ಶಿವಮೊಗ್ಗ: ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1 ರಂದು ʼನಾಟ್ಯಾರಾಧನʼ ಜರುಗಲಿದ್ದು, ಭಾರತದ ವೈವಿಧ್ಯಮಯ ನೃತ್ಯ ಶೈಲಿಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಒಂದು ಅಪರೂಪದ ಅವಕಾಶ ಸಾರ್ವಜನಿಕರಿಗೆ ಸಿಗಲಿದೆ. ಸತತವಾಗಿ 13 ನೇ ವರ್ಷ ನಾಟ್ಯಾರಾಧನ ನಡೆಯುತ್ತಿರುವುದು ವಿಶೇಷ.
ಮೂರು ದಿನಗಳ ಕಾಲ ಸಂಜೆ 6 ರಿಂದ ನಾಟ್ಯಾರಾಧನ ಜರುಗಲಿದೆ ಎಂದು ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್ ತಿಳಿಸಿದರು.
ನಾಟ್ಯಾಲಯದ ಎಲ್ಲಾ 175 ಮಕ್ಕಳು ರುದ್ರಾಭಿಸಾರ – ನಟರಾಜನ ವಿಶೇಷ ಕೀರ್ತನೆಗಳ ಸರಮಾಲೆಯನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಮೂರು ವರ್ಷದಿಂದ ನಲವತ್ತು ವಯಸ್ಸಿನ ವಿದ್ಯಾರ್ಥಿಗಳೂ ಅತ್ಯಂತ ಸಂಭ್ರಮದಿಂದ ವೇದಿಕೆಯನ್ನು ಏರುತ್ತಿರುವುದು ನಾಟ್ಯಾಲಯಕ್ಕೊಂದು ಅಪರೂಪದ ಘಳಿಗೆ ಎಂದು ಅವರು ಹೇಳಿದರು.
ಆಗಸ್ಟ್ 31 ರ ಶನಿವಾರ ನೃತ್ಯಗುರು ಸಹನಾ ಚೇತನ್ ಲಲಿತಾರ್ಣವ – ಶ್ರೀ ಆದಿಶಂಕರಾಚಾರ್ಯರು ರಚಿಸಿರುವ ಲಲಿತಾ ಪಂಚಕಮ್ ಜೊತೆಗೆ ಕಾಮಾಕ್ಷಿ ಸುಪ್ರಭಾತಮ್ ಹಾಗೂ ಶ್ರೀ ದೇವಿ ಲಲಿತೆಯ ಕೀರ್ತನೆಗಳನ್ನು ತಮ್ಮ ಏಕವ್ಯಕ್ತಿ ನೃತ್ಯ ರೂಪಕದಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ತದನಂತರ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ಹರಿದಾಸಕೂಟ ನೃತ್ಯ ರೂಪಕವನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾರೆ ಎಂದರು.
ಸೆಪ್ಟೆಂಬರ್ 1 ರ ಭಾನುವಾರ ಅಂತರಾಷ್ಟ್ರೀಯ ಖ್ಯಾತನಾಮರಾದ 2 ತಂಡಗಳು ಶಿವಮೊಗ್ಗೆಗೆ ಆಗಮಿಸಿ ತಮ್ಮ ನರ್ತನದ ಸವಿಯನ್ನು ಉಣಬಡಿಸುತ್ತಾರೆ. ದೇಶವಿದೇಶಗಳಲ್ಲಿ ಹಾಗೂ ಜನಪ್ರಿಯ ಯೂಟ್ಯೂಬ್ ನಲ್ಲಿಯೂ ಕೂಡ ಅತ್ಯಂತ ಹೆಚ್ಚಿನ ವೀಕ್ಷಣೆ ಹಾಗೂ ಹಿಂಬಾಲಕರನ್ನು ಹೊಂದಿರುವ ಚೆನ್ನೈನ ಶ್ರೀದೇವಿ ನೃತ್ಯಾಲಯ ಭರತನಾಟ್ಯವನ್ನು ವಿಭಿನ್ನ ರೀತಿಯಲ್ಲಿ ನರ್ತಿಸಲಿದ್ದಾರೆ. ಹಾಗೆಯೇ ಭಾರತದ ಜಾನಪದ ಶೈಲಿಯೂ ಕೂಡ ನಮ್ಮ ನಾಡಿನ ಕಲಾಶ್ರೀಮಂತಿಕೆಗೆ ಕಿರೀಟಪ್ರಾಯವಿದ್ದಂತೆ. ಅದನ್ನೂ ಕೂಡ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತೋರ್ವ ಅಂತರಾಷ್ಟ್ರೀಯ ನರ್ತನ ತಂಡ ಮಹಾರಾಷ್ಟ್ರದ ಪುರಸ್ಕಾರ್ ಡಾನ್ಸ್ ಅಕಾಡೆಮಿ ಲಾವಣೀ, ಕೋಳಿ ನೃತ್ಯ, ಗೋಂಡಾಲ್, ಗಾವಾಲನ್ ಇತ್ಯಾದಿ ನೃತ್ಯಗಳನ್ನು ತಮ್ಮ ತಂಡದೊಂದಿಗೆ ಪ್ರದರ್ಶಿಸಲಿದ್ದಾರೆ. ಈಗಾಗಲೇ ಅಮೇರಿಕಾ, ಸಿಂಗಾಪೂರ್, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್ಸ್ ಇತ್ಯಾದಿ ದೇಶಗಳಲ್ಲಿ ತಮ್ಮ ನರ್ತನದ ಸವಿಯನ್ನು ಉಣಬಡಿಸಿ ಕಲಾಸ್ವಾದರ ಮೆಚ್ಚುಗೆಗೆ ಪಾತ್ರರಾಗಿರುವ ಎರಡೂ ತಂಡಗಳು ಶಿವಮೊಗ್ಗೆಗೆ ಆಗಮಿಸುತ್ತಿರುವುದು ಅತ್ಯಂತ ವಿಶೇಷ ಸಂಗತಿ ಎಂದರು.
ಆಗಸ್ಟ್ 30 ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದಬಿ.ವೈ. ರಾಘವೇಂದ್ರರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಮೂರೂ ದಿನದ ಸಾಂಸ್ಕೃತಿಕ ಸಂಭ್ರಮಕ್ಕೆ ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರಿನ ಸಹಕಾರವಿರಲಿದೆ. ಹಾಗೆಯೇ ಬೆಳಕಿನ ನಿರ್ವಹಣೆಯನ್ನು ಶಿವಕುಮಾರ್ ತೀರ್ಥಹಳ್ಳಿ, ಪ್ರಸಾಧನವನ್ನು ಪುರುಷೋತ್ತಮ ತಲವಾಟ, ರಂಗಸಜ್ಜಿಕೆ ಮಹೇಶ್ ಆರ್ಟ್ಸ್, ವೇಷಭೂಷಣವನ್ನು ಉಮಾವೆಂಕಟೇಶ್ ರವರು ನಿರ್ವಹಿಸಲಿದ್ದಾರೆ. ಶಿವಮೊಗ್ಗದ ಎಲ್ಲಾ ಕಲಾಭಿಮಾನಿಗಳಿಗೂ ಉಚಿತ ಪ್ರವೇಶವಿರುತ್ತದೆ ಎಂದು ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.