ಬೆಂಗಳೂರು : ಭಾರತ ಶತಮಾನಗಳ ಹಿಂದೆ ಪೂರ್ಣ ಸ್ವಾವಲಂಬಿ ಹಾಗೂ ಅಭಿವೃದ್ದಿ ಹೊಂದಿರುವ ದೇಶವಾಗಿತ್ತು. ವಿದೇಶೀ ಆಕ್ರಮಣದ ಕಾರಣ ಭಾರತ ಕ್ರಮೇಣ ತನ್ನ ಸ್ವಂತಿಕೆ ಕಳೆದುಕೊಂಡು ಇವತ್ತು ಚಿತ್ರಣ ಸಂಪೂರ್ಣ ಬದಲಾಯಿತು. ಭಾರತ ಹಳ್ಳಿಗಳ ದೇಶವಾಗಿದ್ದು ಅವುಗಳು ಬೆಳೆದರೆ ಮಾತ್ರ ದೇಶದ ಸಂಪೂರ್ಣ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ತಿಳಿಸಿದರು. ಅವರು ಸ್ವದೇಶಿ ಜಾಗರಣ ಮಂಚ್ ಆಯೋಜಿಸಿದ್ದ ಸ್ವದೇಶಿ ಮೇಳದ ಉದ್ಘಾಟನೆಯಲ್ಲಿ ಮಾತನಾಡುತ್ತಿದ್ದರು.
ಪ್ರಧಾನ ಮಂತ್ರಿಗಳಾದ ಶ್ರೀ ಮೋದಿಯವರು 2047 ರಷ್ಟರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ಬಲಿಷ್ಟ, ಸ್ವಾವಲಂಬಿ ಮತ್ತು ವಿಕಸಿತ ಭಾರತ ಆಗಬೇಕೆಂಬ ಗುರಿ ಮತ್ತು ಕನಸು ಹೊಂದಿದ್ದಾರೆ. ಅದು ನನಸಾಗಿ ಜಗತ್ತಿನ ಶಕ್ತ ರಾಷ್ಟ್ರ ಆಗಬೇಕೆಂದರೆ ಜನಸಾಮಾನ್ಯರಾದ ನಾವು ದೇಸೀ ಉತ್ಪನ್ನಗಳತ್ತ ಹೆಚ್ಚು ಒಲವು ತೋರಿಸಿ ಬಳಸಬೇಕು. ಇದರಿಂದಾಗಿ ಹಳ್ಳಿಯ ಯುವಕರು ಉದ್ಯೋಗ ಹುಡುಕಿ ನಗರದ ಕಡೆ ಬರುವ ಬದಲು ಉದ್ಯೋಗದಾತರಾಗುತ್ತಾರೆ. ಕೃಷಿ ಮತ್ತು ಗ್ರಾಮೀಣ ಕುಸುರಿ ಕಲೆಗೆ ಒತ್ತು ಕೊಟ್ಟು ಹೆಚ್ಚು ಹೆಚ್ಚು ಬಳಕೆ ಶುರು ಮಾಡಿದರೆ ಈ ಮೂಲಕ ಅವರು ಸ್ವಾವಲಂಬಿಗಳಾಗುತ್ತಾರೆ. ಆವಾದ ದೇಶದಲ್ಲಿ ಸಮೃದ್ಧಿ ತಾನೇ ಸಾಧ್ಯವಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರ ನೀಡುವ ಸೌಲಭ್ಯಗಳು ತಲುಪಿದರೆ ಅವರಿಗೆ ಉದ್ಯಮಕ್ಕೂ ಸಹಾಯವಾಗುತ್ತದೆ ಮತ್ತು ಅವರು ಹೆಚ್ಚು ಉದ್ಯೋಗ ಸೃಷ್ಟಿ ಕಡೆಗೆ ಗಮನ ಹರಿಸುತ್ತಾರೆ. ಇಂಥ ಸ್ವದೇಶಿ ಮೇಳಗಳ ಮೂಲಕ ನಗರವಾಸಿಗಳಲ್ಲೂ ಜಾಗೃತಿ ಮೂಡುತ್ತದೆ ಮತ್ತು ಅನೇಕ ಉತ್ಪನ್ನಗಳಿಗೆ ಮಾರುಕಟ್ಟೆ ಕೂಡ ದೊರಕಿದಂತಾಗುತ್ತದೆ. ಈ ಮೂಲಕ ಸ್ವದೇಶಿ ಉತ್ಪನ್ನದ ಮೇಲೆ ನಮ್ಮವರೇ ಹೂಡಿಕೆ ಮಾಡುವ ಮೂಲಕ ದೇಶದ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಬಲ ಬರುತ್ತದೆ ಎಂದರು.
ತಾರಾ ಅನುರಾಧ ಮಾತನಾಡಿ, ವಿದೇಶಿ ಕಳಪೆ ಸಾಮಗ್ರಿಗಳ ವಿರುದ್ಧ ಸಡ್ಡು ಹೊಡೆಯಲು ಪ್ರಾರಂಭವಾದ್ದು ಸ್ವದೇಶಿ ಜಾಗರಣ ಮಂಚ್. ಇಲ್ಲಿನ ಮೇಳದಲ್ಲಿ ಬರಿಯ ತಿನ್ನೋದು ಉಣ್ಣೋದು ಅಲ್ಲ, ಬದಲಿಗೆ ಜೀವನ ನಡೆಸಲು ಏನೇನು ಬೇಕೋ ಅದನ್ನೆಲ್ಲ ಕಲಿಸುವ ಶಿಬಿರಗಳು ಇದ್ದಾವೆ. ಆರೋಗ್ಯಪೂರ್ಣವಾಗಿ ಬದುಕು ಕಲಿಸುವ ಆಯುರ್ವೇದ, ದಿನ ಬಳಕೆಯ ಉತ್ಪನ್ನ ತಯಾರಿಕಾ ಶಿಬಿರ ಇತ್ಯಾದಿ ಇವೆ. ಎಲ್ಲರೂ ಉಪಯೋಗ ಪಡೆದು ಸ್ವದೇಶಿ ಮೇಲದ ಉಪಯೋಗ ಪಡೆಯಲು ಕೋರಿದರು.
ತೇಜಸ್ವಿನಿ ಅನಂತಕುಮಾರ್ ಅವರು ಮಾತನಾಡಿ, ಭಾರತ ವೈವಿಧ್ಯತೆಗಳ ದೇಶ. ಮೂಲಭೂತ ಅವಶ್ಯಕತೆಯಾದ ಆಹಾರ ಒಂದನ್ನೇ ಪರಿಗಣಿಸಿದರೂ, ನಮ್ಮಲ್ಲಿ ಅದೆಷ್ಟು ವೈವಿಧ್ಯತೆ, ಬಣ್ಣ ಮತ್ತು ರುಚಿಯಿದೆ ಎಂದು ಲೆಕ್ಕಕ್ಕೆ ಸಿಗದು. ಈ ನಿಟ್ಟಿನಲ್ಲಿ ಯೋಚಿಸಿದಾಗ ನಾವೆಷ್ಟು ಸ್ವಾವಲಂಬಿಗಳಾಗಬಹುದು ಎಂಬುದು ನಮಗೆ ಅರ್ಥವಾಗುತ್ತದೆ. ಬಟ್ಟೆ, ನಡವಳಿಕೆ, ಆಹಾರ, ದಿನ ಬಳಕೆಯ ಉತ್ಪನ್ನಗಳು ಎಲ್ಲದರಲ್ಲೂ ಭಾರತ ಬಹಳ ಶ್ರೀಮಂತಿಕೆ ಹೊಂದಿರುವ ದೇಶ. ದುರಂತವೆಂದರೆ ನಾವು ಅದನ್ನು ಮರೆತು ಕುರಿಗಳ ಥರ ವಿದೇಶಿ ಉತ್ಪನ್ನಗಳ ಹಿಂದೆ ಹೋಗುತ್ತಿದ್ದೇವೆ. ಬ್ರಿಟಿಷರು ಬಿಟ್ಟು ಹೋದ ನಂತರವೂ ನಾವು ಅವರನ್ನು ಅನುಕರಣೆ ಮಾಡುವ ಮೂಲಕ ನಾವೇ ವಿದೇಶಿಯರಾಗಿ ದೇಶಕ್ಕೆ ಅನ್ಯಾಯ ಮಾಡುತ್ತಿದ್ದೇವೆ. ನಾವು ಈ ತಪ್ಪು ಲಕ್ಪನೆಗಳಿಂದ ಹೊರ ಬಂದು ನಮ್ಮತನವನ್ನು ಉಳಿಸಿಕೊಳ್ಳಲು ಮುಂದಾಗಬೇಕು. ನಾವೆಲ್ಲ ಒಟ್ಟಾಗಿ ಮನಸು ಮಾಡಿದರೆ ಇದೇನೂ ಅಸಾಧ್ಯವಲ್ಲ. ಇಷ್ಟು ವರ್ಷಗಳ ನಂತರ ಶ್ರೀರಾಮ ಮಂದಿರ ನಿರ್ಮಾಣವಾಗಿ ವಿಜಯದ ಭರವಸೆ ಕೊಟ್ಟಿರುವ ಈ ಸಮಯದಲ್ಲಿ ನಾವು ನಮ್ಮ ಬಟ್ಟೆಗಳು, ನಮ್ಮ ಉತ್ಪನ್ನ ಮತ್ತು ನಮ್ಮ ಜೀವನಶೈಲಿ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಂಡು ಅನುಸರಿಸಬೇಕು. ಸ್ವದೇಶಿ ಎನುವುದು ವಸ್ತುಗಳಿಗೆ ಸೀಮಿತ ಆಗಬಾರದು; ಅದು ನಮ್ಮ ಪ್ರತಿ ನಡೆಯಲ್ಲೂ ವ್ಯಕ್ತವಾಗಬೇಕಿದೆ. ಪ್ರತಿ ಉತ್ಪನ್ನವೂ ಪರಿಸರ ಸ್ನೇಹಿ ಆಗುವುದು ಅಷ್ಟೇ ಮುಖ್ಯ. ಹೇಗೆ ತಯಾರು ಮಾಡಲಾಗುತ್ತದೆ, ಬಳಕೆಯಿಂದ ತೊಂದರೆ ಇದೆಯೇ? ಬಳಕೆಯ ನಂತರ ಎಸೆದಾಗ ತೊಂದರೆ ಆಗುತ್ತದೆಯೇ ಮತ್ತು ಬಂಡವಾಳ ಯಾರದು ಎಂಬುದರ ಬಗ್ಗೆ ನಾವು ಯೋಚಿಸಬೇಕು. ಸ್ವದೇಶಿ ಮೇಲವು ಬರಿಯ ಮಳಿಗೆಗಳನ್ನಷ್ಟೇ ಹೊಂದಿಲ್ಲ, ಕಲಿಕಾ ಕೇಂದ್ರ ಕೂಡ ಆಗಿರುವುದು ಖುಷಿ ಕೊಟ್ಟಿದೆ.
ಖ್ಯಾತ ಅರ್ಥ ಶಾಸ್ತ್ರಜ್ಞರು ಮತ್ತು ಪರಿಸರ ತಜ್ಞರಾದ ಬಿ.ಎಂ. ಕುಮಾರಸ್ವಾಮಿ ಅವರು ಮಾತನಾಡಿ, ಸ್ವಾಭಿಮಾನ, ಸ್ವಾವಲಂಬನೆ ಮತ್ತು ಸಾರ್ವಭೌಮತೆ ಎಂಬುದರ ತಳಹದಿಯ ಮೇಲೆ ಸ್ವದೇಶಿ ಜಾಗರಣ ಮಂಚ್ ನಿರ್ಮಿತವಾಗಿದೆ. ಜಾಗತೀಕರಣದ ವಿರುದ್ಧ ಹೋರಾಟ ಇಂದಿನ ಬಹು ದೊಡ್ಡ ಅವಶ್ಯಕತೆ. ಆತ್ಮನಿರ್ಭರ ಭಾರತದ ಪರಿಕಲ್ಪನೆ ಇರುವ ಈ ದಿನಗಳಲ್ಲಿ ಸ್ವಾವಲಂಬನೆ ಅಸಾಧ್ಯವಾದುದೇನಲ್ಲ. ನಮ್ಮ ಬಹುದೊಡ್ಡ ಸಮಸ್ಯೆ ವಿದೇಶೀ ಬಂಡವಾಳದ ವ್ಯಾಮೋಹ. ಜಾಗತೀಕರನ ನಮ್ಮ ಅರ್ಥಿಕತೆಯ ಮೇಲೆ ಕೊಟ್ಟಿರುವ ಬಹು ದೊಡ್ಡ ಹೊಡೆತವನ್ನು ಮೀರಿ ನಿಲ್ಲುವತ್ತ ನಮ್ಮ ಪ್ರಯತ್ನ ಸಾಗಬೇಕಿದೆ. ವಿದೇಶಿ ಬ್ರಾಂಡ್ಗಳ ದಾಳಿಗೆ ಸ್ವದೇಶಿ ಬ್ರಾಂಡ್ಗಳು ಮೂಲೆಗುಂಪಾದವು. ಇದನ್ನು ತಡೆಯಲು ಸ್ವದೇಶಿ ಬಂಡವಾಳ ಹಾಕಿರುವ ಸ್ವದೇಶಿ ಉತ್ಪನ್ನ ಬಳಸುವುದು ಮಾತ್ರ ದಾರಿ. ವಿದೇಶಿ ಬಂಡವಾಳವನ್ನು ಬಹು ಕಡಿಮೆ ಪ್ರಮಾಣದಲ್ಲಿ ಬಳಸಬೇಕಿದೆ. ನಮ್ಮ ಉದ್ದಿಮೆಗಳು ಬೆಳೆಯುವುದಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿ ನಂತರ ಅವುಗಳ ಬಳಕೆ ನಿಲ್ಲಿಸಬೇಕು. ಕಟ್ಟಡ ಕಟ್ಟಲು ಬಳಸುವ ಸ್ಕಾಫೋಲ್ಡಲಿಂಗ್ ರೀತಿಯಲ್ಲಿದ್ದರೆ ಮಾತ್ರ ವಿದೇಶಿ ಬಂಡವಾಳ ಹೂಡಿಕೆ ಉಪಯುಕ್ತವೇ ಹೊರತು ಅತಿಯಾದಲ್ಲಿ ನಮ್ಮ ವಿನಾಶಕ್ಕೆ ಕಾರಣವಾಗಬಹುದು ಎಂದರು.
ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿ.ಕೆ ರಾಮಮೂರ್ತಿಯವರು, ಶ್ರೀ ಪ್ರಕಾಶ್ ಬೆಳವಾಡಿ, ಸಂಘಟಕರಾದ ಶ್ರೀ ಅಮಿತ್ ಅಮರನಾಥ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.