ಮಂಗಳೂರಿನ ಸಮೀಪವಿರುವ ಪೊಳಲಿ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ, ಊರು, ರಾಜ್ಯ ಮತ್ತು ಹೊರರಾಜ್ಯದಲ್ಲಿರುವ ತುಳುವರು ಬಹಳ ಭಕ್ತಿಭಾವದಿಂದ ನಂಬಿಕೊಂಡು ಬಂದ ಪುಣ್ಯಕ್ಷೇತ್ರ ಇದು. ಇಲ್ಲಿ ವರ್ಷದಲ್ಲಿ ಒಂದು ತಿಂಗಳು ಇಡೀ ರಥೋತ್ಸವ ನಡೆಯುತ್ತದೆ. ಆ ಉತ್ಸವದ ಅಂತಿಮ ಹಂತದಲ್ಲಿ ನಡೆಯುವುದೇ ಚೆಂಡಾಟ.
ಫುಟ್ ಬಾಲ್ ಆಟವನ್ನ ನೀವೆಲ್ಲಾ ನೋಡಿಯೇ ಇರ್ತೀರಾ. ಆ ಆಟದಲ್ಲಿ ಹೆಚ್ಚು ಗೋಲುಗಳನ್ನ ಹೊಡೆದ ತಂಡವನ್ನ ವಿಜಯಿ ಆಂತ ಘೋಷಿಸಲಾಗುತ್ತದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿಯಲ್ಲೂ ಇಂಥದ್ದೇ ಒಂದು ಆಟ ನಡೆಯುತ್ತೆ. ಆದ್ರೆ ಇದು ಗೋಲುಗಳನ್ನ ಹೊಡೆದು ವಿಜಯ ಸಾಧಿಸೋ ಆಟವಲ್ಲ. ಬದಲಾಗಿ ಪೌರಾಣಿಕ ಹಿನ್ನೆಲೆಯಲ್ಲಿ ದೇವಿ ಚಂಡ-ಮುಂಡರ ರುಂಡ ಚೆಂಡಾಡಿದ ನೆನಪಿಗಾಗಿ ನಡೆಯೋ ಆಟ. ಹಾಗಿದ್ದರೆಬನ್ನಿ ಆ ಆಟಹೇಗಿರುತ್ತೆ ಅನ್ನೋದನ್ನು ತಿಳಯೋಣ…..
ವಿಶಾಲವಾದ ಒಣಗಿದ ಭತ್ತ ಬೆಳೆಯುವ ಗದ್ದೆ… ಹರಿದು ಬರುತ್ತಿರುವ ಜನಸಾಗರ… ಎಲ್ಲಿ ನೋಡಿದರೂ ಜನವೋ ಜನ… ಕಾಲ್ಚೆಂಡಿಗಾಗಿ ಯುವಕರ ಗುದ್ದಾಟ… ಇದು ದಕ್ಕಷಿಣ ಕನ್ನಡ ಜಿಲ್ಲೆ ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೆ ಅಂಗವಾಗಿ ನಡೆಯುವ ಚೆಂಡಿನ ಉತ್ಸವದ ನೋಟ. ಚೆಂಡಾಟಕ್ಕೆಂದೇ ಪ್ರತ್ಯೇಕವಾದ ಒಣಗಿ ಹೋದ ಭತ್ತದ ಗದ್ದೆಯನ್ನು ರೆಡಿ ಮಾಡಲಾಗಿರುತ್ತದೆ. ರಾಜರಾಜೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿ, ವಾದ್ಯ ಘೋಷಗಳೊಂದಿಗೆ ಚರ್ಮದಿಂದ ತಯಾರಿಸಲ್ಪಟ್ಟ ದೊಡ್ಡ ಗಾತ್ರದ ಚೆಂಡನ್ನು ನೆಲಕ್ಕೆ ಹಾಕಿ ಚೆಂಡಿನಾಟವನ್ನು ಆರಂಭಿಸಲಾಗುತ್ತದೆ. ಈ ಚೆಂಡನ್ನೇ ಕಾಲಿನಲ್ಲಿ ಒದೆಯುವುದೇ ಈ ಸ್ಪರ್ಧೆ. ಪ್ರತಿ ವರ್ಷ ನಡೆಯುವ ರಾಜರಾಜೇಶ್ವರಿ ಜಾತ್ರೆಯಲ್ಲಿ ಈ ಕಾಲ್ಚೆಂಡು ಉತ್ಸವ ಎಲ್ಲರ ಆಕರ್ಷಣೆ ಕೇಂದ್ರ ಬಿಂದು.
ಪೊಳಲಿ ಚೆಂಡು ಎಂದೇ ಪ್ರಸಿದ್ದಿ ಪಡೆದುಕೊಂಡಿರೋ ಪೊಳಲಿ ರಾಜರಾಜೇಶ್ವರಿ ದೇವಿಯ ಜಾತ್ರೆಯಲ್ಲಿ ನಡೆಯೋ ಆಟ ಇದು. ಎದೆಯಲ್ಲಿ ಧೈರ್ಯ ಮತ್ತು ತಾಕತ್ತು ಇದ್ದವರು ಮಾತ್ರ ಚೆಂಡಿನ ಗದ್ದೆಗೆ ಇಳಿಯಬೇಕು. ಯಾಕೆಂದರೆ ಕಾಲ್ಚೆಂಡು ಕಾದಾಟದ ವೇಳೆ ಕಾಲಿನಲ್ಲಿ ರಕ್ತ ಬರುವ ಸಾಧ್ಯತೆಯೂ ಇರುತ್ತೆ. ಹಾಗಾಗಿ ಮೊದಲೇ ಈ ಎಚ್ಚರಿಕೆ ಸಂದೇಶ ಕೊಡಲಾಗುತ್ತದೆ. ತಳ್ಳಾಟ, ನೂಕಾಟದ್ದೇ ಅಬ್ಬರ. ಯುವಕರು ಒಬ್ಬರ ಮೇಲೆ ಒಬ್ಬರು ಬಿದ್ದು ಚೆಂಡನ್ನು ಒದೆಯಲಿಕ್ಕೆ ಪ್ರಯತ್ನಿಸುವುದನ್ನು ನೋಡುತ್ತಿದ್ದರೆ ಯಾರಿಗೆ ಏನಾಗುತ್ತೋ ಏನೋ ಎಂಬ ಆತಂಕ ನೋಡಗರದ್ದು. ಇಂಥ ರೋಮಾಂಚನಕಾರಿ ಕ್ರೀಡೆ ನೋಡಲಿಕ್ಕೆ ಜನರು ಸಹ ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ.
ಆಟದ ವೇಳೆ ಚೆಂಡನ್ನು ಯಾವುದೇ ಕಾರಣಕ್ಕೂ ಕೈಯಲ್ಲಿ ಮುಟ್ಟಬಾರದು, ಕಾಲಿನಲ್ಲಿಯೇ ಒದೆಯಬೇಕು ಅನ್ನೋ ನಿಯಮ ಇದೆ. ಪೊಳಲಿಯ ಉತ್ತರ ಮತ್ತು ದಕ್ಷಿಣ ಎಂಬ ಎರಡು ಗ್ರಾಮಗಳನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಮಳಲಿ ಮತ್ತು ಅಮ್ಮುಂಜೆ ಗ್ರಾಮದವರ ನಡುವೆ ನಡೆಯುವ ಕಾದಾಟ ಇದು. ಎರಡು ಕಡೆ ನಿರ್ದಿಷ್ಟ ಸ್ಥಳ ನಿಗದಿ ಮಾಡಲಾಗಿರುತ್ತದೆ. ಈ ಎರಡು ತುದಿಯಲ್ಲಿ ಯಾವ ತುದಿ ಚೆಂಡು ಮುಟ್ಟುತ್ತೋ ಅವರೇ ಗೆದ್ದಂತೆ. ಗದ್ದೆಯ ಎಡ ಮಗ್ಗುಲಿಗೆ ಮುಟ್ಟಿದರೆ ಅಮ್ಮುಂಜೆಗೂ, ಬಲ ಮಗ್ಗುಲಿಗೆ ಮುಟ್ಟಿದರೆ ಮಳಲಿಗೂ ಜಯ ಎಂದು ಘೋಷಿಸಲಾಗುತ್ತದೆ. ಈ ರೀತಿ ಮೂರು ಬಾರಿ ಆಟ ನಡೆಯುತ್ತದೆ. ಇದರಲ್ಲಿ ಹೆಚ್ಚು ಬಾರಿ ಯಾರು ಚೆಂಡು ಮುಟ್ಟಿಸುತ್ತಾರೋ ಅವರೇ ಗೆದ್ದಂತೆ. ಅಂದ ಹಾಗೆ ಈ ಜಾತ್ರೆ ನಡೆಯುವುದು ಒಟ್ಟು 28ದಿನ. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗುವ ಈ ಜಾತ್ರೆಯ ಸ್ಪೆಷಾಲಿಟಿಯೇ ಈ ಚೆಂಡು ಉತ್ಸವ. ಈ ಚೆಂಡಿನ ಕಾದಾಟದಲ್ಲಿ ಪಾಲ್ಗೊಂಡ ಹಲವರಿಗೆ ಗಾಯಗಳಾಗಿದ್ದು ಉಂಟು. ದೇವಿಯಲ್ಲಿ ಪ್ರಾರ್ಥಿಸಿದರೆ ನೋವೆಲ್ಲಾ ಮಾಯವಾಗುತ್ತದೆ ಮತ್ತು ಗಾಯವೂ ಇರುದಿಲ್ಲ ಎನ್ನಲಾಗುತ್ತದೆ. ಹಾಗಂತೆ ಹೇಳುತ್ತಾರೆ ಸ್ಪರ್ಧೆಯಲ್ಲಿ ಪಾಲ್ಗೊಂಡವರು.
ಈ ಪೊಳಲಿ ಚೆಂಡು ಇತಿಹಾಸ ಪ್ರಸಿದ್ಧವಾದದ್ದು. ಈ ಆಟದ ಹಿಂದೆಯೂ ಒಂದು ಪೌರಾಣಿಕ ಕಥೆ ಇದೆ. ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಚಂಡ ಮುಂಡರೆಂಬ ಇಬ್ಬರು ರಾಕ್ಷಸರ ರಾಕ್ಷಸತನ ಹೆಚ್ಚಾಗಿತ್ತು. ಆಗ ರಾಜರಾಜೇಶ್ವರಿ ದೇವಿಯನ್ನು ಕಾಪಾಡು ತಾಯಿ ಎಂದು ಪ್ರಾರ್ಥಿಸಿದಾಗ ಚಾಮುಂಡೇಶ್ವರಿಯ ಅವತಾರ ತಾಳಿದ ದೇವಿ ಚಂಡ- ಮುಂಡರನ್ನು ಚೆಂಡನ್ನು ಚೆಂಡಾಡಿದಳಂತೆ ಎಂಬ ನಂಬಿಕೆ ಇದೆ.
ರಾಕ್ಷಸರನ್ನು ಸಂಹರಿಸಿದ ಹಿನ್ನೆಲೆಯಲ್ಲಿ ಚರ್ಮದಲ್ಲಿ ಮಾಡಲಾದ ಚೆಂಡನ್ನು ಕಾಲಿನಲ್ಲಿ ಒದೆಯುವ ಮೂಲಕ ವಿಜಯ ದಿನವನ್ನಾಗಿ ಇಲ್ಲಿನ ಜನರು ಆಚರಿಸುತ್ತಾರೆ. ಒಂದು ತಿಂಗಳ ಕಾಲ ನಡೆಯುವ ಈ ಜಾತ್ರೆಯ ಕಡೇ ಐದು ದಿನ ಪೊಳಲಿ ಚೆಂಡು ಆಟ ನಡೆಯುತ್ತೆ. ಅದರಲ್ಲೂ ಚೆಂಡಿನ ಆಟ ಮುಗಿಯುವುದು ಕೊನೆಯ ಅಂದರೆ ಐದನೇ ದಿನ. 14ಗ್ರಾಮಗಳ ಜನರು ಇದನ್ನು ನೋಡಲಿಕ್ಕೆ ಅಂತಾ ಬಂದಿರುತ್ತಾರೆ. ಮುಂದಿನ ಬಾರಿ ನೀವು ಕೂಡ ಆ ಸಂಪ್ರದಾಯದಲ್ಲಿ ಭಾಗವಹಿಸಲು ತಯಾರಾಗಿರುತ್ತಿರಿ. ಅಲ್ಲವೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.