ಬೆಳ್ತಂಗಡಿ : ಲಾಯಿಲದಲ್ಲಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಇದರ ನೂತನ ಕೇಂದ್ರ ಕಚೇರಿಯನ್ನು ಕೇಂದ್ರ ಸರಕಾರದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ದಿಮೆ ಸಚಿವ ಕಾಲ್ರಾಜ್ ಮಿಶ್ರಾ ಶನಿವಾರ ಸಂಜೆ ಉದ್ಘಾಟಿಸಿದರು.ನೂತನ ಕಟ್ಟಡದಲ್ಲಿ ಸಚಿವರು ಪತ್ನಿಯೊಂದಿಗೆ ದೀಪ ಬೆಳಗಿಸಿ ಶುಭ ಹಾರೈಸಿದರು. ಬಳಿಕ ಸಂಸ್ಥೆಯಲ್ಲಿ ಸಿದ್ಧ ಉಡುಪುಗಳು, ಗೃಹೋಪಯೋಗಿ ವಸ್ತುಗಳು ತಯಾರಾಗುವ ವಿಧಾನಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಸಂದರ್ಭ ಸಂಸ್ಥೆಯ ಅಧ್ಯಕ್ಷ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಆಡಳಿತ ನಿರ್ದೇಶಕ ಡಾ|ಎಲ್.ಎಚ್.ಮಂಜುನಾಥ್, ನಿರ್ದೇಶಕಿ ಮನೋರಮಾ ಭಟ್, ಲಾಯಿಲ ಗ್ರಾ.ಪಂ. ಅಧ್ಯಕ್ಷೆ ವೀಣಾ, ರುಡ್ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಜನಾರ್ದನ್, ಸಚಿವಾಲಯದ ಜತೆ ಕಾರ್ಯದರ್ಶಿ ಅನಿಲ್ ಕುಮಾರ್, ಎಸ್ಕೆಡಿಆರ್ಡಿಪಿ ಬೆಳ್ತಂಗಡಿ ಯೋಜನಾಧಿಕಾರಿ ರೂಪಾ ಜೈನ್, ಸಿಬ್ಬಂದಿವರ್ಗ, ನೌಕರರು ಉಪಸ್ಥಿತರಿದ್ದರು.ಇದಕ್ಕೂ ಮೊದಲು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಸಚಿವರನ್ನು ಹಾರ ಹಾಕಿ ಸ್ವಾಗತಿಸಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಬಲವಾದ ಒತ್ತು ನೀಡುತ್ತಿದೆ. ಸ್ಥಳೀಯ ಉದ್ಯೋಗಾವಕಾಶಗಳಿಗೆ ಪೂರಕವಾದ ತರಬೇತಿಗಳನ್ನು ಸ್ಥಳೀಯವಾಗಿಯೇ ಒದಗಿಸಲು ಕೇಂದ್ರಗಳಿಗೆ ಉತ್ತೇಜನ ನೀಡಲಾಗುವುದು. ಸರಕಾರವು ಅಂತರ್ಜಾಲದ ಮೂಲಕ ಉದ್ಯೋಗಗಳನ್ನು ಗುರುತಿಸಿ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಯುವಜನತೆಗೆ ಪದವಿಯ ನಂತರ ಉದ್ಯೋಗಗಳನ್ನು ಆರಂಭಿಸಲು, ಅದಕ್ಕೆ ಪೂರಕವಾದ ಯಂತ್ರೋಪಕರಣಗಳನ್ನು ಖರೀದಿಸಲು ಉತ್ತೇಜನ ನೀಡಲಾಗುವುದು. ಇದರಲ್ಲಿ ಒಂದು ಕೋಟಿಯ ತನಕ ಯಂತ್ರಗಳನ್ನು ಖರೀದಿಸಲು ಅವಕಾಶವಿದೆ ಎಂದರು.
ಸಣ್ಣ ಉದ್ದಿಮೆಗಳನ್ನು ನಡೆಸುವಾಗ ಬರುವ ಕಠಿಣ ಸಮಸ್ಯೆಗಳನ್ನು ನಿವಾರಿಸಲು ಸರಕಾರ ವಿಶೇಷ ಯೋಜನೆಯನ್ನು ಸಿದ್ದ ಪಡಿಸಿದೆ. ಅಲ್ಲದೆ ಉದ್ದಿಮೆಗಳ ನೊಂದಾವಣಿಗೂ ಸುಲಲಿತ ವ್ಯವಸ್ಥೆಯನ್ನು ಮಾಡಿದೆ. ಮಹಿಳೆಯರಿಗೂ ಇದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ. ತರಬೇತಿ ಪಡೆದ ಶಿಕ್ಷಣಕ್ಕೆ ಅನುಕೂಲಕರವಾಗಿ ಸಿಗಬೇಕಾದ ಉದ್ಯೋಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸರಕಾರ ಉದ್ಯೋಗ ವಿನಿಮಯದ ನೂತನ ಯೋಜನೆಯೊಂದನ್ನು ಆರಂಭಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.