ಸಾಹಿತ್ಯ ಪ್ರಿಯರಲ್ಲಿ ಉತ್ಸಾಹವನ್ನು ಗರಿಗೆದರಿಸುವ, ಯುವ ಮನಸ್ಸುಗಳನ್ನು ಚಿಂತನೆಗೆ ಹಚ್ಚುವ ಮಂಗಳೂರು ಸಾಹಿತ್ಯ ಹಬ್ಬ (ಮಂಗಳೂರು ಲಿಟ್ ಫೆಸ್ಟ್) ಮತ್ತೆ ಆಗಮಿಸುತ್ತಿದೆ. ಈ ಬಾರಿ ಆರನೇ ಆವೃತ್ತಿಯ ಲಿಟ್ ಫೆಸ್ಟ್ ಜ.19,20 ಮತ್ತು 21ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ಜರುಗುತ್ತಿದ್ದು, ಭಿನ್ನ ಭಿನ್ನ ವಿಷಯಗಳ ಚಿಂತನೆಗಳು ಮಂಡನೆಯಾಗಲಿದೆ. ಭಾರತ್ ಫೌಂಡೇಶನ್ ವತಿಯಿಂದ ʼಐಡಿಯಾ ಆಫ್ ಭಾರತ್ʼ ವಿಷಯದೊಂದಿಗೆ ಅತ್ಯಂತ ವಿಶಿಷ್ಟವಾಗಿ ಮೂಡಿ ಬರುವ ಈ ಸಾಹಿತ್ಯ ಹಬ್ಬದಲ್ಲಿ ಪ್ರತಿ ವರ್ಷ ಬೇರೆ ಬೇರೆ ಕ್ಷೇತ್ರಗಳಲ್ಲಿ ತಜ್ಞತೆ ಹೊಂದಿದ ಗಣ್ಯರು ದೇಶದ ಗಂಭೀರ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾ ಬಂದಿದ್ದಾರೆ. ಸಾಹಿತ್ಯ ಮಾತ್ರವಲ್ಲದೇ ಸಿನಿಮಾ ರಂಗದಿಂದ ಹಿಡಿದು ದೇಶದ ರಕ್ಷಣೆವರೆಗೆ ಎಲ್ಲಾ ರಂಗದ ವಿಚಾರಗಳೂ ಇಲ್ಲಿ ಚರ್ಚೆಗೆ ಬಂದಿವೆ.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸ್.ಎಲ್ ಭೈರಪ್ಪ, ಚಂದ್ರಶೇಖರ ಕಂಬಾರ, ಡಾ ಎಂ ಚಿದಾನಂದ ಮೂರ್ತಿ, ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ಪ್ರಕಾಶ್ ಬೆಳವಾಡಿ, ರಿಷಬ್ ಶೆಟ್ಟಿ, ಬಾಲಿವುಡ್ ನಿರ್ದೇಶಕರಾದ ಮಧುರ್ ಭಂಡಾರ್ಕರ್, ವಿವೇಕ್ ಅಗ್ನಿಹೋತ್ರಿ, ಕೇರಳದ ಗವರ್ನರ್ ಆರಿಫ್ ಮೊಹಮ್ಮದ್ ಖಾನ್, ಆರ್ ಜಗನ್ನಾಥನ್, ಪತ್ರಕರ್ತೆ ಬರ್ಖಾ ದತ್, ಪತ್ರಕರ್ತ ಅಜಿತ್ ಹನುಮಕ್ಕನವರ್, ಸತ್ಯಬೋಧ್ ಜೋಶಿ, ಜಾನಪದ ಕಲಾವಿದೆ ಮಂಗಳಾ ಸಿದ್ದಿ ಮುಂತಾದ ಅನೇಕ ಗಣ್ಯರು ತಮ್ಮ ವಿಚಾರಗಳನ್ನು ಮಂಗಳೂರು ಲಿಟ್ ಫೆಸ್ಟ್ನಲ್ಲಿ ಮಂಡನೆಗೊಳಿಸಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್ ಕೇವಲ ಸಾಹಿತ್ಯಿಕ ಚರ್ಚೆಗಳಿಗೆ ಮೀಸಲಾಗಿಲ್ಲ, ಇಲ್ಲಿ ಜಾನಪದ ಕಲೆಗಳಿಗೆ ಮನ್ನಣೆ ನೀಡಲಾಗುತ್ತಿದೆ ಜೊತೆಗೆ ಭಾರತದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಗೌರವಿಸಿ ಪುರಸ್ಕರಿಸುವ ಸಂಪ್ರದಾಯವನ್ನೂ ಇದು ಪಾಲಿಸಿಕೊಂಡು ಬಂದಿದೆ.
ಮೊದಲ ಆವೃತ್ತಿಯಲ್ಲಿ, ಸಾಹಿತ್ಯ ಅಕಾಡೆಮಿ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಲೇಖಕ ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪ ಅವರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ದಿ ಐಡಿಯಾ ಆಫ್ ಭಾರತ್ ಪ್ರಚಾರಕ್ಕಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎರಡನೇ ಆವೃತ್ತಿಯಲ್ಲಿ ಸಾಹಿತ್ಯ ಅಕಾಡೆಮಿ, ಪಂಪ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ ಎಂ ಚಿದಾನಂದ ಮೂರ್ತಿಯವರನ್ನು, ಇತಿಹಾಸ, ಸಾಹಿತ್ಯ ಮತ್ತು ಸಂಶೋಧನೆ ಕ್ಷೇತ್ರದಲ್ಲಿನ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಾಲ್ಕನೇ ಆವೃತ್ತಿಯಲ್ಲಿ ಲೇಖಕ ಹಾಗೂ ಕವಿ ಶತಾವಧಾನಿ ಆರ್. ಗಣೇಶ್ ಅವರನ್ನು ಸನ್ಮಾನಿಸಿ, ಗೌರವ ಪ್ರದಾನ ಮಾಡಲಾಯಿತು. ಐದನೇ ಆವೃತ್ತಿಯಲ್ಲಿ ಜಾನಪದ, ಇತಿಹಾಸ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ತುಕಾರಾಂ ಪೂಜಾರಿ ಅವರಿಗೆ ಲಿಟ್ ಫೆಸ್ಟ್ 2023 ರ ಜೀವಮಾನದ ಶ್ರೇಷ್ಠ ಸಾಧನ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಲಾಯಿತು. ಈ ಬಾರಿ ಅನೇಕ ವರ್ಷಗಳಿಂದ ವಿಧವೆಯ ಬದುಕಿಗೆ ಆಸರೆಯಾಗಿ ನಿಂತಿರುವ, ಸುಮಾರು 800 ಮಕ್ಕಳಿಗೆ ವಿದ್ಯಾರ್ಜನೆ ಮಾಡುತ್ತಿರುವ ವನಿತಾ ಸೇವಾ ಸಮಾಜ ಪ್ರಶಸ್ತಿಗೆ ಬಾಜನವಾಗುತ್ತಿದೆ. ಮೊದಲ ಬಾರಿಗೆ ಸಂಸ್ಥೆಯೊಂದಕ್ಕೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಮೊದಲ ಆವೃತ್ತಿಯಿಂದಲೂ ಪುಸ್ತಕ ಮಳಿಗೆ ಲಿಟ್ ಫೆಸ್ಟ್ನ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ. ಓದುಗರಿಗೆ ತಮ್ಮ ನೆಚ್ಚಿನ ಪುಸ್ತಕ ಖರೀದಿಸಲು ಇದೊಂದು ಪ್ರಮುಖ ಸಂದರ್ಭವೂ ಆಗಿದೆ. ಚಿನ್ನರ ಆಸಕ್ತಿಯನ್ನು ಕೆರಳಿಸಲು , ಅವರ ಸೃಜನಶೀಲತೆಗೆ ಉತ್ತೇಜನ ನೀಡಲು ಕ್ಲೇ ಮಾಡಲಿಂಗ್ ಅನ್ನು ಕೂಡ ಇಲ್ಲಿ ಆಯೋಜಿಸುತ್ತಾ ಬರಲಾಗುತ್ತಿದೆ. ಜೊತೆಗೆ ತುಳು ಲಿಪಿ ಕಲಿಕಾ ವೇದಿಕೆಯೂ ಇಲ್ಲಿ ಇರುತ್ತದೆ. ಹರಟೆ ಕಟ್ಟೆಯ ಮೂಲಕ ಗಣ್ಯರು ಸಾಹಿತ್ಯಾಸ್ತಕರ ಜೊತೆಗೆ ಮುಕ್ತವಾಗಿ ಮಾತುಕತೆ ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರ ಜೊತೆಗೆ ಸಾಂಸ್ಕೃತಿಕ ಕಲೆಯ ಪ್ರದರ್ಶನಕ್ಕೂ ಲಿಟ್ ಫೆಸ್ಟ್ ವೇದಿಕೆಯಾಗಿ ಹೊರಹೊಮ್ಮಿದೆ. ಮಾತ್ರವಲ್ಲದೇ ಮಂಗಳೂರು ಲಿಟ್ ಫೆಸ್ಟ್ಗೆ ಪ್ರತಿವರ್ಷ ಅಪಾರ ಸಂಖ್ಯೆಯ ಜನರು ಆಗಮಿಸುತ್ತಿದ್ದಾರೆ. ಅತಿ ಹೆಚ್ಚು ಜನರನ್ನು ಸೆಳೆಯುವ ಸಾಹಿತ್ಯ ಹಬ್ಬವೆಂಬ ಹೆಗ್ಗಳಿಕೆಯನ್ನೂ ಇದು ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.