
ನವದೆಹಲಿ: 18ನೇ ಬ್ರಿಕ್ಸ್ (BRICS) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಸಭೆಯಲ್ಲಿ ಪ್ರಧಾನಿಯವರು ಭಾರತದ ಕಳವಳಗಳನ್ನು ಪ್ರಸ್ತಾಪಿಸಿದರು ಮತ್ತು ಉಭಯ ದೇಶಗಳು ಪರಸ್ಪರರ ಪ್ರಮುಖ ಕಾಳಜಿಗಳ ಬಗ್ಗೆ ಸೂಕ್ಷ್ಮತೆಯನ್ನು ಪ್ರದರ್ಶಿಸಬೇಕು ಎಂದು ಒತ್ತಿ ಹೇಳಿದರು. ಪರಸ್ಪರ ಗೌರವ, ಪರಸ್ಪರ ಹಿತಾಸಕ್ತಿ ಮತ್ತು ಪರಸ್ಪರ ಸೂಕ್ಷ್ಮತೆ ಎಂಬ ‘ಮೂರು ಪರಸ್ಪರ ತತ್ವಗಳ’ ಆಧಾರದ ಮೇಲೆ ಈ ಕಾಳಜಿಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದರು.
ಒಮಾನ್ ಕರಾವಳಿಯ ಸಮೀಪ ವಾಣಿಜ್ಯ ನೌಕೆ ‘ಎಂಟಿ ಎಲ್ ಗಯಾ’ (MT El Gaia) ಮೇಲೆ ನಡೆದ ದಾಳಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, ಈ ಪ್ರದೇಶದಲ್ಲಿ ವಾಣಿಜ್ಯ ನೌಕೆಗಳು, ನಾವಿಕರು, ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ಭಾರತ ಒಪ್ಪುವುದಿಲ್ಲ ಎಂದು ಹೇಳಿದರು. ಈ ಪ್ರದೇಶದ ಅಂತಾರಾಷ್ಟ್ರೀಯ ಜಲಮಾರ್ಗಗಳ ಮೂಲಕ ಮುಕ್ತ ಮತ್ತು ಸುರಕ್ಷಿತ ಸಂಚಾರ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಆದಷ್ಟು ಬೇಗ ಪುನಃಸ್ಥಾಪಿಸಬೇಕು ಎಂದು ಭಾರತ ಆಗ್ರಹಿಸುತ್ತದೆ ಎಂದು ಅವರು ತಿಳಿಸಿದರು.
ಪನಾಮ ಧ್ವಜವನ್ನು ಹೊಂದಿದ್ದ ಮತ್ತು 14 ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ನೌಕೆಯ ಮೇಲೆ ಒಮಾನ್ ಕರಾವಳಿಯ ಸಮೀಪ ಈ ದಾಳಿ ನಡೆದಿದೆ . ಇವರಲ್ಲಿ 13 ಮಂದಿಯನ್ನು ರಕ್ಷಿಸಲಾಗಿದೆ ಮತ್ತು ನೌಕೆಯಲ್ಲಿದ್ದ ಒಬ್ಬ ಭಾರತೀಯ ನಾವಿಕ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದರು. ಒಮಾನ್ ಅಧಿಕಾರಿಗಳ ನೆರವಿನೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ ಮತ್ತು ಭಾರತೀಯ ರಾಯಭಾರ ಕಚೇರಿಯು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಜೈಸ್ವಾಲ್ ಮಾಹಿತಿ ನೀಡಿದರು.
ಜೈಶ್-ಎ-ಮೊಹಮ್ಮದ್ (JeM) ಮುಖ್ಯಸ್ಥ ಮಸೂದ್ ಅಜರ್ ಕುರಿತು ಪಾಕಿಸ್ತಾನವು 70 ಲಕ್ಷ ಪಾಕಿಸ್ತಾನಿ ರೂಪಾಯಿಗಳ ಬಹುಮಾನವನ್ನು ಘೋಷಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನದ ಇಂತಹ ತಂತ್ರಗಳು ಮತ್ತು ಜನರನ್ನು ದಾರಿ ತಪ್ಪಿಸುವ ಪ್ರಯತ್ನಗಳು ಹೊಸದೇನಲ್ಲ, ಏಕೆಂದರೆ ಭಾರತವು ಈ ಹಿಂದೆ ಕೂಡ ಇಂತಹ ತಂತ್ರಗಳನ್ನು ಕಂಡಿದೆ ಎಂದು ಹೇಳಿದರು. ಅಂತಿಮವಾಗಿ ಯಾವುದೇ ಪರಿಣಾಮ ಬೀರದ ಘೋಷಣೆಗಳನ್ನು ಮಾಡುವ ಬದಲು ಪಾಕಿಸ್ತಾನವು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೈಸ್ವಾಲ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



