
ಸ್ವಾತಂತ್ರ್ಯ ಹೋರಾಟದ ವಿಷಯ ಬಂದಾಗಲೆಲ್ಲಾ ಆರ್ಎಸ್ಎಸ್ ಮತ್ತು ಡಾ. ಹೆಡ್ಗೆವಾರ್ ಜಿ ಮೌನವಾಗಿದ್ದರು ಎಂಬ ಅಪವಾದ ಹೊರಿಸಲಾಗುತ್ತದೆ, ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಆರ್ಎಸ್ಎಸ್ ಮತ್ತು ಅದರ ಕಾರ್ಯಕರ್ತರು ಬ್ರಿಟಿಷ್ ಆಡಳಿತವನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದರು ಎಂಬುದನ್ನು ಇತಿಹಾಸದ ಅನೇಕ ನಿದರ್ಶನಗಳು ಸಾಬೀತುಪಡಿಸುತ್ತವೆ.
ಅಂತಹ ಒಂದು ನಿದರ್ಶನ ನೆಹರೂ, ಕಾಂಗ್ರೆಸ್ ಧ್ವಜ ಮತ್ತು ವೀರ ಕಿಶನ್ಸಿಂಗ್ ಅವರನ್ನೊಳಗೊಂಡಿದೆ.
ಡಿಸೆಂಬರ್ 1936ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಫೈಜ್ಪುರದಲ್ಲಿ ಸಭೆ ಸೇರಿದಾಗ, ಒಂದು ಮುಜುಗರದ ಮೌನ ಹರಡಿತ್ತು. ಅಧಿವೇಶನದ ಆರಂಭ ಸೂಚಿಸಲು ಹಾರಿಸಲಾದ ಕಾಂಗ್ರೆಸ್ ಧ್ವಜವು 80 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಮಧ್ಯದಲ್ಲಿ ಸಿಲುಕಿಕೊಂಡಿತ್ತು. ನಾಯಕರು ಮೇಲಕ್ಕೆ ನೋಡಿದರು. ಸ್ವಯಂಸೇವಕರು ಪ್ರಯತ್ನಿಸಿ ವಿಫಲರಾದರು. ಬ್ರಿಟಿಷ್ ಆಳ್ವಿಕೆಯನ್ನು ಭಾರತ ಧಿಕ್ಕರಿಸುವುದನ್ನು ಸಂಕೇತಿಸಲು ಉದ್ದೇಶಿಸಲಾದ ಸಮ್ಮೇಳನವು ಪ್ರಾರಂಭವಾಗುವ ಮೊದಲೇ ಮುಜಗರ ಅನುಭವಿಸಿತು
ತಕ್ಷಣವೇ, ಶಿರ್ಪುರದ ಯುವ ಸ್ವಯಂಸೇವಕ ಕಿಶನ್ಸಿಂಗ್ ರಾಜಪುತ್ ಮುಂದೆ ಬಂದು ಕ್ಷಣ ಮಾತ್ರದಲ್ಲಿ ಕಂಬವನ್ನು ಹತ್ತಿದರು, ಸಿಕ್ಕಿಬಿದ್ದ ಧ್ವಜವನ್ನು ಸರಿಪಡಿಸಿದರು ಮತ್ತು ಸಾವಿರಾರು ಜನರ ಮುಂದೆಯೇ ಅದನ್ನು ಗೌರವಯುತವಾಗಿ ಹಾರಿಸಿದರು. ಜನಸಮೂಹದಲ್ಲಿ ಸಂಭ್ರಮದ ಅಲೆ ತೇಲಿತು. ಕಾಂಗ್ರೆಸ್ ನಾಯಕರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಹಾಡಿ ಹೊಗಳಿದರು. ನೆಹರೂ ಅವರು ಅವರ ಬೆನ್ನು ತಟ್ಟಿ ಸಂಜೆಯ ಮುಖ್ಯ ಸಭೆಯಲ್ಲಿ ಸನ್ಮಾನಿಸುವುದಾಗಿ ಹೇಳಿದರು.
ಆದರೆ ಕಿಶನ್ ಸಿಂಗ್ ಯಾವಾಗ ಸಂಘದ ಕಾರ್ಯಕರ್ತ ಎಂದು ತಿಳಿಯಿತೋ ಅವರ ನಿರ್ಧಾರವೇ ಬದಲಾಯಿತು. ಸಮಸ್ಯೆ ಉದ್ಭವಿಸಬಹುದು ಎಂದು ಅವರನ್ನು ಗೌರವಿಸುವ ನಿರ್ಧಾರವನ್ನು ಸದ್ದಿಲ್ಲದೆ ಕೈಬಿಡಲಾಯಿತು.
ಕಿಶನ್ಸಿಂಗ್ಗೆ ಸನ್ಮಾನ ಮಾಡುವ ನಿರ್ಧಾರವನ್ನು ಕೈಬಿಡಲಾಗಿದೆ ಎಂಬ ಸುದ್ದಿ ಹೆಡ್ಗೆವಾರ್ಗೂ ತಲುಪಿತು, ಅವರು ಪ್ರತಿಭಟಿಸಲಿಲ್ಲ, ಹೇಳಿಕೆಗಳನ್ನು ನೀಡಲಿಲ್ಲ. ಬದಲಿಗೆ ಮಾರ್ಚ್ 23, 1937ರಂದು ಧುಲೆಯಲ್ಲಿ ಸಂಘ ಶಾಖೆಗೆ ಕಿಶನ್ಸಿಂಗ್ ಅವರನ್ನು ಆಹ್ವಾನಿಸಿದರು. ಅಲ್ಲಿ ಡಾ. ಅವರನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಅಪ್ಪಟ ಬೆಳ್ಳಿಯಿಂದ ಮಾಡಿದ ಲೋಟವನ್ನು ಪ್ರದಾನ ಮಾಡಿದರು. ಅದು ಕಿಶನ್ ಸಿಂಗ್ ಅವರಿಗೆ ದೊರೆತ ಬಲು ಅಪರೂಪದ ಸಾರ್ವಜನಿಕ ಗೌರವ.
ನಂತರ ಮಾತನಾಡಿದ ಹೆಡ್ಗೆವಾರ್ ಜೀ ಅವರು, “ಸ್ವಯಂಸೇವಕ ರಾಷ್ಟ್ರಕ್ಕೆ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ಜೀವವನ್ನು ಬೇಕಾದರೂ ಪಣಕ್ಕಿಡುತ್ತಾನೆ – ಇದು ಅವನ ಧರ್ಮ” ಎಂದರು. ಅವರ ಈ ಮಾತು ಅಲ್ಲಿ ನೆರೆದಿದ್ದ 500ಕ್ಕೂ ಹೆಚ್ಚು ಜನರನ್ನು ಹುರಿದುಂಬಿಸಿದತು.
ಇದು ಕೇವಲ ಅವರ ವಾಕ್ಚಾತುರ್ಯವಲ್ಲ, ಅದು ಸಿದ್ಧಾಂತವಾಗಿತ್ತು.
ಈ ನಡುವೆ ಸಂಘದ ಬಗ್ಗೆ ಸಹಾನುಭೂತಿ ಹೊಂದಿದ್ದ ಕಾಂಗ್ರೆಸ್ಸಿಗ ಡಾ. ಕಾಕಾಸಾಹೇಬ್ ತೆಂಬೆ ಅವರು ಕಿಶನ್ ಸಿಂಗ್ ಅವರನ್ನು ಸನ್ಮಾನಿಸುವ ನಿರ್ಧಾರವನ್ನು ಕೈಬಿಟ್ಟಿದ್ದನ್ನು ಕಂಡು ವಿಚಲಿತರಾಗಿದ್ದರು. ಅವರು ಹೆಡ್ಗೆವಾರ್ ಅವರಿಗೆ ಪತ್ರ ಬರೆದು ಕಾಂಗ್ರೆಸ್ಸಿನ ಕಾರ್ಯವೈಖರಿ ಮತ್ತು ಸೈದ್ಧಾಂತಿಕ ದೃಷ್ಟಿಕೋನವನ್ನು ಟೀಕಿಸುವಂತೆ ವಿನಂತಿಸಿದರು. ಆದರೆ ಡಾ. ಹೆಡ್ಗೆವಾರ್ ಅವರ ಅಭಿಪ್ರಾಯವನ್ನು ಒಪ್ಪಲಿಲ್ಲ. ಸ್ವಯಂಸೇವಕರ ಮನಸ್ಸಿನಲ್ಲಿ ಕಾಂಗ್ರೆಸ್ ಬಗ್ಗೆ ಯಾವುದೇ ಅಸಮಾಧಾನವನ್ನು ಬಿತ್ತಲು ಅವರು ಬಯಸಲಿಲ್ಲ.
ಈ ನಿಲುವು ರಾಜಕೀಯ ಅನುಕೂಲದಿಂದ ಬಂದಿಲ್ಲ. ಅದು ಹೆಡ್ಗೆವಾರ್ ಅವರ ಸ್ವಂತ ಕ್ರಾಂತಿಕಾರಿ ಮನಸ್ಥಿತಿಯಿಂದ ಬಂದಿತು. ಆರ್ಎಸ್ಎಸ್ ಅಸ್ತಿತ್ವಕ್ಕೆ ಬರುವ ಮೊದಲೇ ಬ್ರಿಟಿಷರು ಹೆಡ್ಗೆವಾರ್ ಅವರ ಹೆಸರನ್ನು ತಿಳಿದಿದ್ದರು. 1909ರಲ್ಲಿ ದಂಗೆಗೆ ಪ್ರಚೋದನೆ ಮತ್ತು ಪೊಲೀಸ್ ಠಾಣೆಯ ಮೇಲೆ ಬಾಂಬ್ ಎಸೆದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. 1921ರಲ್ಲಿ ಅಸಹಕಾರ ಚಳವಳಿಯ ಸಮಯದಲ್ಲಿ ನಾಗ್ಪುರದಲ್ಲಿ ರಾಜದ್ರೋಹದ ಆರೋಪದ ಮೇಲೆ ಜೈಲಿಗೆ ಕೂಡ ಹೋಗಿದ್ದರು. ನ್ಯಾಯಾಲಯದಲ್ಲಿ ಬ್ರಿಟಿಷ್ ಆಡಳಿತವನ್ನು ಅವರು “ಅಮಾನವೀಯ, ಅನೈತಿಕ, ಕಾನೂನುಬಾಹಿರ ಮತ್ತು ಕ್ರೂರ” ಎಂದು ಕರೆದಿದ್ದರು. 1930ರಲ್ಲಿ ನಾಗರಿಕ ಅಸಹಕಾರ ಚಳವಳಿಯಲ್ಲಿ ಅರಣ್ಯ ಸತ್ಯಾಗ್ರಹವನ್ನು ಮುನ್ನಡೆಸಿ ಮತ್ತೆ ಒಂಬತ್ತು ತಿಂಗಳು ಜೈಲುವಾಸ ಅನುಭವಿಸಿದರು.
ಅವರ ಪ್ರತಿರೋಧವು ಬ್ರಿಟಿಷರನ್ನು ಭಯಭೀತಗೊಳಿಸಿತು, ಅವರನ್ನು “ಸಂಭವನೀಯ ಅಪಾಯಕಾರಿ ರಾಜಕೀಯ ಅಪರಾಧಿ” ಎಂದು ವರ್ಗೀಕರಿಸಲಾಯಿತು. ಅಷ್ಟೇ ಅಲ್ಲದೇ ಮಹಾನ್ ಸ್ವಾತಂತ್ರ್ಯ ಸೇನಾನಿ ನೇತಾಜಿಯವರು ಹೆಡ್ಗೆವಾರ್ ಅವರನ್ನು ಇಹಲೋಕ ತ್ಯಜಿಸುವ ಒಂದು ದಿನದ ಮೊದಲು ಭೇಟಿಯಾಗಿದ್ದರು ಎಂಬ ವರದಿಗಳಿವೆ.
ಕಿಶನ್ಸಿಂಗ್ ಘಟನೆಯು ಕೇವಲ ಒಂದ ನಿದರ್ಶನವಲ್ಲ, ಅದು ನೀಲನಕ್ಷೆ. ಡಾ. ಹೆಡ್ಗೆವಾರ್ ಸ್ವಯಂಸೇವಕರನ್ನು ಗೌರವಿಸುತ್ತಿದ್ದರು ಆದರೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ನಿರಾಕರಿಸಿದ್ದರು. ಇದು ಆರ್ಎಸ್ಎಸ್ನ ತತ್ವವನ್ನು ತೋರಿಸುತ್ತದೆ . ರಾಷ್ಟ್ರದ ಏಕತೆ ಮತ್ತು ಸ್ವಾತಂತ್ರ್ಯಕ್ಕಾಗಿ ಯಾವುದೇ ಪಕ್ಷದ ನಿಷ್ಠೆಗಿಂತ ಮುಖ್ಯವಾದದ್ದು ರಾಷ್ಟ್ರ ಸೇವೆ ಎಂಬ ಅದರ ಧ್ಯೇಯವನ್ನು ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


