
ಜನವರಿ 23, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಸಂದರ್ಭದಲ್ಲಿ, ನಮ್ಮ ಹೃದಯಗಳು ಅವರ ಅದಮ್ಯ ಚೈತನ್ಯದ ಸ್ಮರಣೆಯಲ್ಲಿ ಮಿಂದೇಳುತ್ತವೆ. ಆ ನೆನಪುಗಳ ನಡುವೆ, ಅವರ ಒಂದು ಮೌನ ಯಾತ್ರೆಯ ಕಥೆಯನ್ನು ಮತ್ತೆ ಜೀವಂತಗೊಳಿಸುವ ಪ್ರಯತ್ನ ಇಲ್ಲಿದೆ.
ಅದು ಡಿಸೆಂಬರ್ 30, 1943, ಪೋರ್ಟ್ ಬ್ಲೇರ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಅಭೂತಪೂರ್ವ ಸಂದರ್ಭ. ಈ ಐತಿಹಾಸಿಕ ಘಟನೆಯನ್ನು ಸಾಧ್ಯವಾಗಿಸಿದ್ದ ನೇತಾಜಿ ಅವರು ಜನರ ಚಪ್ಪಾಳೆ ಸದ್ದು ಮಾಯವಾಗುವ ಮುನ್ನವೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರುವ ಸೆಲ್ಯುಲಾರ್ ಜೈಲಿಗೆ ಹೆಜ್ಜೆಯಿಟ್ಟ ಭಾವಪೂರ್ಣ ಕ್ಷಣ. ಕಾಲಾ ಪಾನಿ ಕಿ ಸಾಜಾ (ಕರಿ ನೀರಿನ ಶಿಕ್ಷೆ) ಎಂದು ಕರೆಯಲ್ಪಡುವ ಆ ಜೈಲು, ಭಾರತೀಯರೆದೆಯಲ್ಲಿ ಭಯದ ಛಾಯೆಯಾಗಿ, ದುಃಖದ ಸುಳಿಯಾಗಿ ನೆಲೆಸಿತ್ತು. ನೇತಾಜಿ ಅವರನ್ನು ಅವರನ್ನು ಏಕಾಂತದ ಕತ್ತಲೆಯಲ್ಲಿ ಮುಳುಗಿಸಿ ಚಿತ್ರಹಿಂಸೆಯ ಆಳಕ್ಕೆ ತಳ್ಳಿದ ದುಃಖದ ಕೋಟೆಯದು.
ಹಾಗಾದರೆ, ಕಾಲಾ ಪಾನಿ ಎಂದರೇನು? ಆ ಭಯಾನಕತೆಯ ಹಿಂದಿರುವ ಹೃದಯವಿದ್ರಾವಕ ಸತ್ಯವೇನು?
ನೇತಾಜಿ ಕಾಲಿಟ್ಟ ಆ ಕಾಲಾ ಪಾನಿ, ಬ್ರಿಟಿಷ್ ಕ್ರೌರ್ಯದ ಸಂಕೇತ. ಸ್ವಾತಂತ್ರ್ಯಕ್ಕಾಗಿ ಸಿಡಿದೆದಿದ್ದ ಭಾರತೀಯನ ಚೈತನ್ಯವನ್ನು ಹತ್ತಿಕ್ಕುವ ಸಲುವಾಗಿಯೇ ಉದ್ದೇಶಪೂರ್ವಕವಾಗಿ ನಿರ್ಮಿಸಲ್ಪಟ್ಟ ಆ ಜೈಲನ್ನು “ಸೆಲ್ಯುಲಾರ್” ಎಂದೂ ಕರೆಯಲಾಗುತ್ತದೆ, ಏಕೆಂದರೆ ಪ್ರತಿ ಖೈದಿಯೂ ಸಂಪೂರ್ಣ ಏಕಾಂತದಲ್ಲಿ, ತನ್ನದೇ ಆದ ಕತ್ತಲ ಕೋಣೆಯಲ್ಲಿ ಅಲ್ಲಿ ಬಂಧಿಯಾಗಿರಬೇಕಿತ್ತು. ಏಳು ಕಂಬಿಗಳ ಆ ಗೂಡಿನಲ್ಲಿ ಒಂದು ಸೆಲ್ನ ಮುಂಭಾಗವು ಇನ್ನೊಂದು ಸೆಲ್ನ ಹಿಂಭಾಗಕ್ಕೆ ಎದುರಾಗಿ ನಿಲ್ಲುವಂತೆ ನಿರ್ಮಾಣ ಮಾಡಲಾಗಿತ್ತು. ಎರಡು ದೇಹಗಳ ನಡುವೆ ಒಂದು ನೋಟ, ಒಂದು ಮಾತು ಸಹ ಸಾಧ್ಯವಿಲ್ಲದಂತಹ ರೀತಿಯಲ್ಲಿ ಅದು ವಿನ್ಯಾಸಗೊಂಡಿತ್ತು. ಕೈದಿಗಳನ್ನು ಹಿಂಸಿಸಲೆಂದೇ ಜೈಲರ್ಗಳು ಕೈದಿಯನ್ನು ಒಳಗೆ ಬಂಧಿಸಿ ಕೀಲಿಯನ್ನು ಸೆಲ್ನೊಳಗೆ ಎಸೆಯುತ್ತಿದ್ದರು, ಆದರೆ ಒಳಗಿನಿಂದ ಆ ಕೀಲಿಯನ್ನು ತಲುಪಲು ಸಾಧ್ಯವಿಲ್ಲದಂತೆ ಬೀಗವನ್ನು ಜಾಣತನದಿಂದ ಜಡಿಯಲಾಗುತ್ತಿತ್ತು. ಆ ಕಿರಿದಾದ, ಉಸಿರುಗಟ್ಟಿಸುವ ಸೆಲ್ಗಳ ಒಳಗೆ, ಕೈದಿಗಳು ಬೆನ್ನುಮೂಳೆ ಮುರಿಯುವಂತಹ ಶ್ರಮದ ಹೊರೆಯನ್ನು ಹೊತ್ತು, ಬ್ರಿಟಿಷರ ಬೂಟಿನ ಹೊಡೆತಗಳನ್ನು ತಿಂದು, ಹಸಿವಿನ ಜ್ವಾಲೆಯಲ್ಲಿ ಕರಗಿ, ಏಕಾಂತದ ಕತ್ತಲೆಯಲ್ಲಿ ಜೀವಿಸಬೇಕಿತ್ತು. ಆ ಸ್ಥಳ ಕೇವಲ ಜೈಲಲ್ಲ, ಭಾರತದ ಅತ್ಯಂತ ಧೈರ್ಯಶಾಲಿ ಕ್ರಾಂತಿಕಾರಿಗಳ ಗುರುತನ್ನು ಅಳಿಸುವ, ಘನತೆಯನ್ನು ಕಸಿಯುವ, ಭರವಸೆಯನ್ನು ನುಂಗುವ ದುಃಸ್ವಪ್ನದ ಕಂದರವಾಗಿತ್ತು. ಪ್ರತಿ ಗೋಡೆಯ ಮೇಲೆ ಕೆತ್ತಲ್ಪಟ್ಟ ದುಃಖದ ಕಥೆಗಳು, ಇಂದಿಗೂ ಹೃದಯವನ್ನು ಕಲಕುತ್ತವೆ.
ಕಾಲಾ ಪಾನಿಯ ಹುತಾತ್ಮರು ನೇತಾಜಿಯೊಂದಿಗೆ ಮಾತನಾಡಿದಾಗ – ಆ ಮೌನದ ಸಂಭಾಷಣೆಯ ಭಾವಪೂರ್ಣ ಕ್ಷಣಗಳು
ಅಲ್ಲಿ ನೇತಾಜಿ, ಕೇವಲ ಗೋಡೆಗಳು ಮತ್ತು ಕಬ್ಬಿಣದ ಸರಳುಗಳ ನಡುವೆ ಸಿಲುಕಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಹಿಂದೆ ಆ ಸೆಲ್ಗಳನ್ನು ತುಂಬಿದ್ದ ಹುತಾತ್ಮರ ಕಾಡುವ ನೆನಪುಗಳೊಂದಿಗೆ ಸಂವಾದಿಸುತ್ತಿದ್ದರು. ಭಾರತದ ಪುನರುತ್ಥಾನದ ಧ್ಯಾನದಲ್ಲಿ ಮುಳುಗಿದ್ದ ನೇತಾಜಿ ಅವರೆನ್ನೆಲ್ಲಾ ನೆನಪಿಸಿಕೊಂಡಿರಬಹುದು – ಆ ಸೆಲ್ನೊಳಗೆ ಅವರಿಟ್ಟ ಪ್ರತಿ ಹೆಜ್ಜೆಯಲ್ಲಿ ಹುತಾತ್ಮರ ಚೈತನ್ಯದ ಉಸಿರು ಸುಳಿದಿರಬೇಕು. 1911ರಿಂದ 1921ರವರೆಗೆ ಎರಡು ಜೀವಾವಧಿ ಶಿಕ್ಷೆಯಡಿಯಲ್ಲಿ ಆ ಜೈಲಿನಲ್ಲಿ ನರಳಿದ್ದ ವೀರ ಸಾವರ್ಕರ್ ಅವರ ವೀರತ್ವದ ಕೂಗು, 1929ರ ಲಾಹೋರ್ ಪಿತೂರಿಯ ನಂತರ ಕಾಲಾ ಪಾನಿಗೆ ಗಡೀಪಾರಾಗಿದ್ದ ಬಟುಕೇಶ್ವರ್ ದತ್ ಅವರ ಧಿಕ್ಕಾರದ ಘೋಷಣೆಗಳು, ಅಲಿಪೋರ್ ಬಾಂಬ್ ಪ್ರಕರಣದಲ್ಲಿ 12 ವರ್ಷಗಳ ಜೈಲುವಾಸದಲ್ಲಿ ಬರೀಂದ್ರ ಕುಮಾರ್ ಘೋಷ್ ಅವರ ಉದ್ಘಾರಗಳು ನೇತಾಜಿಯ ಕಿವಿಗಳಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸಿರಬಹುದು. ಮೇಣದಬತ್ತಿಯ ಮಂದ ಬೆಳಕಿನಲ್ಲಿ ಜೈಲಿನ ಗೋಡೆಯ ಮೇಲೆ ಮೂಡಿದ್ದ ರೇಖಾಚಿತ್ರಗಳನ್ನು ನೋಡುತ್ತಾ ನೇತಾಜೀ ಹೃದಯದಲ್ಲಿ ಭರವಸೆಯ ಹೊಂಬೆಳಕು ಮೂಡಿರಬಹುದು. ಹುತಾತ್ಮರ ಸ್ವಾತಂತ್ರ್ಯದ ಕೂಗು ಅವರಲ್ಲಿ ಮತ್ತಷ್ಟು ಕಿಚ್ಚನ್ನು ಹೊತ್ತಿಸಿರಬಹುದು.
ಮುಜಾಫರ್ಪುರ ಬಾಂಬ್ ಪ್ರಕರಣದ ನಂತರ ತಪ್ಪಿಸಿಕೊಳ್ಳುವ ಪ್ರಯತ್ನಗಳಲ್ಲಿ ಸಿಕ್ಕಿಬಿದ್ದಿದ್ದ ಉಲ್ಲಾಸ್ಕರ್ ದತ್ , ಜೀವಾವಧಿ ಶಿಕ್ಷೆಯಿಂದ ನರಳಿದ್ದ ಹೇಮಚಂದ್ರ ಕನುಂಗೊ ಅವರ ಪ್ರೇರಣೆ ನೇತಾಜಿಯವರ ಚೈತನ್ಯವನ್ನು ಜೈಲಿನ ಕಂಬಿಗಳ ನಡುವೆ ಜೀವಂತವಾಗಿಟ್ಟಿತ್ತು. ಉಪೇಂದ್ರನಾಥ್ ಬ್ಯಾನರ್ಜಿ ಅವರು ಬಂಧನದಲ್ಲಿದ್ದಾಗ ಧರ್ಮ ಶ್ಲೋಕಗಳನ್ನು ಗೋಡೆಗಳ ಮೇಲೆ ಕೆತ್ತುತ್ತಾ, ಆತ್ಮಬಲದ ಬೆಳಕನ್ನು ಹರಡಿದ್ದರು. ಭಾಯಿ ಪರಮಾನಂದ್ ಮತ್ತು ದಿವಾನ್ ಸಿಂಗ್ ಧಿಲ್ಲೋನ್ ಅವರು ಅನುಭವಿಸಿದ್ದ ಛಡಿಯೇಟುಗಳ ಸದ್ದು ಹಾಡಿನಂತೆ ಆ ಕಂಬಿಗಳೊಳಗೆ ಪ್ರತಿಧ್ವನಿಸಿರಬೇಕು,. 1930ರ ದಶಕದಲ್ಲಿ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆಗಳನ್ನು ಮುನ್ನಡೆಸಿದ ಯೋಗೇಂದ್ರ ಶುಕ್ಲಾ ಅವರ ದೃಢಸಂಕಲ್ಪ, ಆ ಗೋಡೆಗಳಲ್ಲಿ ಪ್ರತಿಬಿಂಬಿಸಿರಬೇಕು ಮತ್ತು ಅದು ನೇತಾಜಿಯ ಹೃದಯವನ್ನು ಮತ್ತಷ್ಟು ಕದಕಿರಬಹುದು.
ನೇತಾಜಿ ಆ ಜೈಲಿಗೆ ಈ ಎಲ್ಲಾ ಹುತಾತ್ಮರ ಚೈತನ್ಯವು ಅವರನ್ನು ಆವರಿಸಿರಬೇಕು – ತಾನು ಹಾರಿಸಿದ ತ್ರಿವರ್ಣ ಧ್ವಜವು ಕೇವಲ ಪರಾಕಾಷ್ಠೆಯಲ್ಲ, ಬದಲಾಗಿ ಸ್ವಾತಂತ್ರ್ಯದ ಕ್ರಿಯೆಗೆ ಕರೆಯಾಗಿತ್ತು ಎಂದು ಆಗ ಅವರಿಗೆ ತಿಭಾಸವಾಗಿರಬಹುದು. 1943ರಲ್ಲಿ, ಅಪೂರ್ಣ ಯುದ್ಧವನ್ನು ಮುಂದುವರಿಸುವ ದೃಢತೆಯೊಂದಿಗೆ ನೇತಾಜಿ ಮುನ್ನಡೆದರು – ಸಾವರ್ಕರ್, ದತ್, ಘೋಷ್, ಶುಕ್ಲಾ ಮತ್ತು ಅಸಂಖ್ಯಾತ ಇತರರ ತ್ಯಾಗಗಳು ಅರ್ಥಪೂರ್ಣವಾಗಿ ಫಲಿಸುತ್ತಿರುವಾಗ ಸ್ವತಂತ್ರ ಭಾರತದ ಕನಸು ನೇತಾಜಿ ಅವರ ಹೃದಯದಲ್ಲಿ ಜ್ವಲಿಸುತ್ತಿರಬೇಕು. ಕಾಲಾ ಪಾನಿಗೆ ನೇತಾಜಿ ಅವರ ಮೌನ ಯಾತ್ರೆ, ಕೇವಲ ಇತಿಹಾಸದ ಪುಟವಲ್ಲ; ನಮ್ಮ ಆತ್ಮದಲ್ಲಿ ಶಾಶ್ವತವಾಗಿ ಬೆಳಗುವ ಪ್ರೇರಣೆಯ ದೀಪ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


