ಬೆಳ್ತಂಗಡಿ : 2012ನೇ ಅಂತರಾಷ್ಟ್ರೀಯ ಸಹಕಾರಿ ವರ್ಷದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಆರಂಭಿಸಿದ್ದ ಇದೀಗ ಅನುಷ್ಠಾನ ಹಂತದಲ್ಲಿರುವ ಕೃಷಿಕರ ಸಾಲ ತೀರುವಳಿ ಯೋಜನೆ-2012ಗೆ ಸರಕಾರಗಳ ಬೆಂಬಲ ಸಹಭಾಗಿತ್ವಕ್ಕಾಗಿ ಸಂಘದ ಅಧ್ಯಕ್ಷ ಎನ್.ಎಸ್.ಗೋಖಲೆ ಅವರು ಈಚೆಗೆ ಬೆಳ್ತಂಗಡಿ ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಋಣಮುಕ್ತರೈತ ಎಂಬ ಪರಿಕಲ್ಪನೆಯ ಸಾಕ್ಷಾತ್ಕಾರಕ್ಕಾಗಿ ಸಾಲ ತೀರುವಳಿ ಯೋಜನೆ ತರಲಾಗಿದೆ. ರೈತರ ಎಲ್ಲ ಸಮಸ್ಯೆಗಳಲ್ಲಿ ಸಾಲದ ಪಾಲು ದೊಡ್ಡದು. ರೈತರ ಆತ್ಮಹತ್ಯೆಗಳಿಗೆ ಇದೂ ಒಂದು ಕಾರಣ. ಸಾಲಗಳಿಂದ ರೈತ ಹೊರಬರಲು ಇಂತಹ ಯೋಜನೆಯಿಂದ ಸಾಧ್ಯ. ದೀರ್ಘಾವಧಿಯ ಅನಂತರ ಸರಕಾರಗಳಿಗೂ ಆರ್ಥಿಕ ಪ್ರಯೋಜನವಿದೆ. ಸಂಪೂರ್ಣ ರಾಜ್ಯ ಅಥವಾ ರಾಷ್ಟ್ರದಲಿ ಯೋಜನೆ ಅನುಷ್ಠಾನ ಆರ್ಥಿಕವಾಗಿ ದೊಡ್ಡ ಹೊರೆ ಎಂದಾದರೆ ಪ್ರಾಯೋಗಿಕವಾಗಿ ಆರಂಭಿಸಿದ ಯೋಜನೆ ಸ್ಥಗಿತಗೊಳ್ಳದಂತೆಯಾದರೂ ಪಾಲ್ಗೊಂಡು ನೆರವಾಗಿ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಭತ್ತದ ಬೆಳೆ ಪ್ರೋತ್ಸಾಹಕ್ಕಾಗಿ ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗೂ ಅವಕಾಶ, ಸ್ವ ಸಹಾಯ ತಂಡಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ಸಹಕಾರಿ ಬೇಸಾಯಕ್ಕಾಗಿ ಮಾರ್ಗದರ್ಶನಕ್ಕಾಗಿ ಮುಂಡಾಜೆ ಸಿ.ಎ. ಸಂಘದಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸರಕಾರದ ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಆಹಾರ ಧಾನ್ಯಗಳ ಅಧಿಕ ಉತ್ಪಾದನೆಗೆ ಸಂಬಂಧಿಸಿದ ಹೊಸಗದ್ದೆಗಳ ನಿರ್ಮಾಣ, ನಾಟಿ, ಕೊಯಿಲು ಇತ್ಯಾದಿ ಕಾಮಗಾರಿಗಳಿಗೂ ತಕ್ಷಣ ಅವಕಾಶ ಕಲ್ಪಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪಡಿತರ ವಿತರಣೆಯಲ್ಲಿ ಮುಂಡಾಜೆ ಪ್ರಾಥಮಿಕ ಕೃ.ಪ.ಸ.ಸಂಘಕ್ಕೆ ಆಗುತ್ತಿರುವ ನಷ್ಟ ಭರ್ತಿಗಾಗಿ ಬೆಳ್ತಂಗಡಿ ತಹಸೀಲ್ದಾರರ ಮೂಲಕ ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘವು ೫ ಪಡಿತರ ವಿತರಣಾ ಕೇಂದ್ರಗಳನ್ನು ನಡೆಸುತ್ತಿದ್ದು ಪ್ರತೀ ತಿಂಗಳು ಸುಮಾರು ೬೦,೦೦೦ ರೂ. ನಿವ್ವಳ ನಷ್ಟ ಅನುಭವಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ರಬ್ಬರ್ ಬೆಳೆಗಾರರ ಸಂಕಷ್ಟ ಪರಿಹಾರಕ್ಕಾಗಿ ಕೇರಳ ಮಾದರಿಯಲ್ಲಿ ಬೆಂಬಲ ಬೆಲೆಯನ್ನು ನೀಡುವಂತೆಯೂ ಸಂಘದವರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಬ್ಬರ್ ಬೆಲೆಯಲ್ಲಿ ಏರುಪೇರು, ನಿರಂತರ ಇಳಿಕೆ, ರಬ್ಬರ್ ಬೆಳೆಗಾರರನ್ನು ಮಾತ್ರವಲ್ಲದೆ ಪರಿಸರದ ಎಲ್ಲಾ ಕಾರ್ಮಿಕ ವರ್ಗ ಹಾಗು ವ್ಯವಹಾರಗಳ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಕೇರಳ ಸರಕಾರ ಪ್ರಕಟಿಸಿ ಬೆಳೆಗಾರರಿಗೆ ನೆರವಾಗಿರುವಂತೆ ನಮ್ಮ ರಾಜ್ಯದ ಬೆಳೆಗಾರರಿಗೂ ನೆರವಾಗಲು ಅಗತ್ಯಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ, ನಿರ್ದೇಶಕ ಲಿಂಗಪ್ಪಗೌಡ, ಡಿ.ಎ.ರೆಹಮಾನ್, ಅನಂತ ಭಟ್ ಮಚ್ಚಿಮಲೆ, ವಿಶ್ವನಾಥ ಶೆಟ್ಟಿ ಸಂಘದ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.