ಜನವರಿ 9 ಮತ್ತು 10 ಅಮ್ಮ ಮಂಗಳೂರಿನಲ್ಲಿ ; ಅಮೃತ ಸಂಗಮ 2016-ಶ್ರೀ ಬ್ರಹ್ಮಸ್ಥಾನ ಮಹೋತ್ಸವ
ಮಂಗಳೂರು : ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಲ್ಲೋರ್ವರಾದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಂಗಳೂರಿಗೆ ಜನವರಿ 9 ರಂದು ಆಗಮಿಸಲಿರುವರು. ನಗರದ ಬೋಳೂರು ಸುಲ್ತಾನ್ ಬತ್ತೇರಿ ಬಳಿ ಇರುವ ಅಮೃತವಿದ್ಯಾಲಯಂ ಮೈದಾನದಲ್ಲಿ ಜನವರಿ 9 ಮತ್ತು 10 ರಂದು ಅಮ್ಮನವರ ಕಾರ್ಯಕ್ರಮ ಜರುಗಲಿದೆ. ಅಮ್ಮನವರು ದಿವ್ಯಾಲಿಂಗನದ ದರ್ಶನದ ಮೂಲಕ ಬಳಿ ಬಂದ ಭಕ್ತರ ಹೃದಯದಲ್ಲಿ ದಿವ್ಯಪ್ರೇಮದ ಚೈತನ್ಯವನ್ನು ತುಂಬಿ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಗೈದು ಕೋಟ್ಯಾಂತರ ಭಕ್ತರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ.
ಮಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಸಹಸ್ರಾರು ಭಕ್ತರ ಪಾಲಿಗೆ ಅಮ್ಮನವರ ಆಗಮನ ಹೃದಯಸ್ಪರ್ಶಿ ಅನುಭವವಾಗಲಿದೆ. ಭಕ್ತರ ಮನವಿಗೆ ಸ್ಪಂದಿಸಿ ಅಮ್ಮನವರು ಆಗಮಿಸಲಿದ್ದು ಬಳಿಬರುವ ಎಲ್ಲಾ ಭಕ್ತರನ್ನೂ ಅಪ್ಪಿ ಅನುಗ್ರಹಿಸಲಿರುವರು.
ಅಮ್ಮನವರಿಂದ ಪ್ರಾಣ ಪ್ರತಿಷ್ಠೆ ಮಾಡಲ್ಪಟ್ಟಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಬ್ರಹ್ಮಸ್ಥಾನ ಮಹೋತ್ಸವ ಹಾಗೂ ಅಮೃತಸಂಗಮ 2016 ಜರುಗಲಿದೆ. ದೇಶ, ಭಾಷೆ, ಜಾತಿ, ಜನಾಂಗ, ವರ್ಗ ವರ್ಣಗಳ ಭೇದವಿಲ್ಲದೆ ಎಲ್ಲರಿಗೂ ಪ್ರವೇಶಾವಕಾಶವಿರುತ್ತದೆ. ಇದಕ್ಕೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ ಮತ್ತು ಪಾಸ್ನ ಅಗತ್ಯವಿಲ್ಲ. ಸಕಾಲದಲ್ಲಿ ಸಭಾಂಗಣದಲ್ಲಿ ಆಸೀನರಾಗಿದ್ದರೆ ಅಮ್ಮನವರ ದರ್ಶನ ಎಲ್ಲರಿಗೂ ಲಭಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ವಾಗತ ಸಮಿತಿ :
ಅಮ್ಮನವರ ಸ್ವಾಗತಕ್ಕೆ ಸಕಲ ಸಿದ್ಧತೆಗಳಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.
ಅಮ್ಮನವರಿಗೆ ತುಳುನಾಡ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ. ಈ ಹಿಂದೆಯೂ ಕೂಡಾ ಸಹಸ್ರಾರು ಭಕ್ತರು ಅಮ್ಮನವರ ದರ್ಶನ ಭಾಗ್ಯ ಪಡೆಯಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದೇಶಿ ಭಕ್ತರ ಸಹಿತ ದೇಶದ ಬೇರೆ ಬೇರೆ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಅವರೆಲ್ಲರಿಗೂ ಅಮ್ಮನವರ ದರ್ಶನದ ವ್ಯವಸ್ಥೆ, ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಇತ್ಯಾದಿ ಸೇವಾ ಕಾರ್ಯಗಳಲ್ಲಿ ಸಮಿತಿಯು ಸಮರ್ಪಣಾ ಭಾವದೊಂದಿಗೆ ಶ್ರಮಿಸಲಿದೆ.
ಸ್ವಯಂ ಸೇವಕರ ನೋಂದಣಿ
ಅಮ್ಮನವರ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಗತ್ಯ ಸೇವೆಗೈಯಲು ಸೇವಾ ಮನೋಭಾವದ ಸ್ವಯಂ ಸೇವಕರ ಅಗತ್ಯವಿದ್ದು ಆಸಕ್ತರು ತಮ್ಮ ಭಾವ ಚಿತ್ರಗಳೊಂದಿಗೆ ನೋಂದಣಿ ಪತ್ರ ತುಂಬಿ ಸೇವೆಯ ಅವಕಾಶ ಪಡೆಯ ಬಹುದಾಗಿದೆ.
ಕಾರ್ಯಕ್ರಮ:
ಜನವರಿ 9, 10 ರಂದು ಶನಿವಾರ ಮತ್ತು ಭಾನುವಾರ 2 ದಿನ ಅಮ್ಮನವರ ಕಾರ್ಯಕ್ರಮವಿರುತ್ತದೆ.
ಎರಡೂ ದಿನಗಳಲ್ಲೂ ಬೆಳಿಗ್ಗೆ 7 ರಿಂದ ಧ್ಯಾನ, ಲಲಿತಾ ಸಹಸ್ರನಾಮ ಅರ್ಚನೆ, ಪೂಜೆ, ಪ್ರವಚನಗಳಿರುತ್ತವೆ.
ಅಮ್ಮನವರ ಸತ್ಸಂಗ ಕಾರ್ಯಕ್ರಮವು ಬೆಳಿಗ್ಗೆ ೧೦ಕ್ಕೆ ಪ್ರಾರಂಭಗೊಳ್ಳುತ್ತದೆ. ಅಮ್ಮನವರಿಂದ ಪ್ರವಚನ, ಭಜನೆ, ಧ್ಯಾನ ಹಾಗೂ ಅಮ್ಮ ತಮ್ಮ ದಿವ್ಯ ಪ್ರೇಮ ಮತ್ತು ಕರುಣೆ ತುಂಬಿದ ಹೃದಯದಿಂದ ತನ್ನ ಬಳಿಬಂದ ಪ್ರತೀಯೋರ್ವ ಭಕ್ತರಿಗೆ ದರ್ಶನ ನೀಡಿ ಅನುಗ್ರಹಿಸಲಿದ್ದಾರೆ. ಈ ಕಾರ್ಯಕ್ರಮ ತಡ ರಾತ್ರಿಯವರೆಗೂ ಮುಂದುವರಿಯುತ್ತದೆ.
ಭಕ್ತರಿಗೆ ಸೂಚನೆಗಳು:
ಅಮ್ಮ ಬರುವುದಕ್ಕೆ ಸಾಕಷ್ಟು ಮುಂಚಿತವಾಗಿ ಅಂದರೆ 9.30 ಗಂಟೆಯೊಳಗೆ ಬಂದಲ್ಲಿ ಕುಳಿತು ಕೊಳ್ಳಲು ಸ್ಥಳಾವಕಾಶ ಲಭ್ಯವಾಗುವುದರಿಂದ ದರ್ಶನದ ಟೋಕನ್ ಪಡೆಯಲು ಸುಲಭವಾಗುತ್ತದೆ. ಬೇಗ ಬಂದವರಿಗೆ ಟೈಮ್ ಕಾರ್ಡ್ ನೀಡಲಾಗುತ್ತದೆ. ಅಮ್ಮನವರು ಸತ್ಸಂಗ ಪ್ರಾರಂಭಗೊಳಿಸಿದ ನಂತರ ದರ್ಶನ ಟೋಕನ್ ವಿತರಿಸಲಾಗುತ್ತದೆ. ಟೈಮ್ ಕಾರ್ಡ್ ಪಡೆದವರಿಗೆ ಮೊದಲ ಆದ್ಯತೆಯ ದರ್ಶನದ ಟೋಕನ್ ನೀಡಲಾಗುತ್ತದೆ. ಸಂಜೆ ೬.೩೦ರ ನಂತರ ದರ್ಶನ ಟೋಕನ್ ನೀಡಲಾಗುವುದಿಲ್ಲ.
ಚಿಕ್ಕ ಮಕ್ಕಳ ಸಹಿತ ಎಲ್ಲರಿಗೂ ಅಮ್ಮನ ದರ್ಶನ ಪಡೆಯಲು ಟೋಕನ್ ಅತ್ಯಗತ್ಯ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಟೋಕನ್ ನೀಡಲಾಗುವುದು.
ಅಮ್ಮನವರ ಕಾರ್ಯಕ್ರಮದ ಪೂರ್ಣ ಫಲವನ್ನು ಪಡೆಯಲು ಅಮ್ಮನವರು ಪ್ರಾರಂಭದಲ್ಲಿ ಭಕ್ತರ ಹಿತ ದೃಷ್ಟಿಯಿಂದ ಸಂಕಲ್ಪ ಮಾಡುವಾಗ ಸಭಾಂಗಣದಲ್ಲಿ ಕುಳಿತಿರುವುದು ಶ್ರೇಯಸ್ಕರ.
ಆದಷ್ಟು ಪ್ರಶಾಂತ ವಾತಾವರಣವನ್ನು ಉಳಿಸಿಕೊಳ್ಳುವಲ್ಲಿ ಭಕ್ತರ ಸಹಕಾರ ಅತ್ಯಗತ್ಯ. ಈ ಪ್ರಶಾಂತತೆಯಲ್ಲಿ ಭಕ್ತಿಯಿಂದ ತಮ್ಮ ಮಂತ್ರೋಚ್ಛಾರ ಅಥವಾ ದೇವರ ನಾಮ ಸ್ಮರಣೆ ಮಾಡುವುದು ಅತ್ಯಂತ ಫಲಪ್ರದ.
ಆಗಮಿಸುವ ಎಲ್ಲಾ ಭಕ್ತರಿಗೂ ಅನ್ನ ಸಂತರ್ಪಣೆಯ ಮಹಾಪ್ರಸಾದ ಪಡೆಯಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಇರುತ್ತದೆ.
ಭಕ್ತರ ಮಹಾಪೂರ:
ಈ ಬಾರಿ ಶನಿವಾರ, ಭಾನುವಾರವಾಗಿರುವುದರಿಂದ ಪರವೂರಿನಲ್ಲಿ ನೆಲೆಸಿರುವ ಅಮ್ಮನ ಭಕ್ತರು ಅತ್ಯಂತ ಸ್ಪೂರ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಊರಿಗೆ ಆಗಮಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಅಮ್ಮನ ಸೇವಾ ಕಾರ್ಯ ಹಾಗೂ ದರ್ಶನ ಭಾಗ್ಯದ ಭಾವಪೂರ್ಣ ರೋಮಾಂಚನಕಾರಿ ಅನುಭವದ ಅಮೃತ ಘಳಿಗೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಮಂಗಳೂರಿನಲ್ಲಿ ಯಾವುದೇ ಜಾತಿ ಮತ ಧರ್ಮದ ಭೇದವಿಲ್ಲದೆ ಸರ್ವರೂ ಹಗಲಿರುಳು ಸಮರ್ಪಣಾ ಮನೋಭಾವದಿಂದ ಸೇವಾ ನಿರತರಾಗಿದ್ದಾರೆ.
ಸ್ವಚ್ಛತೆ: ಕಾರ್ಯಕ್ರಮದ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸರ್ವರ ಸಹಕಾರ ಅಗತ್ಯ.
ಅಮಲ ಭಾರತ ಅಭಿಯಾನ :ಸ್ವಚ್ಛತಾ ಜನ ಜಾಗರಣ ಯಜ್ಞದ ತಂಡ ಮತ್ತು ಸ್ವಯಂ ಸೇವಕರು ಸದಾ ಸೇವಾ ನಿರತರಾಗಿರುತ್ತಾರೆ.
ಕ್ಯಾಂಟೀನ್: ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರ ಅನುಕೂಲಕ್ಕಾಗಿ ವಿವಿಧ ಸ್ಟಾಲ್ ಹಾಗೂ ಕ್ಯಾಂಟೀನ್ ಸೌಲಭ್ಯವಿರುತ್ತದೆ.
ವೈದ್ಯಕೀಯ ಸೇವೆ: ಅಮೃತಾ ಮೆಡಿಕಲ್ ಕ್ಲಿನಿಕ್ ಮತ್ತು ಉಚಿತ ವೈದ್ಯಕೀಯ ಸೇವೆಯಲ್ಲಿ ಜಿಲ್ಲೆಯ ಜನತೆಯ ಪ್ರೀತಿಗೆ ಪಾತ್ರವಾದ ಸೇವಾ ವಿಭಾಗದ ವತಿಯಿಂದ ತುರ್ತು ಸೇವೆಗೆ ಅನುಕೂಲವಾಗುವಂತೆ ಸ್ಥಳದಲ್ಲಿ ವೈದ್ಯಕೀಯ ಸೇವೆ ಲಭ್ಯವಿರುತ್ತದೆ.
ಬಸ್ ಸೌಲಭ್ಯ: ಅಮ್ಮನದರ್ಶನ ಪಡೆದ ನಂತರ ವಿವಿಧ ಸ್ಥಳಗಳಿಗೆ ರಾತ್ರಿ ವೇಳೆಯಲ್ಲಿ ಬಸ್ ಸಂಚಾರವಿರುತ್ತದೆ.
ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ.
ವಿಚಾರಣಾ ಕೌಂಟರ್: ಕಾರ್ಯಕ್ರಮದ ಬಗ್ಗೆ, ವಿವಿಧ ವ್ಯವಸ್ಥೆಗಳ ಮಾಹಿತಿ ವಿಭಾಗ ವಿರುತ್ತದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0824-2457056, 8951470744 ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.