ಉಡುಪಿ : ಅಷ್ಟಮಠಾಧೀಶರ ಪೈಕಿ ಹಿರಿಯ ಯತಿ ಪೇಜಾವರಶ್ರೀಗಳು ದಾಖಲೆ ಬರೆದಿದ್ದಾರೆ. ವಿಶ್ವೇಶತೀರ್ಥ ಶ್ರೀಪಾದರು ಐದನೇ ಬಾರಿಗೆ ಶ್ರೀಕೃಷ್ಣನ ಪೂಜಾಧಿಕಾರ ವಹಿಸಿಕೊಂಡರು. ಲಕ್ಷಾಂತರ ಮಂದಿ ಭಕ್ತರು ಪೇಜಾವರ ಪಂಚಮ ಪರ್ಯಾಯದಲ್ಲಿ ಪಾಲ್ಗೊಂಡು ಪುನೀತರಾದರು.
ಭಾವೀ ಪರ್ಯಾಯ ಪೀಠಾಧಿಪತಿ ವಿಶ್ವೇಶತೀರ್ಥರು ರಾತ್ರಿ 1.30 ರ ವೇಳೆಗೆ ಕಾಪುವಿನ ದಂಡತೀರ್ಥಕ್ಕೆ ತೆರಳಿದರು. ಪರ್ಯಾಯ ಪೀಠ ಏರುವ ಯತಿ ದಂಡತೀರ್ಥದಲ್ಲಿ ಮಿಂದೇಳಬೇಕೆಂಬೂದು ಸಂಪ್ರದಾಯವಿದೆ. ನಂತರ 3 ಗಂಟೆಗೆ ಪೇಜಾವರ ಶ್ರೀ ಸೇರಿದಂತೆ ಆರು ಮಂದಿ ಮಠಾಧೀಶರುಗಳು ಉಡುಪಿಯ ಜೋಡುಕಟ್ಟೆಗೆ ಆಗಮಿಸಿದರು. ಜೋಡುಕಟ್ಟೆಯ ಮುಖ ಮಂಟಪದಲ್ಲಿ ಪೇಜಾವರ ಮಠದ ರಾಮವಿಠಲ ದೇವರಿಗೆ ವಿಶೇಷ ಪೂಜೆ ನರವೇರಿಸಿ ಮಂಟಪದ ಮುಂದೆ ಯತಿವರೇಣ್ಯರು ವಿರಾಜಮಾನರಾದರು.
3. 10ಕ್ಕೆ ಸರಿಯಾಗಿ ಪರ್ಯಾಯ ಮೆರವಣಿಗೆ ಆರಂಭವಾಯಿತು. 10 ಟ್ಯಾಬ್ಲೋ, 25 ಜಾನಪದ ಕಲಾ ತಂಡಗಳು, ಭಜನಾ ತಂಡಗಳು, ಹೊರ ರಾಜ್ಯದ ಆಯ್ದ ಕಲಾಪ್ರಾಕಾರಗಳ ಪ್ರದರ್ಶನ ನಡೆಯಿತು.
ಮೆರವಣಿಗೆ ಹಿಂದೆ ಆರು ಮಂದಿ ಮಠಾಧೀಶರು ಪಲ್ಲಕ್ಕಿಯ ಮೆರವಣಿಗೆಯಲ್ಲಿ ಸಾಗಿದರು. ಪೇಜಾವರ ಸ್ವಾಮೀ, ಕೃಷ್ಣಾಪುರ ಶ್ರೀಗಳು, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ ಟ್ಯಾಬ್ಲೋದಲಿಟ್ಟ ಪಲ್ಲಕ್ಕಿಯಲ್ಲಿ ಕುಳಿತರು. ಕಳೆದ ಬಾರಿಯಂತೆ ಈ ಬಾರಿಯೂ ಶೀರೂರು ಸ್ವಾಮೀಜಿ ವಿಭಿನ್ನತೆ ಮೆರೆದರು. ಪಲ್ಲಕ್ಕಿಯಲ್ಲಿ ಗಣಪತಿಯನ್ನು ಇಟ್ಟು, ತಾನು ಸಿಂಹಾಸನದ ಮೇಲೆ ಕುಳಿತು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಸಂಪ್ರದಾಯ ಎಂದರೆ ಕಟ್ಟಾ ಸಂಪ್ರದಾಯ ಎಂದು ನಂಬಿಕೊಂಡು ಬಂದಿರುವ ಸೋದೆ ಸ್ವಾಮೀಜಿ ಮತ್ತು ಅದಮಾರು ಕಿರಿಯ ಸ್ವಾಮೀಜಿಯವರು ಮಾನವ ಹೊರುವ ಪಲ್ಲಕ್ಕಿಯನ್ನೇ ಏರಿದರು. ಕಳೆದ ಬಾರಿ ರಂಭಾಪುರಿ ಪ್ರಕರಣ ನಂತರ ತೆಗೆದುಕೊಂಡಿದ್ದ ನಿರ್ಧಾರವನ್ನು ಒಂದು ಬಾರಿ ಪಾಲಿಸಿ, ಈ ಸಾರಿ ಕೈಬಿಟ್ಟರು. ಮಾನವ ಹೊರುವ ಪಲ್ಲಕ್ಕಿಯಲ್ಲೇ ರಥಬೀದಿಗೆ ಸಾಗಿ ಬಂದರು.
ಸ್ವಾಮೀಜಿಗಳ ದಂಡು ಕೃಷ್ಣ ಮಠದ ರಥಬೀದಿಗೆ ಪ್ರವೇಶಿಸುತ್ತಿದ್ದಂತೆ ಭಕ್ತರು ಬಿಳಿಯ ಹಾಸನ್ನು ಹಾಸಿ ಬರಮಾಡಿದರು. ಬಿಳಿ ಬಟ್ಟೆಯ ಮೇಲೆ ನಡೆದು ಬಂದು ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು. ಚಂದ್ರಮೌಳೇಶ್ವರ, ಅನಂತೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆಗೈದರು. ಮಠದೊಳಗೆ ಕಾಣಿಯೂರು ಶ್ರೀ ಅಕ್ಷಯ ಪಾತ್ರೆ ಮತ್ತು ಅನ್ನದ ಸಟ್ಟುಗ ಹಸ್ತಾಂತರಿಸಿದರು. ಈ ಮೂಲಕ ಕೃಷ್ಣನ ಪೂಜಾಧಿಕಾರ ಪೇಜಾವರಶ್ರೀಗಳ ಪಾಲಾಗಿದೆ.
ಆನಂದತೀರ್ತ ಮಂಟಪದಲ್ಲಿ ವೈಭವದ ಪರ್ಯಾಯ ದರ್ಬಾರ್ ಕಾರ್ಯಕ್ರಮ ನಡೆಯಿತು. ಮಾಜಿ ಉಪಪ್ರಧಾನಿ ಎಲ್ಕೆ ಅಡ್ವಾಣಿ, ಸದಾನಂದ ಗೌಡ, ಸಚಿವೆ ಉಮಾಭಾರತಿ, ಅನಂತಕುಮಾರ್ ಸೇರಿದಂತೆ ರಾಜ್ಯ ಸಚಿವ ಯು. ಟಿ ಖಾದರ್, ವಿನಯ ಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು. ಪೇಜಾವರಶ್ರೀ ಐದನೇ ಪರ್ಯಾಯ ಮಾಡುವ ಮೂಲಕ ದಾಖಲೆ ಬರೆದರು. ಕೊಟ್ಟ ಮಾತಿನಂತೆ ಪುತ್ತಿಗೆಶ್ರೀಗಳು ಎಲ್ಲಾ ಸಾಂಪ್ರದಾಯಿಕ ವಿಧಿಗಳಿಂದ ದೂರ ಉಳಿದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.