ಆತ ಕೇವಲ 10ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದವನು. ಅವನ ಬಳಿ ಯಾವುದೇ ಆಸ್ತಿಗಳಿರಲಿಲ್ಲ, ಕೈಯಲ್ಲಿ ಕೆಲಸವೂ ಇರಲಿಲ್ಲ. ಕೆಲಸ ಹರಸಿ ಮುಂಬಯಿ ಬಂದವನ ಬಳಿ ಇದ್ದುದ್ದು 200 ರೂಪಾಯಿ ಮತ್ತು ಮತ್ತಿತರ ಅಗತ್ಯ ವಸ್ತುಗಳು ಮಾತ್ರ. ದುರಾದೃಷ್ಟವೆಂದರೆ ಅದನ್ನೂ ಬಾಂದ್ರಾ ಸ್ಟೇಶನ್ನಿನಲ್ಲಿ ದುಷ್ಕರ್ಮಿಗಳು ಲೂಟಿ ಮಾಡಿದರು. ಉಟ್ಟ ಬಟ್ಟೆಯನ್ನು ಹೊರತುಪಡಿಸಿ ಮತ್ತೇನೂ ಆತನ ಬಳಿ ಉಳಿಯಲಿಲ್ಲ.
ಅನುಮತಿ ನೀಡಲಾರರು ಎಂಬ ಭಯಕ್ಕೆ ಆತ ಮನೆಯರಿಗೂ ಹೇಳದೆ ಮುಂಬಯಿಗೆ ಬಂದಿದ್ದ. ಯಾವ ಕೌಶಲ್ಯವೂ ಇಲ್ಲದೇ, ಹಿಂದಿಯೂ ಬಾರದ ಈತನ ಸ್ಥಿತಿಯನ್ನು ಕಂಡ ತಮಿಳಿಗನೊಬ್ಬ ಈತನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಚೆನ್ನೈಗೆ ವಾಪಾಸ್ ಹೋಗುವ ಟಿಕೆಟ್ಗೆ ಹಣ ಅರೇಂಜ್ ಮಾಡಿದ.
ಆದರೆ ಮುಂಬಯಿ ನನ್ನ ಭವಿಷ್ಯ ಬದಲಿಸುತ್ತದೆ ಎಂದು ದೃಢವಾಗಿ ನಂಬಿದ್ದ ಆತ ಚೆನ್ನೈಗೆ ವಾಪಾಸ್ಸಾಗಲಿಲ್ಲ. ಬದಲಿಗೆ ತಿಂಗಳಿಗೆ 150 ರೂಪಾಯಿ ವೇತನ ಪಡೆದು ಮಹಿಮಾ ಬೇಕರಿಯಲ್ಲಿ ಪಾತ್ರೆ ತೊಳೆಯುವ ಕಾಯಕ ಮಾಡಿದ. ಆಗ ಆತನ ವಯಸ್ಸು ಬರೀ 17 ವರ್ಷ.
ಬಳಿಕ ವಿವಿಧ ರೆಸ್ಟೋರೆಂಟ್ಗಳಲ್ಲಿ ಜೀವನ ನಡೆಸುವ ಸಲುವಾಗಿ ಪಾತ್ರೆ ತೊಳೆದ. 2 ವರ್ಷಗಳಲ್ಲಿ ಒಂದಿಷ್ಟು ಹಣ ಸಂಪಾದನೆ ಮಾಡಿದ. ಅದೇ ಹಣದಿಂದ ಇಡ್ಲಿ ಮಾರಾಟ ಮಾಡುವ ತನ್ನದೇ ಆದ ಪುಟ್ಟ ವ್ಯಾಪಾರವೊಂದನ್ನು ಆರಂಭಿಸಿದ. ತಿಂಗಳಿಗೆ 150.ರೂ ಬಾಡಿಗೆ ತೆತ್ತು ಹ್ಯಾಂಡ್ಕಾರ್ಟ್ವೊಂದನ್ನು ತೆಗೆದುಕೊಂಡ, ಪಾತ್ರೆ ಪಗಡೆ, ಸ್ಟವ್ ಖರೀದಿಗೆ 1 ಸಾವಿರ ವ್ಯಯಿಸಿದ. 1992ರಲ್ಲಿ ವಾಶಿ ರೈಲ್ವೇ ಸ್ಟೇಶನ್ನಿನಲ್ಲಿ ಆತನ ಈ ವ್ಯಾಪಾರ ಆರಂಭವಾಯಿತು.
ವ್ಯಾಪಾರದಲ್ಲಿ ತುಸು ಪ್ರಗತಿ ಕಾಣುತ್ತಿದ್ದಂತೆ ಕೆಲಸಕ್ಕೆ ಜನರ ಅಗತ್ಯ ಬಿತ್ತು, ಅದಕ್ಕಾಗಿ ಊರಿನಲ್ಲಿನ ತಮ್ಮಿಬ್ಬರು ಸಹೋದರರನ್ನು ತನ್ನ ಬಳಿ ಕರೆಸಿಕೊಂಡ. ತನ್ನ ವ್ಯಾಪಾರದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ ಮತ್ತು ತಿಂಡಿ ತಯಾರಿಸುವ ವೇಳೆ ಕ್ಯಾಪ್ ಧರಿಸುವುದನ್ನು ರೂಢಿಸಿಕೊಂಡ. ಬೀದಿ ಬದಿ ವ್ಯಾಪಾರಿಗರು ನೈರ್ಮಲ್ಯಕ್ಕೆ ಇಷ್ಟೊಂದು ಪ್ರಾಸಸ್ತ್ಯ ನೀಡುವುದನ್ನು ಕಂಡು ಜನ ನಿಬ್ಬೆರಗಾದರು. ಅಲ್ಲದೇ ಆತನ ಅಂಗಡಿಗೇ ಹೆಚ್ಚೆಚ್ಚು ಬರಲಾರಂಭಿಸಿದರು.
ಲೈಸೆನ್ಸ್ ಸಿಗದ ಹಿನ್ನಲೆಯಲ್ಲಿ ಈತನ ಕಾರ್ಟ್ನ್ನು ಸ್ಥಳಿಯ ಆಡಳಿತ ಸಾಕಷ್ಟು ಬಾರಿ ವಶಪಡಿಸಿಕೊಂಡಿತ್ತು, ಅದಕ್ಕಾಗಿ ಆಗಾಗ ದಂಡವನ್ನೂ ತೆರಬೇಕಾಯಿತು. ಬಳಿಕ 50 ಸಾವಿರ ಹಣ ಒಟ್ಟುಗೂಡಿಸಿ ಅದರಿಂದ ಲೀಸ್ಗೆ ಒಂದು ಅಂಗಡಿಯನ್ನು ಪಡೆದ. ಈತನ ಗ್ರಾಹಕರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು, ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿದ ಈತ ಅವರಿಂದ ಇಂಟರ್ನೆಟ್ ಬಳಕೆಯನ್ನು ಕಲಿತ. ಆ ಮೂಲಕ ವಿವಿಧ ರೆಸಿಪಿಗಳ ಹುಡುಕಾಟ ನಡೆಸಿದ. 26 ವಿಧದ ದೋಸೆ ಮಾಡುವುದನ್ನು ಕಲಿತ. 2002ರ ವೇಳೆಗೆ ಈತನ ರೆಸ್ಟೋರೆಂಟ್ನಲ್ಲಿ 202 ವಿಧದ ದೋಸೆಗಳು ತಯಾರಾದವು. ಇವನ್ನು ತಿನ್ನಲು ಗ್ರಾಹಕರು ಮುಗಿಬಿದ್ದರು.
ಮಾಲ್ನಲ್ಲಿ ಔಟ್ಲೆಟ್ ತೆರೆಯಬೇಕೆಂಬ ತನ್ನ ಕನಸನ್ನು ನನಸು ಮಾಡಲು ವಿವಿಧ ಮಾಲ್ಗಳಲ್ಲಿ ಅಡ್ಡಾಡಿದ. ಅವೆಲ್ಲವೂ ಮ್ಯಾಕ್ ಡೊನಾಲ್ಡ್ನಂತಹ ಬ್ರ್ಯಾಂಡ್ಗಳಿಗೆ ಮಣೆ ಹಾಕುತ್ತವೆಯೇ ಹೊರತು ಬಡಪಾಯಿಯ ರೆಸ್ಟೋರೆಂಟ್ಗಳಿಗಿಲ್ಲ. ಆದರೆ ವಾಶಿಯ ಸೆಂಟರ್ ಒನ್ ಮಾಲ್ನಲ್ಲಿ ಔಟ್ಲೆಟ್ ತೆರೆಯುವ ಭಾಗ್ಯ ಕೊನೆಗೂ ಆತನಿಗೆ ಸಿಕ್ಕಿತು. ಈ ಮಾಲ್ನ ಮ್ಯಾನೇಜರ್ಗಳು ಈತನ ರೆಸ್ಟೋರೆಂಟ್ ಗ್ರಾಹಕರಾದ ಕಾರಣ ಅವನಿಗೆ ಈ ಅವಕಾಶ ದೊರೆಯಿತು. ಈತನ ಮಾಲ್ನಲ್ಲಿನ ಔಟ್ಲೆಟ್ ಭಾರೀ ಯಶಸ್ಸು ಕಂಡಿತು. ಬ್ಯುಸಿನೆಸ್ ಫ್ರಾಂಚೈಸಿಗಳಿಂದಲೂ ಈತನಿಗೆ ಆಫರ್ ಬಂದವು. ಎಲ್ಲಾ ಇನ್ಗ್ರೀಡಿಯಂಟ್ಸ್ ಅವರೇ ಒದಗಿಸಬೇಕು ಎಂಬ ಕಂಡಿಷನ್ ಮೇರೆಗೆ ಆತ ಆಫರ್ ಒಪ್ಪಿಕೊಂಡ.
ನೋಡು ನೊಡುತ್ತಿದ್ದಂತೆಯೇ ವ್ಯಾಪಾರ ಎತ್ತರಕ್ಕೆ ಏರಿತು, ಈತನೂ ಕೋಟ್ಯಾಧಿಪತಿಯಾದ. 2012ರ ವೇಳೆಗೆ ದೇಶದ 11 ರಾಜ್ಯಗಳಲ್ಲಿ ಆತನ 45 ರೆಸ್ಟೋರೆಂಟ್ಗಳು ಶುಭಾರಂಭ ಮಾಡಿದವು, ಪ್ರಸ್ತುತ ನ್ಯೂಜಿಲ್ಯಾಂಡ್, ದುಬೈ, ಮಸ್ಕತ್ನಲ್ಲೂ ಆತನ ರೆಸ್ಟೋರೆಂಟ್ಗಳಿವೆ.
ಇಷ್ಟೆಲ್ಲಾ ಸಾಧಿಸಿದ ಆ ವ್ಯಕ್ತಿ ಯಾರೂ ಎಂಬ ಕುತೂಹಲವಿದೆಯೇ?
ಅವರು ಬೇರೆ ಯಾರೂ ಅಲ್ಲ ಮಹಾನಗರಗಳಲ್ಲಿ ಕಾಣ ಸಿಗುವ ದೋಸೆ ಪ್ಲಾಝಾದ ಮಾಲೀಕ ಪ್ರೇಮ್ ಗಣಪತಿ. 1990ರಲ್ಲಿ ಬರಿಗೈಯಲ್ಲಿ ಬಾಂದ್ರಾ ಸ್ಟೇಶನ್ನಿನಲ್ಲಿ ನಿಂತಿದ್ದ ಈ ವ್ಯಕ್ತಿ 2012ರ ವೇಳೆಗೆ 30 ಕೋಟಿಯ ಒಡೆಯನಾದ, ತನ್ನದೇ ಆದ ಬ್ರ್ಯಾಂಡ್ ಸೃಷ್ಟಿಸಿದ. ಇವರ ದೋಸೆ ಪ್ಲಾಝಾ ಭಾರತ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧಿಯನ್ನು ಪಡೆದಿದೆ. ಇದು ಈಗ ದಕ್ಷಿಣ ಭಾರತದ ಆಹಾರಪದ್ಧತಿಯನ್ನು ಒಳಗೊಂಡ ಅತೀ ವೇಗದಲ್ಲಿ ಬೆಳೆಯುತ್ತಿರುವ ಫುಡ್ ಚೈನ್ ಎಂಬ ಖ್ಯಾತಿಯನ್ನು ಪಡೆದಿದೆ.
ಮನಸ್ಸಲ್ಲಿ ಛಲವಿದ್ದರೆ, ಸವಾಲನ್ನು ಎದುರಿಸುವ ಧೈರ್ಯವಿದ್ದರೆ, ಕಷ್ಟಪಟ್ಟು ದುಡಿಯುವ ಉತ್ಸಾಹವಿದ್ದರೆ ಶೂನ್ಯದಿಂದಲೇ ಕೋಟಿಯನ್ನು ಸಂಪಾದಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಪ್ರೇಮ್ ಗಣಪತಿ. ಉದ್ಯಮವನ್ನು ಆರಂಭಿಸುವ ಪ್ರತಿಯೊಬ್ಬರಿಗೂ ಇವರ ಕಥೆ ಸ್ಫೂರ್ತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.