ಬೆಂಗಳೂರು: ಪ್ರಿಯಾಂಕ್ ಖರ್ಗೆಯವರು ತಮ್ಮ ತಂದೆ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರು, ಆದ್ದರಿಂದ ರಾಷ್ಟ್ರಮಟ್ಟದ ವಿಚಾರಗಳನ್ನು ಮಾತನಾಡಬೇಕೆಂಬ ಭ್ರಮೆಯಲ್ಲಿದ್ದಂತೆ ಕಾಣುತ್ತಿದೆ. ಇವತ್ತು ಅವರು ಪ್ರಧಾನಿಯವರ ಕುರಿತು ಮಾತನಾಡಿದ್ದಾರೆ. ಇವರೊಬ್ಬ ಬೇಜವಾಬ್ದಾರಿ ಸಚಿವ ಎಂದು ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಟೀಕಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಿಯಾಂಕ್ ಅವರು ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸದ ಕಾರಣ ಕರ್ನಾಟಕದಲ್ಲಿ ಕೇವಲ 2 ತಿಂಗಳಿನಲ್ಲಿ ಕಲುಷಿತ ನೀರು ಸೇವಿಸಿ 20 ಜನರು ಸಾವನ್ನಪ್ಪಿದ್ದಾರೆ ಎಂದರು. ಸಾಲುಂಡಿ, ಚಿತ್ರದುರ್ಗ, ತುಮಕೂರು, ಕೋಲಾರದಲ್ಲಿ ಈ ಸಾವು ಸಂಭವಿಸಿದೆ ಎಂದು ವಿವರಿಸಿದರು.
ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಅಸಮರ್ಥರಾದ ಪ್ರಿಯಾಂಕ್ ಖರ್ಗೆ, ಮೋದಿಯವರು ಉದ್ಯಮಿಗಳಿಗೆ ಫೋನ್ ಮಾಡಿ ಉದ್ದಿಮೆಗಳನ್ನು ಗುಜರಾತ್ಗೆ ತರುವಂತೆ ಹೇಳುತ್ತಿರುವುದಾಗಿ ಆರೋಪಿಸಿದ್ದಾರೆ. ಆದರೆ, ಎಲ್ಲ ಕೈಗಾರಿಕೆಗಳು ಯಾಕೆ ಕರ್ನಾಟಕ ಬಿಟ್ಟು ಹೋಗುತ್ತಿವೆ?, ಸರಕಾರದ ನೀತಿ ನಿರೂಪಣೆಯೇ ಇದಕ್ಕೆ ಕಾರಣ ಎಂದು ತಿಳಿಸಿದರು.
ವಿದ್ಯುತ್ ಬೆಲೆ ಹೆಚ್ಚಳ, ವ್ಯಾಪಕ ಭ್ರಷ್ಟಾಚಾರದ ಕಾರಣಕ್ಕಾಗಿ ಯಾವ ಉದ್ದಿಮೆಗಳನ್ನೂ ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತಿಲ್ಲ. ಇದರಿಂದ ಅವು ಕರ್ನಾಟಕ ಬಿಟ್ಟು ಹೋಗುತ್ತಿವೆ ಎಂದರಲ್ಲದೆ, ಖರ್ಗೆ ಪ್ರಧಾನಿಯವರ ಬಗ್ಗೆ ಮಾತನಾಡುವಷ್ಟು ದೊಡ್ಡವರಾಗಿದ್ದಾರಾ ಎಂದು ಕೇಳಿದರು. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು. ಪ್ರಿಯಾಂಕ್ ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸಲಿ ಎಂದು ಒತ್ತಾಯಿಸಿದರು.
ರಾಜ್ಯದ ರೈತರಿಗೆ ರಾಜ್ಯ ಸರಕಾರವು ಕಳೆದ 10 ತಿಂಗಳಿನಿಂದ 1 ಸಾವಿರ ಕೋಟಿ ರೂ. ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ. ಇನ್ನೊಂದೆಡೆ ಹಾಲಿನ ದರ 2.10 ರೂ ಏರಿಸಿ ಜನರ ಜೇಬಿಗೆ ಕೈ ಹಾಕಿದೆ ಎಂದು ಆರೋಪಿಸಿದರು. ಡೈರಿ ಉದ್ಯಮ ಉಳಿಸಲು ಮಾನ್ಯ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಅಂಗನವಾಡಿ, ಬಡವರಿಗೆ ಉಚಿತ ಹಾಲು ಕೊಡಲಾಗುತ್ತಿತ್ತು. ಆದರೆ, ಬೆಲೆ ಜಾಸ್ತಿ ಮಾಡಿರಲಿಲ್ಲ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ ಕೆಡೆಂಜಿ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.