ಬಾಯಾರು: ಸ್ವಾಮಿ ವಿವೇಕಾನಂದರು ನಮ್ಮ ದೇಶದ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದರು ಹಾಗೂ ಹಿಂದು ಧರ್ಮದ ಒಬ್ಬ ಶ್ರೇಷ್ಠ ಸಂತರು ಎಂಬ ಕಾರಣಕ್ಕಾಗಿ ಸಾಮಾನ್ಯವಾಗಿ ನಾವೆಲ್ಲ ಅವರನ್ನು ಸ್ಮರಿಸುತ್ತೇವೆ. ಆದರೆ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಅವರನ್ನು ಗೌರವಿಸುತ್ತಿದೆ. ಯಾಕೆಂದರೆ ಅಮೇರಿಕದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ ’ಅಮೇರಿಕಾದ ನನ್ನ ಸಹೋದರ ಸಹೋದರಿಯರೇ’ ಎಂದು ಸಂಭೋಧಿಸುವುದರ ಮೂಲಕ ಸಹಸ್ರಾರು ವರ್ಷಗಳ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ಇಡೀ ವಿಶ್ವಕ್ಕೆ ಪ್ರಚುರಪಡಿಸಿದರು. ತನ್ಮೂಲಕ ಭಾರತದ ಹಿರಿಮೆಯನ್ನು ವಿಶ್ವಮಾನ್ಯ ಮಾಡಿ ವಿಶ್ವವಂದ್ಯರಾದರು ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರಕ್ ಶ್ರೀ ಉಮೇಶ್ ಅವರು ಹೇಳಿದರು.
ಯೂತ್ ಫ಼ಾರ್ ನೇಶನ್ & ಸೊಸೈಟಿ, ಕಾಸರಗೋಡು ಇದರ ವತಿಯಿಂದ ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಜ.೧೭ರಂದು ನಡೆದ ಸ್ವಾಮಿ ವಿವೇಕಾನಂದರ ೧೫೩ ನೇ ಜಯಂತ್ಯುತ್ಸವದ ಸಂದರ್ಭದಲ್ಲಿ ಮಾತನಾಡುತ್ತಾ ಸ್ವಾಮಿ ವಿವೇಕಾನಂದರು ಸಾಮಾಜಿಕವಾಗಿ ಹಾಗೂ ತಾರ್ಕಿಕವಾಗಿ ತೆಗೆದುಕೊಂಡ ಸಾಂದರ್ಭಿಕ ನಿಲುವುಗಳಿಂದಾಗಿ ರಾಷ್ಟ್ರಸಂತರಾಗುವುದರ ಜೊತೆಯಲ್ಲಿ ವಿಶ್ವಮಾನ್ಯತೆಯನ್ನು ಪಡೆದರು. ಇಡೀ ಭಾರತವನ್ನು ಸಂಚಾರಗೈದು ದೇಶದ ವಾಸ್ತವ ಸ್ಥಿತಿಗತಿಗಳನ್ನು ಹಾಗೂ ಸಂಕಷ್ಟಗಳನ್ನು ಚೆನ್ನಾಗಿ ಅರಿತ ಸ್ವಾಮೀಜಿ, ಕನ್ಯಾಕುಮಾರಿಗೆ ಬಂದರು. ಅಲ್ಲಿ ಸಮುದ್ರದಲ್ಲಿದ್ದ ಬಂಡೆಯೊಂದರಲ್ಲಿ ಕುಳಿತು ತಮ್ಮ ಇಡೀ ಭಾರತ ಪರಿಕ್ರಮ ಸಂದರ್ಭದಲ್ಲಿ ತಿಳಿದ ಭಾರತದ ವಾಸ್ತವ ಸ್ಥಿತಿಯ ಕುರಿತು ಗಾಢ ಚಿಂತನೆ ನಡೆಸಿದರು. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲ್ಲಾ ದೇಶದ ತರುಣರು ವೈಜ್ನಾನಿಕತೆಯಿಂದ ಕೂಡಿದ ವಿಚಾರಗಳನ್ನು ಒಪ್ಪಿಕೊಳ್ಳುತ್ತಾರೆ ಎಂಬ ಸತ್ಯ ಮನಗಂಡರು. ಅಷ್ಟೇ ಅಲ್ಲದೆ ಭಾರತದ ಎಲ್ಲಾ ದೀನ ದರಿದ್ರರ ಸಂಕಷ್ಟಗಳನ್ನು ಪರಿಹರಿಸುವ ನಿರ್ಧಾರ ಮಾಡಿದ್ದಲ್ಲದೆ ಭಾರತದ ಮುಕ್ತಿಯೇ ನನ್ನ ಮುಕ್ತಿ ಎನ್ನುವ ದೃಢಸಂಕಲ್ಪ ಮಾಡಿದರು. ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಸ್ವಾಮಿ ವಿವೇಕಾನಂದರು ಅಮೇರಿಕಾದಲ್ಲಿ ಆಯೋಜಿತವಾದ ವಿಶ್ವ ಧರ್ಮ ಸಮ್ಮೇಳನಕ್ಕೆ ತೆರಳುತ್ತಾರೆ. ತಮ್ಮ ಕ್ರೈಸ್ತ ಮತವೇ ಶ್ರೇಷ್ಠ ಎಂಬುದನ್ನು ಪ್ರಚಾರ ಮಾಡುವ ಉದ್ದೇಶದಿದಲೇ ಅಮೇರಿಕ ಈ ಸಮ್ಮೇಳನ ಆಯೋಜನೆ ಮಾಡಿತ್ತು. ಆದರೆ ಸ್ವಾಮಿ ವಿವೇಕಾನಂದರು ಭಾರತದ ಸನಾತನ ಧರ್ಮವೇ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲುದು.
ಹಾಗೆಯೇ ಭಾರತದ ಆತ್ಮ ಗೌರವಕ್ಕೆ ಚ್ಯುತಿ ತಂದ ವಿದೇಶದ ನೆಲದಲ್ಲೇ ಭಾರತದ ಸಂಸ್ಕೃತಿಯ ಆಳವನ್ನು ಹಾಗೂ ಅದಕ್ಕಿದ್ದ ವೈಜ್ಞಾನಿಕ ಆಧಾರಗಳ ಸಹಿತ ವಿಶ್ವಕ್ಕೆ ಮತ್ತೊಮ್ಮೆ ಪರಿಚಯಿಸಿದರು. ತನ್ಮೂಲಕ ಭಾರತಕ್ಕೆ ವಿಶ್ವಮಾನ್ಯತೆಯನ್ನು ತಂದು ವಿಶ್ವವಂದ್ಯರಾದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೊದಲಿಗೆ ಸ್ವಾಮಿ ವಿವೇಕಾನಂದರ ಕುರಿತಾದ ಕಿರುಚಿತ್ರ ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಶಾಂತಿ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಾಮಕೃಷ್ಣ ಭಟ್ ಅವರು ದೀಪ ಪ್ರಜ್ವಲನದೊಂದಿಗೆ ನಡೆಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಶ್ರೀ ಮಹಾಲಿಂಗ ಭಟ್ ವಹಿಸಿದ್ದರು. ಸ್ವಾಗತವನ್ನು ದುರ್ಗಾಪ್ರಸಾದ್ ನಡೆಸಿದರು. ಪ್ರಾರ್ಥನೆ ಮತ್ತು ವಿವೇಕಾನಂದ ಸ್ಮರಣಾರ್ಥವಾಗಿ ಸ್ತೋತ್ರವನ್ನು ದೀಪಕ್ ಅವರು ಹಾಡಿದರು. ಸುಮನ್ ರಾಜ್ ಧನ್ಯವಾದವಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಜಯದೇವ ಅವರು ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.