ಮಲ್ಲಹಿಪುರ್ವಾ ಗ್ರಾಮದಲ್ಲಿ ಶಿಕ್ಷಣಕ್ಕೆ ಕೊನೆಯ ಆದ್ಯತೆ. ಅದರಲ್ಲೂ ಹೆಣ್ಣು ಹುಟ್ಟುವುದೇ ಮನೆಗೆಲಸ ಮಾಡಲು ಎಂದು ಭಾವಿಸಿರುವ ಈ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಎಂಬುದು ಕೈಗೆಟುಕದ ಆಗಸದಂತೆ. ಈ ಎಲ್ಲಾ ಅಡೆತಡೆಗಳ ನಡುವೆಯೂ ಯುವತಿಯೊಬ್ಬಳು ಶಿಕ್ಷಿತಳಾಗಿದ್ದು ಮಾತ್ರವಲ್ಲ ಶಾಲೆಯನ್ನೂ ನಿರ್ಮಿಸಿ ನೂರಾರು ಮಕ್ಕಳಿಗೆ ವಿದ್ಯೆಯೆಂಬ ಉಡುಗೊರೆಯನ್ನು ನೀಡಿದ್ದಾಳೆ.
ಮಲ್ಲಹಿಪುರ್ವಾ ಗ್ರಾಮ ಉತ್ತರಪ್ರದೇಶದ ರಾಜಧಾನಿ ಲಕ್ನೋದಿಂದ 150 ಕಿ.ಮೀ ದೂರದಲ್ಲಿದೆ, ನಿರ್ಲಕ್ಷ್ಯ ಮತ್ತು ಅಭಾವಕ್ಕೆ ಸ್ಪಷ್ಟ ಉದಾಹರಣೆಯಾಗಿ ಈ ಗ್ರಾಮ ಗೋಚರಿಸುತ್ತದೆ. ಮೀನುಗಾರಿಗೆ ಮಾಡುವ ಮಲ್ಲಾಹಾಸ್ ಸಮುದಾಯ ಈ ಗ್ರಾಮದಲ್ಲಿ ಪ್ರಾಬಲ್ಯ ಹೊಂದಿದೆ, ಶಿಕ್ಷಣ ಎನ್ನುವುದು ಇಲ್ಲಿನ ಮಕ್ಕಳಿಗೆ ಕೊನೆಯ ಆದ್ಯತೆ. ಹೆಣ್ಣು ಮಕ್ಕಳು ಸದಾ ಮೀನಿನ ಬಲೆ ನೇಯುವುದು, ಹುಲ್ಲಿನ ಹಗ್ಗ ಮಾಡುವುದರಲ್ಲೇ ನಿರತರಾಗಿರುತ್ತಾರೆ. ಶಾಲೆಯ ಮೆಟ್ಟಿಲನ್ನು ಇವರು ಒಂದು ಬಾರಿಯೂ ತುಳಿಯುವುದು ಕಷ್ಟಸಾಧ್ಯ. ದೇಸಿ ಸರಾಯಿಯ ಕಾರುಬಾರು ಈ ಗ್ರಾಮದಲ್ಲಿ ಸದಾ ವಿಜ್ರಂಭಿಸುತ್ತದೆ.
ಈ ಹೀನಾಯ ಸ್ಥಿತಿಯಲ್ಲಿರುವ ಗ್ರಾಮದಲ್ಲಿ ಬದಲಾವಣೆಯ ಗಾಳಿಯನ್ನು ಬೀಸುವಂತೆ ಮಾಡಿದವಳು 20ರ ಹರೆಯದ ಗುಡಿಯಾ ಎಂಬ ಹೆಣ್ಣುಮಗಳು. ತಂದೆಗೆ ದುಂಬಾಲು ಬಿದ್ದು ಶಾಲೆಯ ಮೆಟ್ಟಿಲು ಹತ್ತಿದ ಈಕೆ 2008ರಲ್ಲಿ 12ನೇ ತರಗತಿ ತೇರ್ಗಡೆಯಾದಳು. ಈಕೆಯ ಶಾಲೆಯಲ್ಲಿದ್ದಿದ್ದು ಐದು ಹುಡುಗರು, ಐದು ಹುಡುಗಿಯರು ಅಷ್ಟೇ. ಈಕೆಯ ತಂದೆಯೂ ಕುಟುಂಬದ ಆದಾಯಕ್ಕಾಗಿ ಈಕೆಯನ್ನು ಹಗ್ಗ ತಯಾರಿಸುವ ಕಾಯಕಕ್ಕೆ ಹಚ್ಚಿದ್ದರು. ಆದರೆ ಕೊನೆಗೆ ಹತ್ತಿರದ ಶಾಲೆಯಲ್ಲಿ ಬಿಸಿಯೂಟ ಆರಂಭವಾದ ಬಳಿಕ ಈಕೆಯ ಹಠಕ್ಕೆ ಮಣಿದು ಶಾಲೆಗೆ ಕಳುಹಿಸಿದರು. ಆಕೆಗೆ ಒಂದು ಹೊತ್ತಿನ ಊಟ ಹಾಕುವುದು ತಪ್ಪಿತಲ್ಲ ಎಂಬ ಭಾವದಿಂದ. ಆದರೆ ಪ್ರತಿದಿನ ಶಾಲೆಗೆ ಹೋಗುವ ಮುನ್ನ ತಂದೆ ಬಾಬು ಲಾಲ್ ಶರ್ಮಾರಿಂದ ಅನುಮತಿ ಪಡೆಯುವುದು ಆಕೆಗೆ ಕಡ್ಡಾಯವಾಗಿತ್ತು.
’ಹೆಣ್ಣುಮಕ್ಕಳ ಜೀವನಕ್ಕೆ ಗೌರವವೇ ಇಲ್ಲದ, ತಾಯಂದಿರೂ ಕುಡಿತಕ್ಕೆ ದಾಸರಾಗಿರುವ, ಭವಿಷ್ಯ ರೂಪಿಸುವ ನಂಬಿಕೆಯೇ ಇಲ್ಲದ, ಬೆಳಿಗ್ಗೆಯಿಂದಲೇ ಪಾನಮತ್ತರಾಗಿರುವ ಯುವಕರು ಇರುವ ವಾತಾವರಣದಲ್ಲಿ ನಾನು ಬೆಳೆದೆ. ಜೀವನ ದುಸ್ತರವಾಗಿತ್ತು. ಎರಡು ಹೊತ್ತಿನ ಊಟ ಸಂಪಾದಿಸಲು ನಮ್ಮ ಹೆತ್ತವರು ನಮ್ಮನ್ನೆಲ್ಲಾ ಕೆಲಸಕ್ಕೆ ದೂಡುತ್ತಿದ್ದರು’ ಎಂದು ಗುಡಿಯಾ ಬೇಸರದಿಂದ ಹೇಳುತ್ತಾರೆ.
ಹರಸಾಹಸಪಟ್ಟು 12 ತರಗತಿ ಕಲಿತಿರುವ ಗುಡಿಯಾ ಅಷ್ಟಕ್ಕೇ ಸುಮ್ಮನಾಗಿಲ್ಲ. ಗ್ರಾಮದ ಬದುಕನ್ನು ಬದಲಾಯಿಸಬೇಕು, ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಹೆಬ್ಬಯಕೆ ಆಕೆಯದ್ದಾಗಿತ್ತು. ಇದಕ್ಕಾಗಿ ಗ್ರಾಮದಲ್ಲೇ ಶಾಲೆಯೊಂದನ್ನು ನಿರ್ಮಿಸಲು ಮುಂದಾದಳು. ಈ ಬಗ್ಗೆ ಸ್ಥಳಿಯ ಹಿರಿಯರ ಬಳಿ ಹೇಳಿಕೊಂಡಳು. ಆದರೆ ಯಾರೊಬ್ಬರೂ ಆಕೆಯ ಮಾತನ್ನು ಕೇಳಲಿಲ್ಲ. ಶಾಲೆ ನಿರ್ಮಿಸಲು ಜಾಗವನ್ನೂ ಕೊಡಲಿಲ್ಲ. ನೇರ ತಂದೆಯ ಬಳಿ ಹೋದ ಆಕೆ ಮನೆಯಲ್ಲೇ ಮಕ್ಕಳಿಗೆ ಪಾಠ ಮಾಡಲು ಅವಕಾಶ ಕೊಡುವಂತೆ ಕೇಳಿದಳು. ಆದರೆ ಅವರದ್ದು ಗ್ರಾಮದಲ್ಲಿನ ಏಕೈಕ ಬ್ರಾಹ್ಮಣ ಕುಟುಂಬ. ಸಂಪ್ರದಾಯವಾದಿಗಳಾದ ಅವರು ಮಲ್ಲಾಹಾಸ್ ಸಮುದಾಯದ ಮಕ್ಕಳನ್ನು ಮನೆಯೊಳಗೆ ಸೇರಿಸಿಕೊಳ್ಳಲು ನಿರಾಕರಿಸಿದರು. ಕೊನೆಗೂ ಆಕೆಯ ಹಠಕ್ಕೆ ಮಣಿದು ವರಾಂಡದಲ್ಲಿ ಪಾಠ ಮಾಡಲು ಅನುಮತಿ ನೀಡಿದರು.
ಆದರೆ ಗುಡಿಯಾಗೆ ಎದುರಾದ ಮತ್ತೊಂದು ಸವಾಲೆಂದರೆ ಮಕ್ಕಳನ್ನು ಪಾಠಕ್ಕೆ ಬರುವಂತೆ ಮಾಡುವುದು. ದೇಸಿ ಸರಾಯಿಗೆ ದಾಸರಾದ ಗ್ರಾಮಸ್ಥರಲ್ಲಿ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ ಎಂದು ಕೇಳುವುದು, ಅವರನ್ನು ಒಪ್ಪಿಸುವುದು ಸುಲಭದ ಮಾತಾಗಿರಲಿಲ್ಲ. ಮನೆ ಮನೆಗೆ ತೆರಳಿದರೂ ಯಾರೊಬ್ಬರೂ ತಮ್ಮ ಮಕ್ಕಳನ್ನು ಆಕೆಯ ಬಳಿ ಕಳುಹಿಸಲಿಲ್ಲ.
ಕೊನೆಗೆ ಗುಡಿಯಾ ತನ್ನ ಪಾಠ ಶಾಲೆಯನ್ನು ನವದೆಹಲಿ ಮೂಲದ ಗಿರಿಜಾ ದೇವಿ ಫೌಂಡೇಶನ್ನೊಂದಿಗೆ ಟೈ ಅಪ್ ಮಾಡಿಕೊಂಡರು. ಇದರಿಂದಾಗಿ ಅವರಿಗೆ ಉಚಿತ ಪುಸ್ತಕ, ಬ್ಯಾಗ್, ಆಹಾರ, ವೈದ್ಯಕೀಯ ನೆರವು ಹೀಗೆ ಎಲ್ಲವನ್ನೂ ಪಡೆಯಲು ಸಾಧ್ಯವಾಯಿತು. ಇದರಿಂದಾಗಿ ಗ್ರಾಮಸ್ಥರು ತಮ್ಮ ಮಕ್ಕಳನ್ನು ಆಕೆಯ ಪಾಠ ಶಾಲೆಗೆ ಕಳುಹಿಸಲು ಆರಂಭಿಸಿದರು. ದಿನೇ ದಿನೇ ಮಕ್ಕಳ ಸಂಖ್ಯೆಯೂ ಹೆಚ್ಚಾಯಿತು. ಮನೆಗೆಲಸವನ್ನೆಲ್ಲ ಮಾಡಿ ಗುಡಿಯಾ ದೀದಿಯ ಬಳಿ ಮಕ್ಕಳೂ ಪ್ರೀತಿಯಿಂದ ಆಗಮಿಸಿ ಪಾಠ ಕಲಿತರು. ಅವರ ಪಾಠಶಾಲೆಯಲ್ಲಿ ಗ್ರಾಮಸ್ಥರಿಗೆ ವೈದ್ಯಕೀಯ ಸೇವೆಯನ್ನೂ ನೀಡಲಾಗುತ್ತದೆ.
ಇದೀಗ ಗುಡಿಯಾಗೆ ಮದುವೆಯಾಗಿದೆ. ಆದರೂ ಅವರ ಪಾಠ ಶಾಲೆಯ ಕಾರ್ಯ ನಿರಂತರವಾಗಿದೆ. ಅದರ ಜವಾಬ್ದಾರಿಯನ್ನು ತನ್ನ ತಂಗಿ ಸೋನಿಗೆ ಅವರು ಒಪ್ಪಿಸಿದ್ದಾರೆ. ಕಾನ್ಪುರದಲ್ಲಿ ನೆಲೆಸಿರುವ ಅವರು ಆಗಾಗ ಬಂದು ಹೋಗಿ ಪಾಠ ಮಾಡುತ್ತಾರೆ.
’ನಮ್ಮ ಗ್ರಾಮದ ಜನ ಈಗಲೂ ಸರಾಯಿ ಕುಡಿದು ತೂಕಡಿಸುತ್ತಾರೆ, ಆದರೆ ತಮ್ಮ ಮಕ್ಕಳು ಇದನ್ನು ಮುಂದುವರೆಸಬಾರದು ಎಂಬ ಆಶಯ ಅವರಿಗಿದೆ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂಬ ಅರಿವು ಅವರಿಗೆ ಮೂಡಿದೆ. ಈಗ ಗುಡಿಯಾ ಮನೆಗೆ ತಮ್ಮ ಮಕ್ಕಳನ್ನು ಅವರು ಕಳುಹಿಸುತ್ತಿದ್ದಾರೆ’ ಎಂದು ಮಲ್ಲಹಿಪುರ್ವ ಗ್ರಾಮದ ಪ್ರಧಾನ್ ಹೇಳುತ್ತಾರೆ.
ತನ್ನ ಶಾಲೆಯಲ್ಲಿ ಕಲಿತ ಪ್ರತಿಯೊಂದು ಮಗುವು ಭವಿಷ್ಯದಲ್ಲಿ ಮತ್ತೊಬ್ಬರಿಗೆ ಕಲಿಸುತ್ತಾನೆ ಎಂಬ ನಂಬಿಕೆ ಗುಡಿಯಾಗಿದೆ. ಆಕಸ್ಮಿಕವಾಗಿ ಶಿಕ್ಷಕಿಯಾದ ಆಕೆ ಶಿಕ್ಷಕಿಯೊಬ್ಬಳು ಯಾವ ಬದಲಾವಣೆಯನ್ನು ತರಬಲ್ಲಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದುಶ್ಚಟ ಪೀಡಿತ ಗ್ರಾಮವನ್ನು ಏಕಾಏಕಿ ಬದಲಾಯಿಸುವುದು ಸಾಧ್ಯವಿಲ್ಲ, ಆದರೆ ನಿಧಾನವಾಗಿ ಬದಲಾಯಿಸಬಹುದು ಎಂಬುದಕ್ಕೆ ಆಕೆಯೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.