ಸ್ವಚ್ಛ ಭಾರತ ಆಂದೋಲನಕ್ಕೆ ಗ್ರಹಣ ಹಿಡಿಯಿತೆ? ಕಳೆದ ವರ್ಷ ಅ. 2 ರ ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ 2019 ರ ಗಾಂಧಿ ಜಯಂತಿಯೊಳಗೆ ಇಡೀ ದೇಶ ಸ್ವಚ್ಛವಾಗಬೇಕೆಂದು ಕರೆ ನೀಡಿದ್ದರು. ಇದಾಗಿ ಒಂದು ವರ್ಷವಾಗಿದ್ದರೂ ಸ್ವಚ್ಛ ಭಾರತ ಆಂದೋಲನಕ್ಕೆ ರಭಸ ದೊರೆತಿಲ್ಲದಿರುವುದು ಇಂತಹ ಪ್ರಶ್ನೆಯನ್ನು ಹುಟ್ಟು ಹಾಕಿದೆ.
‘ಸ್ವಚ್ಛ ಭಾರತ ಶ್ರೇಷ್ಠ ಭಾರತ’ ಎಂದು ಪ್ರಧಾನಿ ಮೋದಿ ಘೋಷಿಸಿದಾಗ, ಈ ಮಾತಿನಿಂದ ಉತ್ತೇಜನಗೊಂಡ ಅನೇಕ ರಾಜಕಾರಣಿಗಳು, ಸಿನಿಮಾ ನಟ – ನಟಿಯರು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ವ್ಯಾಪಾರಿಗಳು, ಮಠಾಧೀಶರು ಕೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸಿ ಸ್ವಚ್ಛ ಭಾರತ ಮಿಷನ್ಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿ ಸಂತಸಪಟ್ಟಿದ್ದರು. ಕೆಲವು ಕಡೆ ಕಸವಿರದ ಜಾಗದಲ್ಲ್ಲೂ ಕಸದ ರಾಶಿ ಹಾಕಿ, ಅದನ್ನೇ ಗುಡಿಸಿ ಫೋಟೋ ಹಾಗೂ ವಿಡಿಯೋಗಳಿಗೆ ಪೋಸ್ ನೀಡಿ ಸಂಭ್ರಮಪಟ್ಟಿದ್ದರು. ಅದಾದ ಬಳಿಕ ಈ ಸೆಲೆಬ್ರಿಟಿಗಳು ಇದುವರೆಗೂ ಮತ್ತೆ ಪೊರಕೆ ಹಿಡಿದದ್ದು ಕಂಡುಬಂದಿಲ್ಲ.
ಮನಸ್ಸಿಟ್ಟು ಕಾರ್ಯ ಮಾಡುವುದು ಬೇರೆ. ಮನಸ್ಸಿಲ್ಲದೆ ಕಾರ್ಯ ಮಾಡಿದಂತೆ ನಟಿಸುವುದು ಬೇರೆ. ಸ್ವಚ್ಛ ಭಾರತ ಯೋಜನೆಗೆ ಸೆಲೆಬ್ರಿಟಿಗಳು ಮಾಡಿದ್ದು ಎರಡನೆಯದು. ಕಾರ್ಯ ಮಾಡಿದಂತೆ ನಟಿಸಿದ್ದು, ಅಷ್ಟೆ. ಕಾರ್ಯ ಮಾಡಲೇಬೇಕೆಂಬ ತುಡಿತ, ಬದ್ಧತೆ ಅವರಲ್ಲಿ ಕಂಡು ಬರಲಿಲ್ಲ. ಸ್ವಚ್ಛ ಭಾರತ ಯೋಜನೆಗಾಗಿ ಕೇವಲ ಒಂದು ದಿನ ಕೈಯಲ್ಲಿ ಪೊರಕೆ ಹಿಡಿದು ಗುಡಿಸಿ ಬಿಟ್ಟರೆ ಸ್ವಚ್ಛತೆ ಆ ದಿನದ ಮಟ್ಟಿಗೆ ಆಗಬಹುದು. ಆದರೆ ಮರುದಿನ? ಅದರ ಮರುದಿನ? ಸ್ವಚ್ಛತೆ, ನೈರ್ಮಲ್ಯವೆನ್ನುವುದು ನಿರಂತರವಾಗಿ ಇರಬೇಕಾದ ಅಗತ್ಯತೆ. ಊರೊಂದು ಕೇವಲ ಒಂದು ದಿನದ ಮಟ್ಟಿಗೆ ಸ್ವಚ್ಛವಾದರೆ ಸಾಲದು. ಪ್ರತಿನಿತ್ಯ ಅಲ್ಲಿ ಸ್ವಚ್ಛತೆ, ನೈರ್ಮಲ್ಯ ಎದ್ದು ಕಾಣಬೇಕು. ಮನೆಯಲ್ಲಿ ಅಡುಗೆಗೆ ಬಳಸುವ ಪಾತ್ರೆಗಳನ್ನು ಒಂದು ದಿನ ತೊಳೆದರೆ ಸಾಲದು. ಪ್ರತಿನಿತ್ಯವೂ ಅದನ್ನು ಹೊಳೆಯುವಂತೆ ತೊಳೆಯಬೇಕಾಗುತ್ತದೆ. ಸ್ವಚ್ಛತೆ ಕೂಡ ಹಾಗೆಯೇ. ಸ್ವಚ್ಛ ಭಾರತ ಯೋಜನೆ ಸಾಕಾರಗೊಳ್ಳಲು ಪ್ರತಿನಿತ್ಯ ಸ್ವಚ್ಛತೆ ಮಾಡಬೇಕಾಗುತ್ತದೆ.
ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಮಿಷನ್ ಹೊಸ ಯೋಜನೆ ಏನಲ್ಲ. 1999 ರಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಸಂಪೂರ್ಣ ನೈರ್ಮಲ್ಯ ಆಂದೋಲನ ಎಂಬ ಯೋಜನೆ ಜಾರಿಗೊಳಿಸಿತ್ತು. 2012 ರಲ್ಲಿ ಈ ಯೋಜನೆಯನ್ನು ಪುನರ್ರೂಪಿಸಿ ನಿರ್ಮಲ ಭಾರತ ಅಭಿಯಾನ ಎಂದು ಘೋಷಿಸಲಾಯಿತು. ಮೋದಿ ಸರ್ಕಾರ ಬಂದ ಬಳಿಕ ಇದು ಸ್ವಚ್ಛ ಭಾರತ ಮಿಷನ್ ಎಂದಾಯಿತು. ಒಂದೇ ಒಂದು ವ್ಯತ್ಯಾಸವೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ನಿಗದಿಗೊಳಿಸಿದ್ದ ಪ್ರೋತ್ಸಾಹಧನ 10 ಸಾವಿರದಿಂದ 12 ಸಾವಿರಕ್ಕೆ ಏರಿಕೆಯಾದದ್ದು. ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷ ಕಳೆದರೂ ದೇಶಾದ್ಯಂತ ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ನಿರೀಕ್ಷೆಯಷ್ಟು ಆಗಿಲ್ಲವೆಂದರೆ ಅದಕ್ಕಿಂತ ವಿಷಾದನೀಯ ಸಂಗತಿ ಇನ್ನೊಂದಿರಲಾರದು. ಎಲ್ಲಕ್ಕಿಂತ ಮುಖ್ಯ ಆದ್ಯತಾ ಸಂಗತಿ ನೈರ್ಮಲ್ಯ ಯೋಜನೆಯೇ ಆಗಬೇಕಿತ್ತು. ಆದರೆ ಹಾಗಾಗಿಲ್ಲ. ದೇಶದ ಗ್ರಾಮೀಣ ಭಾಗದಲ್ಲಿ ಬಯಲು ಶೌಚಾಲಯಕ್ಕೆ ಹೋಗುವರ ಜನರ ಸಂಖ್ಯೆ ಈಗಲೂ ಶೇ. 67 ರಷ್ಟಿದೆ. ನಗರ ಪ್ರದೇಶದಲ್ಲಿ ಈ ಸಂಖ್ಯೆ ಶೇ. 13. 2012ರ ಬೇಸ್ಲೈನ್ ಸಮೀಕ್ಷೆ ಪ್ರಕಾರ, ದೇಶದ ಶೇ. 61.2 ರಷ್ಟು ಕುಟುಂಬಗಳು ಈಗಲೂ ಶೌಚಾಲಯ ವ್ಯವಸ್ಥೆ ಹೊಂದಿಲ್ಲ. ಕರ್ನಾಟಕದಲ್ಲಿ ಶೌಚಾಲಯ ಹೊಂದಿರುವ ಗ್ರಾಮಗಳು ಶೇ. 64.6 ರಷ್ಟು ಮಾತ್ರ.
ಈಗ ವಿಧಾನಸಭಾ ಚುನಾವಣೆಯ ಗುಂಗಿನಲ್ಲಿರುವ ಬಿಹಾರದಲ್ಲಂತೂ ಶೇ. 83 ರಷ್ಟು ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲ. ಆ ರಾಜ್ಯದಲ್ಲಿ ಶೌಚಾಲಯ ವಂಚಿತ ಜನರ ಸಂಖ್ಯೆಯೇ 2 ಕೋಟಿ! (ಬಿಹಾರದ ಒಟ್ಟು ಜನಸಂಖ್ಯೆ ಸುಮಾರು 10 ಕೋಟಿ). ಕತ್ತಲಲ್ಲಿ ಬಯಲಿಗೆ ಹೋಗುವ ಮಹಿಳೆಯರ ಮೇಲೆ ಅತ್ಯಾಚಾರ, ಮಾನಭಂಗ ಪ್ರಕರಣಗಳು ಅಲ್ಲಿ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಅಧಿಕೃತ ಅಂದಾಜಿನ ಪ್ರಕಾರ ಬಯಲಿಗೆ ಹೋಗುವ ಮಹಿಳೆಯರ ಮೇಲೆ ಸರಾಸರಿ ತಿಂಗಳಿಗೆ ಒಂದರಂತೆ ಅತ್ಯಾಚಾರ ನಡೆಯುತ್ತಿದೆಯಂತೆ. ಅಲ್ಲಿನ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳಲ್ಲೂ ಶೌಚಾಲಯಗಳಿಲ್ಲ. ಕೇಂದ್ರದ ಮಾರ್ಗಸೂಚಿ ಪ್ರಕಾರ 10 ಮಕ್ಕಳಿಗೆ ಒಂದರಂತೆ ಶೌಚಾಲಯ ಇರಬೇಕು. ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ.
ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣವಿದು. 4 ವರ್ಷದ ಹಿಂದೆ ಧೀರಜ್ಚೌಧರಿ ಎನ್ನುವ ತರಕಾರಿ ವ್ಯಾಪಾರಿಯನ್ನು ಮದುವೆಯಾಗಿದ್ದ 30 ವರ್ಷದ ಮಹಿಳೆ ಸುನಿತಾ ದೇವಿ ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕಾರಣಕ್ಕೆ ಪತಿಯನ್ನು ತ್ಯಜಿಸಿದ್ದಾರೆ. ಶೌಚಾಲಯ ಕಟ್ಟುವಂತೆ ಪೀಡಿಸಿದರೂ ಒಂದಲ್ಲೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಪತಿಗೆ ಬೇರೆ ದಾರಿಯೇ ಕಾಣದೆ ಈ ಪತ್ನಿ ಕಳೆದ ಮೇ ತಿಂಗಳಲ್ಲಿ ವಿದಾಯ ಹೇಳಿದ್ದಾರೆ. ಬಹಳಷ್ಟು ಹೆಣ್ಣುಮಕ್ಕಳು ಶೌಚಾಲಯವಿಲ್ಲ ಎಂಬ ಕಾರಣಕ್ಕೆ ಅತ್ತೆ ಮನೆ ತೊರೆದ ನಿದರ್ಶನಗಳು ಹೇರಳವಾಗಿವೆ. ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ಬಯಲು ಶೌಚಾಲಯz ದೊಡ್ಡ ಸಮಸ್ಯೆ. ಅದಕ್ಕೆ ಜನರ ಬಡತನ ಹಾಗೂ ಬದಲಾವಣೆಗೆ ಒಪ್ಪಿಕೊಳ್ಳದ ಮಾನಸಿಕತೆಯೂ ಕಾರಣ. ಅಲ್ಲಿನ ಹಳ್ಳಿಯ ದಾರಿಯ ಇಕ್ಕೆಲಗಳಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ದುಸ್ಥಿತಿ. ಟ್ಯಾಕ್ಸಿ, ಟ್ರ್ಯಾಕ್ಟರ್ ಚಾಲಕರು ರಸ್ತೆ ಬದಿಗೆ ವಾಹನ ಇಳಿಸಲು ಹಿಂಜರಿಯುತ್ತಾರೆ. ಟಯರ್ಗೆ ಹೊಲಸು ಮೆತ್ತಿಕೊಂಡರೆ ತೊಳೆಯುವುದು ಯಾರು ಎಂಬುದು ಚಾಲಕರ ಪ್ರಶ್ನೆ.
ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅತ್ಯಂತ ಜನಪರ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ಯೋಜನೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಬದ್ಧತೆ, ಕಳಕಳಿ, ಪಾರದರ್ಶಕತೆಯ ಕೊರತೆಯೇ ಕಾರಣ. ಸರ್ಕಾರದ ಯೋಜನೆಗಳು ಕಾರ್ಯಗತವಾಗುವುದು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಮೂಲಕ. ಅಧಿಕಾರಿಗಳಲ್ಲಿ ಯೋಜನೆಯ ಪ್ರಾಮಾಣಿಕ ಅನುಷ್ಠಾನದ ಬಗ್ಗೆ ಬದ್ಧತೆ, ಕಳಕಳಿ, ಪಾರದರ್ಶಕತೆ ಎಷ್ಟರ ಮಟ್ಟಿಗಿದೆ ಎನ್ನುವುದರ ಮೇಲೆ ಯೋಜನೆಗಳ ಯಶಸ್ಸು ಅವಲಂಬಿಸಿದೆ. ಬಯಲು ಶೌಚಾಲಯಮುಕ್ತ ಗ್ರಾಮಗಳು ಆಗಬೇಕೆಂಬ ಪ್ರಯತ್ನವೇನೋ ನಡೆದಿದೆ. ಸರ್ಕಾರದಿಂದ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಧನದಲ್ಲಿ ಏರಿಕೆಯೂ (ಈಗ 12 ಸಾವಿರ ರೂ.) ಆಗಿದೆ. ಆದರೆ ಶೌಚಾಲಯ ನಿರ್ಮಾಣದ ಪ್ರಕ್ರಿಯೆ ಬಲು ಸಂಕೀರ್ಣ. ಅರ್ಜಿ ಸಲ್ಲಿಕೆ, ಮೂರು ಹಂತಗಳ ಫೋಟೋ ನೀಡಿಕೆ, ಪ್ರೋತ್ಸಾಹಧನ ಪಡೆಯುವ ಪ್ರಕ್ರಿಯೆ… ಇವೆಲ್ಲ ಸಾಮಾನ್ಯರಿಗೆ ಸುಲಭವೆನಿಸುವಷ್ಟು ಸರಳವಾಗಿಲ್ಲ. ಜೊತೆಗೆ ಅರಿವಿನ ಕೊರತೆಯೂ ಇದೆ. ಮೊಬೈಲ್, ಟಿವಿಯ ಬಗ್ಗೆ ಅಪಾರ ಶೋಕಿ ಬೆಳೆಸಿಕೊಳ್ಳುವ ಬಡತನದ ಮನೆಗಳಲ್ಲಿ ಶೌಚಾಲಯ ಮಾತ್ರ ಇರುವುದೇ ಇಲ್ಲ. ಜೋಪಡಿಗಳ ಮೇಲೆ ಟಿವಿ ಆಂಟೆನಾಗಳು ಸಾಲಾಗಿ ರಾರಾಜಿಸುತ್ತಿರುತ್ತವೆ. ಆ ಜೋಪಡಿಗಳಲ್ಲಿರುವ ಜನರ ಕೈಯಲ್ಲಿ ಟಚ್ಸ್ಕ್ರೀನ್ ಮೊಬೈಲ್ಗಳೂ ಇರುತ್ತವೆ. ಆದರೆ ಜೋಪಡಿಯಲ್ಲಿ ವಾಸಿಸುವವರಿಗೆ ಶೌಚಾಲಯ ಮಾತ್ರ ಇರುವುದಿಲ್ಲ! ಮನಸ್ಸು ಮಾಡಿದರೆ ಈ ಮಂದಿಗೆ ಶೌಚಾಲಯ ನಿರ್ಮಿಸಿಕೊಳ್ಳುವುದು ಕಠಿಣ ಕೆಲಸವೇನಲ್ಲ. ಆದರೆ ಅದೊಂದು ಅತ್ಯಂತ ಆದ್ಯತೆಯ ವಿಷಯವೆಂದು ಅವರಿಗೆ ಮನವರಿಕೆಯಾಗಿಲ್ಲ.
ಇಂತಹ ಕತ್ತಲ ಪರಿಸ್ಥಿತಿಯಲ್ಲೂ ಒಂದೆರಡು ಹೊಂಗಿರಣಗಳು ಗೋಚರಿಸಿರುವುದು ಗಮನಾರ್ಹ. ಕೆಲವೆಡೆ ಜನರೇ ಮುಂದಾಗಿ ಶೌಚಾಲಯ ನಿರ್ಮಿಸಿ ಸ್ವಚ್ಛ ಭಾರತ್ ಆಂದೋಲನಕ್ಕೆ ಸಾಥ್ ನೀಡಿದ ನಿದರ್ಶನಗಳಿವೆ. ಛತ್ತೀಸ್ಗಡದ ಧಮಿ ಜಿಲ್ಲೆಯ ಕೋಟಾಭರಿ ಗ್ರಾಮದ 102 ವರ್ಷ ವಯೋವೃದ್ಧೆ ಕುವಾರ್ಭಾಯಿ ಯಾದವ್ ಎಂಬುವರು ತಮ್ಮ ಕುರಿಗಳನ್ನು ಮಾರಿ ಶೌಚಾಲಯ ನಿರ್ಮಿಸಿದ್ದಾರೆ. ತಮ್ಮ ಕುರಿಗಳನ್ನು 22 ಸಾವಿರ ರೂ.ಗೆ ಮಾರಿದ ಈ ವೃದ್ಧೆ ಶೌಚಾಲಯ ನಿರ್ಮಿಸಿ ಗ್ರಾಮಕ್ಕೆ ಮಾದರಿಯಾದರು. ಆಕೆಯ ಇಂತಹ ಸಾಹಸದಿಂದ ಪ್ರೇರೇಪಿತರಾದ ಆ ಗ್ರಾಮದ ೪೫೦ ಮಂದಿ ತಾವೂ ಕೂಡ ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾದರು. ಇದರಿಂದಾಗಿ ಕೋಟಾಭರಿ ಗ್ರಾಮ ಕಳೆದ ಜುಲೈನಲ್ಲಿ ಬಯಲು ಶೌಚಮುಕ್ತ ಗ್ರಾಮವೆಂದು ಜಿಲ್ಲಾಡಳಿತದಿಂದ ಘೋಷಿಸಲ್ಪಟ್ಟಿದೆ.
ಮಹಾರಾಷ್ಟ್ರದ ಕರ್ತಾಜ್ ಸಮೀಪದ ತಂನಾಥ್ ಗ್ರಾಮ ಕೂಡ ಈಗ ಅತ್ಯಂತ ಸ್ವಚ್ಛ ಮತ್ತು ಸುಂದರ ಗ್ರಾಮವಾಗಿ ಎದ್ದು ನಿಂತಿದೆ. ಒಂದೇ ಒಂದು ಪ್ಲಾಸ್ಟಿಕ್ ತುಂಡಾಗಲಿ, ತ್ಯಾಜ್ಯವಾಗಲಿ ಅಲ್ಲಿ ಕಂಡುಬರುವುದಿಲ್ಲ. ಬಯಲು ಶೌಚಾಲಯವಂತೂ ಇಲ್ಲಿ ಇಲ್ಲವೇ ಇಲ್ಲ. ಅಂದ ಹಾಗೆ ಸ್ವಚ್ಛ ಭಾರತ ಅಭಿಯಾನ ಆರಂಭವಾದ ಬಳಿಕ ಈ ಹಳ್ಳಿ ಸ್ವಚ್ಛತೆಯನ್ನು ಕಂಡಿದ್ದಲ್ಲ. ಈ ಗ್ರಾಮದಲ್ಲಿದ್ದ ಸಂತನೊಬ್ಬ ‘ಸ್ವಚ್ಛತೆ ದೈವಭಕ್ತಿಗೆ ಸಮಾನವಾದುದು’ ಎಂದು ಜನರಿಗೆ ಪದೇ ಪದೇ ತಿಳಿವಳಿಕೆ ನೀಡಿದ ಪರಿಣಾಮವಾಗಿ ಆ ಗ್ರಾಮ ಸ್ವಚ್ಛ ಗ್ರಾಮವಾಗಿದೆ. ಆ ಸಂತ ತನ್ನ ಜೀವನಪೂರ್ತಿ ಸ್ವಚ್ಛತೆಗಾಗಿ ಶ್ರಮಿಸಿದ್ದರಂತೆ. ಈಗ ಆ ಗ್ರಾಮದಲ್ಲಿ ಒಂದು ಬೋರ್ಡ್ ಹಾಕಲಾಗಿದೆ. ಅದು ‘ಶೇಮ್ಬೋರ್ಡ್.’ ಯಾರಾದರೂ ಕಸ ಬಿಸಾಡಿದರೆ, ಬಯಲಿನಲ್ಲಿ ಶೌಚ ಮಾಡಿದರೆ ಅವರ ಹೆಸರನ್ನು ಈ ಬೋರ್ಡ್ನಲ್ಲಿ ಬರೆಯಲಾಗುತ್ತದೆ. ಅದಕ್ಕೆ ಹೆದರಿ ಯಾರೂ ಕಸ ಬಿಸಾಡುವುದಿಲ್ಲ. ಹೇಸಿಗೆ ಮಾಡುವುದಿಲ್ಲ. ಶೌಚಾಲಯವಿಲ್ಲದ ಮನೆಯ ಹುಡುಗನನ್ನು ಈ ಹಳ್ಳಿಯ ಯುವತಿಯರು ಮದುವೆಯಾಗುವುದೇ ಇಲ್ಲ. ಮೊದಲು ಶೌಚಾಲಯ, ಆಮೇಲೆ ಮದುವೆ ಎಂದು ಷರತ್ತು ಹಾಕುತ್ತಾರಂತೆ! ಆ ಊರನ್ನು ನೋಡಲು ಹೋಗುವ ಮಂದಿ ಆಕಸ್ಮಾತ್ ಎಲ್ಲಾದರೂ ಮರೆತು ಕಸ ಎಸೆದರೆ, ಗಲೀಜು ಮಾಡಿದರೆ ಅವರ ಹೆಸರು ಕೂಡ ಶೇಮ್ಬೋರ್ಡ್ನಲ್ಲಿ ಪ್ರಕಟವಾಗುತ್ತದೆ.
ಹೀಗೆ ದೇಶದಲ್ಲಿ ಸ್ವಚ್ಛತೆಗೆ ಸಾಥ್ ನೀಡಿದ ಇಂತಹ ಕೆಲವು ಗ್ರಾಮಗಳ ನಿದರ್ಶನಗಳು ಹೊಂಗಿರಣದಂತೆ ಕಂಗೊಳಿಸಿವೆ. ಇಂತಹ ಗ್ರಾಮಗಳ ಸಂಖ್ಯೆ ಹೆಚ್ಚಿದರೆ ಮಾತ್ರ ಸ್ವಚ್ಛ ಭಾರತ್ ಮಿಷನ್ ಯಶಸ್ಸಿನತ್ತ ಸಾಗಿದೆ ಎಂದು ಹೇಳಬಹುದು.
ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಸ್ವಚ್ಛ ಭಾರತ ಮಿಷನ್ಗೆ ಬಿಜೆಪಿ ಕಾರ್ಯಕರ್ತರು ಎಲ್ಲರಿಗಿಂತ ಹೆಚ್ಚು ಸಾಥ್ ನೀಡಬೇಕಾಗಿತ್ತು. ಈ ಯೋಜನೆಯನ್ನು ಸಾಕಾರಗೊಳಿಸುವ ಗುರುತರ ಹೊಣೆಗಾರಿಕೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರದ್ದೇ. ಇದನ್ನೊಂದು ಅಭಿಯಾನವನ್ನಾಗಿ ಬಿಜೆಪಿ ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಆದರೆ ಅಂತಹ ಪ್ರಯತ್ನಗಳು ಬಿಜೆಪಿ ಕಡೆಯಿಂದ ಕಂಡುಬಂದಿಲ್ಲ. ಆಗಾಗ ಅಲ್ಲಲ್ಲಿ ನಡೆಯುವ ಚುನಾವಣೆಗಳಿಗೆ ತೋರಿದಷ್ಟು ಅತ್ಯಾಸಕ್ತಿ, ಉತ್ಸಾಹವನ್ನು ಈ ಯೋಜನೆ ಜಾರಿಗೊಳಿಸುವತ್ತ ತೋರಿಲ್ಲ. ಬಿಜೆಪಿಯೇ ಸ್ವಚ್ಛ ಭಾರತ ಯೋಜನೆಗೆ ಸ್ಪಂದಿಸದಿದ್ದರೆ ಇನ್ನು ಉಳಿದವರ ಬಗ್ಗೆ ಆಕ್ಷೇಪಿಸಿ ಏನು ಪ್ರಯೋಜನ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.