ಉಡುಪಿ: ಪರ್ಯಾಯೋತ್ಸವದ ಅಂಗವಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುರಪ್ರವೇಶ ಕಾರ್ಯಕ್ರಮ ಜ. 4ರಂದು ನಡೆಯಲಿದ್ದು, ಸುಮಾರು 80ಕ್ಕೂ ಅಧಿಕ ಕಲಾತಂಡದೊಂದಿಗೆ ಸರಿಸುಮಾರು 5 ಸಾವಿರ ಕಲಾವಿದರು ಪುರಪ್ರವೇಶ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್ ಹೇಳಿದ್ದಾರೆ.
ಸೋಮವಾರ ಸಂಜೆ 4 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಮೆರವಣಿಗೆ ಪ್ರಾರಂಭಗೊಳ್ಳಲಿದೆ. ಡಯಾನಾ ಸರ್ಕಲ್-ಕೆ.ಎಂ. ರಸ್ತೆ-ಸಂಸ್ಕೃತ ಕಾಲೇಜು ರಸ್ತೆಯಾಗಿ ಮೆರವಣಿಗೆ ಸಾಗಿ ರಥಬೀದಿ ಪ್ರವೇಶಿಸಲಿದೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ| ಎಂ. ಮೋಹನ ಆಳ್ವ ನಿರ್ದೇಶನ, ಮಾರ್ಗದರ್ಶನದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಹಿತ ವಿವಿಧೆಡೆಗಳ ಕಲಾತಂಡಗಳು ಮೆರವಣಿಗೆಯನ್ನು ಮೆರುಗುಗೊಳಿಸಲಿದೆ.
ಪರ್ಯಾಯ ಪೀಠವೇರುವ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪುರಪ್ರವೇಶದಲ್ಲಿ ಪಾಲ್ಗೊಂಡು ಶ್ರಿಕೃಷ್ಣ, ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವರ ದರ್ಶನ ಮಾಡಿದ ಬಳಿಕ ರಥಭೀದಿಯ ಶ್ರೀ ಪೂರ್ಣಪ್ರಜ್ಞ ಮಂಟಪದಲ್ಲಿ ನಡೆಯುವ ಸಭೆಯಲ್ಲಿ ಉಭಯ ಶ್ರೀಗಳಿಗೆ ಪೌರಸಮ್ಮಾನ ನಡೆಯಲಿದೆ.
ಪರ್ಯಾಯಕ್ಕೆ ಮೂವರು ಮುಖ್ಯಮಂತ್ರಿ
ಜ. 18ರ ಬೆಳಗ್ಗೆ 2.30ಕ್ಕೆ ಪರ್ಯಾಯ ಮೆರವಣಿಗೆ ನಡೆಯಲಿದೆ. ಪರ್ಯಾಯ ದರ್ಬಾರ್ ವೀಕ್ಷಣೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಮಹಾರಾಷ್ಟ್ರದ ಸಿಎಂ ಆಗಮಿಸಲಿದ್ದಾರೆ. ರಾಜ್ಯ, ಕೇಂದ್ರದ ಅನೇಕ ಸಚಿವರು ಕೂಡ ಪಾಲ್ಗೊಳ್ಳಲಿದ್ದಾರೆ.
ಆರೋಗ್ಯ ಮಳಿಗೆ, ಪಾರ್ಕಿಂಗ್, ಸ್ವಚ್ಛತೆ
ಪರ್ಯಾಯ ವೇಳೆ ಸಂಚಾರಕ್ಕೆ ತೊಡಕು ಉಂಟಾಗದಂತೆ ಪಾರ್ಕಿಂಗ್ಗೆ ಕೃಷ್ಣ ಮಠದ ಪಕ್ಕದಲ್ಲಿ 4 ಎಕರೆ ವಿಶಾಲ ಜಾಗ ಸೇರಿದಂತೆ ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪರ್ಯಾಯದ ಸಂದರ್ಭ ಮೂರು ಆರೋಗ್ಯ ಮಳಿಗೆಗಳನ್ನೂ ತೆರೆಯಲಾಗುತ್ತದೆ. ಎನ್ನೆಸ್ಸೆಸ್, ಸ್ವಚ್ಛಭಾರತ ಸ್ವಯಂಸೇವಕರು ಸ್ವಚ್ಚತೆ ನೋಡಿಕೊಳ್ಳಲಿದ್ದಾರೆ. ಅಲ್ಲಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಗುಜರಾತಿನಿಂದ ಮೊಬೈಲ್ ಟಾಯ್ಲೆಟ್ಗಳನ್ನು ತರಿಸಲಾಗಿದೆ. ಗಣ್ಯರಿಗೆ, ಸಾರ್ವಜನಿಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತದೆ. ವಸತಿ ವ್ಯವಸ್ಥೆಗೆ ಫ್ಲ್ಯಾಟ್, ಶಾಲೆ-ಕಾಲೇಜು ಹಾಗೂ “ನಮ್ಮ ಮನೆ ನಮ್ಮ ಅತಿಥಿ’ ವಿಶೇಷ ಕಾರ್ಯಕ್ರಮದಡಿ ವಿವಿಧ ಮನೆಗಳಲ್ಲಿ ಅತಿಥಿಗಳು ತಂಗಲು ವ್ಯವಸ್ಥೆ ಮಾಡಲಾಗುತ್ತಿದೆ.
ಮಾರ್ಗಕ್ಕೆ ಶ್ರೀಪಾದರ ಹೆಸರು
ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಗೌರವಾರ್ಥ ಕಲ್ಸಂಕದಿಂದ ವಾದಿರಾಜ ರಸ್ತೆಯ ಸಂಪರ್ಕ ಮಾರ್ಗಕ್ಕೆ ಪೇಜಾವರ ಶ್ರೀಗಳ ಹೆಸರು ಇಟ್ಟು ಅದರ ಲೋಕಾರ್ಪಣೆ ಜ. 4ರಂದು ನಡೆಯಲಿದೆ. ಜೊತೆಗೆ ಜ. 4 ರಿಂದ 24ರ ವರೆಗೂ ವಿವಿಧ ವೇದಿಕೆಗಳಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ, ಶ್ರೀಗಳ ಅಂಚೆಚೀಟಿ ಬಿಡುಗಡೆ, ಇದೇ ಮೊದಲ ಬಾರಿಗೆ ಪರ್ಯಾಯದಲ್ಲಿ ನಡೆಯಲಿರುವ ಪ್ರದರ್ಶನ, ಮಾರಾಟ ಮಳಿಗೆಗಳ ಉದ್ಘಾಟನೆಯೂ ನಡೆಯಲಿದೆ.
ಜ. 5ರಿಂದ ಹೊರೆ ಕಾಣಿಕೆ
ಜ. 5ರಿಂದ 16ರ ವರೆಗೆ ಪ್ರತಿದಿನ ಸಂಜೆ ಕರಾವಳಿ ಜಿಲ್ಲೆಗಳ ವಿವಿಧ ಭಾಗಗಳಿಂದ ಹೊರೆಕಾಣಿಕೆ ಶ್ರೀಮಠಕ್ಕೆ ಸಾಗಿ ಬರಲಿದೆ. ವಿಶೇಷವಾಗಿ ರಾಜ್ಯದ ಗಡಿ ಜಿಲ್ಲೆ ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು, ಕಲುºರ್ಗಿ ಕಡೆಯಿಂದ ಜ. 13ರಂದು ಹೊರೆಕಾಣಿಕೆ ಸಾಗಿ ಬರಲಿದೆ.
ಸಮಿತಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರತ್ನಕುಮಾರ್ ಈ ಮೇಲಿನ ವಿವರ ನೀಡಿದರು. ಶ್ರೀ ಪೇಜಾವರ ಮಠದ ದಿವಾನ ರಘುರಾಮಾಚಾರ್, ಕಾರ್ಯಾಧ್ಯಕ್ಷರಾದ ಭುವನೇಂದ್ರ ಕಿದಿಯೂರು, ಬಾಲಾಜಿ ರಾಘವೇಂದ್ರಾಚಾರ್ಯ, ಪ್ರಧಾನ ಕಾರ್ಯದರ್ಶಿಗಳಾದ ಹೆರಂಜೆ ಕೃಷ್ಣ ಭಟ್, ಪ್ರದೀಪ್ ಕುಮಾರ್ ಕಲ್ಕೂರ ಪತ್ರಿಕಾಗೋಷ್ಠಿಯಲ್ಲಿದ್ದರು.
ಜ. 4-24: ಸಾಂಸ್ಕೃತಿಕ ಮೆರುಗು
ಜ. 4ರಿಂದ 24ರ ವರೆಗೆ ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಲಿದೆ. ಜ. 4ರಿಂದ 17ರ ವರೆಗೆ ರಥಬೀದಿಯ ಶ್ರೀ ಪೂರ್ಣಪ್ರಜ್ಞ ಮಂಟಪ ಹಾಗೂ ಹೊರೆಕಾಣಿಕೆ ಸಂಗ್ರಹ ಆವರಣದ ಶ್ರೀ ಅಧೋಕ್ಷಜ ಮಂಟಪದಲ್ಲಿ, ಜ. 18ರಿಂದ 24ರ ವರೆಗೆ ಪರ್ಯಾಯ ದರ್ಬಾರ್ ನಡೆಯುವ ಮುಖ್ಯ ವೇದಿಕೆ ಶ್ರೀ ಆನಂದತೀರ್ಥ ಮಂಟಪದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯಲಿದೆ.
ಲಕ್ಷ ಊಟಕ್ಕೆ ತಯಾರಿ
ಪರ್ಯಾಯದ ಮುನ್ನಾ ದಿನ (ಜ. 17) ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ರಾತ್ರಿ ಪೇಜಾವರ ಶ್ರೀಗಳ ಅಧ್ಯಕ್ಷತೆಯಲ್ಲಿ ಕಾಣಿಯೂರು ಶ್ರೀಗಳಿಗೆ ನಾಗರಿಕ ಅಭಿನಂದನೆ ನಡೆಯಲಿದೆ. ಈ ಸಂದರ್ಭ ಪ್ರಪ್ರಥಮ ಬಾರಿಗೆ 1 ಲಕ್ಷ ಜನರಿಗೆ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.