ಬೆಂಗಳೂರು: ಕಾಂಗ್ರೆಸ್ಸಿನ ಸರಕಾರದ ಅಕ್ರಮಗಳ ದೃಢೀಕರಣಕ್ಕೆ ಮತದಾರರನ್ನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಚಿವರು ಬಳಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ; ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಗೆದ್ದ ಮಾತ್ರಕ್ಕೆ ಕಾಂಗ್ರೆಸ್ ಸರಕಾರ ಹಗರಣಮುಕ್ತ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಸಾಧ್ಯವಿಲ್ಲ; ಸಿದ್ದರಾಮಯ್ಯನವರು ತಮ್ಮ ಮೇಲಿನ ಆರೋಪಗಳು ಸುಳ್ಳು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ನೀವು ಮಾಡಿರುವ ಹಗರಣಗಳು, ಅಕ್ರಮಗಳು ಅಕ್ಷಮ್ಯ ಅಪರಾಧಗಳು. ಇದರ ಬಗ್ಗೆ ಬಿಜೆಪಿ ಇನ್ನಷ್ಟು ಉಗ್ರವಾಗಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು. ಜನರು ಈ ಸರಕಾರದ ಅಕ್ರಮಗಳು, ಹಗರಣಗಳನ್ನು ಒಪ್ಪಿಕೊಳ್ಳಲು ಹಾಗೂ ಕ್ಷಮಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಆಡಳಿತ ಪಕ್ಷದಿಂದ ಆಡಳಿತ ಯಂತ್ರದ ಬಳಕೆ, ಜನರ ಮನಸ್ಥಿತಿ, ಜನರ ಓಲೈಕೆಗೆ ಜಾಸ್ತಿ ಅವಕಾಶವಿದ್ದು, ಅಭಿವೃದ್ಧಿ ಆಗಲೆಂದು ಜನರು ಮತ ಕೊಡಬಹುದೇ ಹೊರತು, ನಿಮ್ಮ ಅಕ್ರಮಗಳ ದೃಢೀಕರಣಕ್ಕೆ ಮತದಾರರನ್ನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಚಿವರು ಬಳಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ; ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ವಿಶ್ಲೇಷಿಸಿದರು.
3 ಕ್ಷೇತ್ರಗಳ ಗೆಲುವಿನ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿರುವ ಎಲ್ಲ ಪ್ರಕರಣಗಳ ರದ್ದತಿಗೆ ಸ್ವತಃ ವಕೀಲರಾದ ಸಿದ್ದರಾಮಯ್ಯನವರು ಅಫಿಡವಿಟ್ ಹಾಕಲಿ ಎಂದು ಪಿ.ರಾಜೀವ್ ಅವರು ಸವಾಲೆಸೆದರು. ಹಣ, ಹೆಂಡ, ಅಧಿಕಾರದ ದುರ್ಬಳಕೆ- ಇವೆಲ್ಲ ಮಾಡಿ ಗೆದ್ದಿದ್ದಾರೆ. ಚುನಾವಣಾ ಗೆಲುವನ್ನು ನ್ಯಾಯಾಂಗ ವ್ಯವಸ್ಥೆಗೆ ನೆರಳಾಗಿ ಬಳಸುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.
ಬಿಜೆಪಿ ಹೋರಾಟದ ಫಲವಾಗಿ ವಾಲ್ಮೀಕಿ ನಿಗಮದ ಅಕ್ರಮ ಸಂಬಂಧ ಸಚಿವರ ರಾಜೀನಾಮೆ, ಬಂಧನ ಆಗಿದೆ. ಸಿಎಂಗೆ ಹಿನ್ನಡೆ ಆಗಿದೆ. ಹೈಕೋರ್ಟ್ ಕೂಡ ತನಿಖೆ ಆಗಬೇಕೆಂದು ತಿಳಿಸಿದೆ ಎಂದು ವಿವರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರು ಪಾದಯಾತ್ರೆ ಮಾಡಿದ್ದರಿಂದ 14 ನಿವೇಶನಗಳನ್ನು ವಾಪಸ್ ಮಾಡುವ ಅನಿವಾರ್ಯ ಸ್ಥಿತಿಗೆ ಮುಖ್ಯಮಂತ್ರಿಗಳು ಬಂದು ನಿಂತದ್ದಾಗಿ ತಿಳಿಸಿದರು. ಇದು ತಪ್ಪು ಒಪ್ಪಿಕೊಂಡಂತಲ್ಲವೇ ಎಂದು ಪ್ರಶ್ನಿಸಿದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕಾಂಗ್ರೆಸ್ಸಿಗೆ ಜನತೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದ್ದಿತ್ತು. ಬಿಜೆಪಿ ಅದನ್ನು ಸಮರ್ಥವಾಗಿ ಎದುರಿಸಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತ ತುಷ್ಟೀಕರಣದ ಪರಾಕಾಷ್ಠೆಯನ್ನು ಯಾವ ರೀತಿ ಮುಟ್ಟುತ್ತಿದೆ, ತುಷ್ಟೀಕರಣದ ನೀತಿಯ ಮೂಲಕ ಅಮಾಯಕ ರೈತರನ್ನು ಕೂಡ ಯಾವ ರೀತಿ ಬಲಿ ಕೊಡುತ್ತಿದೆ ಎಂಬ ಬಗ್ಗೆ ರಾಜ್ಯಾದ್ಯಂತ ಯಶಸ್ವಿ ಹೋರಾಟ ಕೈಗೊಂಡಿದ್ದೇವೆ. ನಮ್ಮ ಹೋರಾಟದ ಫಲವಾಗಿ ರೈತರು, ಕಾಂಗ್ರೆಸ್ಸಿನ ಈ ನೀತಿಯನ್ನು ಅತ್ಯುಗ್ರವಾಗಿ ಖಂಡಿಸುತ್ತಿದ್ದಾರೆ ಎಂದು ವಿವರಿಸಿದರು.
ಡಿ.9ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಸದನದೊಳಗೆ ರೈತರ ಪರವಾಗಿ ಬಿಜೆಪಿ ತನ್ನ ಹೋರಾಟವನ್ನು ಉಗ್ರವಾಗಿ ಮುಂದುವರೆಸಲಿದೆ. ಸದನಕ್ಕೆ ಪ್ರವೇಶ ಆಗುವುದಕ್ಕೆ ಮೊದಲು ರಾಜ್ಯಾದ್ಯಂತ 3 ತಂಡಗಳನ್ನು ರಚಿಸಿ ಸಂಬಂಧಿತ ಜಿಲ್ಲೆಗಳಲ್ಲಿ ಡಿ.4ರಿಂದ 6ರವರೆಗೆ ಪ್ರವಾಸ ಮಾಡಿ ಸದನಕ್ಕೆ ಬರಲಿವೆ. ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಹೋರಾಟದ ಅಡಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಈ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ವಕ್ಫ್ ‘ತುಘಲಕ್ ನೀತಿ’ಯನ್ನು ಖಂಡಿಸಲಿದ್ದೇವೆ ಎಂದರು.
ಬಿಜೆಪಿ ಶಿಸ್ತಿನ ಪಕ್ಷ. ರಾಜ್ಯಾಧ್ಯಕ್ಷರು ರಾಜ್ಯ ಕೋರ್ ಕಮಿಟಿ ಜೊತೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು, ಪಕ್ಷದ ನಿಯಮ- ಶಿಸ್ತನ್ನು ಉಲ್ಲಂಘಿಸಿ ಹೇಳಿಕೆ ಕೊಟ್ಟರೆ, ಹೋರಾಟ ಮಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಪಿ.ರಾಜೀವ್ ಅವರು ಪ್ರಶ್ನೆಗೆ ಉತ್ತರ ನೀಡಿದರು.
ಯತ್ನಾಳ್ ಅವರು ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ; ರಾಜ್ಯ ನಾಯಕರಿಂದ, ಜಿಲ್ಲಾ ನಾಯಕರಿಂದ ಅನುಮತಿ ಪಡೆದಿಲ್ಲ; ಹಾಗಾಗಿ ಅದು ಪಕ್ಷದ ಹೋರಾಟ ಆಗುವುದಿಲ್ಲ. ಅದು ಪಕ್ಷದ ಅಶಿಸ್ತು ಕೂಡ ಆಗುತ್ತದೆ ಎಂದು ತಿಳಿಸಿದರು. ಇಲ್ಲಿನವರೆಗೆ ರಾಜ್ಯದ ಹಂತದಲ್ಲೇ ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡಿದ್ದೆವು. ಅದನ್ನು ಅವರು ಒಪ್ಪಿಕೊಳ್ಳಲಿಲ್ಲ ಎಂದ ಅವರು, ಯತ್ನಾಳರ ಈ ಕ್ರಮದ ಕುರಿತು ರಾಷ್ಟ್ರನಾಯಕರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ವಕ್ತಾರರಾದ ಅಶೋಕ್ ಗೌಡ, ವೆಂಕಟೇಶ್ ದೊಡ್ಡೇರಿ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.