ಬೆಳ್ತಂಗಡಿ : ಸುಮಾರು 350 ವರ್ಷಗಳ ಇತಿಹಾಸವುಳ್ಳ ತಾಲೂಕಿನ ಉಜಿರೆ ಸನಿಹದ ಮಲೆಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ನವೀಕರಣ ಅಂತ್ಯಗೊಳ್ಳುತ್ತಿದ್ದು 2016 ರ ಫೆ.7 ರಿಂದ 12 ರವರೆಗೆ ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ತಿಳಿಸಿದರು.
ಅವರು ಉಜಿರೆ ಜನಾರ್ದನ ಸ್ವಾಮಿ ದೇವಳದ ರಾಮಕೃಷ್ಣ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು. ಶ್ರೀ ಮಹಾಗಣಪತಿ ದೇವಸ್ಥಾನವು 300 ವರ್ಷಗಳ ಪುರಾತನವಾಗಿದ್ದು ಪಾಂಗಣ್ಣಾಯ ಮನೆತನದವರಿಂದ ನಿರ್ಮಿಸಿ ಪ್ರತಿಷ್ಠಾಪಿಸಲ್ಪಟ್ಟದ್ದಾಗಿದೆ. ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನವು ವಿಭಿನ್ನ ಇತಿಹಾಸವನ್ನು ಹೊಂದಿದೆ. ಗದ್ದೆ ಬೇಸಾಯಕ್ಕೆ ಉಳುತ್ತಿದ್ದ ಸಂದರ್ಭ ನೇಗಿಲಿಗೆ ಸಿಕ್ಕಿದ ಉದ್ಭವ ಮೂರ್ತಿಯನ್ನು ಅಗೆದು ತೆಗೆಯಲು ಪ್ರಯತ್ನಿಸಿದರೂ ಮೂರ್ತಿಯು ಆಳಕ್ಕೆ ಸರಿದಿದೆ. ಪ್ರಕೃತ ಈ ದೇವಸ್ಥಾನವು ಗದ್ದೆಯ ಮಧ್ಯದಲ್ಲಿದ್ದು, ಇದರ ಗರ್ಭಗುಡಿಯಲ್ಲಿ ಮೂರ್ತಿಯು ನೆಲಮಟ್ಟದಿಂದ ಒಂದು ಅಡಿಯಷ್ಟು ಕೆಳಗೆ ಇರುವುದು ಗೋಚರಿಸುತ್ತದೆ. ಈ ಎರಡೂ ದೇವಸ್ಥಾನಗಳು ಕಲಾಂತರದಲ್ಲಿ ಭೂ ಮಸೂದೆ ಬಂದಾಗ ಹೊಲಗದ್ದೆಗಳೆಲ್ಲಾ ಒಕ್ಕಲಿನವರ ಪಾಲಾಗಿ ದೇವಾಲಯಗಳ ಪೂಜೆ, ಜಾತ್ರೆ ಇತ್ಯಾದಿ ದೇವತಾ ವಿನಿಯೋಗಗಳನ್ನು ನಡೆಸುವ ಕಾರ್ಯಭಾರವು ಹತ್ತು ಒಕ್ಕಲುಗಳಿಗೆ ಸೇರಿತು. ಬಡತನದ ನಡುವೆಯೂ ರೈತರು ಈ ದೇವಾಲಯಗಳನ್ನು ತಮ್ಮ ಭಕ್ತಿಯ ಕೈಂಕರ್ಯ ಎಂಬಂತೆ ನಿರಂತರವಾಗಿ ರಕ್ಷಿಸುತ್ತಾ ಬಂದಿರುತ್ತಾರೆ ಎಂದರು.
ಶಿಥಿಲಾವಸ್ಥೆಯಲ್ಲಿದ್ದ ದೇವಾಲಯಗಳನ್ನು ಹಾಗೂ ಇಲ್ಲಿಯ ಕ್ಷೇತ್ರಪಾಲ ಕಾಳರಾತ್ರಿ ದೈವಾಲಯ ಮತ್ತು ನಾಗಾಲಯವನ್ನು ಪೂರ್ಣವಾಗಿ ತೆಗೆದು ದೇವಸ್ಥಾನದ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತು ಪೌಳಿ, ತೀರ್ಥಬಾವಿ ಹಾಗೂ ಪರಿವಾರ ದೈವಗಳ ಆಲಯ ಹಾಗೂ ನಾಗಬನ ಇತ್ಯಾದಿಗಳನ್ನು ಸುಮಾರು 82 ಲಕ್ಷ ರೂ.ಗಳನ್ನು ವೆಚ್ಚ ಮಾಡಿ ನವೀಕರಣಗೊಳಿಸಲಾಗಿದೆ. ಕೇವಲ 40 ಕುಟುಂಬಗಳ ವ್ಯಾಪ್ತಿಯಲ್ಲಿರುವ ಈ ದೇವಸ್ಥಾನಗಳು ನವೀಕರಣಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ರೂ. 10 ಲಕ್ಷ ಅನುದಾನ ನೀಡಿದ್ದಾರೆ. ರಾಜ್ಯದ ಮುಜುರಾಯಿ ಇಲಾಖೆಯಿಂದ ರೂ. 2 ಲಕ್ಷ ಅನುದಾನ ಬಂದಿದೆ. ಊರ ಮಂದಿ ಶ್ರಮದಾನ, ಹಿಡಿ ಅಕ್ಕಿ ಮೂಲಕ ಉನ್ನತಿಗೆ ಶ್ರಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ಸಂಪರ್ಕ ರಸ್ತೆ, ರಸ್ತೆ ಬದಿಯ ತಡೆಗೋಡೆ, ತೋಡಿಗೆ ಸೇತುವೆ ಇತ್ಯಾದಿ ಕಾಮಗಾರಿಗಳಿಗೆ ಸಂಸದರನ್ನು, ಶಾಸಕರನ್ನು ವಿನಂತಿಸಲಾಗಿದೆ. 7 ಕುಟುಂಬಗಳು ದೇವಸ್ಥಾನದ ರಸ್ತೆಗಾಗಿ ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ ಎಂದ ಅವರು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಗಳಿಗೆ ರೂ. 1 ಕೋಟಿ 10 ಲಕ್ಷ ಖರ್ಚು ತಗಲಬಹುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಯ್ಯ ಗೌಡ ಮಾಚಾರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಕೋಡಿಬಟ್ಟಾಡೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರವಿಚಂದ್ರ ಚಕ್ಕಿತ್ತಾಯ, ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಗೌಡ ಕೋಡಂಗೆ, ಕೋಶಾಧಿಕಾರಿ ಗಿರಿರಾಜ ಬಾರಿತ್ತಾಯ, ಕಾರ್ಯದರ್ಶಿಗಳಾದ ಪೂವಪ್ಪ ಗೌಡ, ಎಂ. ಬಿ. ಮೋಹನದಾಸ್, ಆರ್ಥಿಕ ಸಮಿತಿ ಸಂಚಾಲಕ ರಾಘವೇಂದ್ರ ಬೈಪಡಿತ್ತಾಯ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.