ್ಞಾನದಿಂದ ಯುವ ಜನತೆ ಹಾದಿ ತಪ್ಪುವ ಸಾಧ್ಯತೆ ಇದೆ. ಎಂದು ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನ ಉಪನ್ಯಾಸಕ ಡಾ. ಗಣೇಶ್ ಅಮಿನ್ ಸಂಕಮಾರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಐದನೇ ದಿನವಾದ ಶನಿವಾರ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ತಂತ್ರಜ್ಞಾನವನ್ನು ಬೇಕಾದಲ್ಲಿ ಮಾತ್ರ ಉಪಯೋಗಿಸಿಕೊಳ್ಳಬೇಕು. ಸಂಸ್ಕೃತಿಗೆ ಮಾರಕವಾಗುವ ತಂತ್ರಜ್ಞಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ನಮಗೆ ನಮ್ಮ ಹಿರಿಯರು, ಸಂಸ್ಕೃತಿ, ಸಂಸ್ಕಾರದ ಬಗ್ಗೆ ನಂಬಿಕೆ ಇಲ್ಲದಿದ್ದರೆ ಬದುಕೇ ಇಲ್ಲ. ಭಕ್ತಿಗೆ ನಂಬಿಕೆ ಮುಖ್ಯ. ಮನುಷ್ಯನಲ್ಲಿ ಹಸಿವು ಮತ್ತು ಭಯ ಇರಬೇಕು. ಭಗವಂತನ ಆರಾಧನೆ ಮಾಡುವ ಹಸಿವು ನಮ್ಮದಾಗಾಬೇಕು. ಶ್ರೀ ಕೃಷ್ಣನ ಕಡಗೋಲಿನಂತೆ ಮನಸ್ಸಿನಲ್ಲಿರುವ ಕಲ್ಮಶಗಳನ್ನು ಕಡೆದು ಹೊರಹಾಕಿ ನಿಷ್ಕಲ್ಮಶ ಭಕ್ತಿ, ನಂಬಿಕೆಯಿಂದ ದೇವರ ಸ್ತುತಿ ಮಾಡಿದಾಗ ಧರ್ಮವನ್ನು ಉಳಿಸಲು ಸಾಧ್ಯ. ನಮ್ಮ ಮನಸಿನಲ್ಲಿ ದೇವರ ಬಗ್ಗೆ ಭಕ್ತಿ ಇದ್ದರೆ ಅದು ಭಗವಂತನಿಗೆ ತಲುಪುತ್ತದೆ ಎಂದ ಅವರು, ದೇವಾಲಯಗಳಲ್ಲಿ ಧರ್ಮ ಸಾನಿಧ್ಯ ಬರಲು ಊರವರ ಸಹಕಾರ ಅಗತ್ಯ.
ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು, ಪೂಜೆಗಿಂತಲೂ ಸೇವಾ ಕಾರ್ಯಗಳು ಮುಖ್ಯ. ಮನಸ್ಸಿನ ಪಾವಿತ್ರ್ಯತೆಗೆ ದೇಗುಲಗಳು ಅಗತ್ಯ. ನಾವು ಆಚರಿಸುವ ಆಚಾರ, ವಿಚಾರಗಳಲ್ಲಿ ಭಕ್ತಿಯೊಂದಿಗೆ ಸಹನೆ, ತಾಳ್ಮೆ ಇರಬೇಕು. ಸಮಾಜದಲ್ಲಿ ದೇವಸ್ಥಾನ ಎನ್ನುವುದು ಪೂಜೆ ಪುರಸ್ಕಾರಕ್ಕೆ ಸೀಮಿತವಾಗಿರದೆ ಬಡ ಬಗ್ಗರಿಗೆ ಸಹಾಯ ಮಾಡುವ ಸಾನಿಧ್ಯವಾಗಿರಲಿ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಬಿ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಮೂಡುಬಿದಿರೆ, ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕಣಾಲ್, ನಿವೃತ್ತ ಕಂದಾಯ ನಿರೀಕ್ಷಕ ಪದ್ಮಕುಮಾರ್, ನಾವುರು ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಸಾಲ್ಯಾನ್, ಎ.ಕೆ. ಹಸೈನಾರ್, ಬಂಗಾಡಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ವೀರಪ್ಪ ಮೊಲಿ, ಉಜಿರೆ ಬಿಎಸ್ಎನ್ಎಲ್ ಸಬ್ ಡಿವಿಜನ್ ಇಂಜಿನೀಯರ್ ಅಣ್ಣಿ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜಾ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಹರೀಶ್ ಕೆ. ಕಾರಿಂಜ ಇದ್ದರು.
ಜ್ಯೋತಿಷಿ ಮೋಹನ ಕಾರಂತ ಕಡಿರುದ್ಯಾವರ ಅವರನ್ನು ಗೌರವಿಸಲಾಯಿತು. ಬ್ರಹ್ಮಕಲಶ ಸಮಿತಿ ಕಾರ್ಯಧ್ಯಕ್ಷ ಡಾ| ಪ್ರದೀಪ್ ನಾವೂರು ಸ್ವಾಗತಿಸಿದರು. ಯೋಗೀಶ್ ಶರ್ಮ ಬಳ್ಳಪದವು ಪ್ರಾರ್ಥಿಸಿದರು. ಸತೀಶ್ ಮೊರ್ತಾಜೆ ಹಾಗೂ ಮೋಹನ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ನೆಲ್ಲಿಪಳಿಕೆ ವಂದಿಸಿದರು. ವೈದಿಕ ಕಾರ್ಯಕ್ರಮವಾಗಿ ಬೆಳಿಗ್ಗೆ ಗಣಹೋಮ, ಅಂಕುರಪೂಜೆ, ಕುಂಬೇಶಕರ್ಕರಿ, ಜಲದ್ರೋಣಿ ಕಲಶಪೂಜೆ, ಶಯ್ಯಾಪೂಜೆ, ನಿದ್ರಾಕಲಶಪೂಜೆ, ವಿದ್ಯೇಶ್ವರ ಕಲಶಪೂಜೆ, ಚಕ್ರಾಬ್ಜಪೂಜೆ, ಸಂಹಾರತತ್ತ್ವಕಲಶಪೂಜೆ, ಸಂಹಾರ ತತ್ತ್ವಹೋಮ, ಶಿರಸ್ತತ್ತ್ವ ಹೋಮ, ಪ್ರಾರ್ಥನೆ, ತತ್ತ್ವಕಲಶಾಭಿಷೇಕ, ಧ್ಯಾನಸಂಕೋಚ, ಜೀವಕಲಶಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯೆಯಲ್ಲಿಟ್ಟು ಮಹಾಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಸಂಜೆ ಪ್ರಾಸಾದಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಬಿಂಬಶುಧ್ಧಿ, ಕಲಶಾಭಿಷೇಕ, ಅಧಿವಾಸ ಹೋಮ, ಶಾಂತಿ ಹೋಮ, ಧ್ಯಾನಾಧಿವಾಸ, ಕಲಶಾಧಿವಾಸ ಮಂಡಲ ಪೂಜೆ, ಅಧಿವಾಸ ಬಲಿ, ಮಹಾಬಲಿ ಪೀಠ ಧ್ಯಾನಾಧಿವಾಸ, ರಾತ್ರಿ ಪೂಜೆ ನಡೆಯಿತು.
ಸಂಜೆ ಶ್ರೀ ಉಮಾಪಂಚಲಿಂಗೇಶ್ವರ ಭಜನಾ ಮಂಡಳಿ ಗಂಡಿಬಾಗಿಲು, ನೆರಿಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ವೈದ್ಯ ಡಾ| ಚಕ್ರಪಾಣಿ ಎಂ. ಇವರಿಂದ ಕೊಳಲು ವಾದನ ನಡೆಯಿತು. ಮೃದಂಗದಲ್ಲಿ ಯೋಗೀಶ್ ಶರ್ಮ ಬಳ್ಳಪದವು, ವಯಲಿನ್ನಲ್ಲಿ ಪ್ರೇಮಾ ಲೀಲಾ ಭಟ್ ಬಾಯಾರು ಸಾಥ್ ನೀಡಿದರು. ರಾತ್ರಿ ಆಳ್ವಾಸ್ ವಿದ್ಯಾಸಂಸ್ಥೆ ಮೂಡುಬಿದ್ರೆ ಇವರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನೆರೆದಿದ್ದ ಶೋತ್ರುಗಳನ್ನು ಮನ ರಂಜಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.