ಉಡುಪಿ : ಸಂಜೆ ವೇಳೆ ರಥಬೀದಿಯಲ್ಲೊಂದು ಪ್ರದಕ್ಷಿಣೆ ಹಾಕುವ ಪರಿಪಾಠ ಉಡುಪಿ ಪರಿಸರದ ಬಹುತೇಕರದ್ದು. ಒಂದೊಮ್ಮೆ ಶ್ರೀಕೃಷ್ಣನ ದರ್ಶನ ಮಾಡದ ದಿನ ಬೇಕಾದರೂ ಇರಬಹುದು. ಆದರೆ ಕೆಲವರಿಗೆ ರಥಬೀದಿಯನ್ನು ಮಿಸ್ ಮಾಡಿಕೊಳ್ಳದ ದಿನ ಇರಲಿಕ್ಕಿಲ್ಲ! ಇಂತಹ ರಥಬೀದಿ ಈಗ ಮತ್ತಷ್ಟು ಕಳೆಗಟ್ಟಿದೆ. ಜನಜಂಗುಳಿ ದಿನೇ ದಿನೇ ಹೆಚ್ಚುತ್ತಿದೆ.
ಅಬಾಲವೃದ್ಧರಾದಿಯಾಗಿ ಎಲ್ಲ ವರ್ಗದವರನ್ನೂ ರಥಬೀದಿ ಸೆಳೆಯುತ್ತಿದೆ. ವಿದೇಶೀಯರ ದಂಡು ಕೂಡ ರಥಬೀದಿಯ ಸೊಬಗನ್ನು ಅನುಭವಿಸುತ್ತಿದೆ. ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿರುವ ಪೇಜಾವರ ಮಠ, ರಥಬೀದಿಯ ಪೂರ್ಣಪ್ರಜ್ಞ ಮಂಟಪದ ಸಾಂಸ್ಕೃತಿಕ ಕಾರ್ಯಕ್ರಮ, ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು – ಇವೆಲ್ಲವೂ ಭವ್ಯ, ಅನೂಹ್ಯ ಪರಿಸರವನ್ನೇ ಸೃಷ್ಟಿಸಿದಂತಿದೆ. ಸಂಜೆ ವೇಳೆಗೆ ಪೇಜಾವರ ಮಠ ಕೂಡ ಕಿಕ್ಕಿರಿಯುತ್ತಿದೆ. ಈ ನಡುವೆ ವಿದೇಶೀ ಪ್ರವಾಸಿಗರು ಉಡುಪಿಯತ್ತ ಆಗಮಿಸುತ್ತಿದ್ದಾರೆ. ವಿಶೇಷವೆಂದರೆ ರಾತ್ರಿ ನಡೆಯುವ ರಥೋತ್ಸವದಲ್ಲಿಯೂ ರಥ ಎಳೆದು ಪಾಲ್ಗೊಳ್ಳುತ್ತಿದ್ದೆ. ಹೊರೆಕಾಣಿಕೆ ಸಂಗ್ರಹಿಸುವ “ಉಗ್ರಾಣ’ ತುಂಬುವುದನ್ನೇ ಕಣ್ತುಂಬಿಸಿಕೊಳ್ಳುವ ಜನತೆ ಬಹಳಷ್ಟು.
ಜ.12ರಂದು ಸಂಜೆ 5.30ಕ್ಕೆ ರಥಬೀದಿ ಪೂರ್ಣಪ್ರಜ್ಞ ಮಂಟಪದಲ್ಲಿ ಬೆಳಗಾವಿಯ ಸದಾಶಿವ ನಾಟ್ಯ ಸಂಘದಿಂದ “ಶಿವಶಕ್ತಿ ಸಂವಾದ’ ಸಣ್ಣಾಟ, ಹೊರೆಕಾಣಿಕೆ ಸಂಗ್ರಹಣ ಆವರಣದ ವೇದಿಕೆಯಲ್ಲಿ ಮೂಡಬಿದಿರೆಯ ಕೆ.ವಿ.ರಮಣ್ ಅವರಿಂದ ಸಂಗೀತ ನೃತ್ಯ ನಡೆಯಲಿದೆ.
ಮದ್ಯಪಾನ ನಿಷೇಧ: ಕಾನೂನು, ಶಾಂತಿ, ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಜ. 16ರ ಮಧ್ಯರಾತ್ರಿಯಿಂದ ಜ.18 ರ ಮಧ್ಯರಾತ್ರಿಯವರೆಗೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮದ್ಯಪಾನ ನಿಷೇಧ ದಿನ (ಡ್ರೈ ಡೇಸ್) ಎಂದು ಜಿಲ್ಲಾಧಿಕಾರಿಯವರು ಘೋಷಿಸಿದ್ದಾರೆ. ಈ ಅವಧಿಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮತ್ತು ಕೆಎಸ್ಬಿಸಿಎಲ್ ಡಿಪೋಗಳನ್ನು ಮುಚ್ಚುವಂತೆ ಅವರು ಆದೇಶ ಹೊರಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.