ಉಡುಪಿ : ಪೇಜಾವರ ಶ್ರೀಗಳ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಲು ಉಡುಪಿ ನಗರಕ್ಕೆ ಪ್ರಪ್ರಥಮ ಬಾರಿಗೆ ರಾಜ್ಯ, ರಾಷ್ಟ್ರದ ಗಣ್ಯಾತಿಗಣ್ಯರ ದಂಡು ಬರಲಿದೆ. ಹೀಗಾಗಿ ಉಡುಪಿ ಜಿಲ್ಲಾ ಪೊಲೀಸರಿಗೆ ಈ ಬಾರಿಯ ಪರ್ಯಾಯದ ಭದ್ರತೆ ಕಠಿನ ಸವಾಲಾಗಿದ್ದು, ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ.1,300ಕ್ಕೂ ಅಧಿಕ ಪೊಲೀಸರು ಶ್ರೀಕೃಷ್ಣ ಮಠದ ಪರ್ಯಾಯ ಭದ್ರತೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಎಸ್ಪಿ ಅಣ್ಣಾಮಲೈ ಕೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಬಂದೋಬಸ್ತಿನಲ್ಲಿ ಉಡುಪಿ ಜಿಲ್ಲೆ ಸೇರಿದಂತೆ ದ.ಕ., ಮಂಗಳೂರು, ಚಿಕ್ಕಮಗಳೂರು, ಕಾರವಾರ ಹೀಗೆ 5 ಜಿಲ್ಲೆಗಳ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಎಸ್ಪಿ-2, ಡಿವೈಎಸ್ಪಿ-5, ಸಿಪಿಐ-16, ಆರ್ಪಿಐ-2, ಪಿಎಸ್ಐ-45, ಎಎಸ್ಐ-110, ಎಚ್ಸಿ/ಪಿಸಿ-780, ಮಹಿಳಾ ಪೊಲೀಸ್-96, ಹೋಂಗಾರ್ಡ್-284 ಹಾಗೂ 6 ಬಸ್ಸು ಕೆಎಸ್ಆರ್ಪಿ, 6 ಬಸ್ ಡಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. 22 ಕಡೆ ಪಾರ್ಕಿಂಗ್ ವ್ಯವಸ್ಥೆಗೊಳಿಸಲಾಗಿದೆ ಎಂದರು.
ಚೆಕ್ಪೋಸ್ಟ್ 24X7 : ವಾಹನ ತಪಾಸಣೆಗಾಗಿ 6 ಕಡೆ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಪರ್ಯಾಯದ ವೇಳೆ ದಿನದ 24 ಗಂಟೆಯೂ ವಾಹನ ತಪಾಸಣೆ ನಡೆಯಲಿದೆ.
ಮಾಸ್ಟರ್ ಕಂಟ್ರೋಲ್ ರೂಂ : ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ಸೇರಿದಂತೆ ರಥಬೀದಿ ಮತ್ತು ಡಯಾನಾ ಸರ್ಕಲ್ನಲ್ಲಿ ಪ್ರತ್ಯೇಕ 24X7 ಮಾಸ್ಟರ್ ಕಂಟ್ರೋಲ್ ರೂಂ ಸ್ಥಾಪಿಸಲಾಗುತ್ತದೆ.
ವಾಚ್ ಟವರ್; 75 ಸಿಸಿ ಟಿವಿ ಕೆಮರಾ : ಜ. 16, 17, 18ರಂದು ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಇಲಾಖೆ 75 ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಲಿದೆ. 10 ಕಡೆಗಳಲ್ಲಿ ಬೈನಾಕ್ಯುಲರ್ ವಾಚ್ ಟವರ್ ನಿರ್ಮಿಸಲಾಗುತ್ತದೆ. ಎತ್ತರದ ಕಟ್ಟಡದಲ್ಲಿ ಸ್ಕೈ ವಾಚ್ ಮಾಡಲಾಗುತ್ತದೆ.
ವಯೋವೃದ್ಧರು, ಅಂಗವಿಕಲರಿಗೆ ವ್ಯವಸ್ಥೆ : ವಯೋವೃದ್ಧರಿಗೆ ಮತ್ತು ಅಂಗವಿಕಲರಿಗೆ ಪಾರ್ಕಿಂಗ್ ಸ್ಥಳಗಳಿಂದ ಮಠಕ್ಕೆ ತೆರಳಲು ಪ್ರತ್ಯೇಕ ವಾಹನದ ವ್ಯವಸ್ಥೆಯನ್ನು ಮಠದವರು ಮಾಡಿದ್ದಾರೆ.
ಗಣ್ಯರು-ಝಡ್ ಪ್ಲಸ್ ಭದ್ರತೆ : ಸರಿಸುಮಾರು 42ಕ್ಕೂ (ಝಡ್, ಝಡ್+ ಭದ್ರತೆ ಇರುವ) ಅಧಿಕ ಗಣ್ಯಾತಿಗಣ್ಯರು ಜ. 17 ಅಥವಾ 18ರಂದು ಅವರೆಲ್ಲರೂ ಆಗಮಿಸಲಿದ್ದಾರೆ. ಇವರ ಭದ್ರತೆಗಾಗಿ ಉಡುಪಿ ನಗರದೊಳಗೆ ಸಂಪೂರ್ಣವಾಗಿ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಚಿಂತಿಸಲಾಗಿದೆ. ಗಣ್ಯರು ಪರ್ಯಾಯ ಮೆರವಣಿಗೆ ವೀಕ್ಷಣೆಗೆ ವ್ಯವಸ್ಥೆಗೊಳಿಸಲಾಗುತ್ತದೆ. ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಒಂದು ದಿನ ಸಹಕರಿಸಬೇಕು ಎಂದು ಎಸ್ಪಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.