ಬೈಂದೂರು : ಬೈಂದೂರು ಸಮುಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಆಚಾರ್ಯ ಎಂಬುವವರು ಶಿಕ್ಷಣ ಹಕ್ಕು ಕಾಯಿದೆಯಡಿ ಸೀಟು ನೀಡಲು ಮಗುವಿನ ಮೂಲಪ್ರತಿಗೆ ಸಹಿ ಹಾಕಲು ಹತ್ತು ಸಾವಿರ ರೂ. ಬೇಡಿಕೆಯಿಟ್ಟಿದ್ದು, ಮಗುವಿನ ತಂದೆಯಿಂದ ಮಂಗಳವಾರ ಬೆಳಗ್ಗೆ ಖಂಬದಕೋಣೆ ಜಂಕ್ಷನ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಯುಕ್ತ ಪೋಲಿಸರು ಬಂಧಿಸಿದ್ದಾರೆ.
ಘಟನೆ ವಿವರ: ನಾಗೂರು ಕಟಾರಿ ಹೊಸಹಿತ್ಲು ಗಂಗಾಧರ ಎಂಬುವವರು ತಮ್ಮ ಪುತ್ರ ಪ್ರಜ್ವಲ್ (4) ನನ್ನು ಖಂಬದಕೋಣೆಯಲ್ಲಿರುವ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಗೆ ದಾಖಲು ಮಾಡಲು ಆರ್ಟಿಇಯಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅವರ ದಾಖಲಾತಿ ಪುರಸ್ಕೃತಗೊಂಡಿತ್ತು. ಈ ಬಗ್ಗೆ ಶಾಲೆಯಿಂದಲೂ ಅಧೀಕೃತ ಸಂದೇಶ ಗಂಗಾಧರ ಮೊಬೈಲ್ಗೆ ಬಂದಿತ್ತು. ಆದರೆ ಕಂಬದಕೋಣೆಯ ಸಿಆರ್ಪಿ ನಿತ್ಯಾನಂದ ಅವರು ಮಗುವಿನ ಮೂಲಪತ್ರಿಗೆ ನಮ್ಮ ಸಹಿ ಅಗತ್ಯ, ಬಿಆರ್ಸಿ ಕಛೇರಿಯ ಮೊಹರು ಬೇಕಾಗುತ್ತದೆ ಅದಕ್ಕಾಗಿ 10 ಸಾವಿರ ರೂ. ಖರ್ಚಿದೆ ಎಂದು ದಾರಿ ತಪ್ಪಿಸಿ ಕೂಡಲೇ ಹಣ ನೀಡುವಂತೆ ಒತ್ತಾಯಿಸಿದ್ದಾರೆ.ಪ್ರಜ್ವಲ್ನ ತಂದೆ ಗಂಗಾಧರ ಅವರು ಸ್ವಲ್ಪ ಚೌಕಾಸಿ ಮಾಡಿ ಎಂಟು ಸಾವಿರ ನೀಡಲು ಒಪ್ಪಿಕೊಂಡಿದ್ದು, ಅದರಂತೆ ಮಂಗಳವಾರ ಬೆಳಗ್ಗೆ ಖಂಬದಕೋಣೆ ಜಂಕ್ಷನ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ಪಿ ನಾಗೇಶ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಸಿಆರ್ಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಕೃಷ್ಣಾನಂದ ನಾಯಕ್, ಮೋಹನ್ ಕೊಠಾರಿ, ಸಿಬ್ಬಂದಿಗಳಾದ ನಾಗೇಶ ಉಡುಪ, ರಿಯಾಜ್ ಅಹಮದ್, ರಘುರಾಮ, ಸತ್ಯಾವತಿ, ಶ್ರೀಧರ, ದಿನೇಶ, ಅಶೋಕ, ಶಿವರಾಯ ಬಿಲ್ಲವ, ಲಕ್ಷ್ಮೀಧರ ಸೇತು, ದಿವಾಕರ ಶರ್ಮ, ಸಂತೋಷ ಪಾಲ್ಗೊಂಡಿದ್ದರು.
ಸರಕಾರ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿರುವ ಈ ಯೋಜನೆಯನ್ನು ಸುಶೀಕ್ಷಿತ ಕೆಲವು ಶಿಕ್ಷಕರು ದುರುಪಯೋಗ ಪಡಿಸಿಕೊಳ್ಳುತ್ತಿರುವ ರೀತಿ ಸಮಾಜಕ್ಕೆ ಒಂದು ದೊಡ್ಡ ಕಪ್ಪು ಚುಕ್ಕೆ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ.- ನಾಗೇಶ ಶೆಟ್ಟಿ, ಲೋಕಾಯುಕ್ತ ಡಿವೈಎಸ್ಪಿ ಉಡುಪಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.