ಬೆಂಗಳೂರು: ಕೇರಳ ರಾಜ್ಯದ ವಯನಾಡ್ನಲ್ಲಿ ಇತ್ತೀಚೆಗೆ ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಸರಕಾರವು ರೂ. 15 ಲಕ್ಷ ಪರಿಹಾರವನ್ನು ಘೋಷಿಸಿದೆ. ಕಾಂಗ್ರೆಸ್ ಮುಖಂಡ, ಕೇರಳ ರಾಜ್ಯದ ಸಂಸದ ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ಇಲ್ಲಿನ ರಾಜ್ಯ ಸರಕಾರ 15 ಲಕ್ಷ ಕೊಟ್ಟಿರುವುದನ್ನು ಬಿಜೆಪಿ ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಂದು ಕಡೆ ರಾಜ್ಯದಲ್ಲಿ ಬರಗಾಲವಿದ್ದು, ರೈತರಿಗೆ ಹೆಕ್ಟೇರಿಗೆ 2 ಸಾವಿರವನ್ನು ಭಿಕ್ಷೆಯಂತೆ ಕೊಡಲಾಗುತ್ತಿದೆ. ಇನ್ನೊಂದೆಡೆ ರಾಹುಲ್ ಗಾಂಧಿ, ಕಾಂಗ್ರೆಸ್ ಹೈಕಮಾಂಡನ್ನು ತೃಪ್ತಿಪಡಿಸಲು, ರಾಹುಲ್ ಗಾಂಧಿ ಹೇಳಿದ್ದಾರೆಂದು ನಮ್ಮ ರಾಜ್ಯದ ತೆರಿಗೆಯನ್ನು ದುರುಪಯೋಗಪಡಿಸಿಕೊಂಡದ್ದು ಖಂಡನೀಯ ಎಂದು ತಿಳಿಸಿದರು.
ರಾಜ್ಯ ಸರಕಾರ ಯಾರನ್ನು ಕೇಳಿ ಇಂಥ ನಿರ್ಧಾರ ಮಾಡಿದೆ ಎಂದು ಪ್ರಶ್ನಿಸಿದ ಅವರು, ನಿಮ್ಮ ನಾಯಕರನ್ನು ಖುಷಿ ಪಡಿಸಲು ಏನು ಬೇಕಾದರೂ ನಿರ್ಧಾರ ಮಾಡಿದ್ದೀರಿ. ಹೇಳುವವರು ಕೇಳುವವರು ಯಾರೂ ಇದ್ದಂತಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.
ಬಂಡಿಪುರವು ಸಂರಕ್ಷಿತ ಅರಣ್ಯ ಪ್ರದೇಶ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಅಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ. ರಾತ್ರಿ ವಾಹನ ಸಂಚಾರ ನಿಷೇಧವನ್ನು ರದ್ದು ಮಾಡಿ, ಕೇರಳ- ಕರ್ನಾಟಕದ ಮಧ್ಯೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಅರಣ್ಯ ಸಚಿವರು ಸಾಕಷ್ಟು ಒತ್ತಡ ಹಾಕಿದ್ದರು. ಆದರೆ, ಆಗ ಯಡಿಯೂರಪ್ಪನವರ ಮೇಲೆ ಕೇರಳ ಸಿಎಂ ಫೋನ್ ಮಾಡಿ ಒತ್ತಡ ಹಾಕಿದ್ದರೂ ಯಡಿಯೂರಪ್ಪನವರು ಮತ್ತು ಬಿಜೆಪಿ ಸರಕಾರ ವಾಹನ ಸಂಚಾರ ನಿಷೇಧ ರದ್ದು ಮಾಡಿರಲಿಲ್ಲ ಎಂದು ವಿವರಿಸಿದರು. ಅದು ಮೀಸಲು ಅರಣ್ಯವಾಗಿದ್ದು, ಪ್ರಾಣಿಗಳ ಸಂಚಾರಕ್ಕೆ ತೊಂದರೆ ಆಗುವುದರಿಂದ ರಾತ್ರಿ ವಾಹನ ಸಂಚಾರ ರದ್ದು ಕುರಿತು ಗಟ್ಟಿ ನಿರ್ಧಾರ ಮಾಡಿತ್ತು ಎಂದು ವಿವರ ನೀಡಿದರು.
ಆದರೆ, ಈಗ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ರಾತ್ರಿ ಹೊತ್ತು ತುರ್ತು ವಾಹನಗಳಿಗೆ ಅವಕಾಶ ಕೊಡುವ ಧಾಟಿಯಲ್ಲಿ ಉತ್ತರ ಕೊಟ್ಟಿದ್ದಾರೆ ಎಂದು ಆಕ್ಷೇಪ ಸೂಚಿಸಿದರು. ತಮ್ಮ ಹೈಕಮಾಂಡನ್ನು ಖುಷಿಪಡಿಸಲು, ತಮ್ಮ ನಾಯಕ ರಾಹುಲ್ ಗಾಂಧಿಯವರನ್ನು ಖುಷಿ ಪಡಿಸಲು ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತಿದೆ. ಅಲ್ಲದೆ ರಾಜ್ಯದ ಜನರ ದುಡ್ಡನ್ನು ಪೋಲು ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕಾಡುಪ್ರಾಣಿಗಳಿಗೆ ತೊಂದರೆ ಕೊಡುವಂಥ ತೀರ್ಮಾನ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು. ರಾಜ್ಯದ ಹಿತಾಸಕ್ತಿ ಬಲಿ ಕೊಡುವ, ರಾಜ್ಯದ ಹಣ ದುರುಪಯೋಗ ಮಾಡುವ, ಬಂಡಿಪುರದಲ್ಲಿ ಪ್ರಾಣಿಗಳಿಗೆ ತೊಂದರೆ ಆಗುವಂಥ ತೀರ್ಮಾನ ಮಾಡಬಾರದೆಂದು ಅವರು ಆಗ್ರಹಿಸಿದರು.
The @INCKarnataka government's outrageous misuse of Karnataka taxpayers' funds to curry favor with Rahul Gandhi is utterly disgraceful.
Illegally allocating state fund of Rs.15 lakh to a deceased individual from @RahulGandhi's Wayanad constituency, falsely blaming a elephant… pic.twitter.com/gIFvA5hUSk
— Vijayendra Yediyurappa (@BYVijayendra) February 19, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.