ಕೃಷಿ ಬದುಕಿನಿಂದ ರೈತಾಪಿ ವರ್ಗ ವಿಮುಖವಾಗುತ್ತಿರುವುದರ ಸಂಕೇತವೇ ಭತ್ತದ ಫಸಲು ತೀವ್ರ ಇಳಿಮುಖವಾಗುತ್ತಿರುವುದು. ಇದು ಕೇವಲ ಭತ್ತದ ವಿಷಯವಲ್ಲ. ರೈತ ಕುಟುಂಬಗಳು ತಮ್ಮ ಮುಂದಿನ ಪೀಳಿಗೆಗೆ ಕೃಷಿಯನ್ನು ಮುಂದುವರೆಸಿಕೊಂಡು ಹೋಗುವುದರ ಬಗ್ಗೆ ನಿರಾಸಕ್ತಿ ತಳೆಯುತ್ತಿರುವುದು ಕೂಡ ಭಾರತದ ಪಾಲಿಗೆ ಒಳ್ಳೆಯ ಲಕ್ಷಣವಲ್ಲ. ಅಂತಹ ಪರಿಸ್ಥಿತಿಯ ನಡುವೆ ರೈತನೊಬ್ಬ ಸಾವಯವ ಕೃಷಿಯನ್ನು ಮಾಡಿ ದೇಶಕ್ಕೆ ಮಾದರಿಯಾಗುತ್ತಿರುವುದು ನಿಜಕ್ಕೂ ಅಪರೂಪ ಮತ್ತು ಗೌರವಿಸಬೇಕಾದ ಸಂಗತಿ. ಅಷ್ಟಕ್ಕೂ ಸಾವಯವ ಕೃಷಿ ಮಾಡುವುದಕ್ಕೆ ಕೃಷಿಕರು ಯಾಕೆ ಮನಸ್ಸು ಮಾಡುತ್ತಿಲ್ಲ ಎನ್ನುವ ಪ್ರಶ್ನೆಯೇ ನಮಗೆ ಪೆಡಂಭೂತವಾಗಿ ಕಾಡುತ್ತಿದೆ.
ರೈತರ ಪ್ರಕಾರ ಸಾವಯವ ಕೃಷಿ ಮಾಡಲು ಹೆಚ್ಚು ಕೂಲಿಕಾರರು ಬೇಕಾಗುತ್ತಾರೆ. ಇವತ್ತಿನ ದಿನಗಳಲ್ಲಿ ಕೃಷಿ ಕೆಲಸಕ್ಕೆ ಜನರು ಸಿಗುವುದೇ ಕಡಿಮೆ, ಹಾಗಿರುವಾಗ ಕೂಲಿಕಾರರಿಗೆ ಹೆಚ್ಚಿನ ಕೂಲಿಯ ಡಿಮಾಂಡ್ ಬೇರೆ ಇದೆ. ಅದನ್ನು ಪೂರೈಸಿ ಮತ್ತು ಸಾವಯವ ಕೃಷಿಗೆ ಬೇಕಾದ ಉತ್ಕೃಷ್ಟ ಗುಣಮಟ್ಟದ ಗೊಬ್ಬರ ಹಾಗೂ ಇತರ ಕಚ್ಚಾ ಪದಾರ್ಥಗಳನ್ನು ಒದಗಿಸಿ ಫಸಲು ತೆಗೆಯುವುದು ತ್ರಾಸದಾಯಕ. ಅದರ ಬದಲಿಗೆ ಸರಕಾರ ಸಬ್ಸಿಡಿ ದರದಲ್ಲಿ ಕೊಡುವ ಮತ್ತು ಮಾರ್ಕೆಟ್ನಲ್ಲಿ ಸುಲಭವಾಗಿ ವಿಕ್ರಯಿಸಲ್ಪಡುವ ರಾಸಾಯನಿಕ ಕಚ್ಚಾ ವಸ್ತುಗಳನ್ನು ಬಳಸಿ ಕೃಷಿಗೆ ಬಳಸಿದರೆ ಅದರಿಂದ ಸುಲಭವಾಗಿ ಫಸಲನ್ನು ಪಡೆಯಬಹುದು ಎನ್ನುವುದಕ್ಕೆ ರೈತ ಒಗ್ಗಿಕೊಂಡಿದ್ದಾನೆ.
ಆದ್ದರಿಂದ ಸಾವಯವ ಕೃಷಿಗೆ ರೈತ ಅಷ್ಟು ಸುಲಭವಾಗಿ ಮನಸ್ಸು ಮಾಡುತ್ತಿಲ್ಲ. ರೈತ ರಾಸಾಯನಿಕ ಕೃಷಿಗೆ ಹೆಚ್ಚು ಒತ್ತು ಕೊಡುವುದರಿಂದ ಆಗುವ ಮೊದಲ ದುಷ್ಪರಿಣಾಮವೇ ರೋಗಗಳ ಪ್ರಮಾಣ ಹೆಚ್ಚಾಗುತ್ತಿರುವುದು. ಈಗ ಪ್ರಪಂಚದಲ್ಲಿ ಹೆಚ್ಚಾಗುತ್ತಿರುವ ಕಾಯಿಲೆಗೆ ರಾಸಾಯನಿಕ ಕೃಷಿ ಪದ್ಧತಿಯೇ ಕಾರಣ. ಎಲ್ಲಿಯ ತನಕ ಅಂದರೆ ಹುಟ್ಟುತ್ತಿರುವ ಮಕ್ಕಳಲ್ಲೇ ಅದರ ಪ್ರಭಾವ ಕಾಣಿಸಿಕೊಳ್ಳುತ್ತದೆ. ಸಂಶೋಧಕರ ಪ್ರಕಾರ ತಾಯಿಯ ಎದೆಹಾಲು ಕೂಡ ಈಗ ಪರಿಶುದ್ಧವಾಗಿ ಉಳಿದಿಲ್ಲ. ಕಾರಣ ಅವರು ಸೇವಿಸುತ್ತಿರುವ ಆಹಾರದಲ್ಲಿ ಕಂಡುಬರುತ್ತಿರುವ ರಾಸಾಯನಿಕ ಬಳಕೆಯ ಪ್ರಮಾಣ. ಗಂಡಸರಲ್ಲಿ ಸಂತಾನೋತ್ಪತ್ತಿಯ ಪ್ರಮಾಣ ಕೂಡ ಕುಸಿಯುತ್ತಿರುವುದು ಇದೇ ಕಾರಣಕ್ಕೆ.
ಇದನ್ನೆಲ್ಲಾ ತಡೆಯಲು ಏನು ಮಾಡಬೇಕು? ಮೊಟ್ಟ ಮೊದಲನೇಯದಾಗಿ ರೈತ ಪ್ರಯೋಗಗಳನ್ನು ಮಾಡಲು ಮುಂದಾಗಬೇಕು. ಎಷ್ಟೇ ಶ್ರಮವಾಗಲಿ, ರಾಸಾಯನಿಕ ಪದಾರ್ಥಗಳನ್ನು ಬಿಟ್ಟು ಸಾವಯವ ಕೃಷಿ ಮಾಡಲು ಮುಂದಾಗಬೇಕು. ಅದರಿಂದ ಆಗುವ ಮೊದಲ ಲಾಭ ಭೂಮಿ ಮುಂದಿನ ಪೀಳಿಗೆಗೂ ಜೀವಂತವಾಗಿ ಉಳಿಯುತ್ತದೆ. ನಮ್ಮ ತಲೆಮಾರಿಗೆ ಆದರೆ ಸಾಕು, ಮುಂದಿನ ಪೀಳಿಗೆಗೆ ನಾವ್ಯಾಕೆ ಚಿಂತಿಸಬೇಕು ಎನ್ನುವ ವಿಷಯವೇ ಅಪಾಯಕಾರಿ. ರೈತ ಆ ಬಗ್ಗೆ ಯೋಚಿಸುವುದಿಲ್ಲ ಎನ್ನುವುದು ಸತ್ಯ. ಆದರೆ ರಾಸಾಯನಿಕ ಕೃಷಿಯನ್ನೇ ಆತ ಮಾಡುತ್ತಿದ್ದರೆ ಆತ ಇಂಚಿಂಚಾಗಿ ಭೂಮಿಯ ಫಲವತ್ತಿಗೆಯನ್ನು ಕೊಲ್ಲುತ್ತಿದ್ದಾನೆ ಎಂದೇ ಅರ್ಥ. ಅದರ ಪರಿಣಾಮ ಭೂಮಿಯ ಜೀವಂತಿಕೆ ನಾಶವಾಗುತ್ತಾ ಬರುತ್ತದೆ. ಮಣ್ಣು ತನ್ನ ಸತ್ವವನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಇದು ಬರೀ ಓದಿ ಬಿಡುವ ವಿಷಯ ಅಲ್ಲವೇ ಅಲ್ಲ.
ಆದರೆ ನಾವು ಆ ಬಗ್ಗೆ ಕಾರ್ಯರೂಪಕ್ಕೆ ಇಳಿಯುವುದು ಕಡಿಮೆ. ಆದರೆ ಪುರುಷೋತ್ತಮ್ ರಾವ್ ಅವರು ಮಾತ್ರ ಈ ಬಗ್ಗೆ 25 ವರ್ಷಗಳ ಹಿಂದೆಯೇ ಚಿಂತಿಸಲು ಶುರು ಮಾಡಿದರು. ಭವಿಷ್ಯದಲ್ಲಿ ನಮ್ಮ ಭೂಮಿ ನಿಷ್ಪ್ರಯೋಜಕವಾಗುವುದನ್ನು ತಪ್ಪಿಸಲು ಪುರುಷೋತ್ತಮ್ ರಾಯರು ಒಂದು ಯೋಜನೆ ಹಾಕಿಕೊಂಡರು. ಅದೇ ‘ಕೃಷಿ ಪ್ರಯೋಗ್ ಪರಿವಾರ್’. ಕೃಷಿಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡುವ ಮೂಲಕ ಹೇಗೆ ನಮ್ಮ ಪರಿಸರದಲ್ಲಿ ಮತ್ತು ರೈತನ ಜೀವನದಲ್ಲಿ ಬದಲಾವಣೆ ತರಬಹುದು ಎನ್ನುವುದೇ ಅವರ ದೂರದೃಷ್ಟಿಯಾಗಿತ್ತು.
ಕೃಷಿ ಪ್ರಯೋಗ್ ಪರಿವಾರ್ ರೈತನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸುವ ಗುರಿಯನ್ನು ಮಾತ್ರ ಹೊಂದಿರುವುದು ಅಲ್ಲ, ಸಾವಯವ ಬೆಳೆಯನ್ನು ಸೇವಿಸುವುದರಿಂದ ಮನುಷ್ಯ ತಾನು ಜೀವನದಲ್ಲಿ ಅಳವಡಿಸುವ ಮೌಲ್ಯಗಳಲ್ಲಿ ನೈತಿಕತೆ, ಆಧ್ಯಾತ್ಮಿಕವಾಗಿ ಬದಲಾವಣೆ ಮತ್ತು ಕೃಷಿ ಭೂಮಿಯಲ್ಲಿ ಜೀವಂತಿಕೆಯನ್ನು ಹೆಚ್ಚಿಸುವುದು ಮುಖ್ಯವಾಗಿವೆ. ಇನ್ನು ಸಾವಯವ ಕೃಷಿ ಮಾಡಲು ರೈತ ಮುಂದೆ ಬರುತ್ತಾನಾ ಎನ್ನುವುದು ಮೊದಲ ಪ್ರಶ್ನೆ. ಇದರೊಂದಿಗೆ ಸಾವಯವ ಕೃಷಿ ಮಾಡುವ ರೈತ ಲಾಭ ಗಳಿಸುತ್ತಾನಾ ಎನ್ನುವುದು ಪ್ರಮುಖವಾದ ರೈತನ ಅಳಿವು ಉಳಿವಿನ ಪ್ರಶ್ನೆ. ಎರಡಕ್ಕೂ ಉತ್ತರ ಹೌದು. ಅದಕ್ಕಾಗಿ ಪುರುಷೋತ್ತಮ ರಾವ್ ಅವರು ಕಂಡುಕೊಂಡ ಪರಿಹಾರ ತಮ್ಮದೇ ಜಮೀನನ್ನು ಪ್ರಯೋಗಾತ್ಮಕವಾಗಿ ಫಸಲುಗಳನ್ನು ಬೆಳೆಯಲು ಬಿಟ್ಟುಕೊಡುವುದು.
ತೀರ್ಥಹಳ್ಳಿಯಲ್ಲಿ ತಮ್ಮ ಹತ್ತು ಎಕರೆ ಜಮೀನನ್ನು ಅದಕ್ಕೆ ಬಿಟ್ಟುಕೊಟ್ಟಿರುವ ಅವರು ಅಲ್ಲಿ ರೈತರಿಗೋಸ್ಕರವೇ ಪ್ರಾಯೋಗಿಕ ಶಿಕ್ಷಣವನ್ನು ಏರ್ಪಡಿಸುತ್ತಲೇ ಬರುತ್ತಿದ್ದಾರೆ. ಅಲ್ಲಿ ಬರುವ ಕೃಷಿಕ ಸಾವಯವ ಕೃಷಿ, ಅದನ್ನು ನಡೆಸಿಕೊಂಡು ಬರುತ್ತಿರುವ ರೈತನ ಜೀವನ ಶೈಲಿ, ಜೈವಿಕ ಗೊಬ್ಬರದ ಉತ್ಪಾದನೆ, ಬೀಜ ಉತ್ತುವುದು, ಫಸಲು ತೆಗೆಯುವ ಪೂರ್ವ ಮತ್ತು ನಂತರದ ಕಾರ್ಯಗಳೆಲ್ಲವನ್ನು ಅಧ್ಯಯನ ಮಾಡಿ ತನ್ನ ಜಮೀನಿನಲ್ಲಿ ಅಳವಡಿಸಿಕೊಳ್ಳಬಹುದು.
ಅಷ್ಟೇ ಅಲ್ಲ ಸಾವಯವ ಕೃಷಿಗೆ ಸಂಪೂರ್ಣವಾಗಿ ಒಗ್ಗಿಕೊಂಡಿರುವ ರೈತನನ್ನು ಗುರುತಿಸಿ ಪ್ರತಿವರ್ಷ ಪ್ರಶಸ್ತಿ ಕೊಡುವ ಸಂಪ್ರದಾಯವನ್ನು ಅವರ ಪ್ರತಿಷ್ಟಾನ ಹಮ್ಮಿಕೊಂಡಿದೆ. ಹಾಗಂತ ಸರ್ಕಾರ ಕೊಡುವ ಶೈಲಿಯಲ್ಲಿ ಈ ಪ್ರಶಸ್ತಿಗಾಗಿ ಜನರನ್ನು ಆಯ್ಕೆ ಮಾಡಲಾಗುವುದಿಲ್ಲ. ಇಲ್ಲಿ ಒಬ್ಬ ಕೃಷಿಕ ಎಷ್ಟು ಫಸಲು ಬೆಳೆಯುತ್ತಾನೆ ಮತ್ತು ಎಷ್ಟು ಲಾಭ ಮಾಡುತ್ತಾನೆ ಎನ್ನುವುದರ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡುವುದಿಲ್ಲ. ಇಲ್ಲಿ ಆತ ಬದುಕಿನಲ್ಲೂ ಎಷ್ಟರಮಟ್ಟಿಗೆ ಸಾವಯವ ಉತ್ಪನ್ನಗಳನ್ನು ಬಳಸಿದ್ದಾನೆ ಮತ್ತು ಆತನ ಮುಂದಿನ ತಲೆಮಾರು ಕೃಷಿ ಬಗ್ಗೆ ಆಸಕ್ತಿ ಹೊಂದಿದೆಯಾ ಎಂದು ಪರೀಕ್ಷಿಸಿ ಪುರುಷೋತ್ತಮ ಸನ್ಮಾನವನ್ನು ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.