ಬೆಳ್ತಂಗಡಿ : ರಾಜ್ಯದ ಕಾಂಗ್ರೇಸ್ ಸರಕಾರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಮಾಜಿ ಸಚಿವ, ಬಿಜೆಪಿ ವಿಧಾನಪರಿಷತ್ ದ.ಕ.ಜಿಲ್ಲಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.ಅವರು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮೂಲಕ ವಿಧಾನಪರಿಷತ್ ಚುನಾವಣೇಯಲ್ಲಿ ಗೆಲ್ಲಿಸುವಂತೆ ಸ್ಥಳೀಯ ಸಂಸ್ಥೆಗಳ ಮತದಾರರಲ್ಲಿ ಮನವಿ ಮಾಡಿದರು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ಗಳ ಸಬಲೀಕರಣಕ್ಕೆ, ಪಂಚಾಯತ್ ಸದಸ್ಯರ ಹಕ್ಕುಗಳಿಗಾಗಿ, ಅವರ ಗೌರವ ಧನ ಹೆಚ್ಚಿಸಲು ಬಿಜೆಪಿ ಪಕ್ಷ ಸತತವಾಗಿ ವಿಧಾನ ಪರಿಷತ್ತಿನಲ್ಲಿ ಪ್ರಯತ್ನಿಸಿದೆ. ರಾಜ್ಯದ ಕಾಂಗ್ರೇಸ್ ಸರಕಾರವು ಪಂಚಾಯತ್ಗಳಿಗೆ ಶಾಸನಬದ್ದ ಅನುವಾದವನ್ನೂ ನೀಡುತ್ತಿಲ್ಲ. ಹಣಕಾಸು ಆಯೋಗದ ಧನವನ್ನು ನೀಡುತ್ತಿಲ್ಲ. ಪಂಚತಂತ್ರದ ವಿಭಜನೆ ಮಾಡುತ್ತಿಲ್ಲ. ಈಗೀನ ಸರಕಾರ ಹೊಸತಾಗಿ 449 ಗ್ರಾಮ ಪಂಚಾಯತ್ಗಳು ರಚನೆಯಾಗಿದ್ದರೂ ಕಟ್ಟಡ ಇಲ್ಲ. ಇರುವ ಕಟ್ಟಡದಲ್ಲಿ ಪೀಠೋಪಕರಣಗಳನ್ನು ಒದಗಿಸಿಕೊಟ್ಟಿಲ್ಲ. ಒಟ್ಟಾರೆ ಆಡಳಿತ ವ್ಯವಸ್ಥೆಯೇ ಕುಸಿದು ಬಿದ್ದಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಸ್ಥಳೀಯಾಡಳಿತಕ್ಕೆ ನಿರಂತರ ರಕ್ಷಣೆ ಒದಗಿಸುತ್ತಾ ಬಂದಿದೆ. ಗ್ರಾ.ಪಂ.ಗಳಿಗೆ ನೂರು, ಇನ್ನೂರು, ಇನ್ನೂರ ಐವತ್ತರ ತನಕ ಮನೆಗಳನ್ನು ನೀಡಿದೆ. ಮನೆಕಟ್ಟಲು 11,000 ಆದಾಯದ ಮಿತಿ ಇದ್ದದ್ದನ್ನು 32,000 ಕ್ಕೆ ಮಾಡಿದೆ. ಆದರೆ ಇಂದು ಮನೆಕಟ್ಟಲು ಮೀಸಲಾತಿ ತಂದಿದ್ದಾರೆ. ಹತ್ತೋ ಹನ್ನೆರಡೋ ಮನೆಗಳನ್ನು ಮಾತ್ರ ನೀಡುತ್ತಿದೆ. ಆದರೆ ಅದಕ್ಕೆ ಬೇಕಾದ ಹಣವನ್ನೇ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಅಧಿಕಾರ ವಿಕೇಂದ್ರಿಕರಣದ ವ್ಯವಸ್ಥೆಯೇ ಕುಂಠಿತವಾಗುತ್ತಿದೆ ಎಂದರು.
ಪಕ್ಷ ಈ ಬಾರಿಯೂ ನನ್ನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ. ಗೆಲ್ಲುವ ಪೂರ್ಣ ವಿಶ್ವಾಸವನ್ನು ಹೊಂದಿದ್ದೇನೆ ಎಂದರು. ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಮಾತನಾಡಿ, ರಾಜ್ಯದ ಕಾಂಗ್ರೇಸ್ ಸರಕಾರ ಬೇಡದ್ದನ್ನು ಮಾಡಲು ಹೊರಟು ಗೊಂದಲ ಸೃಷ್ಟಿಸುತ್ತಿದೆ. ಜನರ ಭವಿಷ್ಯದ ಬಗ್ಗೆ ಚಿಂತಿಸುವ ಬದಲು ಯಾವುದೋ ಭವಿಷ್ಯ, ರಾಶಿಫಲಗಳ ಬಗ್ಗೆ ಆಲೋಚಿಸಿ ಜನರ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತಿದೆ ಎಂದ ಅವರು ಮತದಾರರ ಪ್ರಥಮ ಪ್ರಾಶಸ್ತ್ಯದ ಮತವನ್ನು ಮಾತ್ರ ಕೋಟ ಶ್ರೀನಿವಾಸ ಪೂಜಾರಿಯವರಿಗೆ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಶಾ ತಿಮ್ಮಪ್ಪ ಗೌಡ, ಸದಸ್ಯ ಕೊರಗಪ್ಪ ನಾಯ್ಕ, ಯುವ ಮೊರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ, ಪಕ್ಷದ ತಾಲೂಕಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೀತಾರಾಮ, ಎಸ್.ಟಿ.ಮೋರ್ಚಾ ಅಧ್ಯಕ್ಷ ರಾಘವ ಎಚ್., ರೈತ ಮೋರ್ಚಾದ ಅಧ್ಯಕ್ಷ ಭಾಸ್ಕರ ಸಾಲಿಯಾನ್, ಜಿಲ್ಲಾ ಕಾರ್ಯದರ್ಶಿ ಶಾರದಾ ರೈ, ಮುಖಂಡರಾದ ವಸಂತ ಜೆ., ನಾರಾಯಣ ಆಚಾರ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.