
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಲ್ಲಿ ಆಗ ಸಚಿವರಾಗಿದ್ದ ನಾಗೇಂದ್ರ ಅವರಿಗೆ ಕ್ಲೀನ್‍ಚಿಟ್ ಸಿಕ್ಕಿಲ್ಲ. ಅವರ ವಿರುದ್ಧ ತನಿಖೆ ಸಹ ನಡೆಯುತ್ತಿದೆ. ಆದರೂ ಮತ್ತೆ ಅವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸುವ ಅನಿವಾರ್ಯತೆ ಶಿವಕುಮಾರ್ ಅವರಿಗೆ ಏನಿತ್ತು. ಅವರಿಗೆ ಏನಾದರೂ ಭಯವಿತ್ತೇ? ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಏನಾದರೂ ಇತ್ತಾ ಎಂದು ಪ್ರಶ್ನಿಸಿದರು.
ನೂರಾರು ಕೋಟಿ ಹಗರಣ ಆಗಿದೆ. ಹಗರಣದ ಬಗ್ಗೆ ಆಗಿನ ಸಿಎಂ ಸಹ ಒಪ್ಪಿಕೊಂಡಿದ್ದರು. ನಾಗೇಂದ್ರ ಅವರ ವಿರುದ್ಧ ಆರೋಪಪಟ್ಟಿ ಸಹ ಇದೆ. ಆದರೂ ಅವರನ್ನು ಮತ್ತೆ ಮಂತ್ರಿ ಮಾಡಿರುವುದು ಅಕ್ಷಮ್ಯ ಅಪರಾಧ. ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಮೀಸಲಿಟ್ಟ ಹಣ ನುಂಗಿದವರನ್ನೇ ಸಚಿವರನ್ನಾಗಿ ಮಾಡಿ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ದ್ರೋಹ ಮಾಡಿದೆ ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ರೂ. 186 ಕೋಟ ಹಗರಣ ನಡೆದ ಕಾರಣಕ್ಕೆ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರು ಎಂಬುದನ್ನು ಈಗಿನ ಸಿ.ಎಂ ನೆನಪಿಸಿಕೊಳ್ಳಬೇಕು. ನಿಗಮದ ಹಣ ಕೊಳ್ಳೆ ಹೊಡೆದು ತೆಲಂಗಾಣದಲ್ಲಿ ಸಾವಿರಾರು ಖಾತೆಗಳನ್ನು ತೆರೆದು ಡ್ರಾ ಮಾಡಿ ಚುನಾವಣೆಗೆ ಬಳಸಿದ್ದರು. ಇದೆಲ್ಲ ಇ. ಡಿ. ದಾಖಲೆಯಲ್ಲಿ ಉಲ್ಲೇಖವಾಗಿದೆ. ಈ ಹಗರಣದಲ್ಲಿ ಅಮಾಯಕ ಅಧಿಕಾರಿ ಚಂದ್ರಶೇಖರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡರು ಎಂದು ಗಮನ ಸೆಳೆದರು.
ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಿ ಎಂದು ಸದನ ಆರಂಭವಾಗುವ ಮೊದಲೇ ಮುಖ್ಯಮಂತ್ರಿಗಳಿಗೆ ನಾವು ಆಗ್ರಹಿಸುತ್ತಿದ್ದೇವೆ. ಬದಲಿಗೆ ಅವರದೇ ಸಮುದಾಯದವರನ್ನು ಬೇಕಿದ್ದರೆ ಸಚಿವರಾಗಿ ಮಾಡಿ. ರಾಜೀನಾಮೆ ಪಡೆಯುವರೆಗೆ ಸದನದ ಹೊರಗೆ ಮತ್ತು ಒಳಗೆ ಜೆಡಿಎಸ್ ಜೊತೆ ಹೋರಾಟ ಮಾಡುತ್ತೇವೆ. ಸದನ ಸರಿಯಾದ ದಿಕ್ಕಿನಲ್ಲಿ ನಡೆಯಬೇಕು ಎಂಬುದು ವಿರೋಧ ಪಕ್ಷದ ಅಪೇಕ್ಷೆ. ನಾಗೇಂದ್ರ ಅವರ ರಾಜೀನಾಮೆ ಪಡೆದು ಪರಿಶಿಷ್ಟ ಪಂಗಡಕ್ಕೆ ಸರ್ಕಾರ ನ್ಯಾಯ ನೀಡಲಿ ಎಂದು ಒತ್ತಾಯಿಸಿದರು.
ಇದೇ 13 ರಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಇದರಲ್ಲಿ ಬರ, ರೈತರ ಸಮಸ್ಯೆ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು. ಮೂರು ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ನಿಂತು ಹೋಗಿದೆ. ವೃದ್ಧಾಪ್ಯವೇತನ, ಅಂಗವಿಕಲರ ವೇತನವನ್ನು ಸರ್ಕಾರ ಕಡಿತ ಮಾಡಿದೆ. ವಿಧವಾ ವೇತನ ರದ್ದಾದ ಅನೇಕ ಪ್ರಕರಣ ಇವೆ. ಹಿಂದಿನ ಬಿಜೆಪಿ ಸರ್ಕಾರ ಘೊಷಣೆ ಮಾಡಿದ್ದ ಸಾವಿರ ಕೋಟಿಯಷ್ಟು ಹಾಲು ಉತ್ಪಾದಕರ ಪೆÇ್ರೀತ್ಸಾಹಧನವನ್ನು ಈಗಿನ ಸರ್ಕಾರ ನಿಲ್ಲಿಸಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಭೀಕರ ಬರ ಇದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗ ಸೇರಿ ಇಡೀ ರಾಜ್ಯದಲ್ಲಿ ಜನರು ತೊಂದರೆಗೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಬೆಳೆ ಕೈಗೆ ಸಿಗದ ಸ್ಥಿತಿ ಇದೆ. ಈ ಎಲ್ಲದರ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಉತ್ತರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ಆಡಳಿತ ಪಕ್ಷಕ್ಕೆ ಇರುವμÉ್ಟೀ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇದೆ. ಒಳ್ಳೆ ರೀತಿ ಸದನ ನಡೆಯಬೇಕು. ವಿಚಾರಗಳ ಸಮಗ್ರ ಚರ್ಚೆ ಆಗಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಹೇಳಿದರು. ಅಧಿವೇಶನ ಆರಂಭ ದಿನ ಹತ್ತಿರ ಬಂದರೂ ಖಾತೆ ಹಂಚಿಕೆ ಆಗಿಲ್ಲ. ತೋಟಗಾರಿಕೆ ಹಾಗೂ ಕೃಷಿ ಸಚಿವರು ಯಾರು ಎಂದು ರೈತರಿಗೆ ಗೊತ್ತಿಲ್ಲ. ಸಂಪುಟ ವಿಸ್ತರಣೆಗೆ ಎರಡು ತಿಂಗಳ ಆಗಿತ್ತು. ಈಗ ಖಾತೆ ಹಂಚಲು ಮುಖ್ಯಮಂತ್ರಿ ದೆಹಲಿಗೆ ಹೋಗಿ ಕೂತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಹೇಳದೆ ರಾಜ್ಯದಲ್ಲಿ ಒಂದು ಕಡ್ಡಿಯೂ ಅಲ್ಲಾಡಿಸಲು ಆಗದಂತೆ ಆಗಿದೆ. ಇದರಿಂದ ರೈತರಿಗೆ, ಬಡವರಿಗೆ ಅನ್ಯಾಯವಾಗುತ್ತಿದೆ ಎಂದರು. ಯಡಿಯೂರಪ್ಪ ಅವರು ಸಿ.ಎಂ ಆಗಿದ್ದಾಗ ನೆರೆ ಬಂದಿತ್ತು. ಆಗ ಸಚಿವ ಸಂಪುಟ ವಿಸ್ತರಣೆ ಆಗಿರಲಿಲ್ಲ. ಆದರೂ ರಾಜ್ಯದ ಹಿತದೃಷ್ಟಿಯಿಂದ ಏನೇನು ಕ್ರಮ ಬೇಕೋ ಅದನ್ನು ಅವರು ಕೈಗೊಂಡಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬರಗಾಲ ಸಂಬಂಧ ಕೇಂದ್ರವೇ ಪರಿಹಾರ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆದರೆ ರಾಜ್ಯ ಬರ ಘೋಷಣೆ ಮಾಡುವುದಕ್ಕಿಂತ ಮೊದಲೇ ಕೇಂದ್ರದಿಂದ ಪರಿಹಾರ ಬಂದ ಯಾವುದೇ ಉದಾಹರಣೆ ಇಲ್ಲ. ರಾಜ್ಯ ಸರ್ಕಾರ ಏನೂ ಮಾಡದೆ ನಾಮಕಾವಾಸ್ಥೆಗೆ ಸಚಿವರನ್ನು ಬರ ಅಧ್ಯಯನಕ್ಕೆ ಕಳುಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೆ ಸಾಲದು. ಬರವಿದ್ದಾಗ ರೈತರ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡಬಾರದು. ಎಸ್‍ಡಿಆರ್‍ಎಫ್ ನಿಂದಲೂ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿದರು.
ಜೆಡಿಎಸ್ ಪಾದಯಾತ್ರೆ ಬಗ್ಗೆ ನನ್ನ ಮಾತನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಪಾದಯಾತ್ರೆಗೆ ಸಾಂಕೇತಿಕ ಬೆಂಬಲ ನೀಡೋಣ ಎಂದು ಕೋರ್ ಕಮಿಟಿಯಲ್ಲೇ ತೀರ್ಮಾನ ಮಾಡಿದ್ದೆವು. ಸದನದಲ್ಲೂ ಹೋರಾಟ ಮಾಡೋಣ ಎಂದು ಹೇಳಿದ್ದೆ. ರಾಜಕೀಯ ಕಾರಣ ಅಥವಾ ಬೆಂಬಲ ನೀಡಬಾರದು ಎಂದು ಪಾದಯಾತ್ರೆಯಲ್ಲಿ ಭಾಗವಹಿಸಿಲ್ಲ. ಶಿಕಾರಿಪುರದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಬರಕ್ಕಾಗಿ ಉಸ್ತುವಾರಿ ಸಚಿವರ ಭೇಟಿ ಇದ್ದಿದ್ದರಿಂದ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮಧು ಬಂಗಾರಪ್ಪ ಅವರೊಂದಿಗೆ ನಡೆದ ಸಂಭಾಷಣೆ ನೋಡಿದೆ. ನಾನೇನು ಉಲ್ಟಾ ಸೀದಾ ಮಾತನಾಡಿಲ್ಲ. ನೇರವಾಗಿ ಹೇಳಿದ್ದೇನೆ. ಸಾಂಕೇತಿಕ ಬೆಂಬಲ ಎಂದು ಹೇಳಿದ್ದೇನೆ. ಇದರಲ್ಲಿ ಬೇರೆ ಅರ್ಥವಿಲ್ಲ. ಆದರೆ ಬೇರೆ ಅರ್ಥ ಕಲ್ಪಿಸುವ ಕುತಂತ್ರ, ಷಡ್ಯಂತ್ರ ನಡೆದಿದೆ. ಜೆಡಿಎಸ್ ನಡೆಸಿದ ಪಾದಯಾತ್ರೆ ಸಂಬಂಧ ಬಿಜೆಪಿ ಕಡೆಯಿಂದ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



