ನವದೆಹಲಿ : ಚಿನ್ನಕ್ಕೆ ಸಂಬಂಧಿಸಿದಂತೆ 3 ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು 7 ರೇಸ್ಕೋರ್ಸ್ನಲ್ಲಿ ಬಿಡುಗಡೆ ಮಾಡಿದರು. ಗೋಲ್ಡ್ ಬಾಂಡ್, ಚಿನ್ನದ ನಗದೀಕರಣ ಯೋಜನೆ, ಭಾರತದ ಚಿನ್ನದ ನಾಣ್ಯ ಎಂಬ ಮೂರು ಯೋಜನೆಗಳನ್ನು ಮೋದಿಯವರು ಬಿಡುಗಡೆಗೊಳಿಸಿದರು.
ಬಂಗಾರದ ಆಮದು ಮತ್ತು ಬೇಡಿಕೆಯನ್ನು ಕಡಿಮೆ ಮಾಡಲು ರೂಪಿಸಲಾದ ಈ ಯೋಜನೆಗಳು ಜನರಿಗೆ ಸೋನೆ ಪೆ ಸುಹಾಗಾ ಎಂದು ಮೋದಿ ಹೇಳಿದರು. ನಮ್ಮ ದೇಶವನ್ನು ಬಡ ರಾಷ್ಟ್ರವೆಂದು ಯಾವ ಕಾರಣಕ್ಕಾಗಿ ಹೇಳುತ್ತಾರೆ ? ದೇಶದಲ್ಲಿ ಸುಮಾರು 20 ಸಾವಿರ ಟನ್ಗಳನ್ನು ಬಂಗಾರವಿದೆ. ಅದರ ಸದ್ಬಳಕೆ ಮಾತ್ರ ಆಗುತ್ತಿಲ್ಲ. ಲಭ್ಯವಿರುವ ಚಿನ್ನದ ಸದ್ಬಳಕೆ ಆಗಬೇಕು. ಈ ಮೂರು ಯೋಜನೆಗಳು ಬಹು ಉಪಯೋಗಿಯಾಗಲಿವೆ. ಚಿನ್ನದ ಜೊತೆ ಮಹಿಳೆಯರಿಗೆ ಅವಿನಾಭಾವ ಸಂಬಂಧವಿದೆ. ಈ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಉಪಯೋಗವಾಗಲಿದೆ ಎಂದರು.
ಅಶೋಕ ಚಕ್ರವಿರುವ ಭಾರತದ ಚಿನ್ನದ ನಾಣ್ಯವನ್ನು ಬಿಡುಗಡೆಗೊಳಿಸಿದ ಮೋದಿಯವರು ಇದು ನಿಜಕ್ಕೂ ರಾಷ್ಟ್ರಕ್ಕೆ ಹೆಮ್ಮೆಯ ವಿಷಯ. ಇನ್ನು ಜನರು ವಿದೇಶಿ ಮುದ್ರಿತ ಚಿನ್ನ ಅಥವಾ ಬೆಳ್ಳಿ ನಾಣ್ಯಗಳಿಗೆ ಮೊರೆ ಹೋಗಬೇಕಾಗಿಲ್ಲ ಎಂದರು.
ಗೋಲ್ಡ್ ಸ್ಕೀಂಗಳ ವೆಬ್ಸೈಟ್ ಅನಾವರಣಗೊಳಿಸಿ, ಆರು ಜನ ಪ್ರಾರಂಭಿಕ ಹೂಡಿಕೆದಾರರಿಗೆ ಹೂಡಿಕೆ ಪ್ರಮಾಣ ಪತ್ರವನ್ನು ವಿತರಿಸಿದರು.
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಾತನಾಡಿ, ಚಿನ್ನದ ಆಮದನ್ನು ಕಡಿಮೆ ಮಾಡುವುದು ಅನಿವಾರ್ಯ, ಇದು ಆದಾಯದ ಮೂಲ. ನಮ್ಮ ರಾಷ್ಟ್ರ ನಿರ್ಮಾಣದಲ್ಲಿ ಇದರ ಪಾಲೂ ಸೇರಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ರಾಜ್ಯ ವಾಣಿಜ್ಯ ಕೇಂದ್ರ ಸಚಿವೆ ನಿರ್ಮಲ್ ಸೀತಾರಾಮನ್ ಮತ್ತು ರಾಜ್ಯ ಹಣಕಾಸು ಕೇಂದ್ರ ಸಚಿವ ಜಯಂತ್ ಸಿನ್ಹಾ ಉಪಸ್ಥಿತರಿದ್ದರು.
ಆಶೋಕ ಚಕ್ರದ ಚಿಹ್ನೆ ಹೊಂದಿರುವ ಚಿನ್ನದ ನಾಣ್ಯಗಳು 5, 10 ಹಾಗೂ 20 ಗ್ರಾಂಗಳಲ್ಲಿ ದೊರೆಯಲಿವೆ. 5 ಗ್ರಾಂ ತೂಕದ 15,000 ಚಿನ್ನದ ನಾಣ್ಯಗಳು, 10 ಗ್ರಾಂ ತೂಕದ 20,000 ನಾಣ್ಯಗಳು ಮತ್ತು 20 ಗ್ರಾಂ ತೂಕದ 3750 ಚಿನ್ನದ ನಾಣ್ಯಗಳು ಎಂಎಂಟಿಸಿ ಮಳಿಗೆಗಳಲ್ಲಿ ಲಭ್ಯವಾಗಲಿವೆ. ಇದು ಮರುಬಳಕೆ ಮತ್ತು ಪ್ಯಾಕೇಜಿಂಗ್ ಸಂದರ್ಭ ವಿರೂಪಗೊಳ್ಳದಂತೆ ಅತ್ಯಾಧುನಿಕ ನಕಲು ವಿರೋಧಿ ವೈಶಿಷ್ಟ್ಯತೆಗಳನ್ನು ಹೊಂದಲಿದೆ.
ನಗದೀಕರಣ ಯೋಜನೆಯಲ್ಲಿ ಮನೆ, ದೇವಸ್ಥಾನ, ಇನ್ನಿತರೆ ಬಳಸದೇ ಇರುವ ಚಿನ್ನವನ್ನು ಠೇವಣಿ ಇಟ್ಟು ಬಡ್ಡಿ ಪಡೆಯಬಹುದು. ಶೇ. 2.50 ಬಡ್ಡಿ ನೀಡಲಾಗುವುದು.
ಗೋಲ್ಡ್ ಬಾಂಡ್ನಲ್ಲಿ ಚಿನ್ನದ ಬದಲಿಗೆ ಅದಕ್ಕೆ ಸಮಾನ ಮೊತ್ತದ ಬಾಂಡ್ಗಳನ್ನು ಖರೀದಿಸಬಹುದು. ಬಾಂಡ್ನ ಮಿತಿ 500 ಗ್ರಾಂ ಆಗಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.