ಬೆಳ್ತಂಗಡಿ : ಸಂಜೆ 7 ರಿಂದ ರಾತ್ರಿ 12 ರ ವರೆಗೆ ಕಾಲಮಿತಿಯ ಯಕ್ಷಗಾನ ಪ್ರದರ್ಶನ, ಧರ್ಮಸ್ಥಳದಲ್ಲಿ ಭಕ್ತರಿಗಾಗಿ 550 ಕೊಠಡಿಗಳ ನೂತನ ವಸತಿ ಛತ್ರ ನಿರ್ಮಾಣ ಆಧುನಿಕ ತಂತ್ರಜ್ಞಾನ ಬಳಸಿ ಒಂದು ಕಡೆ ಅಕ್ಕಿ ಹಾಕಿ ಇನ್ನೊಂದು ಕಡೆಯಲ್ಲಿ ಅನ್ನ ಪಡೆಯುವ ವಿಧಾನ (ಮೂರು ಗಂಟೆಗಳಲ್ಲಿ 40 ಕ್ವಿಂಟಾಲ್ ಅಕ್ಕಿ ಬೇಯಿಸಬಹುದು) ಧಾರವಾಡದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡ ವಿಭಾಗ ಪ್ರಾರಂಭ ಇತ್ಯಾದಿ ಯೋಜನೆಗಳನ್ನು ಈ ವರ್ಷ ಅನುಷ್ಠಾನಗೊಳಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶನಿವಾರ ನಡೆದ ಹೆಗ್ಗಡೆಯವರ 48ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಅವರು ಮುಂದಿನ ಯೋಜನೆಗಳನ್ನು ಪ್ರಕಟಿಸಿದರು.ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುವ ಚತುರ್ವಿಧ ದಾನ ಪರಂಪರೆಯಲ್ಲಿ ಅನ್ನದಾನ ಈಗ ಜಾಗತಿಕ ಮಟ್ಟದಲ್ಲಿ ಪ್ರಚಾರ ಮತ್ತು ಮಾನ್ಯತೆ ಪಡೆದಿದೆ. ನಿತ್ಯವೂ ಭಕ್ತರಿಗೆ ಅನ್ನ ಪ್ರಸಾದದ ಜೊತೆಗೆ ಸಿಹಿ ತಿಂಡಿ ನೀಡಲಾಗುತ್ತಿದೆ. ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಧರ್ಮೋತ್ಥಾನ ಟ್ರಸ್ಟ್ ನೇತೃತ್ವದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ 200 ಪುರಾತನ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಅಲ್ಲದೆ ರಾಜ್ಯದ ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಕಳೆದ ಒಂದು ವರ್ಷದಲ್ಲಿ 14ಕೋಟಿ ರೂ. ಧನಸಹಾಯ ನೀಡಲಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 34 ಲಕ್ಷ ಮಂದಿ ಸದಸ್ಯರು 1400 ಕೋಟಿ ರೂ. ಉಳಿತಾಯ ಮಾಡಿದ್ದಾರೆ. ಬ್ಯಾಂಕ್ಗಳಿಂದ 4000 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.ರೋಗಿಗಳಿಗೆ ಸುರಕ್ಷಾ ಯೋಜನೆಯಡಿ 291 ಕೋಟಿ ರೂ. ಪರಿಹಾರ ಧನ ನೀಡಲಾಗಿದೆ. ಮೈಸೂರಿನಲ್ಲಿರುವ ಎಸ್.ಡಿ.ಎಮ್. ಆಡಳಿತ ನಿರ್ವಹಣಾ ಕಾಲೇಜಿನಲ್ಲಿ ಚೀನಾದಿಂದ 18 ಮಂದಿ ವಿದ್ಯಾರ್ಥಿಗಳು ಬಂದು ಅಧ್ಯಯನ ಮಾಡಿದ್ದಾರೆ. ದುಬೈ ವಿ.ವಿ.ಯೊಂದಿಗೆ ಅಧ್ಯಯನ ವಿನಿಮಯಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.ಗ್ರಾಮೀಣ ಜನರ ಪರಿವರ್ತನೆ, ಮಹಿಳಾ ಸಬಲೀಕರಣ ಮತ್ತು ಕುಟುಂಬದ ಎಲ್ಲಾ ಸದಸ್ಯರ ಸಂಘಟಿತ ಪ್ರಯತ್ನದಿಂದ ರೈತರ ಆತ್ಮಹತ್ಯೆ ತಡೆಗಟ್ಟಬಹುದು ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಧರ್ಮಸ್ಥಳ ಕ್ಷೇತ್ರವು ಎಲ್ಲಾ ಆಯಾಮಗಳಲ್ಲಿ ನಿತ್ಯವೂ ಬೆಳೆಯುತ್ತಿದೆ, ಬೆಳಗುತ್ತಿದೆ. ಭಕ್ತರು ಪ್ರೀತಿ-ವಿಶ್ವಾಸದಿಂದ ನಿತ್ಯವೂ ಧರ್ಮಸ್ಥಳಕ್ಕೆ ಬೇಕಾದ ಅಕ್ಕಿ, ಧಾನ್ಯ ಮತ್ತು ತರಕಾರಿಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶುಭಾಶಂಸನೆ ಮಾಡಿದ ಮಂಗಳೂರು ವಿ.ವಿ. ಕುಲಪತಿ ಪ್ರೊ. ಕೆ.ಭೈರಪ್ಪ, ಧರ್ಮಸ್ಥಳವು ವಿಶಿಷ್ಟ ಪುಣ್ಯಕ್ಷೇತ್ರವಾಗಿದ್ದು ಇಲ್ಲಿ ನಿತ್ಯೋತ್ಸವವಾಗಿರುವ ಚತುರ್ದಾನ ಪರಂಪರೆ ಮತ್ತು ಲೋಕಕಲ್ಯಾಣರ್ಥವಾಗಿ ಹೆಗ್ಗಡೆಯವರು ನಿತ್ಯವೂ ಮಾಡುತ್ತಿರುವ ಸೇವಾ ಕಾರ್ಯಗಳು ವಿಶ್ವಕ್ಕೇ ಮಾದರಿಯಾಗಿವೆ ಎಂದು ಅಭಿನಂದಿಸಿದರು.ಸೆಕ್ಷೆಪೋನ್ ಕಲಾವಿದ ಕದ್ರಿ ಗೋಪಾಲನಾಥ್ ಅವರನ್ನು ಹೆಗ್ಗಡೆಯವರು ಸನ್ಮಾನಿಸಿದರು. ದೇವಳದ ಹಿರಿಯ ನೌಕರರನ್ನು ಸನ್ಮಾನಿಸಲಾಯಿತು.
ಸಚಿವ ಕೆ. ಅಭಯಚಂದ್ರ ಜೈನ್, ಹೇಮಾವತಿ ವಿ. ಹೆಗ್ಗಡೆ, ಪ್ರೊ.ಎಸ್.ಪ್ರಭಾಕರ್, ಡಿ. ಸುರೇಂದ್ರ ಕುಮಾರ್, ಡಿ, ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಎಸ್.ಡಿ.ಎಮ್. ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಯಶೋವರ್ಮ ಸ್ವಾಗತಿಸಿದರು. ಅಬ್ರಹಾಂ ಧನ್ಯವಾದವಿತ್ತರು. ಡಾ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.