ಬೆಳ್ತಂಗಡಿ : ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಬೆಳ್ತಂಗಡಿ (ಸಮಾನ ಮನಸ್ಕರ ಒಕ್ಕೂಟ) ಬುಧವಾರಕ್ಕೆ ಕರೆ ನೀಡಿದ್ದ ಬೆಳ್ತಂಗಡಿ ತಾಲೂಕು ಬಂದ್ಗೆ ತಾಲೂಕಿನಾಧ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತಾಲೂಕು ಕೇಂದ್ರವಾದ ಬೆಳ್ತಂಗಡಿ, ಮುಖ್ಯ ನಗರಗಳಾದ ಧರ್ಮಸ್ಥಳ, ಉಜಿರೆ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಶಾಲೆ ಕಾಲೇಜುಗಳು, ಬ್ಯಾಂಕ್ಗಳು ಬಂದ್ ಆಗಿದ್ದವು ಸರಕಾರಿ ಕಚೇರಿಗಳು ತೆರೆದಿದ್ದರೂ ಹಾಜರಾತಿ ಇರಲಿಲ್ಲ ಒಟ್ಟಾರೆಯಾಗಿ ತಾಲೂಕಿನ ಜನಜೀವನ ಸಂಪೂರ್ಣ ಸ್ಥಬ್ದಗೊಂಡಿತ್ತು.
ಸರಕಾರಿ ಹಾಗೂ ಖಾಸಗಿ ಬಸ್ಗಳು ಬೆಳಿಗ್ಗಿನಿಂದಲೇ ಸಂಚಾರ ಸ್ಥಗಿತಗೊಳಿಸಿದ್ದವು ರಿಕ್ಷಾಗಳು, ಟೂರಿಸ್ಟ್ ವಾಹನಗಳು ರಸ್ತೆಗೆ ಇಳಿಯಲೇ ಇಲ್ಲ, ಖಾಸಗಿ ವಾಹನಗಳಿಗೂ ಬಂದ್ನ ಬಿಸಿ ಮುಟ್ಟಿದೆ. ಬೆಳಿಗ್ಗೆ ಕೆಲ ರಾಜ್ಯ ಸಾರಿಗೆ ಸಂಸ್ತೆಯ ಬಸ್ಗಳು ಸಂಚಾರ ಆರಂಭಿಸಿದರೂ ಅವುಗಳನ್ನು ಪ್ರತಿಭಟನಾಕಾರರು ಬೆಳ್ತಂಗಡಿ ಉಜಿರೆಗಳಲ್ಲಿ ತಡೆದರು. ಬಳಿಕ ರಾಜ್ಯ ಸಾರಿಗೆ ಸಂಸ್ತೆಯ ಬಸ್ಗಳೂ ಸಂಚಾರ ಸ್ಥಗಿತಗೊಳಿಸಿದರು.ಇಂದು ಬೆಳಿಗ್ಗೆಯೆ ಬೆಳ್ತಂಗಡಿ, ಉಜಿರೆಗಳಲ್ಲಿ ಬಂದ್ ಬೆಂಬಲಿಗರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ರಸ್ತೆತಡೆ ನಡೆಸಿದರು. ಬೆಳ್ತಂಗಡಿ ಪೇಟೆಯಲ್ಲಿ ಅಲ್ಲಲ್ಲಿ ಟಯರ್ಗಳಿಗೆ ಬೆಂಕಿ ಹಚ್ಚಲಾಯಿತು, ಪೇಟೆಯಲ್ಲಿಯೇ ಬೈಕ್ಒಂದಕ್ಕೆ ಬೆಂಕಿ ಹಚ್ಚಲಾಯಿತು. ಪೋಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ತಾಲೂಕನ್ನು ಪ್ರವೇಶಿಸುವ ಎಲ್ಲ ಪ್ರಮುಖ ಹೆದ್ದಾರಿಗಳನ್ನೂ ಪ್ರತಿಭಟನಾಕಾರರು ಬಂದ್ ಮಾಡಿದ್ದರು. ಹೊರಗಿನಿಂದ ಬರುವ ವಾಹನಗಳನ್ನು ತಾಲೂಕಿನ ಗಡಿಪ್ರದೇಶಗಳಾದ ಕೊಕ್ಕಡ, ಚಾರ್ಮಾಡಿ, ಪೂಂಜಾಲಕಟ್ಟೆ ವೇಣೂರುಗಳಲ್ಲಿ ತಡೆಹಿಡಿಯಲಾಯಿತು, ಹೊರಗಿನಿಂದ ಬಂದ ಯಾತ್ರಿಕರೂ ಸೇರಿದಂತೆ ಪ್ರಯಾಣಿಕರಿಗೆ ಬಂದ್ನ ಬಿಸಿ ಮುಟ್ಟಿದೆ.
ಪ್ರಸಿದ್ಧ ಯಾತ್ರಾಸ್ಥಳ ಧರ್ಮಸ್ಥಳದಲ್ಲಿ ಬಂದ್ಗೆ ಬೆಂಬಲ ಸೂಚಿಸಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚಿದ್ದರು. ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದವು ಇದರಿಂದಾಗಿ ಯಾತ್ರಾರ್ಥಿಗಳಿಗೆ ತೊಂದರೆಯಾಯಿತು. ಧರ್ಮಸ್ಥಳ ಡಿಪ್ಪೋದಿಂದ ರಾಜ್ಯದ ವಿವಿಧ ಭಾಗಗಳಿಗೆ ಹೊರಡಬೇಕಾದ ಬಸ್ಗಳನ್ನು ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ಪ್ರಯಾಣಿಕರು ಸಂಕಷ್ಟ ಅನಿಭವಿಸಿದರು. ಸಾರಿಗೆ ಸಂಸ್ಥೆಯ ಬಸ್ಗಳನ್ನು ಕೊಟ್ಟಿಗೆ ಹಾರ ಹಾಗೂ ಪೂಂಜಾಲಕಟ್ಟೆಯಲ್ಲಿಯೇ ನಿಲ್ಲಿಸಲಾಗಿತ್ತು. ಸಂಜೆಯ ವೇಳೆ ಬಂದ್ ಮುಕ್ತಾಯದ ಬಳಿಕವಷ್ಟೇ ಸರಕಾರಿ ಬಸ್ಗಳು ಸಂಚರಿಸಿದವು. ತಾಲೂಕಿನ ಬೆಳ್ತಂಗಡಿ, ಉಜಿರೆ, ಪೂಂಜಾಲಕಟ್ಟೆ, ಮಡಂತ್ಯಾರು, ಧರ್ಮಸ್ಥಳ, ವೇಣೂರು, ಅಳದಂಗಡಿ, ನಾರಾವಿ, ಗುರುವಾಯನಕೆರೆ, ಕಲ್ಲೇರಿ, ಕೊಕ್ಕಡ, ಚಾರ್ಮಾಡಿ, ಕಕ್ಕಿಂಜೆ, ಅರಸಿನಮಕ್ಕಿ ಸೇರಿದಂತೆ ಎಲ್ಲೆಡೆ ಸಂಪೂರ್ಣ ಬಂದ್ ನಡೆದಿದ್ದುಯಾವುದೇ ಅಹಿತಕರ ಘಟನೆಗಳು ಎಲ್ಲಿಯೂ ವರದಿಯಾಗಿಲ್ಲ. ಬಂದ್ ಬೆಂಬಲಿಗರು ಬೆಳ್ತಂಗಡಿ ಪೇಟೆಯಲ್ಲಿ ಪ್ರತಿಭಟನೆ ನಡೆಸಿ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಬೆಳ್ತಂಗಡಿಯಲ್ಲಿ ರಸ್ತೆತಡೆ ನಡೆಸಿದರು. ಮುಖ್ಯರಸ್ತೆಯಲ್ಲಿಯೆ ಕಂಬಳದ ಕೋಣಗಳ ಮೆರವಣಿಗೆ ನಡೆಸಿದರು, ಬಿಕೋ ಅನ್ನುತಿದ್ದ ರಸ್ತೆಗಳಲ್ಲಿ ಕುದುರೆಗಾಡಿಯೂ ಸಂಚರಿಸಿತ್ತು. ಧರಣಿ ಕುಳಿತ ಜನರ ಮುಂದೆಯೇ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕೋಳಿ ಅಂಕದ ಅಣಕು ಪ್ರದರ್ಶನವು ನಡೆಯಿತು.ಎತ್ತಿಹೊಳೆ ಯೋಜನೆಯ ವಿರುದ್ಧ ಸರಕಾರಗಳ ವಿರುದ್ಧ ಭಾರೀ ಘೋಷಣೆಗಳು ಮೊಳಗಿದವು.
ಸುಮಾರು ೪೦ ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿದ್ದು ತಾಲೂಕಿನ ಗ್ರಾಮ-ಗ್ರಾಮಗಳಲ್ಲಿಯೂ ಪ್ರತಿಭಟನಾ ಸಭೆಗಳು ನಡೆದವು. ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ವಿವಿಧ ಸಂಘಟನೆಗಳ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಿಕೋ ಎನ್ನುತ್ತಿದ್ದ ಬೆಳ್ತಂಗಡಿ ಬಸ್ನಿಲ್ದಾಣದಲ್ಲಿ ಹಾಗೂ ರಸ್ತೆಯಲ್ಲಿ ಯುವಕರು ಕ್ರಿಕೆಟ್, ವಾಲಿಬಾಲ್ ಆಡಿ ಸಂಭ್ರಮಿಸಿದರು.
ಸರಕಾರಗಳನ್ನು ಎಚ್ಚರಿಸಲು ಇದು ಮೊದಲ ಹಂತದ ಹೋರಾಟವಾಗಿದೆ. ಎತ್ತಿಹೊಳೆಯೆಂಬ ಹಣದೋಚುವ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯೋಜನೆಯನ್ನು ಹಿಂಪಡೆಯುವ ವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಸರಕಾರಗಳು ಎಚ್ಚರಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ತುಳು ರಾಜ್ಯವನ್ನೂ ಕೇಳಲೂ ಹಿಂಜರಿಯುವುದಿಲ್ಲ – ಪುಷ್ಪರಾಜ ಶೆಟ್ಟಿ, ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.