ಕಲ್ಲಡ್ಕ : ನೇತಾಜಿ ಈ ದೇಶ ಕಂಡ ಅಪ್ರತಿಮ ದೇಶ ಭಕ್ತ. ಅವರು ನಮ್ಮನ್ನಗಲಿದರೂ ತನ್ನ ಚಿಂತನೆಯ ಪ್ರಖರತೆ, ಕಾರ್ಯದ ನಿಖರತೆಯಿಂದಾಗಿ ಎಂದೆಂದಿಗೂ ಚಿರಂಜೀವಿಗಳು. ತನ್ನ ಸರ್ವಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅವರು ತನ್ನ ಶಿಕ್ಷಕರ ಸಮರ್ಥ ಮಾರ್ಗದರ್ಶನದಿಂದ ನೇತಾ ಎನಿಸಿಕೊಂಡು ಮುಂದೆ ದೇಶಾದ್ಯಂತ ನೇತಾಜಿ ಎಂದೇ ಪ್ರಸಿದ್ಧರಾದರು. ಜೊತೆಗೆ ತಂದೆ-ತಾಯಂದಿರೂ ಇವರ ಹೋರಾಟದ ಪ್ರವೃತ್ತಿಗೆ ನೀರೆರೆದು ಪೋಷಿಸಿದರು.
ಬ್ರಿಟೀಷರ ಕುತಂತ್ರಕ್ಕೆ ಹೋರಾಟದ ಮೂಲಕವೇ ಉತ್ತರ ಕೊಡಬೇಕೆಂದು ವಿದೇಶಗಳಿಗೆ ಹೋಗಿ ಅಲ್ಲಿ ಬ್ರಿಟೀಷರ ವಿರುದ್ಧ ಸಂಘಟನೆ ಮಾಡಿದವರು. ನೇತಾಜಿಯವರ ಸಮಗ್ರ ಜೀವನವನ್ನು ಕೆಲವು ನಿಮಿಷಗಳಲ್ಲಿ ಮಾತನಾಡುವುದೆಂದರೆ ಅದು ಸಮುದ್ರವನ್ನು ಬೊಗಸೆಯಲ್ಲಿ ಬಚ್ಚಿಡುವೆನೆಂಬಂತಹ ಪ್ರಯತ್ನವಾದೀತು ಅಂತಹ ಮೇರು, ಧೀಮಂತ ವ್ಯಕ್ತಿತ್ವ ಸುಭಾಶ್ಚಂದ್ರರದು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ಡಾ| ಬಿ.ಎಂ. ಶರಭೇಂದ್ರ ಸ್ವಾಮಿ ಅಭಿಪ್ರಾಯಪಟ್ಟರು. ಅವರು ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನಲ್ಲಿ ನಡೆದ ವೀರಸೇನಾನಿಗೆ ನುಡಿನಮನ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ತಾಯಿ ಭಾರತಿ ತನ್ನ ಗರ್ಭದಲ್ಲಿ ನೂರಾರು ಪುತ್ರರತ್ನರಿಗೆ ಜನ್ಮವಿತ್ತಿದ್ದಾಳೆ. ಆ ಪೈಕಿ ‘ಜೈ ಹಿಂದ್’ ಎಂಬ ಘೋಷಣೆಯ ಮೂಲಕ ದೇಶವನ್ನೇ ಬಡಿದೆಬ್ಬಿಸಿದ ಕೀರ್ತಿ ನೇತಾಜಿಗೆ ಸಲ್ಲುತ್ತದೆ ಎಂದರು.ಪ್ರತಾಪ ಕ್ರೀಡಾ ಸಂಘದ ವತಿಯಿಂದ ಆಯೋಜಿಸಲಾದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯು ಈ ಸಂಧರ್ಭದಲ್ಲಿ ನಡೆಯಿತು. ಅಲ್ಲದೇ ವೀರಯೋಧ ಲೆ. ಕರ್ನಲ್ ಕೆ.ಟಿ.ನಾಯ್ಕ್ ಪೆರಾಜೆ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು.
ಅಧ್ಯಕ್ಷತೆಯನ್ನು ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ವಹಿಸಿಕೊಂಡಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ನಾಗೇಶ್ ಇವರು ಸ್ವಾಗತಿಸಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್ಕಟ್ಟೆ ವಂದಿಸಿದರು. ಅಧ್ಯಕ್ಷ ಧನುಷ್, ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಸಂತ ಮಾಧವ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ರೇಖಾ ಹಾಗೂ ವಿದ್ಯಾರ್ಥಿನಿಯರಾದ ಜಯಲಕ್ಷ್ಮೀ, ಸುಷ್ಮಾ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.