ಉಡುಪಿ: ಶ್ರೀಕೃಷ್ಣ ಎಂದ ತಕ್ಷಣ ಎಲ್ಲರಿಗೂ ಕಣ್ಮುಂದೆ ಬರುವುದು ಕಡೆಗೋಲು ಹಿಡಿದು ನಿಂತಿರುವ ಕೃಷ್ಣ. ಆದರೆ ಉಡುಪಿ ಕೃಷ್ಣ ದಿನಕ್ಕೊಂದು ಅವತಾರ ಎತ್ತುತ್ತಿದ್ದಾನೆ. ಗರ್ಭಗುಡಿಯೊಳಗಿರುವ ಕೃಷ್ಣ ಇವತ್ತು ಇದ್ದಹಾಗೆ ನಾಳೆ ಇರಲ್ಲ. ಶ್ರೀಕೃಷ್ಣ ಅಲಂಕಾರ ಪ್ರಿಯ ಎಂದೇ ಖ್ಯಾತಿ ಪಡೆದಿರುವುದರಿಂದ ಶ್ರೀಕೃಷ್ಣನಿಗೆ ನಿತ್ಯವೂ ವಿಭಿನ್ನ ಅಲಂಕಾರ ಮಾಡಲಾಗುತ್ತದೆ.
ಅಷ್ಟ ಮಠಗಳ ಮೊದಲ ಮತ್ತು ಹಿರಿಯ ಯತಿ ವಾದಿರಾಜ ಸ್ವಾಮಿಗಳು ಶ್ರೀಕೃಷ್ಣನಿಗೆ ವಿಭಿನ್ನ ಅಲಂಕಾರ ಮಾಡುವ ಪರಿಪಾಠವನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಈ ಸಂಪ್ರದಾಯ ಮುಂದುವರೆದಿದೆ. ಇಲ್ಲಿ ಕೃಷ್ಣನಿಗೆ ದಿನಕ್ಕೊಂದು ಅಲಂಕಾರ ಮಾಡಲಾಗುತ್ತದೆ. ಪ್ರತಿ ಅಲಂಕಾರದಲ್ಲೂ ಮೂಲಮೂರ್ತಿ ವಿಭಿನ್ನವಾಗಿ ಕಾಣುತ್ತದೆ. ಅದರಲ್ಲೂ ನವರಾತ್ರಿ ಬಂತೆಂದರೆ ಸಾಕು ನಿತ್ಯವೂ ಕೃಷ್ಣ ಸ್ತ್ರೀರೂಪ ತಾಳುತ್ತಾನೆ.
ಉಡುಪಿಯ ಶ್ರೀಕೃಷ್ಣನಿಗೆ 9 ದಿನಗಳ ಕಾಲ ಒಂಬತ್ತು ದೇವಿಯರ ಅಲಂಕಾರ ಮಾಡಲಾಗುತ್ತದೆ. ತೊಟ್ಟಿಲಲ್ಲಿ ತೂಗುವ ಯಶೋಧೆ, ಅಂತಃಪುರದ ರುಕ್ಮಿಣಿ, ಅಶೋಕವನದ ಸೀತೆ, ಮಹಿಷಾಸುರ ಮರ್ದಿನಿ, ವೀಣಾಪಾಣಿ ಶಾರದೆ ಹೀಗೆ ವಿಭಿನ್ನ ಅಲಂಕಾರಗಳಲ್ಲಿ ಶ್ರೀಕೃಷ್ಣ ಪರಮಾತ್ಮ ಭಕ್ತರನ್ನು ಸೆಳೆದಿದ್ದಾನೆ.
ವಾದಿರಾಜ ಸ್ವಾಮಿಗಳು ಈವರೆಗೆ 260 ಅಲಂಕಾರಗಳನ್ನು ಮಾಡಿದ್ದು ಕೊನೆಯ ಪರ್ಯಾಯದಲ್ಲಿ ಶೀರೂರು ಸ್ವಾಮೀಜಿ 260 ಅಲಂಕಾರಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಕಡೆಗೋಲು ಕೃಷ್ಣ ದಿನಕ್ಕೊಂದು ಅಲಂಕಾರಗಳಲ್ಲಿ ಭಕ್ತರಿಗೆ ದರ್ಶನ ಕೊಡುವುದು ವಿಶೇಷ. ನವರಾತ್ರಿ ಸಂದರ್ಭ ನೀವೆನಾದರೂ ಉಡುಪಿ ಕಡೆ ಬಂದರೆ ಶ್ರೀಕೃಷ್ಣನನ್ನು ದೇವಿ ಅಲಂಕಾರದಲ್ಲಿ ಕಣ್ತುಂಬಿಕೊಳ್ಳಬಹುದು ಎನ್ನುತ್ತಾರೆ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.