ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹೊನ್ನಮ್ಮರವರ ಮೇಲೆ ಗುರುವಾರ ನಡೆದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು), ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ದ. ಕ. ಜಿಲ್ಲಾ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯ ಮೇಲೆ ನಡೆದ ಹಲ್ಲೆ ಖಂಡನೀಯ ತಾಲೂಕು ಆಡಳಿತದ ಬೇಜವಾಬ್ದಾರಿಯಿಂದಾಗಿ ಈ ಘಟನೆ ನಡೆದಿದೆ. ಈ ಹಿಂದೆ ಕೂಡಾ ಆರೋಪಿ ಶಿಕ್ಷಕಿಗೆ ಕಿರುಕುಳ ನೀಡಿದರೂ ಕೂಡಾ ಅಗತ್ಯ ಕ್ರಮ ಕೈಗೊಳ್ಳದಿರುವುದರಿಂದ ಈ ಘಟನೆ ನಡೆದಿದ್ದು ಶಿಕ್ಷಕಿಯ ವೈದ್ಯಕೀಯ ವೆಚ್ಚವನ್ನು ಸರಕಾರ ಭರಿಸಬೇಕು ಮತ್ತು ಅಂಗನವಾಡಿ ಶಿಕ್ಷಕರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ ರಾಜ್ಯಾಧ್ಯಂತ ಅಂಗನವಾಡಿ ನೌಕರರಿಗೆ ರಕ್ಷಣೆ ಇಲ್ಲದಂತಾಗಿದೆ ಸರಕಾರಗಳು ಈ ದೌರ್ಜನ್ಯವನ್ನು ಮಟ್ಟಹಾಕುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದವರು ಸಿಐಟಿಯು ಸಂಘಟನೆ ಇಂತಹ ದವರ್ಜನ್ಯವನ್ನು ಸಹಿಸಿಕೊಳ್ಳುವುದಿಲ್ಲ ಮುಂದೆ ಇಂತಹ ಘಟನೆ ಮರುಕಳಿಸಿದರೆ ಜಿಲ್ಲೆಯಾಧ್ಯಂತ ಅಂಗನವಾಡಿಗಳನ್ನು ಬಂದ್ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದರು.
ಈ ಸಂದರ್ಭ ಮಾತನಾಡಿದ ಸಿಐಟಿಯು ತಾಲೂಕು ಜೊತೆ ಕಾರ್ಯದರ್ಶಿ ಶೇಖರ್ ಎಲ್ ಘಟನೆಯನ್ನು ಖಂಡಿಸಿ ಶಿಕ್ಷಕಿಗೆ ಪರಿಹಾರ ಒದಗಿಸುವ ಮೂಲಕ ಸರಕಾರ ಸಾಂತ್ವಾನ ಹೇಳಬೇಕು ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಅಂಗನವಾಡಿ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು ತಪ್ಪಿದಲ್ಲಿ ಮುಂದೆ ಎಲ್ಲಾ ಕಾರ್ಮಿಕರನ್ನು ಒಟ್ಟುಗೂಡಿಸಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗಾಯತ್ರಿ, ಕಾರ್ಯದರ್ಶಿ ಕುಸುಮ ಬಂದಾರು, ಮುಖಂಡರಾದ ದಮಯಂತಿ, ಎಮ್ಮಿ ಫೆರ್ನಾಂಡಿಸ್, ಲೀಲಾವತಿ, ಗಾಯತ್ರಿ ಕನ್ಯಾಡಿ, ಗುಲಾಬಿ ಕೇಲ್ತಾಜೆ, ತುಳಸಿ ಚಂದ್ಕೂರು, ವಿನುತ ನೇರೋಲ್ದಪಲ್ಕೆ, ಸುಶೀಲ ಪಾರಂಕಿ, ಮಲ್ಲಿಕ ಕುಂಜತ್ತೋಡಿ, ಗೀತ ಸುರ್ಯ, ಪುಷ್ಪ ತಾರೆಮಾರು, ಕುಸುಮ ಬರೆಂಗಾಯ, ಜೆಎಂಎಸ್ನ ಕಿರಣ ಪ್ರಭ, ಕುಮಾರಿ, ನೆಬಿಸಾ, ಸೌಮ್ಯ, ಆಶಾಲತಾ, ಸಿಐಟಿಯುನ ನಾಯಕರಾದ ದೇವಕಿ, ಜಯಶ್ರೀ, ವಸಂತ ನಡ, ರಾಮಚಂದ್ರ ಮೊದಲಾದವರು ವಹಿಸಿದ್ದರು.
ಈ ಬಗ್ಗೆ ಅಂಗನವಾಡಿ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಹಲ್ಲೆಗೊಳಗಾದ ಹೊನ್ನಮ್ಮರ ವೈದ್ಯಕೀಯ ವೆಚ್ಚ ಭರಿಸಿ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್, ಸಿಡಿಪಿಒ, ಬೆಳ್ತಂಗಡಿ ಠಾಣಾಧಿಕಾರಿಗೆ ಮನವಿ ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.