
ಬಾಗಲಕೋಟೆ: ಸಿದ್ದರಾಮಯ್ಯ ಅವರಿಗೆ ರಾಜಕೀಯ ಮರುಜನ್ಮ ಕೊಟ್ಟ ಬಾಗಲಕೋಟೆಯ ಅಭಿವೃದ್ಧಿಗೆ ಹಣ ನೀಡಲಿಲ್ಲ. ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿಯ ಚಿಂತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು.
ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನಾಮಪತ್ರ ಸಲ್ಲಿಸುವ ಮೊದಲು ನಡೆದ ಬೃಹತ್ ರೋಡ್ ಶೋನಲ್ಲಿ ಅವರು ಮಾತನಾಡಿದ ಅವರು, ಸಿದ್ದರಾಮಯ್ಯ ಬಾಗಲಕೋಟೆಯನ್ನು ಅಭಿವೃದ್ಧಿ ಮಾಡಲಿಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರು ಬಾಗಲಕೋಟೆಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದನ್ನು ನೋಡಿ ಎಂದು ನುಡಿದರು.
ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟ ಆಗಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಾಗಲಕೋಟೆಯ ಪ್ರಜ್ಞಾವಂತ ಮತದಾರರು ಈಗಾಗಲೇ ನಿಶ್ಚಯ ಮಾಡಿದ್ದಾರೆ. ಅವರು ಒಂದು ಬಾರಿ ತಪ್ಪು ಮಾಡಿದ್ದಾರೆ. ಮತ್ತೊಮ್ಮೆ ಅದೇ ತಪ್ಪನ್ನು ಮತ್ತೆ ಮಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಭಾರಿ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ನಮ್ಮ ಉದ್ದೇಶ ಒಂದೇ. ಒಟ್ಟಾಗಿ, ಒಂದಾಗಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುವುದು. ಬಾಗಲಕೋಟೆ ಬಿಜೆಪಿಯ ಭದ್ರಕೋಟೆ. ಇಲ್ಲಿ ಮತ್ತೊಮ್ಮೆ ಕಮಲ ಅರಳಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. 25,000 ಮತಗಳ ಅಂತರದಿಂದ ಚರಂತಿಮಠ ಅವರು ಗೆದ್ದು ಬರಲಿದ್ದಾರೆ ಎಂಬ ಆತ್ಮವಿಶ್ವಾಸ ಇದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಹಿಂದೂಗಳು ಗಣಪತಿ ಹಬ್ಬ ಆಚರಣೆ ಮಾಡಲು ಆಗ್ತಾ ಇಲ್ಲ. ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯಂದು ಶಾಂತಿಯುತವಾಗಿ ಮೆರವಣಿಗೆ ಮಾಡಲು ಸಹ ಬಿಡಲಿಲ್ಲ. ಇದು ಹಿಂದೂ ವಿರೋಧ ಕಾಂಗ್ರೆಸ್ ಸರ್ಕಾರ. ಇದನ್ನು ಬುಡಸಮೇತ ಕಿತ್ತು ಹಾಕಬೇಕು ಎಂದರು.
ಬಿಜೆಪಿಗೆ ಜಾತಿ ಇಲ್ಲ. ಒಳಪಂಗಡ ಇಲ್ಲ. ಕಾಂಗ್ರೆಸ್ನವರು ದಲಿತರ ಹಣವನ್ನು ಲೂಟಿ ಮಾಡಿಕೊಂಡು ಇಲ್ಲಿಗೆ ಬರುತ್ತಾರೆ. ನೂರಾರು ಕೋಟಿ ವೆಚ್ಚ ಮಾಡಿ ಮತದಾರರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡ್ತಾರೆ. ಅದಕ್ಕೆ ಅವಕಾಶ ನೀಡಬೇಡಿ. ಕಮಲ ಅರಳಲು ಒಂದಾಗಿ ಕೆಲಸ ಮಾಡಬೇಕು. ಚರಂತಿಮಠ ಅವರ ಐತಿಹಾಸಿಕ ಗೆಲುವಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


