ಬೆಂಗಳೂರು: ಈ ಬಾರಿಯ ರಾಜ್ಯಪಾಲರ ಭಾಷಣ ಮತ್ತು ಸಂಪೂರ್ಣ ಬಜೆಟ್ ಅಧಿವೇಶನವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ನೀಡಲು ಮತ್ತು ಸುಳ್ಳು ಹೇಳಲು ಬಳಸಿಕೊಂಡಿದ್ದಾರೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಆಕ್ಷೇಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯಲು ಮತ್ತು ಜನತೆಗೆ ಸುಳ್ಳು ಮಾಹಿತಿ ನೀಡಲು ಇಡೀ ಸದನವನ್ನು ಸರಕಾರ ಬಳಸಿಕೊಂಡಿತ್ತು. ಕೆಂಗಲ್ ಹನುಮಂತಯ್ಯ ಅವರು ನಿರ್ಮಿಸಿದ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ. ಕನಿಷ್ಠ 48 ಗಂಟೆ ದಾಟಿ ಈಗ 60 ಗಂಟೆ ಆಗಿದ್ದರೂ ಕೂಡ ಅಧಿಕೃತವಾಗಿ ಬಂಧನವಾದ ಬಗ್ಗೆ ಸರಕಾರ ಒಂದು ಮಾಹಿತಿಯನ್ನೂ ಕೊಟ್ಟಿಲ್ಲ ಎಂದು ಟೀಕಿಸಿದರು.
ಅದರ ಬದಲಾಗಿ ಆ ದೇಶದ್ರೋಹಿಗಳಿಗೆ ಪರೋಕ್ಷವಾಗಿ ಬೆಂಬಲ ಕೊಡುವ ಎಲ್ಲ ಕೆಲಸಗಳನ್ನು ಸಿದ್ದರಾಮಯ್ಯನವರು, ಗೃಹಸಚಿವರು ಮತ್ತು ಇಡೀ ಸಚಿವಸಂಪುಟ ಮಾಡುತ್ತಿದೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು. ಈ ರಾಷ್ಟ್ರವಿರೋಧಿ ಕೃತ್ಯಗಳ ಕುರಿತು ನಿಮ್ಮ ಕ್ರಮ ಏನು ಎಂದು ಪ್ರಶ್ನಿಸಿದರೆ, ದೇಶ ಮೊದಲು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರೆ, ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಪಾಕಿಸ್ತಾನ ನಮ್ಮ ನೆರೆರಾಷ್ಟ್ರ; ಶತ್ರು ರಾಷ್ಟ್ರವಲ್ಲ ಎಂದಿದ್ದಾರೆ ಎಂದು ತಿಳಿಸಿದರು.
ಪಾಕಿಸ್ತಾನ ನಮ್ಮ ನೆರೆರಾಷ್ಟ್ರ ಹೌದು; ಆದರೆ, ಇಲ್ಲಿನವರೆಗೆ ಭಯೋತ್ಪಾದನೆಯನ್ನು ಬೆಂಬಲಿಸಿ ನಮ್ಮ ರಾಷ್ಟ್ರದ ಒಟ್ಟು ಅಭಿವೃದ್ಧಿಯನ್ನು ಮತ್ತು ದೇಶದ ಕಾನೂನು- ಸುವ್ಯವಸ್ಥೆಯನ್ನು ಹಾಳು ಮಾಡುವ ಹಾಗೂ ರಾಷ್ಟ್ರಭಕ್ತರನ್ನು ಹತ್ಯೆ ಮಾಡುವ ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುವುದನ್ನು, ಪಾಕ್ ಪರ ಘೋಷಣೆ ಕೂಗಿರುವವರನ್ನು ರಕ್ಷಿಸುವ ಸಿದ್ದರಾಮಯ್ಯರ ಸರಕಾರದ ಕ್ರಮವನ್ನು ಖಂಡಿಸಿದ್ದೇವೆ. ಇದರ ವಿರುದ್ಧ ರಾಜ್ಯಪಾಲರ ಬಳಿ ತೆರಳಿ ನಿನ್ನೆ ದೂರು ಕೊಟ್ಟಿದ್ದೇವೆ ಎಂದು ಹೇಳಿದರು.
ಘನತೆವೆತ್ತ ರಾಜ್ಯಪಾಲರು ಬಹಳ ಸಹಾನುಭೂತಿಯಿಂದ ಮಾತುಗಳನ್ನು ಕೇಳಿದ್ದಾರೆ. ವಿಧಾನಸೌಧದಲ್ಲೇ ಭಾರತ ವಿರೋಧಿ ಘೋಷಣೆ ಕೂಗಿದ್ದರ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತನಿಖೆ ಮಾಡಿ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸುವುದಾಗಿ ವಿಶ್ವಾಸದ ಮಾತನ್ನಾಡಿದ್ದು ನಮಗೆ ತೃಪ್ತಿ ತಂದಿದೆ ಎಂದು ವಿವರಿಸಿದರು.
ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸರಕಾರದ ಕೈಸೇರಿದೆ. ಪಾಕ್ ಪರ ಘೋಷಣೆಯ ವಿಚಾರವೂ ದೃಢೀಕರಣಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಅಷ್ಟಾದರೂ ಬಂಧನ ನಡೆದಿಲ್ಲ; ರಾಜ್ಯಸಭಾ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಗೆಲುವನ್ನು ಕಂಡ ನಾಸೀನ್ ಹುಸೇನ್ ಎಂಬ ಸದಸ್ಯರು ಮಾಧ್ಯಮದವರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಾಗಲೂ ಕೂಡ ಸರಕಾರ ನಿಷ್ಕ್ರಿಯವಾಗಿತ್ತು. ಇದನ್ನು ನೋಡಿದರೆ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಜೊತೆ ಪತ್ರಿಕಾರಂಗವನ್ನು ಕೂಡ ದಬ್ಬಾಳಿಕೆ ಮೂಲಕ ಪ್ರತಿಬಂಧಿಸುವ, ತುರ್ತು ಪರಿಸ್ಥಿತಿಯ ಆಡಳಿತ ಮತ್ತೊಮ್ಮೆ ಕರ್ನಾಟಕದಲ್ಲಿ ಬರುವ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿಯವರು ನಿನ್ನೆ ಅಕ್ಕಿ ಮಾರಾಟಗಾರರು ಮತ್ತು ಅನ್ನಭಾಗ್ಯ ಪ್ರಯೋಜನದಾರರ ಸಭೆ ನಡೆಸಿದ್ದಾರೆ. ಕರ್ನಾಟಕಕ್ಕೆ ಕೇಂದ್ರ ಬಿಜೆಪಿ ಸರಕಾರದಿಂದ ಪ್ರತಿ ತಿಂಗಳು 22 ಲಕ್ಷ ಕ್ವಿಂಟಲ್ ಅಕ್ಕಿ ಬರುತ್ತದೆ. ಬಿಪಿಎಲ್ ಪಡಿತರ ಚೀಟಿಯವರಿಗೆ 5 ಕೆಜಿಯಂತೆ ಇದನ್ನು ನೀಡಲಾಗುತ್ತಿದೆ. ಮೊದಲು ಗೋಣಿಚೀಲದ ವೆಚ್ಚ ಇವರು ಕೊಡಬೇಕಿತ್ತು. ಈಗ ಸಾಗಾಟ ಸೇರಿ ಪೂರ್ಣ ವೆಚ್ಚವನ್ನು ಕೇಂದ್ರ ಸರಕಾರವೇ ಕೊಡುತ್ತಿದೆ. ಸದನದಲ್ಲಿ ಕೇಂದ್ರದ ಅಕ್ಕಿ ಎಂದರೂ ಅದನ್ನು ಜನತೆಗೆ ಹೇಳುತ್ತಿಲ್ಲ. ಪಡಿತರ ಅಕ್ಕಿಯ ಹಣ ಕೇವಲ ಶೇ 50 ಜನರಿಗಷ್ಟೇ ಸಿಗುತ್ತಿದೆ ಎಂದು ಆಕ್ಷೇಪ ಸೂಚಿಸಿದರು.
ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮಾತನಾಡಿ, ಸರಕಾರದ ಕಾರ್ಯವೈಖರಿ ನೋಡಿದರೆ ರಾಜ್ಯದಲ್ಲಿ ಬರಗಾಲ ಇಲ್ಲ ಎನಿಸುತ್ತಿದೆ. ಆದರೆ, ಈಗ ಲಭಿಸಿದ ಕ್ಯಾಬಿನೆಟ್ ದರ್ಜೆಗಳು 84-85 ಜನರಿಗೆ ಇದೆ. ಈ ಮೂಲಕ ಸಂವಿಧಾನವನ್ನು ಸರಕಾರ ಸಂಪೂರ್ಣವಾಗಿ ಉಲ್ಲಂಘಿಸಿದೆ. ಪರೋಕ್ಷವಾಗಿ ಸಂವಿಧಾನ ಉಲ್ಲಂಘಿಸಿ ಅಪಚಾರ ಮಾಡಿದೆ ಎಂದು ಟೀಕಿಸಿದರು.
ಕ್ಯಾಬಿನೆಟ್ ದರ್ಜೆಯನ್ನು ಸಚಿವರಿಗಷ್ಟೇ ಕೊಡಬಹುದು. ಸೋತಿರುವಂಥರನ್ನೆಲ್ಲ ಕರಕೊಂಡು ಬಂದು ಗ್ಯಾರಂಟಿ ಯೋಜನೆಯಡಿ ಮಂತ್ರಿ ದರ್ಜೆ ಕೊಡುತ್ತಿರುವುದು ಯಾವ ನ್ಯಾಯ ಎಂದು ಎನ್. ರವಿಕುಮಾರ್ ಅವರು ಪ್ರಶ್ನಿಸಿದರು. ಗ್ಯಾರಂಟಿಯಲ್ಲೂ ಕೂಡ ಪಕ್ಷದ ಮೂಲಕ ಹಣ ಹೊಡೆಯುವ ಕೆಲಸವನ್ನು ಮತ್ತು ಅಧಿಕಾರ ಪಡೆಯುವ ಕೆಲಸವನ್ನು ಈ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಗ್ಯಾರಂಟಿ ಎಂಬುದು ಪಕ್ಷದ ಕಾರ್ಯಕರ್ತರ ಹುಲ್ಲುಗಾವಲಾಗಿದೆ ಎಂದು ನುಡಿದ ಅವರು, ಶಾಸಕರಿಗೆ ಅನುದಾನ ಇಲ್ಲ; ಅಭಿವೃದ್ಧಿಗೆ, ಕುಡಿಯುವ ನೀರು, ದೇವಸ್ಥಾನ, ರಸ್ತೆಗೆ ಹಣ ಕೇಳುತ್ತಾರೆಂಬ ಕಾರಣಕ್ಕೆ ಕಾಂಗ್ರೆಸ್ ಸಚಿವರು, ಶಾಸಕರು ಪ್ರವಾಸ ಮಾಡುತ್ತಿಲ್ಲ. ಶಾಸಕರಿಗೆ ರಾಜ್ಯದಲ್ಲಿ ಗೌರವ ಸಿಗುತ್ತಿಲ್ಲ ಎಂದು ಅವರು ವಿವರಿಸಿದರು.
ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಮಾತನಾಡಿ, ಸಮಾಜವಿರೋಧಿ, ದಲಿತ ವಿರೋಧಿ ಸುಳ್ಳುರಾಮಯ್ಯನ ಸರಕಾರ ರಾಜ್ಯದ್ದು ಎಂದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದರು.
ವಿಶೇಷವಾಗಿ ಕರ್ನಾಟಕದಲ್ಲಿ ಕಳೆದ 40 ವರ್ಷಗಳಲ್ಲಿ ಬರದೇ ಇರುವ ಭೀಕರ ಬರಗಾಲ ಈಗ ರಾಜ್ಯದಲ್ಲಿದೆ. ರಾಜ್ಯದ 26 ಸಾವಿರ ಕೆರೆಗಳ ಪೈಕಿ ಶೇ 95 ಕೆರೆಗಳು ಬತ್ತಿಹೋಗಿವೆ. ಕಾವೇರಿ ಬೇಸಿನ್, ಕೃಷ್ಣಾ ಬೇಸಿನ್ ಪೈಕಿ ಕಾವೇರಿ ಬೇಸಿನ್ನಲ್ಲಿ ಮಂಡ್ಯ, ತುಮಕೂರು, ಮೈಸೂರು ಭಾಗಗಳ ಹಳ್ಳಿಗಳಲ್ಲಿ ಕೂಡ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಿದೆ. ಪ್ರಥಮ ಬಾರಿ ಕಾಂಗ್ರೆಸ್ ಸರಕಾರವು ವಿ.ಸಿ. ಕಾಲುವೆಗೆ ನೀರು ಬಿಡುತ್ತಿಲ್ಲ. ಮೇಕೆದಾಟು ಪಾದಯಾತ್ರೆ ಮಾಡಿದ ಉಪ ಮುಖ್ಯಮಂತ್ರಿಯೇ ಜಲ ಸಂಪನ್ಮೂಲ ಸಚಿವರಾಗಿದ್ದಾರೆ. ಆದರೆ, ಕಾವೇರಿ ಬೇಸಿನ್ನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿ ಕಾಡುತ್ತಿದೆ ಎಂದು ವಿವರಿಸಿದರು.
ವಿದ್ಯುತ್ ಕೂಡ ಕೈಕೊಡುತ್ತಿದೆ. ವಿದ್ಯುತ್ ಇಲ್ಲದೆ, ನೀರಾವರಿ ಮಾಡಲಾಗದೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.