ಬೆಂಗಳೂರು: ಮಹರ್ಷಿ ವಾಲ್ಮೀಕಿ ಅವರು ಭಾರತದ ಸಂಸ್ಕೃತಿ, ಪರಂಪರೆಯನ್ನು ಜಗತ್ತಿಗೇ ಪರಿಚಯಿಸಿಕೊಟ್ಟ ಶ್ರೇಷ್ಠ ಕವಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಏರ್ಪಡಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯವನ್ನು ಇಡೀ ವಿಶ್ವವೇ ತಲೆದೂಗುವಂತೆ ಸುಂದರವಾಗಿ ರಚಿಸಿ, ಭಾರತ ಅಷ್ಟೇ ಅಲ್ಲ; ಜಗತ್ತಿಗೇ ಶ್ರೀರಾಮನ ಆದರ್ಶ ವ್ಯಕ್ತಿತ್ವವನ್ನು ಪರಿಚಯಿಸಿಕೊಡುವ ಕಾರ್ಯ ಶ್ರೇóಷ್ಠ ಕವಿ ಮಹರ್ಷಿ ವಾಲ್ಮೀಕಿ ಅವರ ಮೂಲಕ ಆಗಿದೆ ಎಂದು ವಿವರಿಸಿದರು.
ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಈಚೆಗೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಮಾಡಿದ್ದಾರೆ. ಅಲ್ಲಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರು ಇಟ್ಟಿರುವುದು ಕರ್ನಾಟಕ ಮಾತ್ರವಲ್ಲದೇ, ಇಡೀ ದೇಶ ಅದನ್ನು ಹೆಮ್ಮೆ ಪಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲೂ ಹಿಂದೆ ಬಿಜೆಪಿ ಸರಕಾರ ಇದ್ದಾಗ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ಆಚರಿಸಬೇಕು; ಈ ಮೂಲಕ ಇಡೀ ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗಬೇಕೆಂದು ತೀರ್ಮಾನ ಮಾಡಿದ್ದರು. ಇವತ್ತು ಅದ್ಧೂರಿ ಆಚರಣೆಗೆ ಬಿಜೆಪಿ ಸರಕಾರ ಕಾರಣ. ಸರಕಾರಿ ರಜೆಯನ್ನೂ ಘೋಷಿಸಲಾಗಿತ್ತು ಎಂದು ತಿಳಿಸಿದರು.
ಬಿಜೆಪಿ ಸರಕಾರ ಇದ್ದಾಗ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ಆ ಸಮುದಾಯದ ಯುವ ಪೀಳಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂಚೂಣಿಗೆ ಬರಬೇಕೆಂಬ ಸದುದ್ದೇಶ ಯಡಿಯೂರಪ್ಪ ಅವರದಾಗಿತ್ತು. ವಾಲ್ಮೀಕಿ ನಿಗಮದ ಸ್ಥಾಪನೆಯ ಬಳಿಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಕಚೇರಿಗಳನ್ನು ತೆರೆಯಲಾಗಿದೆ. ವಾಲ್ಮೀಕಿ ಸಮುದಾಯದ ಮಠಕ್ಕೆ ಹಿಂದಿನ ಯಾವುದೇ ಕಾಂಗ್ರೆಸ್ ಸರಕಾರ ಅನುದಾನ ನೀಡಿರಲಿಲ್ಲ. ಬಿಜೆಪಿ ಸರಕಾರವು ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಆ ಮಠಕ್ಕೂ ಅನುದಾನ ನೀಡಿದ್ದರು ಎಂದು ನೆನಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟ ಪಂಗಡಗಳ ಕುರಿತು ಉದ್ದುದ್ದ ಭಾಷಣ ಬಿಗಿಯುತ್ತಾರೆ. ಆದರೆ, ಅಹಿಂದ ಸಮುದಾಯಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಯಾವ ರೀತಿ ಆಡಳಿತ ನಡೆಸುತ್ತಿದೆ? ಎಂದು ವಿಜಯೇಂದ್ರ ಅವರು ಕೇಳಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಮೊತ್ತದ ಹಗರಣ ನಡೆದಿದೆ. ಪರಿಶಿಷ್ಟ ಪಂಗಡಕ್ಕೆ, ಆ ಸಮುದಾಯದ ಯುವಜನತೆಗೆ, ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕಿದ್ದ ಉಪಯೋಗ ಆಗಬೇಕಿದ್ದ ಹಣವನ್ನು ಲೂಟಿ ಮಾಡಿ, ತೆಲಂಗಾಣಕ್ಕೆ ಒಯ್ದು ಅಲ್ಲಿ ಸಾವಿರಾರು ಖಾತೆಗೆ ಹಣ ವರ್ಗಾಯಿಸಿ ದುರುಪಯೋಗ ಮಾಡಿದ್ದರು ಎಂದು ತಿಳಿಸಿದರು.
ಬಿಜೆಪಿಯ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ಐತಿಹಾಸಿಕ ನಿರ್ಧಾರ ಮಾಡಿದ್ದರು ಎಂದು ನೆನಪಿಸಿದರು. ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಬಡವರು, ದೀನದಲಿತರ ಬಗ್ಗೆ ಯಾವತ್ತೂ ಮೊಸಳೆಕಣ್ಣೀರು ಸುರಿಸುವ ಕೆಲಸ ಮಾಡುತ್ತ ಬಂದಿದೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.